ಸರ್ವರನ್ನೂ ಒಳಗೊಳ್ಳುವ ಸರಕಾರ ನಮ್ಮದು: ಸಿಎಂ ಸಿದ್ದರಾಮಯ್ಯ
ಹಜ್ ಯಾತ್ರಾರ್ಥಿಗಳ ಮೊದಲ ವಿಮಾನಯಾತ್ರೆ ಉದ್ಘಾಟನೆ
ಬೆಂಗಳೂರು, ಜೂ.6: ಸಂವಿಧಾನ ಬದ್ಧವಾಗಿ ರಾಜ್ಯದಲ್ಲಿ ಕಾನೂನಿನ ಆಡಳಿತ ಜಾರಿಯಲ್ಲಿದೆ. ಇದು ರಾಷ್ಟ್ರ ಕವಿ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ಕರ್ನಾಟಕ ರಾಜ್ಯ ಹಜ್ ಸಮಿತಿ ಆಯೋಜಿಸಿದ್ದ, 2023ನೇ ಸಾಲಿನಲ್ಲಿ ರಾಜ್ಯದಿಂದ ಹಜ್ ಯಾತ್ರೆಗೆ ತೆರಳುವ ಯಾತ್ರಾರ್ಥಿಗಳ ಮೊದಲ ವಿಮಾನ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.
ಅನೈತಿಕ ಪೊಲೀಸ್ ಗಿರಿಗೆ ರಾಜ್ಯದಲ್ಲಿ ಅವಕಾಶ ಇಲ್ಲ. ಈ ಬಗ್ಗೆ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದೇನೆ. ಅಲ್ಲದೆ, ಪ್ರತಿಯೊಂದು ಸಮುದಾಯಗಳು ಅಭಿವೃದ್ಧಿಯಲ್ಲಿ ಪಾಲ್ಗೊಂಡಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ನುಡಿದರು.
ಸಂವಿಧಾನದ ಆಶಯದಂತೆ ಸರ್ವರನ್ನೂ ಒಳಗೊಳ್ಳುವ ಸರಕಾರ ನಮ್ಮದು. ನಮ್ಮ ಸರಕಾರ ಸರ್ವರಿಗೂ ಸಮಪಾಲು ಎನ್ನುವ ಮೌಲ್ಯದಲ್ಲಿ ನಂಬಿಕೆ ಇಟ್ಟಿದೆ ಎಂದ ಅವರು, ನಮ್ಮ ಸರಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಕನ್ನಡ ನಾಡಿನ ಸಮಸ್ತರಿಗೆ ಅನ್ವಯ ಆಗುತ್ತದೆ. ಎಲ್ಲ ಧರ್ಮ, ಎಲ್ಲ ಜಾತಿ-ಸಮುದಾಯಗಳ ಅರ್ಹ ಫಲಾನುಭವಿಗಳು ನಮ್ಮ ಗ್ಯಾರಂಟಿ ಯೋಜನೆಗಳ ಅನುಕೂಲ ಪಡೆಯುತ್ತಾರೆ ಎಂದು ನುಡಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹಿಮ್ ಖಾನ್ ಮಾತನಾಡಿ, ಜೂ.7ರಂದು ಮುಂಜಾನೆ 4:45ಕ್ಕೆ ಹಜ್‌ಯಾತ್ರಿಗಳ ಮೊದಲ ವಿಮಾನ ಹಾರಾಟ ಮಾಡಲಿದೆ. ಅಂದು ತಲಾ 150 ಯಾತ್ರಿಗಳನ್ನು ಒಳಗೊಂಡ 5 ವಿಮಾನಗಳು ತೆರಳಲಿವೆ. ನಂತರದ ದಿನಗಳಲ್ಲಿ ತಲಾ 3 ವಿಮಾನಗಳು ತೆರಳಲಿವೆ. ಜೂ.22ರಂದು ಅಂತಿಮ ದಿನ 4 ವಿಮಾನಗಳು ತೆರಳಲಿವೆ. ಹೀಗೆ ಒಟ್ಟು 51 ವಿಮಾನಗಳು ತೆರಳಲಿವೆ ಎಂದು ಅವರು ಮಾಹಿತಿ ನೀಡಿದರು.
ಬೀದರ್ ಹಾಗೂ ಗುಲ್ಬರ್ಗ ಭಾಗದ ಯಾತ್ರಿಗಳು ಹೈದರಾಬಾದ್ ವಿಮಾನ ನಿಲ್ದಾಣದ ಮೂಲಕ ತೆರಳಲಿದ್ದಾರೆ ಎಂದು ಅವರು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಝಮೀರ್ ಅಹ್ಮದ್ ಖಾನ್, ಕೃಷ್ಣಬೈರೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ದೀನ್ ಕಚೇರಿವಾಲೆ, ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಜ್ ಖಾನ್ ಸೇರಿದಂತೆ ಪ್ರಮುಖರಿದ್ದರು.
'ನಮ್ಮ ನಾಡು ಮತ್ತು ನಮ್ಮ ದೇಶ ಪ್ರಗತಿಯ ಮಾರ್ಗದಲ್ಲಿ ಸಾಗಲಿ, ನಮ್ಮ ನೆಲದಲ್ಲಿ ಶಾಂತಿ, ಸೌಹಾರ್ದದ ವಾತಾವರಣ ನೆಲೆಸಲಿ ಎಂದು ಪ್ರತಿಯೊಬ್ಬ ಹಜ್ ಯಾತ್ರಿಗಳು ಪ್ರಾರ್ಥಿಸಿ'
-ಸಿದ್ದರಾಮಯ್ಯ, ಮುಖ್ಯಮಂತ್ರಿ
5 ಸಾವಿರ ಕೋಟಿ ರೂ. ಅನುದಾನಕ್ಕೆ ಆಗ್ರಹ
ಹಜ್ ಭವನದ ನವೀಕರಣಕ್ಕೆ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಸರಕಾರದ ಕೊನೆಯ ದಿನಗಳಲ್ಲಿ 5 ಕೋಟಿ ರೂ. ಘೋಷಿಸಿದರು. ಆದರೆ, ನಂತರ ಬಂದ ಸರಕಾರಗಳು ಈ ಹಣ ಕೊಡಲಿಲ್ಲ. ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಗೆದ್ದು ಬಂದು ಆ ಹಣ ನೀಡಿದ್ದಾರೆ. ಇದೇ ರೀತಿ ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಸಮುದಾಯದ ಪ್ರಗತಿಗೆ 5 ಸಾವಿರ ಕೋಟಿ ರೂ. ಅನುದಾನವನ್ನು ತಮ್ಮ ಅವಧಿಯಲ್ಲಿ ನೀಡಬೇಕು ಎಂದು ಸಚಿವ ಝಮೀರ್ ಅಹ್ಮದ್ ಖಾನ್ ಕಾರ್ಯಕ್ರಮದಲ್ಲಿ ಒತ್ತಾಯಿಸಿದರು.