ವಿಶ್ವ ಬೈಸಿಕಲ್ ದಿನಾಚರಣೆ: ಸೈಕಲ್ ರ್ಯಾಲಿಗೆ ಚಾಲನೆ
ಉಡುಪಿ, ಜೂ.4: ಉಡುಪಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ ಎನ್‌ಸಿಡಿ ವಿಭಾಗ ಹಾಗೂ ಮಣಿಪಾಲ ಎಂಐಟಿ, ನ್ಯಾಶನಲ್ ಸರ್ವಿಸ್ ಸ್ಕೀಮ್ ಯುನಿಟ್ ಒಂದು ಮತ್ತು ಎರಡು ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಿಸೈಕಲ್ ದಿನಾಚರಣೆಯನ್ನು ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿ ಶನಿವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ.ಎಂ.ವಿ.ಕಿಣಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು. ಜಿಲ್ಲಾ ಸರ್ವೇಕ್ಷಣ ಘಟಕ ಎನ್‌ಸಿಡಿ ವಿಭಾಗದ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಡಾ.ಅಂಜಲಿ ರಾಜ್ ಮಾತನಾಡಿ, ಜನ ಸಾಮಾನ್ಯ ರಲ್ಲಿ ಅಸಾಟಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಹಾಗೂ ಆರೋಗ್ಯದ ಗುಣಮಟ್ಟವನ್ನು ಹೆಚ್ಚಿಸುವುದಲ್ಲಿ ಬೈಸಿಕಲ್ ಸವಾರಿಯ ಅಭ್ಯಾಸವು ಬಹಳ ಪರಿಣಾಮಕಾರಿಯಾಗಿದೆ ಎಂದರು.
ಮಣಿಪಾಲ ನಗರ ಪ್ರಾಥಮಿಕ ಆರೋಗ್ಯದ ವೈದ್ಯಧಿಕಾರಿ ಡಾ. ಚಾರ್‌ಮೈನೆ ಅವರು ವಿಶ್ವ ಬೈಸೈಕಲ್ ದಿನಾಚರಣೆಯ ಹಾಗೂ ಈ ವರ್ಷದ ಘೋಷ ವಾಕ್ಯವಾದ ’ಆರೋಗ್ಯಕ್ಕಾಗಿ ಸೈಕಲ್’ನ ಮಹತ್ವದ ಬಗ್ಗೆ ತಿಳಿಸಿದರು. ಎಂಐಟಿಯ ಸ್ಟುಡೆಂಟ್ ವೆಲ್‌ಫೇರ್‌ನ ಅಸೋಸಿಯೇಟ್ ನಿರ್ದೇಶಕಿ ಡಾ.ಪೂರ್ಣಿಮಾ ಬೈಸಿಕಲ್ ಸವಾರಿಯ ಪ್ರಯೋಜನಗಳನ್ನು ಹಾಗೂ ಸರಿಯಾದ ಮಾನವ ಸಂಪನ್ಮೂಲಕ ಶಕ್ತಿಯ ಉಪಯುಕ್ತತೆ ಬಗ್ಗೆ ತಿಳಿಸಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಬಾಲಕೃಷ್ಣ ಮದ್ದೋಡಿ ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಟ್ ನಿರ್ದೇಶಕ ಡಾ.ಅಶೋಕ್ ರಾವ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಅಧಿಕಾರಿ ಡಾ.ಲಕ್ಷ್ಮಣ ರಾವ್ ವಂದಿಸಿದರು.