ಈ ಕರಾಳ ಶಾಸನಕ್ಕೆ ಜೀವದಾನ ಬೇಡ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದ್ರೋಹದ ಪ್ರಕರಣಗಳಲ್ಲಿ ವಿಧಿಸುವ ಜೈಲು ಶಿಕ್ಷೆಯ ಅವಧಿಯನ್ನು ಕನಿಷ್ಠ ಮೂರು ವರ್ಷಗಳಿಂದ ಏಳು ವರ್ಷಗಳಿಗೆ ವಿಸ್ತರಿಸಬೇಕೆಂದು ಕಾನೂನು ಆಯೋಗ ಮಾಡಿರುವ ಶಿಫಾರಸಿನ ಬಗ್ಗೆ ಪ್ರತಿಪಕ್ಷಗಳು ಸೇರಿದಂತೆ ಮಾನವ ಹಕ್ಕುಗಳ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿವೆ. ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ಸಾಕಷ್ಟು ದುರ್ಬಳಕೆಯಾಗಿರುವ ಬ್ರಿಟಿಷ್ ಕಾಲದ ಈ ಕರಾಳ ಶಾಸನ ಸ್ವಾತಂತ್ರ್ಯ ಬಂದ ನಂತರ ರದ್ದಾಗಬೇಕಾಗಿತ್ತು. ಆದರೆ ಭಾರತದ ಆಳುವ ವರ್ಗ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಇದನ್ನು ಉಳಿಸಿಕೊಂಡು ಬಂತು.
ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಭಾರತವನ್ನು ಆಳುವಾಗ ಆ ವಿದೇಶಿ ಆಡಳಿತದ ವಿರುದ್ಧ ಭಾರತದಲ್ಲಿ ವ್ಯಾಪಕವಾದ ಹೋರಾಟಗಳು ನಡೆದವು. ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟ, ನೇತಾಜಿ ಸುಭಾಷ್‌ಚಂದ್ರ ಭೋಸ್ ಮತ್ತು ಭಗತ್ ಸಿಂಗ್ ಅವರ ನೇತೃತ್ವದಲ್ಲಿ ಕ್ರಾಂತಿಕಾರಿ ಪ್ರತಿರೋಧದ ಅಲೆಗಳು ಎದ್ದವು. ಈ ಆಂದೋಲನಗಳನ್ನು ಹತ್ತಿಕ್ಕಲು ಬ್ರಿಟಿಷ್ ಸರಕಾರ ಅಪರಾಧ ಸಂಹಿತೆಗೆ ತಿದ್ದುಪಡಿ ತಂದು ಬ್ರಿಟಿಷ್ ಸರಕಾರದ ಆಡಳಿತವನ್ನು ವಿರೋಧಿಸುವುದನ್ನು ದೇಶದ್ರೋಹ ಎಂದು ಪರಿಗಣಿಸಿ ಸಾವಿರಾರು ಹೋರಾಟಗಾರರನ್ನು ಈ ಕರಾಳ ಶಾಸನದನ್ವಯ ಬಂಧಿಸಿ ಸೆರೆಮನೆಗೆ ಅಟ್ಟಿತು. ಆಗ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳದ ಆರೆಸ್ಸೆಸ್ ಮುಂತಾದ ಸಂಘಟನೆಗಳು ಬ್ರಿಟಿಷ್ ಸರಕಾರದ ಕೃಪಾಪೋಷಣೆಯಿಂದ ಸುರಕ್ಷಿತವಾಗಿದ್ದವು. ವಿದೇಶಿ ಆಡಳಿತ ತಂದ ಈ ಕರಾಳ ಶಾಸನವನ್ನು ಮುಂದುವರಿಸಿಕೊಂಡು ಹೋಗುವ ಮೂಲಕ ಇಂದಿನ ಸರಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟಿದೆ.
ಸರಕಾರದ ಲೋಪದೋಷಗಳನ್ನು ಎತ್ತಿ ಹೇಳುವವರನ್ನು, ವಿಮರ್ಶಿಸುವವರನ್ನು ಅಧಿಕಾರದಲ್ಲಿ ಇರುವವರು ತಮ್ಮ ಶತ್ರುಗಳೆಂದು ಪರಿಗಣಿಸಿ ಅವರ ಬಾಯಿ ಮುಚ್ಚಿಸಲು ಬ್ರಿಟಿಷ್ ಕಾಲದ ಈ ಕರಾಳ ಶಾಸನವನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಅದರಲ್ಲೂ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ ಮನುವಾದಿ ರಾಷ್ಟ್ರವನ್ನು ಕಟ್ಟಲು ಹೊರಟವರು ಸರಕಾರದ ಸೂತ್ರ ಹಿಡಿದಿರುವುದಿಂದ ಭಿನ್ನಾಭಿಪ್ರಾಯವನ್ನು ಸಹಿಸುವುದಿಲ್ಲ. ಹಾಗಾಗಿಯೇ ಕೋಮುವಾದವನ್ನು ವಿರೋಧಿಸುತ್ತಾ ಬಂದಿರುವ, ಗುಜರಾತ್ ಹತ್ಯಾಕಾಂಡವನ್ನು ಖಂಡಿಸಿದ, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋದ ಟೀಸ್ತಾ ಸೆಟಲ್ವಾಡ್ ಅವರಿಗೆ ಈ ಸರಕಾರ ಕೊಟ್ಟ, ಕೊಡುತ್ತಿರುವ ಕಿರುಕುಳ ಅಂತಿಂಥದ್ದಲ್ಲ. ಅದೇ ರೀತಿ ಅಂತರ್‌ರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಆನಂದ ತೇಲ್ತುಂಬ್ಡೆ, ಕವಿ ವರವರರಾವ್, ಪತ್ರಕರ್ತ ಗೌತಮ್ ನವ್ಲಾಖಾ, ನ್ಯಾಯವಾದಿ ಸುಧಾ ಭಾರದ್ವಾಜ್ ಮುಂತಾದವರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ಹಾಕಿತು.
ಬ್ರಿಟಿಷ್ ಕಾಲದ ಈ ಕರಾಳ ಶಾಸನವನ್ನು ಮುಂದುವರಿಸಿರುವ ಬಗ್ಗೆ ಕಳೆದ ವರ್ಷ ಸುಪ್ರೀಂ ಕೋರ್ಟ್ ಕೂಡ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ ಭಾರತದ ದಂಡ ಸಂಹಿತೆಯ (ಐಪಿಸಿ) 124(ಎ) ಕಲಮನ್ನು ಯಾಕೆ ರದ್ದುಗೊಳಿಸಬಾರದು ಎಂದು ಪ್ರಶ್ನಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಸಲಹೆಯನ್ನು ಕಿವಿಗೆ ಹಾಕಿಕೊಳ್ಳದ ಮೋದಿ ಸರಕಾರ ಈ ಕರಾಳ ಶಾಸನವನ್ನು ಇನ್ನಷ್ಟು ಬಿಗಿಗೊಳಿಸಿ ಇನ್ನಷ್ಟು ಕರಾಳ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯವಾಗಿದೆ.
ಈ ಕರಾಳ ಶಾಸನದಡಿ ದೇಶದಲ್ಲಿ ಸುಮಾರು ಹದಿನೈದು ಸಾವಿರಕ್ಕೂ ಹೆಚ್ಚು ಜನರನ್ನು ಜೈಲಿನಲ್ಲಿ ವಿಚಾರಣೆಯಿಲ್ಲದೆ ಕೊಳೆ ಹಾಕಲಾಗಿದೆ. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ದಾಖಲಾಗಿದ್ದ ಹತ್ತು ಸಾವಿರ ಪ್ರಕರಣಗಳಲ್ಲಿ ಕೇವಲ 329 ಪ್ರಕರಣಗಳು ಮಾತ್ರ ಸಾಬೀತಾಗಿವೆ. ಇದರಿಂದಲೇ ಈ ಕಾನೂನಿನ ದುರುಪಯೋಗ ಸ್ಪಷ್ಟವಾಗುತ್ತದೆ.
ಕಳೆದ ಒಂಭತ್ತು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರಕಾರ ಭಾರತದ ಆರ್ಥಿಕ, ಸಾಮಾಜಿಕ ಅಡಿಪಾಯವನ್ನು ಸಾಕಷ್ಟು ದುರ್ಬಲಗೊಳಿಸಿದೆ.ಜನತೆಗೆ ನೀಡಿರುವ ಯಾವುದೇ ಭರವಸೆಯನ್ನು ಈಡೇರಿಸುವಲ್ಲಿ ವಿಫಲಗೊಂಡ ಸರಕಾರ ಜನಸಾಮಾನ್ಯರು ಬೆಲೆ ಏರಿಕೆಯ ಉರಿಯಲ್ಲಿ ಬೆಂದು ಹೋಗುವಂತೆ ಮಾಡಿದೆ. ಕಳೆದ ಎಪ್ಪತ್ತು ವರ್ಷಗಳಿಂದ ಸ್ವತಂತ್ರ ಭಾರತ ಸ್ವಪರಿಶ್ರಮ, ಸ್ವಾವಲಂಬನೆಯಿಂದ ಕಟ್ಟಿಕೊಂಡಿದ್ದ ಸಾರ್ವಜನಿಕ ಉದ್ಯಮಗಳನ್ನು ಅಗ್ಗದ ಬೆಲೆಗೆ ಹರಾಜು ಹಾಕುತ್ತಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಗಾಳಿಗೆ ತೂರಲ್ಪಟ್ಟಿದೆ. ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಪ್ರತಿಪಕ್ಷಗಳನ್ನು ಹತ್ತಿಕ್ಕಲು, ಪ್ರತಿರೋಧದ ಧ್ವನಿಯನ್ನು ಮೌನವಾಗಿಸಲು ಮೋದಿ ಸರಕಾರ ಈ ಕರಾಳ ಶಾಸನವನ್ನು ಇನ್ನಷ್ಟು ಕರಾಳ ಮಾಡಲು ಹೊರಟಿದೆ ಎಂಬ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಆರೋಪದಲ್ಲಿ ಹುರುಳಿಲ್ಲದಿಲ್ಲ.
ಚುನಾವಣೆ ಮೂಲಕ ಗೆಲುವು ಸಾಧಿಸುವ ಜನತಾಂತ್ರಿಕ ಮೌಲ್ಯಗಳಲ್ಲಿ ನಂಬಿಕೆ ಕಳೆದುಕೊಂಡ ಬಿಜೆಪಿ ದೇಶದಲ್ಲಿ ಭಯದ ವಾತಾವರಣವನ್ನು ನಿರ್ಮಾಣ ಮಾಡಿ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಿ ಮತ್ತೆ ಅಧಿಕಾರ ಹಿಡಿಯಲು ಹೊರಟಿದೆ. ಹಾಗಾಗಿಯೇ ಈ ಕರಾಳ ಶಾಸನವನ್ನು ರದ್ದುಗೊಳಿಸಲು ಸರ್ವೋಚ್ಚ ನ್ಯಾಯಾಲಯ ಸಲಹೆ ನೀಡಿದರೂ ಆ ಸಲಹೆಯನ್ನು ಕಡೆಗಣಿಸಿ ಈ ಶಾಸನದನ್ವಯ ವಿಧಿಸುವ ಜೈಲು ಶಿಕ್ಷೆಯನ್ನು ಮೂರು ವರ್ಷಗಳಿಂದ ಏಳು ವರ್ಷಕ್ಕೆ ಹೆಚ್ಚಿಸಲು ಹೊರಟಿದೆ. ಇಂದಿರಾಗಾಂಧಿ ಕಾಲದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದವರು ತಾವೆಂದು ಬಡಾಯಿ ಕೊಚ್ಚಿಕೊಳ್ಳುವವರ ಕರಾಳ ಮುಖಕ್ಕೆ ಇದು ಪ್ರತ್ಯಕ್ಷ ಉದಾಹರಣೆಯಾಗಿದೆ.
ಬ್ರಿಟಿಷ್ ಕಾಲದ ಕರಾಳ ಶಾಸನವಾದ ದೇಶದ್ರೋಹದ ಕಾನೂನನ್ನು ದೇಶದ ಮೇಲೆ ಮತ್ತೆ ಹೇರುವ ಮೂಲಕ ಭಿನ್ನಮತವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟ ಪ್ರಭುತ್ವದ ಹುನ್ನಾರವನ್ನು ಜನತಂತ್ರದಲ್ಲಿ ನಂಬಿಕೆ ಹೊಂದಿರುವ ಎಲ್ಲ ಜನಪರ ಸಂಘಟನೆಗಳು ಮತ್ತು ಪಕ್ಷಗಳು ವಿರೋಧಿಸಬೇಕಾಗಿದೆ. ಈಗ ಸುಮ್ಮನಿದ್ದರೆ ಬರಲಿರುವ ದಿನಗಳಲ್ಲಿ ಇನ್ನಷ್ಟು ಅಸಹನೀಯವಾದ ಕಾನೂನುಗಳು ಬರಬಹುದು. ಅಧಿಕಾರದಲ್ಲಿ ಇರುವವರ ಭ್ರಷ್ಟಾಚಾರ, ದುರಾಡಳಿತಗಳನ್ನು ಪ್ರಶ್ನಿಸುವುದೇ ಅಪರಾಧ ಎಂದಾದರೆ ಭಾರತೀಯರು ಈಗಿರುವ ಸ್ವಾತಂತ್ರ್ಯವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು. ಈ ಕರಾಳ ಶಾಸನದ ಸಂಪೂರ್ಣ ರದ್ದತಿಗಾಗಿ ಧ್ವನಿಯೆತ್ತಬೇಕು.