ದುಷ್ಟ ಶಕ್ತಿಗಳು ಅಧಿಕಾರವನ್ನು ಆವರಿಸಿಕೊಳ್ಳುವ ಅಪಾಯವಿದೆ: ಸಿಎಂಗೆ ‘ಎದ್ದೇಳು ಕರ್ನಾಟಕ’ ಎಚ್ಚರಿಕೆ
ಬೆಂಗಳೂರು, ಜೂ.8: ಸರಕಾರ ಜನರಿಗೆ ಸ್ಪಂದಿಸಿದರೆ, ಜನ ಸರಕಾರಕ್ಕೆ ಸ್ಪಂದಿಸುತ್ತಾರೆ. 2024ರಲ್ಲಿ ಇದಕ್ಕಿಂತಲೂ ಉತ್ತಮ ಫಲಿತಾಂಶವನ್ನು ನೀಡುತ್ತಾರೆ. ಇಲ್ಲವಾದರೆ ಅಧಿಕಾರ ಯಾರಿಗೂ ಶಾಶ್ವತವಲ್ಲ. ಈಗ ಪರ್ಯಾಯವಿಲ್ಲ. ಹಾಗಾಗಿ, ಮತ್ತೆ ಅವೆ ದುಷ್ಟ ಶಕ್ತಿಗಳು ಅಧಿಕಾರವನ್ನು ಆವರಿಸಿಕೊಳ್ಳುವ ಅಪಾಯವಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯು ಎಚ್ಚರಿಸಿದೆ.
ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಎದ್ದೇಳು ಕರ್ನಾಟಕ ಸಂಘಟನೆಯ ನಿಯೋಗ ನೀಡಿರುವ ಮನವಿ ಪತ್ರದಲ್ಲಿ ಈ ಅಂಶಗಳನ್ನು ಉಲ್ಲೇಖಿಸಿದೆ.
ಈ ಅಪಾಯವನ್ನು ತಡೆಯಬೇಕಾದರೆ ಕಾಂಗ್ರೆಸ್ ಪಕ್ಷ ಜನರಿಗೆ ನೀಡಿರುವ ಐದು ಗ್ಯಾರಂಟಿಗಳನ್ನು ಚಾಚೂ ತಪ್ಪದೆ ಜಾರಿಗೆ ತರಬೇಕು. ಜನರ ಆದಾಯ ಹೆಚ್ಚಳ, ಉದ್ಯೋಗ ಖಾತ್ರಿ, ವೆಚ್ಚ ಕಡಿತ ಮತ್ತು ಸೌಹಾರ್ದ ಪರಿಸರ ರೂಪಿಸುವುದರಲ್ಲಿ ಪರಿಹಾರ ಇದೆ. ಬಿಜೆಪಿ ಸರಕಾರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ, ಜಾನುವಾರು ಹತ್ಯೆ ನಿಷೇಧ ಕಾಯ್ದೆ, ಎನ್‍ಇಪಿ, ಮತಾಂತರ ನಿಷೇಧ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ, ಪಠ್ಯದ ಮನುವಾದೀಕರಣ, ಅಲ್ಪಸಂಖ್ಯಾತರಿಗೆ ಮೀಸಲಾತಿ ರದ್ದತಿ, ಮೀಸಲಾತಿ ಹೆಸರಿನಲ್ಲಿ ಮಹಾದ್ರೋಹ ಎಸಗಿದೆ ಎಂದು ಎದ್ದೇಳು ಕರ್ನಾಟಕ ಆರೋಪಿಸಿದೆ.
ಕಾಂಗ್ರೆಸ್ ಸರಕಾರವು ಈ ಜನ ವಿರೋಧಿ ಕ್ರಮ ಮತ್ತು ಕಾಯ್ದೆಗಳನ್ನು ರದ್ದುಗೊಳಿಸಿ ಜನಹಿತದ ಕಾಯ್ದೆಗಳನ್ನು ರೂಪಿಸಬೇಕು. ಜಾತಿ ಗಣತಿಯನ್ನು ಬಹಿರಂಗಗೊಳಿಸಬೇಕು. ಹಿಂದಿನ ಸರಕಾರ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಭ್ರಷ್ಟಾಚಾರ ನಿಗ್ರಹ, ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಮತ್ತು ಕೂಡಿ ಬಾಳುವ ವಾತಾವರಣ ಮೂಡಿಸಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
ರೈತರ ಬೆಳೆಗೆ ನ್ಯಾಯಯುತ ಬೆಲೆ, ಬಗರ್ ಹುಕುಂ ರೈತರಿಗೆ ಹಕ್ಕು ಪತ್ರ, ವಸತಿ ಹೀನರಿಗೆ ನಿವೇಶನ, ನರೇಗಾ ಯೋಜನೆಯ ಬಲವರ್ದನೆ ಮತ್ತು ನಗರಕ್ಕೂ ವಿಸ್ತರಣೆ, ಕನಿಷ್ಠ ಕೂಲಿಯ ಹೆಚ್ಚಳ, ಸಮಾನ ಕೆಲಸಕ್ಕೆ ಸಮಾನ ವೇತನ, ಉದ್ಯೋಗ ಭದ್ರತೆ, ಸಾಮಾಜಿಕ ನ್ಯಾಯ, ಮೀಸಲಾತಿಯಲ್ಲಿ ಸೂಕ್ತವಾದ ಪಾಲು, ಒಳ ಮೀಸಲಾತಿಯ ಅನುಷ್ಠಾನ, ಸುಲಿಗೆ ಇಲ್ಲದ ಶಿಕ್ಷಣ, ಸುಲಭ ಚಿಕಿತ್ಸೆಯ ಸೌಲಭ್ಯ, ಪೌಷ್ಠಿಕ ಆಹಾರ, ಹಳೆ ಪಿಂಚಣಿ ಯೋಜನೆ, ನಿರ್ಗತಿಕರಿಗೆ ನೆಲೆ, ಮಹಿಳೆಯರಿಗೆ ರಕ್ಷಣೆ ಮತ್ತು ಸೂಕ್ತ ಸ್ಥಾನಮಾನ, ಮಲಬಾಚುವಂತಹ ಹೀನ ಆಚರಣೆಗಳ ರದ್ದತಿ, ಸಾಲದಿಂದ ಮುಕ್ತಿ ಇವುಗಳನ್ನು ಜಾರಿಗೊಳಿಸಬೇಕು ಎಂದು ಕೋರಿದೆ.
ನಿಯೋಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ನೂರ್ ಶ್ರೀಧರ್, ವಿಜಯಮ್ಮ, ಯೂಸುಫ್ ಕನ್ನಿ, ತಾರಾ ರಾವ್, ಕೆ.ಎಲ್.ಅಶೋಕ್, ಜೆ.ಎಂ.ವೀರಸಂಗಯ್ಯ, ಫಾ.ಜೆರಾಲ್ಡ್ ಡಿ’ಸೋಜಾ, ಫಾ.ಅರುಣ್ ಲೂಯಿಸ್, ಮಲ್ಲಿಗೆ, ವಿಜಯ್ ಸೀತಪ್ಪ, ಎನ್.ವೆಂಕಟೇಶ್, ಗುರುಪ್ರಸಾದ್ ಕರಗೋಡು, ಜಿ.ಬಿ.ಪಾಟೀಲ್, ಅಕ್ಬರ್ ಅಲಿ, ವರದರಾಜೇಂದ್ರ ಉಪಸ್ಥಿತರಿದ್ದರು.