ಅಮಿತ್ ಶಾ ಜೊತೆಗಿನ ಸಭೆ ಬಗ್ಗೆ ಮಾತನಾಡದಂತೆ ಸರಕಾರ ಕುಸ್ತಿಪಟುಗಳಿಗೆ ಸೂಚಿಸಿತ್ತು: ಬಜರಂಗ್ ಪೂನಿಯಾ
ಹೊಸದಿಲ್ಲಿ : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಖ್ಯಾತನಾಮ ಕುಸ್ತಿಪಟುಗಳು ಕಳೆದ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರೆ ಆ ಭೇಟಿ ಹಾಗೂ ಮಾತುಕತೆ ಬಗ್ಗೆ ಮಾತನಾಡದಂತೆ ಸರ್ಕಾರ ಕುಸ್ತಿಪಟುಗಳಿಗೆ ಸೂಚಿಸಿತ್ತು ಎಂದು ಒಲಿಂಪಿಯನ್ ಕುಸ್ತಿಪಟು ಬಜರಂಗ್ ಪುಣಿಯಾ ಹೇಳಿದ್ದಾರೆ.
ಗೃಹ ಸಚಿವರೊಂದಿಗೆ ಯಾವುದೇ “ಸೆಟ್ಟಿಂಗ್” ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಪುಣಿಯಾ, ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು ಎಂದಿದ್ದಾರೆ. ನಮ್ಮ ಹೋರಾಟ ಸತ್ತಿಲ್ಲ, ಅದು ಮುಂದುವರಿಯಲಿದೆ, ಅದನ್ನು ಹೇಗೆ ಮುಂದುವರಿಸುವುದು ಎಂಬ ಬಗ್ಗೆ ಯೋಚಿಸುತ್ತಿದ್ದೇವೆ,” ಎಂದು ಅವರು ಹೇಳಿದರು.
ಗೃಹ ಸಚಿವರನ್ನು ಭೇಟಿಯಾದ ಕುಸ್ತಿಪಟುಗಳು ಡೀಲ್‌ಗೆ ಬಂದಿದ್ದಾರೆ ಹಾಗೂ ಇನ್ನು ಪ್ರತಿಭಟನೆಗಳ ಅಗತ್ಯವಿಲ್ಲ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಪುಣಿಯಾ, ಅಮಿತ್ ಶಾ ಅವರೊಂದಿಗಿನ ಸಭೆಯ ಬಗ್ಗೆ ಮಾತನಾಡದಂತೆ ಸರ್ಕಾರವೇ ಹೇಳಿ ನಂತರ ಅವರೇ ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದರು ಎಂದರು.
“ಸರಕಾರದ ಸ್ಪಂದನೆ ನಮಗೆ ಖುಷಿ ನೀಡಿಲ್ಲ, ನಮ್ಮ ಬೇಡಿಕೆಗಳಿಗೂ ಸರ್ಕಾರ ಒಪ್ಪುತ್ತಿಲ್ಲ,” ಎಂದು ಅವರು ಹೇಳಿದರು.
ಶನಿವಾರದ ಸಭೆ ರಾತ್ರಿ 11 ಗಂಟೆಗೆ ಆರಂಭಗೊಂಡು ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಪುಣಿಯಾ ಸಹಿತ ಸಾಕ್ಷಿ ಮಲಿಕ್, ಸಂಗೀತಾ ಫೋಗಟ್ ಮತ್ತು ಸತ್ಯವೃತ ಕಡಿಯನ್ ಭಾಗವಹಿಸಿದ್ದರು.