ಔಷಧಿ ಹಚ್ಚಬೇಕಾದರೆ ಮೊದಲು ಗಾಯಗಳನ್ನು ಗುರುತಿಸಬೇಡವೆ?
ವಿಡಿಯೋ ವಾರ್ತಾಭಾರತಿ ಯೂಟ್ಯೂಬ್ ಚಾನಲ್ ನಲ್ಲಿ ವೀಕ್ಷಿಸಿ : ಲಿಂಕ್ ಕಮೆಂಟ್ ಬಾಕ್ಸ್ ನಲ್ಲಿ ಇದೆ
wwನೂತನ ಸರಕಾರ ಅಸ್ತಿತ್ವಕ್ಕೆ ಬಂದ ಬೆನ್ನಿಗೇ ಎಚ್. ಕಾಂತರಾಜು ನೇತೃತ್ವದ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿರುವ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015’ ವರದಿಯು ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಿದ್ಧಗೊಂಡಿದ್ದ ವರದಿ ಇದಾಗಿದ್ದರೂ, ಅವರದೇ ಮೈತ್ರಿ ಸರಕಾರ ಅಸ್ತಿತ್ವದಲ್ಲಿದ್ದಾಗ ವರದಿ ಸ್ವೀಕಾರವಾಗಿರಲಿಲ್ಲ. ಬಿಜೆಪಿಯಂತೂ ಈ ಐತಿಹಾಸಿಕ ಸಮೀಕ್ಷೆಯನ್ನು ಕಸದ ಬುಟ್ಟಿಗೆ ಹಾಕುವ ಪ್ರಯತ್ನ ನಡೆಸಿತು. ಸಮೀಕ್ಷೆಯನ್ನೇ ಒಂದು ಪ್ರಮಾದವೆಂಬಂತೆ ಬಿಂಬಿಸಿತು. ಹಿಂದೂ ಸಮಾಜದಲ್ಲಿರುವ ದುರ್ಬಲ ವರ್ಗವನ್ನು ಇನ್ನಷ್ಟು ಬಲಿಷ್ಠಗೊಳಿಸುವುದಕ್ಕಾಗಿ ಈ ಸಮೀಕ್ಷೆಯನ್ನು ನಡೆಸಲಾಗಿದೆಯಾದರೂ, ಬಿಜೆಪಿ ಮಾತ್ರ ‘ಹಿಂದೂ ಧರ್ಮವನ್ನು ಒಡೆಯುವುದಕ್ಕಾಗಿ’ ಈ ಸಮೀಕ್ಷೆಯನ್ನು ನಡೆಸಲಾಗಿದೆ ಎಂದು ಬಿಂಬಿಸಿತು. ಇಡೀ ಭಾರತಕ್ಕೆ ಮಾದರಿಯಾಗಬಹುದಾಗಿದ್ದ ಈ ಸಮೀಕ್ಷೆ ರಾಜಕೀಯ ಕಾರಣಗಳಿಂದ ನನೆಗುದಿಗೆ ಬಿತ್ತು. ಇದೀಗ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದಿದ್ದು, ತಾನೇ ಸಿದ್ಧ ಪಡಿಸಿದ ವರದಿಗೆ ಯಾವ ರೀತಿಯಲ್ಲಿ ನ್ಯಾಯವನ್ನು ನೀಡಲಿದೆ ಎನ್ನುವುದನ್ನು ದೇಶ ಕುತೂಹಲದಿಂದ ನೋಡುತ್ತಿದೆ.
ಅಭಿವೃದ್ಧಿಯ ಸಮಾನ ಹಂಚಿಕೆಗೆ ಅತಿ ದೊಡಕಾಗಿ ಪರಿಣಮಿಸಿರುವುದು, ಜಾತಿಗಳ ಜನಸಂಖ್ಯೆಯ ಅಧಿಕೃತ ಅಂಕಿಅಂಶಗಳು ಸರಕಾರದ ಬಳಿ ಇಲ್ಲದೇ ಇರುವುದು. ಮೀಸಲಾತಿ ಜಾರಿಗೊಂಡ ಬಳಿಕವೂ ಭಾರತದಲ್ಲಿ ಅಸಮಾನತೆ ತಾಂಡವವಾಡಲು ಇದು ಮುಖ್ಯ ಕಾರಣ. ಇಂದಿಗೂ ಬ್ರಿಟಿಷರ ಕಾಲದ ಸರಾಸರಿ ಅಂಕಿಅಂಶಗಳ ಆಧಾರದಲ್ಲಿ ಸರಕಾರ ದುರ್ಬಲ ವರ್ಗಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುತ್ತಿದೆ. ಮೀಸಲಾತಿ ಜಾರಿಗೊಳಿಸುವ ಸಂದರ್ಭದಲ್ಲೂ ಈ ಅಂಕಿಅಂಶಗಳ ಕೊರತೆ ಬಹುದೊಡ್ಡ ಸಮಸ್ಯೆಯಾಗಿ ಕಾಡಿದೆ. ಸುಪ್ರೀಂಕೋರ್ಟ್ ಕೂಡ ಇದನ್ನು ಪ್ರಸ್ತಾಪಿಸಿತ್ತು. ಈ ಹಿನ್ನೆಲೆಯಲ್ಲಿ ದೇಶದಲ್ಲೇ ಮೊತ್ತ ಮೊದಲಾಗಿ ಕರ್ನಾಟಕ ‘ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2015’ ಗಣತಿಗೆ ಮುಂದಾಯಿತು. ಆಯೋಗದ ಅಧ್ಯಕ್ಷ ಎಚ್. ಕಾಂತರಾಜು ಅವರ ನೇತೃತ್ವದಲ್ಲಿ ಸಮೀಕ್ಷೆ ನಡೆಸಲು 2014ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಆದೇಶ ನೀಡಿತ್ತು. 2017ರಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ಅವಧಿಯನ್ನು ಇನ್ನಷ್ಟು ವಿಸ್ತರಿಸಲಾಯಿತು. ಸಮೀಕ್ಷೆ ಪೂರ್ಣಗೊಂಡು ತಂಡ ವರದಿ ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರದಲ್ಲಿತ್ತು. ಈ ವರದಿಯನ್ನು ಸ್ವೀಕರಿಸುವುದು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಇಷ್ಟವಿದ್ದಂತಿರಲಿಲ್ಲ. ಆ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಕ್ಕಂತೂ ಜಾತಿ ಗಣತಿಯೆನ್ನುವುದು ಸೆರಗಿನ ಕೆಂಡವಾಯಿತು.
ಜಾತಿ ಗಣತಿ ತೆರೆದಿಡುವ ಹತ್ತು ಹಲವು ವಾಸ್ತವಗಳು ಬಿಜೆಪಿಯ ಪೊಳ್ಳು ಹಿಂದುತ್ವಕ್ಕೆ ಬಹುದೊಡ್ಡ ಸವಾಲಾಗುವ ಸಾಧ್ಯತೆಗಳಿದ್ದವು. ಇದೇ ಸಂದರ್ಭದಲ್ಲಿ ವರದಿ ಸೋರಿಕೆಯ ಬಗ್ಗೆ ಬಿಜೆಪಿ ಗದ್ದಲ ಎಬ್ಬಿಸಿತು. ಮಾಧ್ಯಮಗಳಲ್ಲಿ ಪ್ರಕಟಗೊಂಡ ಕೆಲವು ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ವರದಿ ಸಲ್ಲಿಕೆಗೆ ಮುನ್ನವೇ ಬಲಾಢ್ಯ ಜಾತಿಗಳಲ್ಲಿ ಆತಂಕಗಳನ್ನು ಬಿತ್ತಲು ಬಿಜೆಪಿ ಯಶಸ್ವಿಯಾಯಿತು. ಕೊನೆಗೂ ಐತಿಹಾಸಿಕ ಸಮೀಕ್ಷೆಯನ್ನು ಅಂದಿನ ಸರಕಾರ ಸ್ವೀಕರಿಸಲೇ ಇಲ್ಲ. 160 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಈ ಸಮೀಕ್ಷೆಯನ್ನು ಸಿದ್ಧಪಡಿಸಲಾಗಿದೆ. 55 ಅಂಶಗಳನ್ನು ಮುಂದಿಟ್ಟುಕೊಂಡು 1,383 ಜಾತಿಗಳ ಸಮೀಕ್ಷೆಗಳನ್ನು ಮಾಡಲಾಗಿತ್ತು. ಬರೇ ಜಾತಿಗಳ ಜನಸಂಖ್ಯೆಯಷ್ಟೇ ಅಲ್ಲ, ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅವುಗಳು ಎದುರಿಸುತ್ತಿರುವ ಸವಾಲುಗಳೇನು ಎನ್ನುವುದರ ವಿವರಗಳನ್ನು ಈ ಸಮೀಕ್ಷೆ ಹೊಂದಿದೆ. ‘ಹಿಂದೂ ಎಲ್ಲರೂ ಒಂದು’ ಎನ್ನುವ ತಳಹದಿಯ ಮೇಲೆ ಪ್ರಬಲ ಜಾತಿಗಳ ಓಲೈಕೆ ಮಾಡುತ್ತಿರುವ ಆರೆಸ್ಸೆಸ್‌ನ ಸಿದ್ಧಾಂತವನ್ನು ಈ ಸಮೀಕ್ಷೆ ಚಿಂದಿ ಮಾಡುವ ಶಕ್ತಿಯನ್ನು ಹೊಂದಿದೆ.
ಹಿಂದೂ ಧರ್ಮದೊಳಗೆ ದುರ್ಬಲರು ಯಾರು, ಸಬಲರು ಯಾರು ಎನ್ನುವ ಸ್ಪಷ್ಟ ಚಿತ್ರಣ ಈ ಸಮೀಕ್ಷೆಯಿಂದ ಸಿಗುವ ಸಾಧ್ಯತೆಗಳಿವೆ. ಈ ಮೂಲಕ ಹಿಂದೂ ಧರ್ಮವನ್ನು ಇನ್ನಷ್ಟು ಸಬಲೀಕರಣಗೊಳಿಸಲು ಸಾಧ್ಯವಾಗುತ್ತದೆ. ಆದರೆ ಹಿಂದೂ ಧರ್ಮದ ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿರುವ ಬಿಜೆಪಿಗೆ ಮಾತ್ರ ಇದು ಬೇಡವಾಗಿದೆ. ಹಿಂದೂ ಧರ್ಮದ ಶೋಷಿತ ವರ್ಗ ಸದಾ ಬಡತನ, ಅಸ್ಪಶ್ಯತೆಯಲ್ಲೇ ಕಳೆಯಬೇಕೆನ್ನುವುದು ಅದರ ಒಳ ಇಂಗಿತ. ಆದುದರಿಂದಲೇ, ತನ್ನ ಅಧಿಕಾರಾವಧಿಯಲ್ಲಿ ಸಮೀಕ್ಷೆ ಬಿಡುಗಡೆಗೊಳ್ಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದೀಗ ಮತ್ತೆ ಸಮೀಕ್ಷೆಯನ್ನು ಸರಕಾರ ಸ್ವೀಕರಿಸುವ ಸಮಯ ಬಂದಿದೆ. ಸರಕಾರ ವರದಿಯನ್ನು ಅಂಗೀಕರಿಸಿದ್ದೇ ಆದಲ್ಲಿ, ಸ್ವಾತಂತ್ರೋತ್ತರ ಇತಿಹಾಸದಲ್ಲಿ ಮೊತ್ತ ಮೊದಲಬಾರಿಗೆ ಜಾತಿ ಗಣತಿಯನ್ನು ನಡೆಸಿದ ಹೆಗ್ಗಳಿಕೆ ಕರ್ನಾಟಕದ ಪಾಲಾಗುತ್ತದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಸಮೀಕ್ಷೆ ಇತರ ರಾಜ್ಯಗಳಿಗೂ ಮಾದರಿಯಾಗಲಿದೆ. ಸಮೀಕ್ಷೆಯ ಅಂಕಿಅಂಶದ ಆಧಾರದಲ್ಲಿ ಅಭಿವೃದ್ಧಿಯ ಮರು ಹಂಚಿಕೆಯನ್ನು ಮಾಡಲು ಇದರಿಂದ ದೇಶಕ್ಕೆ ಸಾಧ್ಯವಾಗುತ್ತದೆ. ಮೀಸಲಾತಿಯ ಅನುಷ್ಠಾನದ ಸಂದರ್ಭದಲ್ಲಿ ಅಂಕಿಅಂಶಗಳ ಕೊರತೆಯಿಂದಾಗಿ ಎದುರಾಗುವ ತಾಂತ್ರಿಕ ಸಮಸ್ಯೆಗಳನ್ನು ನ್ಯಾಯಾಲಯದಲ್ಲಿ ನಿವಾರಿಸಿಕೊಳ್ಳಲು ಇದು ಸಹಾಯವನ್ನು ಮಾಡಬಹುದು.
ಕರ್ನಾಟಕವನ್ನು ಮಾದರಿಯಾಗಿರಿಸಿಕೊಂಡು ಜಾತಿ ಸಮೀಕ್ಷೆಯ ಬಗ್ಗೆ ಈಗಾಗಲೇ ಬಿಹಾರ ಬಲವಾದ ಹೆಜ್ಜೆಯನ್ನಿಟ್ಟಿದೆ. ಕೇಂದ್ರ ಸರಕಾರ ಮತ್ತು ನ್ಯಾಯಾಲಯ ಎರಡರ ಜೊತೆಗೂ ಅದು ಗುದ್ದಾಟ ನಡೆಸುತ್ತಿದೆ. ಕನಿಷ್ಠ ಹಿಂದೂಗಳಿಗೆ ಒಳಿತನ್ನು ಮಾಡಬೇಕು ಎನ್ನುವ ಉದ್ದೇಶ ಆರೆಸ್ಸೆಸ್ ಮತ್ತು ಬಿಜೆಪಿಗೆ ಇದ್ದರೆ ಜಾತಿ ಸಮೀಕ್ಷೆಯ ಹಾದಿಯನ್ನು ಸುಗಮ ಮಾಡಿಕೊಡಬೇಕು. ಯಾವ ಜಾತಿಗಳು ಹೀನಾಯ ಸ್ಥಿತಿಗಳನ್ನು ಎದುರಿಸುತ್ತಿವೆ ಎನ್ನುವುದನ್ನು ಕಂಡುಕೊಳ್ಳದೆ ಸವಲತ್ತುಗಳನ್ನು ಅರ್ಹರಿಗೆ ತಲುಪಿಸುವುದು ಸಾಧ್ಯವಿಲ್ಲ. ಹಿಂದೂ ಧರ್ಮವೆಂದರೆ ಸಾವಿರಾರು ಜಾತಿಗಳ ಒಂದು ಗುಂಪು. ಹಿಂದೂಗಳೆಲ್ಲರೂ ಒಂದಾಗಬೇಕಾದರೆ ಹಿಂದೂಗಳೆಲ್ಲರೂ ಮೊದಲು ಸಮಾನರಾಗಬೇಕು. ಎಲ್ಲರೂ ಸಮಾನರಾಗಬೇಕಾದರೆ ಯಾರು ದುರ್ಬಲರು, ಯಾರು ಸಬಲರು, ಯಾರು ಹೆಚ್ಚು ರಾಜಕೀಯ, ಆರ್ಥಿಕ ಪ್ರಾತಿನಿಧ್ಯಗಳನ್ನು ಪಡೆದಿದ್ದಾರೆ, ಯಾರು ಕಡಿಮೆ ಶಿಕ್ಷಣವನ್ನು ಹೊಂದಿದ್ದಾರೆ ಇವೆಲ್ಲವೂ ಬಹಿರಂಗವಾಗಬೇಕು. ಆದರೆ ಬಿಜೆಪಿಗೆ ಅದು ಬಹಿರಂಗವಾಗುವುದು ಬೇಕಾಗಿಲ್ಲ. ಅಂದರೆ, ಹಿಂದೂ ಧರ್ಮದೊಳಗಿರುವ ಅರ್ಹರಿಗೆ ಸವಲತ್ತುಗಳನ್ನು ತಲುಪಿಸಿ ಅವರನ್ನು ಸಬಲೀಕರಿಸುವುದು ಬೇಕಾಗಿಲ್ಲ. ಇನ್ನು ಭಾರತೀಯರ ಅಭಿವೃದ್ಧಿಯ ಕುರಿತಂತೆ ಅದು ಗಂಭೀರವಾಗಿ ಯೋಚಿಸುತ್ತದೆ ಎಂದು ಭಾವಿಸಲು ಸಾಧ್ಯವೆ?
ಜಾತಿ ಭಾರತದ ವಾಸ್ತವ. ಅದನ್ನು ಮುಚ್ಚಿಟ್ಟಷ್ಟು ಗಾಯಗಳು ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಅವುಗಳಿಗೆ ಚಿಕಿತ್ಸೆ ನೀಡಬೇಕಾದರೆ ಮೊತ್ತ ಮೊದಲು ಎಲ್ಲೆಲ್ಲ ಗಂಭೀರಗಾಯಗಳಿವೆ ಎನ್ನುವುದನ್ನು ನಾವು ಗುರುತಿಸಬೇಕಾಗಿದೆ. ಕರ್ನಾಟಕದಲ್ಲಿ ನಡೆದ ಸಮೀಕ್ಷೆಗಳು ಆ ಕೆಲಸವನ್ನು ಮಾಡಿದೆ. ಸರಕಾರ ಅದನ್ನು ಒಪ್ಪಿಕೊಂಡು, ಆ ಗಾಯಗಳಿಗೆ ಮದ್ದು ಹಚ್ಚುವ ಮಹತ್ತರ ಕೆಲಸವೂ ನೂತನ ಸರಕಾರದ ಮುಂದಿದೆ.