ಜೂನ್ 9ರಿಂದ ಕರಾವಳಿ ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ
ಬೆಂಗಳೂರು, ಜೂ.7:ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಜೂ.9ರಿಂದ ಮೂರು ದಿನ ಮಳೆಯ ಪ್ರಮಾಣ ಹೆಚ್ಚಿರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂ.9ರಿಂದ ಜೂ.11ರವರೆಗೆ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗಿರಲಿದೆ. ಇದೇ ಅವಧಿಯಲ್ಲಿದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಚಂಡಮಾರುತದ ಸಾಧ್ಯತೆಯಿದ್ದು, ಮೀನುಗಾರಿಕೆ ನಡೆಸಲು ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಪ್ರವಾಸಿಗರು ಹಾಗೂ ಮಕ್ಕಳು ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ. ರಾಜ್ಯದ ಒಳನಾಡು ಭಾಗದಲ್ಲೂ ಗಾಳಿಯು 30 ರಿಂದ 40 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಸೂಚನೆ ನೀಡಿದೆ.
ಜೂ.10ರಂದು ಕೊಡಗು ಮತ್ತು ತುಮಕೂರು ಜಿಲ್ಲೆಗೆ ಯೆಲ್ಲೊಅಲರ್ಟ್ ಹಾಗೂ ಜೂ.11ರಂದು ಚಿಕ್ಕಬಳ್ಳಾಪುರ, ಕೊಡಗು ಮತ್ತು ಕೋಲಾರ ಜಿಲ್ಲೆಗಳಿಗೆ ಯೆಲ್ಲೊಅಲರ್ಟ್ ಸೂಚನೆ ನೀಡಿದೆ.