ಒಡಿಶಾ ರೈಲು ದುರಂತದ ಸಂಚುಕೋರರು
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದ ಆಡಳಿತವೇ ಹಳಿ ತಪ್ಪಿರುವಾಗ ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ರೈಲು ದುರಂತಕ್ಕೆ ಹೊಣೆ ಮಾಡುವುದಾದರೂ ಯಾರನ್ನು? ನೈತಿಕತೆಯೇ ಇಲ್ಲದ ಸರಕಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾದರೂ ಹೇಗೆ? ಆತ್ಮವೇ ಇಲ್ಲದ ನಾಯಕರಲ್ಲಿ ಆತ್ಮಸಾಕ್ಷಿಯನ್ನು ಹುಡುಕಿದರೆ ಸಿಗುವುದೆ? ಒಡಿಶಾದ ಭೀಕರ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಆತ್ಮಸಾಕ್ಷಿಯಿರುವ ಯಾವುದೇ ಸರಕಾರ ಇಷ್ಟು ಹೊತ್ತಿಗೆ ಕನಿಷ್ಠ ರೈಲ್ವೆ ಸಚಿವನೊಬ್ಬನ ಕೈಯಲ್ಲಿ ರಾಜೀನಾಮೆ ನೀಡಿಸಿ ತನ್ನ ಮಾನವನ್ನು ಉಳಿಸಿಕೊಳ್ಳುತ್ತಿತ್ತು. ಆದರೆ, ‘‘ಕೇಳಿದ್ದಕ್ಕೆಲ್ಲ ರಾಜೀನಾಮೆ ಕೊಡಲು ನಮ್ಮದು ಯುಪಿಎ ಸರಕಾರವಲ್ಲ’’ ಎನ್ನುವ ಹೇಳಿಕೆಯನ್ನು ಬಿಜೆಪಿಯ ಹಿರಿಯ ಮುಖಂಡ ರಾಜನಾಥ್ ಸಿಂಗ್ ಅವರು ಈ ಹಿಂದೆಯೇ ಸ್ಪಷ್ಟಪಡಿಸಿದ್ದಾರೆ. ಭದ್ರತಾ ವೈಫಲ್ಯದ ಕಾರಣದಿಂದ ಪುಲ್ವಾಮದಲ್ಲಿ ೪೦ ಯೋಧರು ಉಗ್ರರ ದಾಳಿಗೆ ಬಲಿಯಾದಾಗ ಈ ದೇಶದ ಗೃಹ ಅಥವಾ ರಕ್ಷಣಾ ಸಚಿವರು ರಾಜೀನಾಮೆ ನೀಡಬೇಕಾಗಿತ್ತು. ಆಗ ಯಾರೂ ನೈತಿಕ ಹೊಣೆ ಹೊತ್ತಿರಲಿಲ್ಲ. ದಿಲ್ಲಿ ಗಲಭೆಯಲ್ಲಿ ೫೦ ಕ್ಕೂ ಅಧಿಕ ಮಂದಿ ಮೃತಪಟ್ಟರು. ನೂರಾರು ಮಂದಿ ಗಾಯಗೊಂಡರು. ಕೋಟ್ಯಂತರ ರೂ. ನಾಶ, ನಷ್ಟ ಸಂಭವಿಸಿತು. ನೈತಿಕ ಹೊಣೆ ಹೊತ್ತು ಈ ದೇಶದ ಗೃಹ ಸಚಿವರು ರಾಜೀನಾಮೆ ನೀಡಬೇಕಾಗಿತ್ತು. ಆದರೆ ಅವರು ರಾಜೀನಾಮೆ ನೀಡಲಿಲ್ಲ ಮಾತ್ರವಲ್ಲ, ಗಲಭೆಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದರು. ಕಾಟಾಚಾರಕ್ಕೂ ಸಂತ್ರಸ್ತರನ್ನು ಭೇಟಿ ಮಾಡಲಿಲ್ಲ. ನೋಟು ನಿಷೇಧದಿಂದ ದೇಶದ ಆರ್ಥಿಕತೆ ಮೇಲೆ ನಡೆದ ಅತ್ಯಾಚಾರದ ಹೊಣೆ ಹೊತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕಾಗಿತ್ತು. ಇಂದಿಗೂ ನೋಟು ನಿಷೇಧ ಯಾಕೆ ನಡೆಯಿತು ಎನ್ನುವುದನ್ನು ಸರಕಾರ ವಿವರಿಸಿಲ್ಲ. ಕೊರೋನವನ್ನು ನಿಭಾಯಿಸುವಲ್ಲಿ ಸರಕಾರದ ವೈಫಲ್ಯಗಳಿಗಾಗಿ ಸರಕಾರವೇ ಕೆಳಗಿಳಿಯಬೇಕಾಗಿತ್ತು. ಆದರೆ ಇಳಿಯಲಿಲ್ಲ. ಹೀಗಿರುವಾಗ, ಏಕಾಏಕಿ ಒಡಿಶಾದಲ್ಲಿ ನಡೆದ ರೈಲು ದುರಂತಕ್ಕಾಗಿ ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುವುದರಲ್ಲಿ ಅರ್ಥವೇನಿದೆ?
ಈ ದೇಶದಲ್ಲಿ ರೈಲ್ವೆ ಬಜೆಟ್ ಎನ್ನುವುದೊಂದಿತ್ತು. ರೈಲ್ವೆ ಖಾತೆ ಎನ್ನುವುದು ಅತ್ಯಂತ ಮಹತ್ವದ, ಪ್ರತಿಷ್ಠಿತ ಖಾತೆ ಎಂದೂ ಗುರುತಿಸಲ್ಪಟ್ಟ ದಿನವಿತ್ತು. ಜಾರ್ಜ್‌ಫೆರ್ನಾಂಡಿಸ್, ಜಾಫರ್ ಶರೀಫ್, ಲಾಲು ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿರಂತಹ ಮುತ್ಸದ್ದಿ ನಾಯಕರ ನೇತೃತ್ವದಲ್ಲಿ ಈ ಇಲಾಖೆ ದೊಡ್ಡ ಮಟ್ಟದಲ್ಲಿ ಪ್ರಗತಿಯನ್ನು ಕಂಡಿತ್ತು. ಆದರೆ ಖಾಸಗೀಕರಣದ ಭರಾಟೆಯಲ್ಲಿ ಕಳೆದ ಎಂಟು ವರ್ಷಗಳಿಂದ ರೈಲ್ವೆ ಇಲಾಖೆಯ ಎಲ್ಲ ಸಾರ್ವಜನಿಕ ರೆಕ್ಕೆಗಳನ್ನು ಹಂತಹಂತವಾಗಿ ಕತ್ತರಿಸಿಕೊಂಡು ಬರಲಾಗಿದೆ. ಪ್ರತ್ಯೇಕ ರೈಲ್ವೆ ಬಜೆಟ್ ರದ್ದಾಯಿತು. ಜನಸಾಮಾನ್ಯರ ಬಳಕೆಯ ರೈಲುಗಳ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಬೇಕಾದ ಸರಕಾರ ಏಕಾಏಕಿ ದುಬಾರಿ ‘ಬುಲೆಟ್ ಟ್ರೈನ್’ನ ಕನಸು ಕಂಡಿತು. ಈ ದುಬಾರಿ ಬುಲೆಟ್ ಟ್ರೈನ್ ದೆಸೆಯಿಂದಲೇ, ಈ ದೇಶದ ರೈಲ್ವೆ ಹಳಿಗಳ ಮೂಲಭೂತ ಸುಧಾರಣೆಗೆ ಭಾರೀ ಹಿನ್ನಡೆಯಾಯಿತು ಎಂದು ಅಭಿಪ್ರಾಯ ಪಡಲಾಗುತ್ತಿದೆ. ವಂದೇ ಭಾರತ್ ರೈಲುಗಳ ಹೆಸರಿನಲ್ಲಿ ಪ್ರಧಾನಿ ಮೋದಿಯವರು ಮಾಧ್ಯಮಗಳಲ್ಲಿ ಪದೇ ಪದೇ ಸುದ್ದಿಯಾಗುತ್ತಿದ್ದಾರಾದರೂ, ಈ ವಂದೇ ಭಾರತ್ ರೈಲುಗಳು ಎದುರಿಸಿದ ತಾಂತ್ರಿಕ ಸಮಸ್ಯೆಗಳೇ ಈ ದೇಶದ ರೈಲ್ವೆ ಹಳಿಗಳ ದುಸ್ಥಿತಿಯನ್ನು ಹೇಳುತ್ತವೆ. ಯಾವ ರೈಲು ಉದ್ಘಾಟನೆಯಾದರೂ ಅಲ್ಲಿಗೆ ಹಸಿರು ಬಾವುಟ ಹಿಡಿದುಕೊಂಡು ಧಾವಿಸುವವರು ಪ್ರಧಾನಿ ಮೋದಿಯೇ ಆಗಿರುವಾಗ, ತಾನು ಯಾಕೆ ರಾಜೀನಾಮೆ ನೀಡಬೇಕು? ಎಂದು ರೈಲ್ವೆ ಸಚಿವರು ಯೋಚಿಸಿದರೆ ಅದರಲ್ಲಿ ತಪ್ಪೇನೂ ಇಲ್ಲ.
ರೈಲು ಅವಘಡವನ್ನು ತಡೆಯುವ ಆಧುನಿಕ ತಂತ್ರಜ್ಞಾನದ ಬಗ್ಗೆ ಯುಪಿಎ ಸರಕಾರದ ಅವಧಿಯಲ್ಲೇ ಯೋಜನೆ ರೂಪಿಸಲಾಗಿತ್ತು. ಮಮತಾ ಬ್ಯಾನರ್ಜಿ ರೈಲ್ವೆ ಮಂತ್ರಿಯಾಗಿದ್ದಾಗ ರೈಲ್ವೈ ಇಲಾಖೆಯಲ್ಲಿ ಹತ್ತು ಹಲವು ಮೂಲಭೂತ ಸುಧಾರಣೆಗಳನ್ನು ತಂದಿದ್ದರು. ಆ ಸಂದರ್ಭದಲ್ಲಿ ಅವಘಡಗಳನ್ನು ತಡೆಯಲು ಟಿಸಿಎಎಸ್ ತಂತ್ರಜ್ಞಾನವನ್ನು ಅನುಷ್ಠಾನಕ್ಕೆ ತಂದರು. ಅದರಲ್ಲಿ ಇನ್ನಷ್ಟು ಸುಧಾರಣೆ ತಂದ ಮೋದಿ ನೇತೃತ್ವದ ಸರಕಾರ ‘ಕವಚ್’ ಎಂದು ಕರೆದು ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿತು. ಆದರೆ ಕವಚದ ಅಸಲಿಯತ್ತನ್ನು ಇದೀಗ ಒಡಿಶಾ ದುರಂತ ಬಯಲು ಮಾಡಿದೆ. ಕವಚ್ ತಂತ್ರಜ್ಞಾನವನ್ನು ಕನಿಷ್ಠ ೨,೦೦೦ ಕಿಲೋಮೀಟರ್ ವರೆಗೂ ಅಳವಡಿಸಲು ಸರಕಾರ ಯಶಸ್ವಿಯಾಗಿಲ್ಲ. ಈ ತಂತ್ರಜ್ಞಾನದ ವಿಸ್ತರಣೆ ಆಮೆಗತಿಯಲ್ಲಿ ನಡೆಯುತ್ತಿದೆ ಎನ್ನುವುದು ಇದೀಗ ಬೆಳಕಿಗೆ ಬಂದಿದೆ. ಇದೇ ಸಂದರ್ಭದಲ್ಲಿ, ಇಂದಿಗೂ ಈ ದೇಶದ ಅವಧಿ ಮುಗಿದ ರೈಲ್ವೆ ಹಳಿಗಳ ಮೇಲೆಯೇ ಬಹಳಷ್ಟು ರೈಲುಗಳು ಓಡುತ್ತಿವೆ. ಜನಸಾಮಾನ್ಯರ ದೈನಂದಿನ ಬಳಕೆಯಲ್ಲಿ ಮಹತ್ತರ ಪಾತ್ರ ವಹಿಸುವ ರೈಲುಗಳ ಬಗ್ಗೆ ಕಾಳಜಿ ವಹಿಸದೆ, ಐಶಾರಾಮಿ ರೈಲುಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿರುವ ಸರಕಾರ ಮತ್ತೊಂದೆಡೆ, ಇಡೀ ರೈಲ್ವೆ ಇಲಾಖೆಯನ್ನು ಖಾಸಗಿಯವರಿಗೆ ವಹಿಸುವ ಆತುರದಲ್ಲಿದೆ. ಈ ಆತುರವೇ ಒಡಿಶಾದಂತಹ ರೈಲು ದುರಂತಗಳಿಗೆ ಕಾರಣವಾಗುತ್ತಿದೆ.
ರೈಲು ದುರಂತಕ್ಕೆ ಸಂಬಂಧಿಸಿ ಯಾವ ರೀತಿಯ ತನಿಖೆ ನಡೆದರೂ ಅದು ಅಂತಿಮವಾಗಿ ಸರಕಾರದ ಕುತ್ತಿಗೆಗೇ ಬಂದು ಬಿಡುತ್ತದೆ. ಆದುದರಿಂದ, ಸರಕಾರದ ನೇತೃತ್ವದಲ್ಲಿ ನಡೆಯುವ ಸಿಬಿಐ ತನಿಖೆಯನ್ನು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲ. ಮೂಲಭೂತ ಸೌಕರ್ಯಗಳ ಕೊರತೆ, ತಂತ್ರಜ್ಞಾನದ ಅಳವಡಿಕೆಯಲ್ಲಿ ವೈಫಲ್ಯ ಇವೆಲ್ಲವೂ ರೈಲ್ವೆ ಇಲಾಖೆಗೆ ಸಂಬಂಧಿಸಿದ್ದು. ಯಾವುದೋ ಒಬ್ಬ ವ್ಯಕ್ತಿಯ ಕಾರಣದಿಂದ ಸಂಭವಿಸಿದ ದುರಂತ ಇದಲ್ಲ ಎನ್ನುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ದುರಂತವನ್ನು ಸರಕಾರ ಅದೆಷ್ಟು ಲಜ್ಜೆಗೆಟ್ಟು ನಿರ್ವಹಿಸುತ್ತಿದೆಯೆಂದರೆ, ಇದೀಗ ದುರಂತವನ್ನೇ ಕೋಮುದ್ವೇಷ ಹರಡಲು ಬಳಸಿಕೊಂಡು ಆ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳಲು ಮುಂದಾಗಿದೆ. ಮಾಧ್ಯಮಗಳೂ ಸರಕಾರದ ಈ ಸಂಚಿಗೆ ಶಾಮೀಲಾಗಿ ನಿಂತಂತಿದೆ. ಅವಘಡದ ಹಿಂದೆ ಭಯೋತ್ಪಾದಕರು? ಶುಕ್ರವಾರವೇ ದುರಂತ ಯಾಕೆ ಸಂಭವಿಸಿತು? ಇತ್ಯಾದಿ ವದಂತಿಗಳನ್ನು ಹರಿಯಬಿಟ್ಟು ಜವಾಬ್ದಾರಿಯಿಂದ ಕಳಚಿಕೊಳ್ಳಲು ಹೊರಟಿದೆ. ಒಂದೆಡೆ ರೈಲ್ವೆ ಇಲಾಖೆಯೇ ದುರಂತದ ಹಿಂದೆ ದುಷ್ಕರ್ಮಿಗಳ ಕೈವಾಡವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿದ್ದರೂ, ರಾಜಕೀಯ ನಾಯಕರು ದುರಂತವನ್ನು ಭಯೋತ್ಪಾದಕರ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ಒಡಿಶಾದಲ್ಲಿ ಸಂಭವಿಸಿದ ದುರಂತದಲ್ಲಿ ದುಷ್ಕರ್ಮಿಗಳ ಕೈವಾಡವಿರುವುದು ನಿಜವೇ ಆದರೆ, ಆ ದುಷ್ಕರ್ಮಿಗಳು ಸರಕಾರದೊಳಗೇ ಇದ್ದಾರೆ ಎನ್ನುವುದು ಅಷ್ಟೇ ನಿಜ. ರೈಲ್ವೆ ಇಲಾಖೆಯ ಮೂಲಭೂತ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ ಸರಕಾರವೇ ಆ ದುಷ್ಕರ್ಮಿ. ಜನಸಾಮಾನ್ಯರ ರೈಲುಗಳ ಬಗ್ಗೆ ಆದ್ಯತೆ ನೀಡದೆ ಬುಲೆಟ್ ಟ್ರೈನ್ ಹೆಸರಿನಲ್ಲಿ ರೈಲ್ವೆ ಇಲಾಖೆಯನ್ನೇ ಹಳಿ ತಪ್ಪಿಸಿದ ರಾಜಕೀಯ ನಾಯಕರೇ ಒಡಿಶಾ ರೈಲು ದುರಂತದ ಹಿಂದಿರುವ ಸಂಚುಕೋರರು. ಈ ದೇಶದ ಹೆಮ್ಮೆಯಾಗಿದ್ದ ರೈಲ್ವೆ ಎನ್ನುವ ಚಿನ್ನದ ಮೊಟ್ಟೆ ಇಡುವ ಕೋಳಿಯ ಕತ್ತು ಕುಯ್ಯಲು ಹೊಂಚು ಹಾಕಿರುವ ರಾಜಕೀಯ ನಾಯಕರೇ, ಒಡಿಶಾ ದುರಂತದ ನಿಜವಾದ ಕಾರಣಕರ್ತರು. ಆದುದರಿಂದ ಅನಾಮಧೇಯ ರೈಲ್ವೆ ಸಚಿವನೊಬ್ಬನ ರಾಜೀನಾಮೆಯಿಂದ ಈ ದುರಂತಕ್ಕೆ ನ್ಯಾಯ ನೀಡಲು ಸಾಧ್ಯವಿಲ್ಲ.