ದ.ಕ. - ಉಡುಪಿ ಜಿಲ್ಲೆಯ ಕೊರಗರಿಂದ ರಾಷ್ಟ್ರಪತಿ ಭೇಟಿ
ಮಂಗಳೂರು, ಜೂ.6: ದ.ಕ. ಮತ್ತು ಉಡುಪಿ ಜಿಲ್ಲೆಯ ಕೊರಗ ಸಮುದಾಯದ 10 ಮಂದಿ ಪ್ರತಿನಿಧಿಗಳಿಗೆ ರಾಷ್ಟ್ರಪತಿಯ ಭೇಟಿಗೆ ಅವಕಾಶ ಲಭಿಸಿದೆ.
ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿ ವಿನಾಶದ ಅಂಚಿನಲ್ಲಿರುವ ಕೊರಗ ಸಮುದಾಯದ ಪ್ರತಿನಿಧಿಗಳಾಗಿ ಆಯ್ಕೆಯಾದ ಹತ್ತು ಮಂದಿಯ ತಂಡವು ಜೂನ್ 10ರಂದು ಸಂಜೆ ಬೆಂಗಳೂರಿನಿಂದ ವಿಮಾನ ಮೂಲಕ ಹೊಸದಿಲ್ಲಿಗೆ ತೆರಳಲಿದ್ದಾರೆ.
ಮೈಸೂರಿನ ಬುಡಕಟ್ಟು ಸಂಶೋಧನಾ ಕೇಂದ್ರದ ಮೇಲುಸ್ತುವಾರಿಯಲ್ಲಿ ರಾಜ್ಯದಿಂದ ಬುಡಕಟ್ಟು ಸಮುದಾಯದ ಕೊರಗರು, ಜೇನು ಕುರುಬರು ರಾಷ್ಟ್ರಪತಿಯನ್ನು ಭೇಟಿಯಾಗಲಿದ್ದಾರೆ.
ಮೂರು ದಿನಗಳ ಪ್ರವಾಸದಲ್ಲಿ ದ.ಕ.ಜಿಲ್ಲೆಯ ಮಂಗಳೂರು ತಾಲೂಕಿನ ಮರಕಡದ ಎಂ. ಸುಂದರ, ಸುಳ್ಯ ಕೆಮ್ರಾಜೆಯ ರಾಮಚಂದ್ರ, ಮಂಗಳೂರು ಕಂಕನಾಡಿಯ ರತ್ನಾ ಹಾಗೂ ಕಿನ್ನಿಗೋಳಿಯ ಸುಪ್ರಿಯಾ ಹಾಗೂ ಉಡುಪಿ ಜಿಲ್ಲೆಯ ಬೈಂದೂರಿನ ಸೂರಸಿದ್ದ ಹೇರೂರು, ಶಂಕರ ಬೋಳಂ ಬಳ್ಳಿ, ಹೆಬ್ರಿ ತಾಲೂಕಿನ ಪ್ರಿಯದರ್ಶಿನಿ, ಬ್ರಹ್ಮಾವರದ ನೀಲು ಕಳತ್ತೂರು, ಹಾಗೂ ಕಾರ್ಕಳ ತಾಲೂಕಿನ ಬಾಬು ಕೊರಗ ಇನ್ನಾ ಪ್ರವಾಸ ತಂಡದಲ್ಲಿದ್ದಾರೆ.
*ಕೊರಗರಿಗೆ ಪ್ರತ್ಯೇಕವಾಗಿ ನಿಗಮ/ಪ್ರಾಧಿಕಾರದ ರಚಿಸಬೇಕು, ಕೊರಗರ ಸಾಂಸ್ಕೃತಿಕ ವಲಯದ ನಿರ್ಮಿಸಬೇಕು, ಪಿ.ವಿ.ಟಿ.ಜಿ ನೆಲೆಯಲ್ಲಿ ವಿಶೇಷ ರಾಜಕೀಯ ಮೀಸಲಾತಿ ಲಭ್ಯವಾಗಬೇಕು, ಸಂಪೂರ್ಣ ಉಚಿತ ಶಿಕ್ಷಣದ ವ್ಯವಸ್ಥೆಯಾಗಬೇಕು, ಕೊರಗರ ಸಮಗ್ರ ಅಭಿವೃದ್ಧಿಗೆ ಡಾ.ಮುಹಮ್ಮದ್ ಪೀರ್ ವರದಿಯ ಸಲಹೆಗಳನ್ನು ಜಾರಿಗೊಳಿಸಬೇಕು, ವೈದ್ಯಕೀಯ ವೆಚ್ಚದ ಮರು ಪಾವತಿಗಾಗಿ ಹಿಂದಿನಂತೆಯೇ ವಿಶೇಷ ಅನುದಾನ ಒದಗಿಸ ಬೇಕು, ಪ್ರಸ್ತುತ ಮನೆ ನಿರ್ಮಾಣದ ಘಟಕ ವೆಚ್ಚವನ್ನು ಸಾಂದರ್ಭಿಕವಾಗಿ ಏರಿಸಬೇಕು, ನೇರ ನೇಮಕಾತಿ ಮೂಲಕ ಉದ್ಯೋಗ ಭದ್ರತೆ ಒದಗಿಸಬೇಕು, ಉಚಿತ ಪೌಷ್ಠಿಕ ಆಹಾರದ ನಿರಂತರ ಪೂರೈಕೆ ಮಾಡಬೇಕು ಇತ್ಯಾದಿ ಬೇಡಿಕೆಗಳನ್ನು ರಾಷ್ಟ್ರಪತಿಗೆ ಸಲ್ಲಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.