ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಬೆಂಗಳೂರು ಕೃಷಿ ವಿವಿ
ಬೆಂಗಳೂರು, ಜೂ.6: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ‘ಭಾರತದ ಶೈಕ್ಷಣಿಕ ಶ್ರೇಯಾಂಕ- 2023ರನ್ನು ಬಿಡುಗಡೆ ಮಾಡಿದ್ದು, ನಗರದ ಕೃಷಿ ವಿಶ್ವವಿದ್ಯಾನಿಲಯವು ರಾಜ್ಯದ ಕೃಷಿ ಮತ್ತು ಸಂಬಂಧಿತ ವಿಶ್ವವಿದ್ಯಾನಿಲಯಗಳ ಪೈಕಿ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ.
ದೇಶದ 107 ಅಖಿಲ ಭಾರತ ಕೃಷಿ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳ ಪೈಕಿ 11ನೆ ಸ್ಥಾನವನ್ನು ಪಡೆದಿದೆ. ವಿಶ್ವವಿದ್ಯಾನಿಲಯವು ದೇಶದ 100 ಅತ್ಯುನ್ನತ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಒಂದಾಗಿದ್ದು, ಕರ್ನಾಟಕದ ಅತ್ಯುನ್ನತ ವಿಶ್ವವಿದ್ಯಾನಿಲಯಗಳ ಪೈಕಿ 10ನೆ ಸ್ಥಾನದಲ್ಲಿದೆ.
ಐದು ವರ್ಷಗಳ ಹಿಂದಿನ ಮಾಹಿತಿಯನ್ನು ಪರಿಗಣಿಸಿ, ಬೋಧನೆ, ಕಲಿಕೆ ಮತ್ತು ಸಂಪನ್ಮೂಲಗಳು, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸಗಳು, ಪದವಿ ಫಲಿತಾಂಶಗಳು, ಒಳಗೊಳ್ಳುವಿಕೆ ಮತ್ತು ಗ್ರಹಿಕೆ ಎಂಬ ಮಾನದಂಡಗಳನ್ನು ಪರಿಗಣಿಸಿ ವಿಶ್ವವಿದ್ಯಾನಿಲಯಗಳಿಗೆ ಶ್ರೇಯಾಂಕವನ್ನು ನೀಡಲಾಗಿದೆ ಎಂದು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಎಸ್.ವಿ. ಸುರೇಶ ಸಂತಸ ವ್ಯಕ್ತಪಡಿಸಿದ್ದಾರೆ.