ಸೂಲಿಬೆಲೆಯಂತಹ ದೇಶಭಕ್ತರಿಗೆ ಕಾಂಗ್ರೆಸ್ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದ ಸಿ.ಟಿ.ರವಿ
ಚಿಕ್ಕಮಗಳೂರು, ಜೂ.6: ಚಕ್ರವರ್ತಿ ಸೂಲಿಬೆಲೆಯಂತಹ ದೇಶಭಕ್ತರಿಗೆ ಕಾಂಗ್ರೆಸ್ ಸರ್ಟಿಫಿಕೇಟ್ ಕೊಡಬೇಕಾದ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರ ಕಣ್ಣಿಗೆ ಚಕ್ರವರ್ತಿ ಸೂಲಿಬೆಲೆ ಲಾಡನ್ ತರ ಕಾಣುತ್ತಿದ್ದಾರಾ?, ಈ ಕಾಂಗ್ರೆಸ್‍ನವರು ಲಾಡೆನ್ ಬಂದ್ರೆ ಒಳಗೆ ಬಿಟ್ಟು ಕೊಳ್ಳುತ್ತಾರೆ, ಆದರೆ ಚಕ್ರವರ್ತಿ ಸೂಲಿಬೆಲೆ ವಿಚಾರಗೋಷ್ಠಿ ರದ್ದು ಮಾಡುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಇಂತಹ ಕಾಂಗ್ರೆಸ್‍ನವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ ಅವರು, ಇದನ್ನು ಅಘೋಷಿತ ತುರ್ತು ಪರಿಸ್ಥಿತಿ ಎಂದು ನಾನು ಕರೆಯೊದಿಲ್ಲ. ಇದು ಅತಿಯಾದ ಅಧಿಕಾರದ ಮದ ಎಂದು ಹೇಳಬಹುದು, ಈ ಮದ ಹೆಚ್ಚು ದಿನ ಇರಲು ಸಾಧ್ಯವಿಲ್ಲ ಎಂದ ಅವರು, ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿ ಸಂವಿಧಾನವನ್ನು ಬುಡಮೇಲು ಮಾಡಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ ಕಾಂಗ್ರೆಸ್‍ಗೆ ಹಿಂದೆ ಬುದ್ಧಿ ಕಲಿಸಿದ್ದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.