ರಾಜ್ಯದಲ್ಲಿ ವಕೀಲರ ರಕ್ಷಣೆಗಾಗಿ ಶೀಘ್ರವೇ ಕಾಯ್ದೆ ಜಾರಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜೂ.5: ರಾಜ್ಯದಲ್ಲಿ ವಕೀಲರ ರಕ್ಷಣೆಗಾಗಿ ಶೀಘ್ರವೇ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಕೀಲರಿಗೆ ಭರವಸೆ ನೀಡಿದ್ದಾರೆ.
ಕರ್ನಾಟಕ ವಕೀಲರ ಮಂಡಳಿ ಅಧ್ಯಕ್ಷ ಎಚ್.ಎಲ್.ವಿಶಾಲ ರಘು ಹಾಗೂ ಸದಸ್ಯರು ತಮ್ಮನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ವೇಳೆ ರಾಜಸ್ಥಾನದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾಯ್ದೆಯ ಪ್ರತಿಯನ್ನು ತರಿಸಿಕೊಂಡು ಅಧ್ಯಯನ ಮಾಡಲಾಗುವುದು ಎಂದು ತಿಳಿಸಿದರು.
ವಕೀಲರ ಸಂಘಕ್ಕೆ ಶಾಶ್ವತವಾದ ಸ್ಥಳವಿಲ್ಲವಾಗಿದ್ದು, ಪ್ರಸ್ತುತ ಪ್ರೆಸ್ ಕ್ಲಬ್ ಬಳಿ ಇರುವ ಸ್ಥಳದಲ್ಲಿಯೇ ಶಾಶ್ವತವಾಗಿ ಸ್ಥಳಾವಕಾಶ ಮಾಡಿಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ಕುರಿತು ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.
ವಕೀಲರಿಗೆ ರಕ್ಷಣೆ ಇಲ್ಲವಾಗಿದೆ. ಕೆಲವರು ಹಲ್ಲೆ ಮಾಡುತ್ತಿದ್ದಾರೆ. ಇದರಿಂದ ರಕ್ಷಣೆ ನೀಡುವಂತಹ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಈ ಹಿಂದಿನ ಬಿಜೆಪಿ ಸರಕಾರದಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ವಕೀಲರು ಮನವಿ ಸಲ್ಲಿಸಿದ್ದರು.
ಈ ಬಗ್ಗೆ ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದ ಕಾರಣ ಫೆಬ್ರವರಿಯಲ್ಲಿ ನಡೆದ ಅಧಿವೇಶನದ ಸಂದರ್ಭದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಾಗಿರಲಿಲ್ಲ. ಈಗ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಕೀಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಯ್ದೆಯನ್ನು ಜಾರಿಗೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ