ಆ್ಯಂಟಿ ಕಮ್ಯುನಲ್ ವಿಂಗ್ ಸ್ವಾಗತಾರ್ಹ: ಎಸ್ ವೈ ಎಸ್
ಮಂಗಳೂರು: ಪ್ರಚೋದನಕಾರಿ ಬರಹ, ಭಾಷಣಗಳಿಂದ ಮತ್ತು ಪ್ರಚೋದಕ ವರ್ತನೆಗಳಿಂದ ಕೋಮು ಸೌಹಾರ್ದವನ್ನು ಕೆಡಹುವ ದುಷ್ಟಶಕ್ತಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ರೂಪಿಸಲು ಮುಂದಾಗಿರುವ ರಾಜ್ಯ ಗೃಹ ಸಚಿವರ ಪ್ರಸ್ತಾಪವನ್ನು ಸುನ್ನೀ ಯುವಜನ ಸಂಘವು ಸ್ವಾಗತಿಸಿದೆ.
ಅನೈತಿಕ ಪೊಲೀಸ್‌ಗಿರಿಯ ಹೆಸರಿನಲ್ಲಿ ರೌಡಿಸಂ ಎಸಗಿ ಸಮಾಜದ ಸೌಹಾರ್ದ ಕದಡುವ ವ್ಯಕ್ತಿಗಳು ನಾಡಿನ ಹೆಸರು ಕೆಡಿಸುತ್ತಿದ್ದಾರೆ. ಶಾಂತಿ ಸೌಹಾರ್ದದ ಉದಾತ್ತ ಪರಂಪರೆಯನ್ನು ಹೊಂದಿರುವ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮು ಪ್ರಕ್ಷುಬ್ಧ ಜಿಲ್ಲೆ ಎಂಬ ಸಂಶಯದಿಂದ ನೋಡುವಂತಾಗಿದೆ. ಕೋಮುವಾದ ವಿರೋಧಿ ತಂಡ ರಚಿಸುವ ಮೂಲಕ ಜಿಲ್ಲೆಯನ್ನು ಹಳೆಯ ಪರಂಪರೆಗೆ ಮರಳಿಸಬೇಕು ಎಂದು ಎಸ್ ವೈ ಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದೀಖ್ ಕೆಎಂ ಮೊಂಟುಗೋಳಿ ಹೇಳಿದರು.
ಸಾಮಾಜಿಕ ತಾಣಗಳನ್ನು ಸಮಾಜ ಕಂಟಕ ಚಟುವಟಿಕೆಗೆ ಬಳಸುವುದರ ವಿರುದ್ಧ ಸೈಬರ್ ಕ್ರೈಂ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಗೊಳಿಸಬೇಕು. ಕೋಮು ವೈಷಮ್ಯಕ್ಕೆ ಬಲಿಯಾದ ಫಾಝಿಲ್, ಜಲೀಲ್ ಸೇರಿದಂತೆ ಎಲ್ಲ ಹತ್ಯಾ ಪ್ರಕರಣಗಳ ಸಮಗ್ರ ತನಿಖೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಶೀಘ್ರಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಎಸ್ ವೈ ಎಸ್ ದ.ಕ ಜಿಲ್ಲಾ ವೆಸ್ಟ್ ಘಟಕ ನಾಯಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಧ್ಯಕ್ಷ ಇಸ್ಹಾಖ್ ಝುಹ್ರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ, ಸದಸ್ಯರಾದ ಬಶೀರ್ ಮದನಿ ಕೂಳೂರು, ಆಸಿಫ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಪ್ರಿಂಟೆಕ್ ಸ್ವಾಗತಿಸಿ, ಮಹಬೂಬ್ ಸಖಾಫಿ ವಂದಿಸಿದರು.