'ಆದಿಪುರುಷ್' ಪ್ರದರ್ಶನದ ಥಿಯೇಟರುಗಳಲ್ಲಿ ಹನುಮನಿಗಾಗಿ ಒಂದು ಸೀಟು ಮೀಸಲು ಘೋಷಿಸಿದ ಚಿತ್ರತಂಡ
ವಾನರ ಸೇನೆಗಾಗಿ ಇಡೀ ಚಿತ್ರಮಂದಿರವನ್ನೇ ಖಾಲಿ ಬಿಡಿ ಎಂದ ನೆಟ್ಟಿಗರು
ಮುಂಬೈ: ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಆದಿಪುರುಷ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದ್ದು, ಚಿತ್ರತಂಡದ ವಿಲಕ್ಷಣ ನಡೆಯಿಂದ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ಶ್ರೀರಾಮನ ಕಥೆಯನ್ನು ಆಧರಿಸಿದ ಈ ಚಿತ್ರವನ್ನು ಪ್ರದರ್ಶಿಸುವ ಪ್ರತಿ ಥಿಯೇಟರಿನಲ್ಲೂ ತಲಾ ಒಂದು ಆಸನವನ್ನು ಹನುಮನಿಗೆ ಅರ್ಪಿಸಲು ಚಿತ್ರ ತಯಾರಕರು ಮುಂದಾಗಿದ್ದಾರೆ. ಹಾಗಾಗಿ, ಥಿಯೇಟರಿನ ಒಂದು ಸೀಟು ಆಂಜನೇಯ ದೇವರಿಗಾಗಿ ಖಾಲಿ ಬಿಡಲಾಗುತ್ತದೆ ಎಂದು ವರದಿಯಾಗಿದೆ.
“ರಾಮಾಯಣವನ್ನು ಪಠಿಸುವಲ್ಲೆಲ್ಲಾ ಭಗವಾನ್ ಹನುಮಂತನು ಕಾಣಿಸಿಕೊಳ್ಳುತ್ತಾನೆ. ಅದು ನಮ್ಮ ನಂಬಿಕೆ. ಈ ನಂಬಿಕೆಯನ್ನು ಗೌರವಿಸಿ, ಪ್ರಭಾಸ್ ಅವರ ನಟನೆಯ ಆದಿಪುರುಷ ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್ ಗಳಲ್ಲಿ ಒಂದು ಸೀಟನ್ನು ಮಾರಾಟ ಮಾಡದೆ ಭಗವಾನ್ ಹನುಮಂತನಿಗೆ ಕಾಯ್ದಿರಿಸಲಾಗುತ್ತದೆ” ಎಂದು ಚಿತ್ರತಂಡ ಘೋಷಿಸಿದೆ.
ಹನುಮಂತನಿಗೆ ಸೀಟನ್ನು ಕಾಯ್ದಿರಿಸಿ ಖಾಲಿ ಬಿಡುವ ಚಿತ್ರ ನಿರ್ಮಾಪಕರ ಘೋಷಣೆಗೆ ಸಾಮಾಜಿಕ ಜಾಲತಾಣಗಳಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಹುಪಾಲು ನೆಟ್ಟಿಗರು ಚಿತ್ರತಂಡದ ನಿರ್ಧಾರಕ್ಕೆ ವ್ಯಂಗ್ಯವಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ಇಡೀ ವಾನರ ಸೇನೆಗೆ ಗೌರವ ನೀಡುವ ಸಲುವಾಗಿ ಇಡೀ ಚಿತ್ರಮಂದಿರವನ್ನು ಖಾಲಿ ಬಿಡಬೇಕು ಎಂದು ತಮಾಷೆ ಮಾಡಿದ್ದಾರೆ.
ಮತ್ತೊಬ್ಬ ನೆಟ್ಟಿಗರು ಪ್ರತಿಕ್ರಿಯಿಸಿ, ನಾನು ಚಿತ್ರಮಂದಿರಕ್ಕೆ ಹೋಗದೆ ಇನ್ನೊಂದು ಸೀಟು ಖಾಲಿ ಬಿಡುವಂತೆ ಮಾಡುತ್ತೇನೆ, ರಾಮನಿಗಾಗಿ ಹುತಾತ್ಮರಾದ ಎಲ್ಲರಿಗೂ ಗೌರವ ಸಲ್ಲಬೇಕು ಎಂದು ಟ್ವೀಟ್ ಮಾಡಿದ್ದಾರೆ.
#Adipurush to dedicate one seat in every Theatre to Lord #Hanuman and will be kept unsold honouring the beliefs of Lord Ram Bhakts. pic.twitter.com/tLCNZli2Rz
— AndhraBoxOffice.Com (@AndhraBoxOffice) June 5, 2023