ದೇವರಾಜ ಅರಸುರವರ ಆಡಳಿತ ನನಗೆ ಸದಾ ಮಾದರಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಜೂನ್. 06: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ಆಡಳಿತ ನನಗೆ ಸದಾ ಮಾದರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಡಿ. ದೇವರಾಜ ಅರಸುರವರ 41ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು ಸಿಎಂ, ದೇವರಾಜ ಅರಸು ಅವರು ನಾಡು ಕಂಡ ಮುತ್ಸದಿ ರಾಜಕಾರಣಿ. ಸರ್ಕಾರ ಗೌರವಯುತವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರ ಸ್ಮರಣೆ ಮಾಡಿದೆ ಎಂದರು.
ಅವರು ಮುಖ್ಯ ಮಂತ್ರಿಯಾಗಿ ಹಾಗೂ ಅವರ ಜೀವಿತ ಕಾಲದಲ್ಲಿ ಮಾಡಿದ ಕೆಲಸ ನಮಗೆ ಸ್ಫೂರ್ತಿ. ಸಾಮಾಜಿಕ ನ್ಯಾಯದ ಹರಿಕಾರ. ಅನೇಕ ಸಾಮಾಜಿಕ, ಕ್ರಾಂತಿಕಾರಿ ತೀರ್ಮಾನಗಳನ್ನು ಕೈಗೊಂಡಿದ್ದರು. ಭೂ ಸುಧಾರಣಾ ಕಾಯ್ದೆ, ಜೀತಪದ್ಧತಿ ಮುಕ್ತಿ, ಮಲಹೊರುವ ಪದ್ಧತಿಯನ್ನು ನಿಲ್ಲಿಸಿದ್ದು, ರೈತರ ಸಾಲ ವಿಮೋಚನಾ ಕಾಯ್ದೆ, ಹಾವನೂರು ಆಯೋಗ ರಚಿಸಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ, ಧ್ವನಿಯಿಲ್ಲದ ಜನರ ದನಿಯಾದರು ಎಂದರು.
''ಅಧಿಕಾರ, ಸಂಪತ್ತು, ಮತ್ತು ಅವಕಾಶದ ಹೆಬ್ಬಾಗಿಲು ತೆರೆದು ಸಮ ಸಮಾಜದ ನಿರ್ಮಾಣಕ್ಕೆ ತಮ್ಮನ್ನು ಅರ್ಪಿಸಿಕೊಂಡ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಆಡಳಿತ ನನಗೆ ಸದಾ ಮಾದರಿ. ಪರಿವರ್ತನೆಯ ಹರಿಕಾರನನ್ನು ಅವರ ಪುಣ್ಯಸ್ಮರಣೆಯಂದು ಗೌರವದಿಂದ ನೆನೆಯುತ್ತೇನೆ''
- ಸಿದ್ದರಾಮಯ್ಯ, ಮುಖ್ಯಮಂತ್ರಿ