ಎಸ್.ಆರ್. ಬೊಮ್ಮಾಯಿ ಪರ್ಯಾಯ ರಾಜಕಾರಣದ ಪ್ರಯೋಗ ಮಾಡಿ ಯಶಸ್ವಿಯಾದರು: ಬಿ.ಎಸ್. ಯಡಿಯೂರಪ್ಪ
ಬೆಂಗಳೂರು, ಜೂ.6: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್. ಬೊಮ್ಮಾಯಿ ಕರ್ನಾಟಕವನ್ನು ಪರ್ಯಾಯ ರಾಜಕಾರಣದ ಪ್ರಯೋಗ ಶಾಲೆಯನ್ನಾಗಿ ಮಾಡಿ ಯಶಸ್ವಿಯಾದರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯ ಪಟ್ಟರು.
ಮಂಗಳವಾರ ಗಾಂಧಿಭವನದಲ್ಲಿ ಗಂಗಮ್ಮಾ ಸೋಮಪ್ಪ ಬೊಮ್ಮಾಯಿ ಎಜುಕೇಶನಲ್ ಮತ್ತು ವೆಲ್ ಪೇರ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ‘ದಿ. ಎಸ್.ಆರ್. ಬೊಮ್ಮಾಯಿಯವರ ಜನ್ಮ ಶತಮಾನೋತ್ಸವ ಆಚರಣೆ,’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಎಸ್.ಆರ್. ಬೊಮ್ಮಾಯಿಯವರು ವಿದ್ಯಾರ್ಥಿಯಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಏಕೀಕರಣ, ಚಲೆ ಜಾವ್ ಚಳುವಳಿ, ಗೇಣಿದಾರರ ಪರ ಹೋರಾಟಮಾಡಿದ್ದರು. ಜನರ ಅಧಿಕಾರವನ್ನು ಜನರಿಗೆ ವಹಿಸುವ ತೀರ್ಮಾನ ಐತಿಹಾಸಿಕವಾಗಿದೆ. ಕಡಿಮೆ ಅವಧಿ ಅಧಿಕಾರ ನಡೆಸಿದರೂ ಅವರು ತೆಗೆದುಕೊಂಡ ತೀರ್ಮಾನ ಐತಿಹಾಸಿಕವಾಗಿವೆ ಎಂದು ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮಾತನಾಡಿ, ಪ್ರಜಾಪ್ರಭುತ್ವ ಎತ್ತ ಕಡೆ ಹೋಗುತ್ತಿದೆ ಎನ್ನುವುದನ್ನು ನೋಡಿದರೆ ಇತ್ತೀಚೆಗೆ ನಡೆದ ಚುನಾವಣೆ ಉದಾಹರಣೆ. ಹಣದ ಹೊಳೆ ತಡೆಯದಿದ್ದರೆ ಪ್ರಜಾಪ್ರಭುತ್ವ ಗಂಡಾಂತರಕ್ಕೆ ಹೋಗುತ್ತದೆ ಎನ್ನುವ ಆತಂಕ ಇದೆ. ಇದರ ಬಗ್ಗೆ ನಾಡಿನ ಹಿತ ಚಿಂತಕರು ಗಂಭೀರವಾಗಿ ಆಲೋಚಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಸುತ್ತೂರು ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪಿಜಿಆರ್ ಸಿಂಧ್ಯಾ, ಬಿ.ಎಲ್. ಶಂಕರ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮತ್ತಿತರರು ಹಾಜರಿದ್ದರು.