ಅರಿವಾಳಿಕೆ
ಅರವಳಿಕೆ ಎಂದರೆ ಪ್ರಜ್ಞೆಯನ್ನು ತಪ್ಪಿಸುವುದು. ಅದೇ, ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅನೆಸ್ತೇಶಿಯಾ ಕೊಟ್ಟು ಎಚ್ಚರ ತಪ್ಪಿಸುತ್ತಾರಲ್ಲಾ ಅದು. ಆದರೆ ಇದು ಅರಿವಾಳಿಕೆ. ಅರಿವು + ಆಳಿಕೆ = ಅರಿವಾಳಿಕೆ. ಇದು ಎಚ್ಚರಕ್ಕೆ ತರುವುದು. ಪ್ರಜ್ಞೆಯನ್ನು ಜಾಗೃತಗೊಳಿಸುವುದು.
ಇದೊಂದು ಗಂಭೀರವಾದ ಮತ್ತು ಅಗತ್ಯವಾದ ವಿಷಯ.
ನಂಬಿಕೆ, ಮಾಹಿತಿ, ಅನುಭವವೇ ಮೊದಲಾದ ಆಧಾರದಲ್ಲಿ ವ್ಯಕ್ತಿಯು ವಿಚಾರವನ್ನು ಮಾಡುತ್ತಾನೆ. ಆ ವಿಚಾರವನ್ನೇ ಆಧಾರವಾಗಿಟ್ಟುಕೊಂಡು ಆಲೋಚನೆಗಳನ್ನು ಮಾಡುತ್ತಾನೆ. ಅಂತಹ ಆಲೋಚನೆಗಳಿಂದ ಅವನಲ್ಲಿ ಭಾವನೆಗಳು ಉಂಟಾಗುತ್ತವೆ. ಅವು ನಕಾರಾತ್ಮಕವೋ, ಸಕಾರಾತ್ಮಕವೋ, ಜಿಗುಪ್ಸಾತ್ಮಕವೋ; ಕೋಪ, ಸಂತೋಷ, ದುಃಖ, ಸಮಾಧಾನ, ಹೀಗೆ ಎಂತಹದ್ದೋ ಬಗೆಬಗೆಯ ಭಾವನೆಗಳು ಉಂಟಾಗುತ್ತವೆ. ಅದರ ಆಧಾರವಾಗಿ ಅವನು ತನ್ನ ವರ್ತನೆಗಳನ್ನು ತೋರುತ್ತಾನೆ.
ಗಮನಿಸಿ, ಆಲೋಚನೆಗಳ ಪ್ರಭಾವದಿಂದ ಭಾವನೆಗಳು, ಭಾವನೆಗಳ ಪ್ರತಿಫಲನವಾಗಿ ವರ್ತನೆಗಳು ಉಂಟಾಗುತ್ತವೆ. ಒಟ್ಟಾರೆ ಒಬ್ಬ ವ್ಯಕ್ತಿಯ ನಡವಳಿಕೆಗೆ ಈ ತ್ರಿಮೂರ್ತಿಗಳೇ ಕಾರಣ. ಆಲೋಚನೆಗಳು, ಭಾವನೆಗಳು ಮತ್ತು ವರ್ತನೆಗಳು.
ವರ್ತನೆಗಳು ಬಿಡಿ, ಅವು ಕಾಣುವಂತದ್ದು. ಆದರೆ ಭಾವನೆಗಳು ಮೂಡುವಂತದ್ದು. ಆಲೋಚನೆಗಳು ಮಾಡುವಂತದ್ದು.
ವರ್ತನೆಗಳನ್ನು ನೋಡಿಯೇ ನಾವು ವ್ಯಕ್ತಿಯನ್ನು ಅಳೆಯುತ್ತೇವೆ. ಇವ ಒಳ್ಳೆಯವ, ಕೆಟ್ಟವ, ಕರುಣಾಳು, ಸಂಯಮಿ, ಉದಾರಿ, ಜಿಪುಣ, ನಿಷ್ಕರುಣಿ, ಮೌನಿ, ವಾಚಾಳಿ; ಹೀಗೆ. ಆ ವ್ಯಕ್ತಿ ಪದೇ ಪದೇ ತೋರುವ ವರ್ತನೆಗಳನ್ನು ಗಮನಿಸುತ್ತಲೇ ಇವನು ಇಂತವನು ಅಂತ ಬೇರೆ ಹಣೆಪಟ್ಟಿ ಕಟ್ಟಿಬಿಡುತ್ತೇವೆ ಮತ್ತು ನಾವೇ ಕಟ್ಟಿದ ಹಣೆಪಟ್ಟಿಯನ್ನು ನಾವೇ ಪದೇ ಪದೇ ಓದುತ್ತಾ ಮನನ ಮಾಡಿಕೊಳ್ಳುತ್ತಿರುತ್ತೇವೆ. ಆ ವ್ಯಕ್ತಿ ಬದಲಾಗುತ್ತಾನೋ ಇಲ್ಲವೋ, ಆದರೆ ನಾವಂತೂ ನಮ್ಮ ಅನುಭವ, ಜ್ಞಾನ, ಪಾಂಡಿತ್ಯದಿಂದ ಕಟ್ಟಿದ ಹಣೆಪಟ್ಟಿಯನ್ನು ಕಳಚಲಂತೂ ಸಿದ್ಧವಿರುವುದಿಲ್ಲ. ಹೀಗಾಗಿ ಆತ ಅಥವಾ ಆಕೆ ನಮ್ಮ ಜೊತೆಗೂ ಹಾಗೆಯೇ ವರ್ತಿಸುತ್ತಿರುತ್ತಾರೆ.
ಉದಾಹರಣೆಗೆ, ಅವನದು ಎಮ್ಮೆ ಚರ್ಮ. ನಯವಾಗಿ ಹೇಳಿದರೆ ಕೇಳುವುದಿಲ್ಲ. ಜಾಣನಿಗೆ ಮಾತಿನ ಪೆಟ್ಟು, ಕೋಣನಿಗೆ ದೊಣ್ಣೆ ಪೆಟ್ಟು ಅಂತ ನಾವೇ ಆ ಕೋಣನಿಗೆ ದೊಣ್ಣೆ ಪೆಟ್ಟು ಕೊಡುವಾಗ, ಆ ಪೆಟ್ಟನ್ನು ಪಡೆಯುವಾಗ ಅವನ ಪ್ರತಿವರ್ತನೆ ಅಥವಾ ನಮ್ಮ ಕ್ರಿಯೆಗೆ ಏನು ಪ್ರತಿಕ್ರಿಯೆ ಕೊಡುತ್ತಾನೋ ಅದನ್ನೇ ಕೊಡುತ್ತಿರುತ್ತಾನೆ. ಇದು ಬಹುಕಾಲ ಮುಂದುವರಿದು ಅವರ ಮನಸ್ಥಿತಿ ಅದೇ, ನಮ್ಮ ಮನಸ್ಥಿತಿ ಇದೇ ಆಗಿರುತ್ತದೆ.
ವಿಷಯ ಇಷ್ಟೇ ಅಲ್ಲ. ಈ ನಿರಂತರವಾದ ಆಲೋಚನೆ, ಭಾವನೆ ಮತ್ತು ವರ್ತನೆಗಳನ್ನು ಜೀವಂತವಾಗಿಯೇ ಇಟ್ಟುಕೊಂಡಿರುವ ಕಾರಣ ಆ ವ್ಯಕ್ತಿಯಲ್ಲಿ ಬಹಳಷ್ಟು ಮಾನಸಿಕವಾದಂತಹ ಸಮಸ್ಯೆಗಳು ಉಂಟಾಗುತ್ತವೆ. ಅಂತಹ ಸಮಸ್ಯೆಗಳನ್ನು ಸಮಗ್ರವಾಗಿ ಮೂರು ರೀತಿಯಲ್ಲಿ ವಿಭಾಗಿಸಬಹುದು. ಒಂದು, ತಮ್ಮ ಬಗ್ಗೆ ತಾವು ನಕಾರಾತ್ಮಕವಾಗಿ ಗುರುತಿಸಿಕೊಳ್ಳುವುದು. ಎರಡು, ಈ ಜನ, ಈ ಪ್ರಪಂಚ; ಯಾವುದೂ ಸರಿ ಇಲ್ಲ ಎಂದೇ ನೋಡುವುದು ಮತ್ತು ಮೂರನೆಯದಾಗಿ, ತಮ್ಮ ಭವಿಷ್ಯ ನಕಾರಾತ್ಮಕವಾಗಿರುತ್ತದೆ ಮತ್ತು ಅವು ಎಂದಿಗೂ ಬದಲಾಗುವುದೇ ಇಲ್ಲ ಎಂದು ಅಂಜುವುದು ಅಥವಾ ಆತಂಕಕ್ಕೆ ಒಳಗಾಗುವುದು.
ತನ್ನ ಬಗ್ಗೆ, ತಾನಿರುವ ಪ್ರಪಂಚದ ಬಗ್ಗೆ ಮತ್ತು ತನ್ನ ಭವಿಷ್ಯದ ಬಗ್ಗೆ ತೀವ್ರವಾದಂತಹ ನಕಾರಾತ್ಮಕವಾದ ಭಾವನೆಗಳು ಬಂತೆಂದರೆ ಅದು ನಾನಾ ಬಗೆಯ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಖಿನ್ನತೆ, ಆತಂಕ, ಭೂತ ಬಾಧೆ (ಹಿಂದಿನ ನೋವು ಮತ್ತು ಭಯಗಳಿಂದ ಈಗಲೂ ನರಳುವುದು), ಚಟಗೇಡಿತನ, ಜಿದ್ದುಗೇಡಿತನ, ವರ್ತನಾ ಸಮಸ್ಯೆ, ನಡವಳಿಕೆ ಸಮಸ್ಯೆ, ಭ್ರಮಾಧೀನ ಸ್ಥಿತಿ, ಹಠಾತ್ ಪ್ರವೃತ್ತಿ ಇತ್ಯಾದಿ ಅನೇಕ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ.
ಮೆದುಳಿನ ಮತ್ತು ನರಗಳ ಸಮಸ್ಯೆಗಳಲ್ಲದೇ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳಾಗಿದ್ದಲ್ಲಿ ಅದರ ಬಗ್ಗೆ ಅಧ್ಯಯನ ಮಾಡುವುದಕ್ಕೆ, ಅರಿವನ್ನು ಪಡೆಯುವುದಕ್ಕೆ ಈ ಅರಿವಾಳಿಕೆ (ಕಾಗ್ನಿಟಿವ್ ಸೈಕಾಲಜಿ) ಬೇಕು. ಇದರಿಂದಾಗಿ ವ್ಯಕ್ತಿಗಳ ಆಲೋಚನೆಗಳ ಮೂಲವನ್ನು ಕಂಡುಹಿಡಿಯಬೇಕಾಗುತ್ತದೆ. ಧಾರ್ಮಿಕ ನಂಬುಗೆಗಳು, ಕುಟುಂಬ ಮತ್ತು ಸಮಾಜದ ಒಡಂಬಡಿಕೆಗಳು ಮತ್ತು ನಿರೀಕ್ಷೆಗಳು, ಜನಪ್ರಿಯವಾಗಿರುವ ಮಿಥ್‌ಗಳು, ಸಂಸ್ಕೃತಿಯ ಸಿದ್ಧ ಸೂತ್ರಗಳು, ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳು; ಹೀಗೆ ನಾನಾ ವಿಷಯಗಳು ವ್ಯಕ್ತಿಯಲ್ಲಿ ಮೂಲಭೂತ ನಂಬಿಕೆ ಅಥವಾ ಆಸಕ್ತಿಯಾಗಿ ಉಳಿದು ಆಲೋಚನೆಗಳನ್ನು ಸೃಷ್ಟಿಸುತ್ತಿರುತ್ತವೆ. ಇನ್ನು ಉಳಿದಂತೆ ಅದರ ಆಧಾರದಲ್ಲೇ ಭಾವನೆಗಳು ಮೂಡುತ್ತವೆ ಮತ್ತು ವರ್ತನೆಗಳು ಪ್ರಕಟಗೊಳ್ಳುತ್ತವೆ.
ಸಮೂಹದ್ದೇ ಆಗಲಿ, ವ್ಯಕ್ತಿಯದೇ ಆಗಲಿ ವರ್ತನೆಗಳನ್ನು ಬದಲಾಯಿಸಲು ಸಾಧ್ಯ. ಬದುಕಿಗೆ, ನೆಮ್ಮದಿಗೆ ಅನಗತ್ಯವಾದಂತಹ ಆಲೋಚನೆಗಳನ್ನು ವ್ಯಕ್ತಿಗಳಲ್ಲಿ ಗುರುತಿಸಿ, ನಂತರ ಅದಕ್ಕೆ ಪರ್ಯಾಯವಾಗಿ ಅಗತ್ಯವಾಗಿರುವಂತಹ, ನೆಮ್ಮದಿ ಮತ್ತು ಸಂತೋಷವನ್ನು ತರುವಂತಹ ಆಲೋಚನೆ ಗಳನ್ನು ಮಾಡುವಂತಹ ಹೊಸ ರೂಢಿಯನ್ನು ಮಾಡಿಸುವುದು ಅರಿವಾಳಿಕೆಯ ಪ್ರಮುಖ ಉದ್ದೇಶ. ಅರಿವಾಳಿಕೆಯು ಜ್ಞಾನವೂ ಹೌದು, ಚಿಕಿತ್ಸೆಯೂ ಹೌದು. ಹಳೆಯ ರೂಢಿಗತವಾಗಿ ಮಾಡಿರುವ ಆಲೋಚನೆಗಳು ಬೇರು ಬಿಟ್ಟಿರುತ್ತವೆ. ಅವುಗಳನ್ನು ಒಮ್ಮಿಂದೊಮ್ಮೆಲೇ ಬಟ್ಟೆಯನ್ನು ಕಳಚುವಷ್ಟು ಮಾತ್ರವಲ್ಲ, ಚರ್ಮವನ್ನು ಸುಲಿಯುವಷ್ಟೂ ಸುಲಭ ವಲ್ಲ. ಭೌತಿಕವಾಗಿ ಕೈಗೆ ಸಿಗದ ಆಲೋಚನೆಗಳನ್ನು, ಆಲೋಚನೆಗಳ ಮೂಲಕವೇ ಪಲ್ಲಟಗೊಳಿಸಿ, ಮತ್ತೊಂದನ್ನು ಮರುಸ್ಥಾಪಿಸುವಂತಹ ಕೆಲಸ ಈ ಅರಿವಾಳಿಕೆಯದು.