ಬೆಂಗಳೂರು ನಗರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ಅಗತ್ಯವಿದೆ: ಹೈಕೋರ್ಟ್ ಅಭಿಪ್ರಾಯ
ಬೆಂಗಳೂರು, ಜೂ.8: ಬೆಂಗಳೂರು ನಗರಕ್ಕೆ ಉತ್ತಮ ಮತ್ತು ಆರ್ಥಿಕ ಲಾಭದಾಯಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅವಶ್ಯಕತೆ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿಯ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದಲ್ಲಿ ಜಾರಿ ಮಾಡಲು ನಿರ್ದೇಶನ ನೀಡಬೇಕು ಎಂದು ಕೋರಿ ನಗರದ ಸಮರ್ಪಣಾ ಸಾಮಾಜಿಕ ಸಾಂಸ್ಕøತಿಕ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಹೆಚ್ಚಿನ ಪ್ರಮಾಣದ ನಾಗರಿಕರು ತಮ್ಮ ಸ್ವಂತ ವಾಹನಗಳಲ್ಲಿ ನಗರ ಪ್ರವೇಶ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವುದಕ್ಕಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆರ್ಥಿಕವಾಗಿ ಲಾಭದಾಯಕ ಮತ್ತು ಉತ್ತಮ ಗೊಳಿಸಬೇಕು ಎಂದು ನ್ಯಾಯಪೀಠವು ತಿಳಿಸಿದೆ.
ಜತೆಗೆ, ಬೆಂಗಳೂರು ನಗರ ಸಂಚಾರಿ ದಟ್ಟಣೆಯಿಂದ ಸಾರ್ವಜನಿಕ ಸಾರಿಗೆಯ ಅಲಭ್ಯತೆಯು ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಜತೆಗೆ ನಗರದ ರಸ್ತೆಗಳ ಅಗಲೀಕರಣ ಪ್ರಸ್ತುತ ಅತ್ಯಂತ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಬಳ್ಳಾರಿಯ ರಸ್ತೆಗೆ ಸಂಬಂಧಿಸಿದಂತೆ ರಸ್ತೆ ಅಗಲವನ್ನು ವಿಸ್ತರಿಸುವ ಮೂಲಕ ಮಾತ್ರ ಕೆಲವು ಮಾರ್ಗಗಳಲ್ಲಿನ ಸಂಚಾರದಟ್ಟಣೆ ನಿಯಂತ್ರಿಸಬಹುದಾಗಿದೆ ಎಂದು ಪೀಠ ತಿಳಿಸಿತು. ಇದೇ ವೇಳೆ ಬಳ್ಳಾರಿ ರಸ್ತೆ ಅಗಲೀಕರಣಕ್ಕೆ ಅಗತ್ಯವಿರುವ ಸಲಹೆಗಳನ್ನು ಸಲ್ಲಿಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟು ವಿಚಾರಣೆಯನ್ನು ಮುಂದೂಡಿತು.