ಸುರಕ್ಷಿತವಾಗಿ ಕರೆತಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಸಲ್ಲಿಸಿದ ಆಟಗಾರರು
ಹೌರಾದಲ್ಲಿ ಸಿಲುಕಿದ್ದ ಆಟಗಾರ್ತಿಯರಿಗೆ ನೆರವಾದ ಮಂಡ್ಯದ ಮೇಘನಾ
ಬೆಂಗಳೂರು: ಒಡಿಶಾದ ಬಾಲಸೋರ್ನಲ್ಲಿ ಭೀಕರ ರೈಲು ದುರಂತ ಹಿನ್ನೆಲೆ ರಾಜ್ಯಕ್ಕೆ ಬರಲಾಗದೆ ಕೊಲ್ಕತ್ತಾದ ಹೌರಾದಲ್ಲೇ ಉಳಿದಿದ್ದ 32 ಕ್ರೀಡಾಪಟುಗಳನ್ನ ರಾಜ್ಯ ಸರ್ಕಾರದ ಅಧಿಕಾರಿಗಳು ವಾಪಸ್ ಕರೆತಂದಿದ್ದಾರೆ.
ರವಿವಾರ ಬೆಳಗ್ಗೆ ಇಂಡಿಗೋ ವಿಮಾನದಲ್ಲಿ ಆಟಗಾರರು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಬಾಲಕಿಯರು ಹಾಗೂ ಯುವಕರು ಒಟ್ಟು 32 ಆಟಗಾರರು ಆಗಮಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಟಗಾರರು, 'ವಿಮಾನದ ಮೂಲಕ ಇಷ್ಟು ಬೇಗ ನಮ್ಮನ್ನ ಸುರಕ್ಷಿತವಾಗಿ ಕರೆತಂದಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರಕಾರಕ್ಕೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.
'ರಾಷ್ಟ್ರೀಯ ಮಟ್ಟದ 16 ವರ್ಷದ ಒಳಗಿನವರ ವಾಲಿಬಾಲ್ ಟೂರ್ನಿ ಆಡಲು ಪಶ್ಚಿಮ ಬಂಗಾಳಕ್ಕೆ ಹೋಗಿದ್ದೆವು, ದುರಂತ ಸಂಭವಿಸಿದ ದಿನ ನಮಗೆ ಹೌರಾದಲ್ಲಿ ನೆಲೆಸಿರುವ ರೈಲ್ವೇಯಲ್ಲಿ ಕೆಲಸ ಮಾಡುತ್ತಿರುವ ಮಂಡ್ಯದ ಮೇಘನಾ ಎನ್ನುವವರು ನೆರವಾಗಿದ್ದಾರೆ. ಅವರ ಮನೆಯಲ್ಲೇ ನಾವು ಉಳಿದುಕೊಂಡೆವು. ಕರ್ನಾಟಕ ಸರಕಾರ ಕೂಡ ತಕ್ಷಣ ಸ್ಪಂದಿಸಿದೆ. ಇದರಿಂದ ನಾವೆಲ್ಲ ಸುರಕ್ಷಿತವಾಗಿ ವಾಪಸ್ ಬಂದಿದ್ದೇವೆ' ಎಂದು ಆಟಗಾರ್ತಿಯೊಬ್ಬರು ತಿಳಿಸಿದರು.