ಎನ್‌ಐಆರ್‌ಎಫ್ ರ್‍ಯಾಂಕಿಂಗ್: ಸತತ ಎರಡನೇ ಬಾರಿ ಮೂರನೇ ಸ್ಥಾನ ಪಡೆದುಕೊಂಡ ಜಾಮಿಯಾ ಮಿಲ್ಲಿಯಾ
ಹೊಸದಿಲ್ಲಿ: ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್‍ಯಾಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ರ್‍ಯಾಂಕಿಂಗ್ 2023ರಲ್ಲಿನ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಮೂರನೇ ಸ್ಥಾನ ಗಳಿಸಿ ತನ್ನ ಈ ಸ್ಥಾನವನ್ನು ಸತತ ಎರಡನೇ ವರ್ಷ ಉಳಿಸಿಕೊಂಡಿದೆ.
ಒಟ್ಟು 13 ವಿಭಾಗಗಳಲ್ಲಿ ಈ ರ್‍ಯಾಂಕಿಂಗ್ ಅನ್ನು ಶಿಕ್ಷಣ ರಾಜ್ಯ ಸಚಿವ ರಾಜ್‌ಕುಮಾರ್ ರಂಜನ್ ಸಿಂಗ್ ಸೋಮವಾರ ಬಿಡುಗಡೆಗೊಳಿಸಿದ್ದಾರೆ.
ರ್‍ಯಾಂಕಿಂಗ್ ಅನ್ನು ಐದು ಮಾನದಂಡಗಳ ಆಧಾರದಲ್ಲಿ ನೀಡಲಾಗುತ್ತದೆ- ಕಲಿಸುವಿಕೆ, ಕಲಿಕೆ ಮತ್ತು ಸಂಪನ್ಮೂಲಗಳು (ಟಿಎಲ್‌ಆರ್), ಸಂಶೋಧನೆ ಮತ್ತು ವೃತ್ತಿಪರ ಪ್ರಾಕ್ಟೀಸ್, ಗ್ರಾಜುವೇಶನ್ ಔಟ್‌ಕಮ್, ಔಟ್‌ರೀಚ್ ಎಂಡ್ ಇಂಕ್ಲೂಸಿವಿಟಿ ಮತ್ತು ಪರ್ಸೆಪ್ಶನ್. ಈ ಐದೂ ವಿಭಾಗಗಳಲ್ಲಿ ಜಾಮಿಯಾ ಮಿಲ್ಲಿಯಾ ವಿವಿ ಕ್ರಮವಾಗಿ 69.8, 49.83, 93.85, 83.41 ಮತ್ತು 48.48 ಅಂಕಗಳನ್ನು ಗಳಿಸಿದೆ.
ಕಳೆದ ವರ್ಷ ಕೂಡ ವಿವಿ ಸರಿಸುಮಾರು ಇಷ್ಟೇ ಅಂಕಗಳನ್ನು ಗಳಿಸಿತ್ತು.
ರ್‍ಯಾಂಕಿಂಗ್ ಬಗ್ಗೆ ಜಾಮಿಯಾ ಉಪಕುಲಪತಿ ನಜ್ಮಾ ಅಖ್ತರ್ ಸಂತೋಷ ವ್ಯಕ್ತಪಡಿಸಿದ್ದಾರೆ ಹಾಗೂ ವಿವಿ ದೇಶದ ಮೂರು ಅತ್ಯುನ್ನತ ವಿವಿಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಕಲಿಕೆ, ಸಂಶೋಧನೆಯ ಗುಣಮಟ್ಟ ಸುಧಾರಣೆಗೆ ಸತತ ಪರಿಶ್ರಮ ಮುಂದುವರಿದಿದೆ. 2016ರಲ್ಲಿ 83ನೇ ರ್ಯಾಂಕ್ ಹೊಂದಿದ್ದ ಸಂಸ್ಥೆ 2016ರಲ್ಲಿ ಮೂರನೇ ರ್ಯಾಂಕ್ ಗಳಿಸಿ ಈ ವರ್ಷ ಕೂಡ ಅದೇ ರ್ಯಾಂಕ್ ಗಳಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ವಿವಿಗೆ ದಾಖಲಾತಿಗೆ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳ ಅದರ ಜನಪ್ರಿಯತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.