ಸಿರಿಬಾಗಿಲು: ‘ಗಡಿನಾಡ ಕಲಾ ಸಾಂಸ್ಕೃತಿಕ ಉತ್ಸವ’
ಕಾಸರಗೋಡು, ಜೂ.7: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಎರಡು ದಿನಗಳ ‘ಗಡಿನಾಡ ಕಲಾ ಸಾಂಸ್ಕೃತಿಕ ಉತ್ಸವ-2023’ ಇತ್ತೀಚೆಗೆ ಜರುಗಿತು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಅಧ್ಯಕ್ಷತೆ ವಹಿಸುವರು.
ಮೊದಲ ದಿನ ಪುತ್ತಿಗೆ ರಾಮಕೃಷ್ಣ ಜೋಯಿಸ ವಿರಚಿತ ಶ್ರೀ ರಾಮ ನಿಜ ಪಟ್ಟಾಭಿಷೇಕ ಪ್ರಸಂಗದ ‘ಅಗ್ನಿ ಪರೀಕ್ಷೆ’ ತಾಳಮದ್ದಲೆ ರೂಪದಲ್ಲಿ ಪ್ರಸ್ತುತಿಗೊಂಡಿತು. ಬಳಿಕ ಶ್ರೀಹರಿ ಭಟ್‌ರಿಂದ ಗಮಕ ವಾಚನ, ಕಲಾರತ್ನ ಶಂ.ನಾ. ಅಡಿಗ ಕುಂಬ್ಳೆಯವರಿಂದ ಹರಿಕಥೆ ನಡೆಯಿತು. ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರ ಪ್ರಸ್ತುತಪಡಿಸುವ ನೃತ್ಯೋಹಂ ನಡೆಯಲಿದೆ.
ಎರಡನೇ ದಿನ ಬೆಳಗ್ಗೆ ‘ಸಾಹಿತ್ಯ ಸಿರಿ’ಯಲ್ಲಿ ಗಾಯನ, ಅವಲೋಕನ, ಕಲಾ ಪ್ರದರ್ಶನ, ಕವಿಗೋಷ್ಠಿ ನಡೆಯಿತು. ಶಿಕ್ಷಕಿ ಸೀತಾಲಕ್ಷ್ಮೀ ವರ್ಮ ವಿಟ್ಲ ಉದ್ಘಾಟಿಸಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಧ್ಯಕ್ಷತೆ ವಹಿಸಿದ್ದರು.
ಅಪರಾಹ್ನ ಗಡಿನಾಡಿನ ಕಲೆ- ಸಾಹಿತ್ಯ- ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಕೀರ್ತಿಶೇಷರ ಕೊಡುಗೆಗಳ ಬಗ್ಗೆ ವಿಚಾರ ಸಂಕಿರಣ ನಡೆಯಿತು. ಪ್ರಸಂಗಕರ್ತ ಶ್ರೀಧರ ಡಿ.ಎಸ್. ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭವು ಪ್ರಸಂಗಕರ್ತ ಶ್ರೀಧರ ಡಿ.ಎಸ್. ಅಧ್ಯಕ್ಷತೆಯಲ್ಲಿ ಜರುಗಿತು. ಅತಿಥಿಗಳಾಗಿ ಜಯಪ್ರಕಾಶ್ ತೊಟ್ಟೆತ್ತೋಡಿ, ನರಸಿಂಹ ಮೂರ್ತಿ, ಶೀನಶೆಟ್ಟಿ, ಶಿವರಾಮ ಕಾಸರಗೋಡು, ಲಕ್ಷ್ಮೀನಾರಾಯಣ ತಂತ್ರಿ ವೇದಿಕೆಯಲ್ಲಿದ್ದರು. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಾಹಿತ್ಯ ಕ್ಷೇತ್ರದ ಸಾಧಕರಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಪೂಕಳ ಲಕ್ಷ್ಮೀ ನಾರಾಯಣ ಭಟ್‌ರಿಗೆ ಗಡಿನಾಡ ಸಿರಿ- ಸಿರಿಬಾಗಿಲು ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ವಾನ್ ಬಾಬು ರೈಯವರಿಗೆ ಅವರ ಸ್ವಗೃಹದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಳಿಕ ಮಧೂರು ಕ್ಷೇತ್ರದ ಚಾರಿತ್ರಿಕ ಕತೆ ಮಧುಪುರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ರಾಧಾಲಕ್ಷ್ಮೀ ವಂದಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು.