ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ
ಮಾನ್ಯರೇ
ರಾಜ್ಯದಲ್ಲಿ ಕೋಮುಪ್ರೇರಿತ ಹಿಂಸೆಯನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯಸರಕಾರವು ಕೋಮುಹಿಂಸೆ ತಡೆಯುವ ತುಕಡಿಯನ್ನು (Anti communal wing) ರಚಿಸಲು ಮುಂದಾಗಿದ್ದು ಸ್ವಾಗತಾರ್ಹ.
ಆದರೆ, ಯಾವುದೇ ಕಾನೂನು ಅಥವಾ ನ್ಯಾಯಾಲಯದ ಆದೇಶಗಳನ್ನು ಸಮರ್ಪಕವಾಗಿ ಜಾರಿಗೊಳಿಸದೆ ಹೋದಲ್ಲಿ ಕೋಮು ಪ್ರೇರಿತ ಹಿಂಸೆಯನ್ನು ತಡೆಯಲು ಸಾಧ್ಯವಿಲ್ಲ. ಕೋಮು ಹಿಂಸೆಯನ್ನು ಬೇರು ಸಮೇತವಾಗಿ ಕಿತ್ತೆಸೆಯಲು ಮಾನ್ಯ ಸರ್ವೋಚ್ಚ ನ್ಯಾಯಾಲಯವು 2018ರ (TEHSEEN S. POONAWALLA) ಪ್ರಕರಣದಲ್ಲಿ ಹಲವಾರು ನಿರ್ದೇಶನಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೀಡಿವೆ. ಈ ನಿರ್ದೇಶನಗಳಲ್ಲಿ ಮುಖ್ಯವಾದವುಗಳು ರಾಜ್ಯಸರಕಾರವು ಐಪಿಎಸ್ ಅಧಿಕಾರಿಯನ್ನು ಪ್ರತೀ ಜಿಲ್ಲೆಗೆ ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಅದೇ ರೀತಿ ವಿಶಿಷ್ಟ ಜಾಗೃತಿ ತುಕಡಿಯನ್ನು ರಚಿಸಬೇಕು. ಅಲ್ಲದೆ ನೋಡಲ್ ಅಧಿಕಾರಿಯವರು ತಿಂಗಳಿಗೊಮ್ಮೆ ಅವರ ಅಧೀನದಲ್ಲಿರುವ ಪೊಲೀಸ್ ಅಧಿಕಾರಿಗಳ ಸಭೆಯನ್ನು ಕರೆದು ಗುಂಪು ಹಿಂಸೆಯ ಕುರಿತು ಮಾಹಿತಿಗಳನ್ನು ಕಲೆ ಹಾಕಬೇಕು ಮತ್ತು ಗುಂಪು ಹಿಂಸೆಯನ್ನು ತಡೆಯುವ ನಿಟ್ಟಿನಲ್ಲಿ ಯಾವುದೆಲ್ಲ ಕ್ರಮವನ್ನು ಕೈಗೊಳ್ಳಲಾಗಿದೆಯೆಂದು ಅವಲೋಕನ ಮಾಡಿ ಸರಕಾರಕ್ಕೆ ವರದಿ ನೀಡಬೇಕು. ಗುಂಪು ಹಿಂಸೆ ನಡೆದಲ್ಲಿ ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸುವುದು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣಾಧಿಕಾರಿಗಳ ಕರ್ತವ್ಯವಾಗಿರುತ್ತದೆ.
ಗುಂಪು ಹಿಂಸೆಯಿಂದ ನೊಂದ ವ್ಯಕ್ತಿಗೆ ರಾಜ್ಯ ಸರಕಾರವು ಘಟನೆ ನಡೆದ 30 ದಿನಗಳಲ್ಲಿ ಪರಿಹಾರವನ್ನು ನೀಡುವುದನ್ನು ಕಡ್ಡಾಯವಾಗಿ ಖಾತ್ರಿಪಡಿಸಬೇಕು.
ರಾಜ್ಯ ಸರಕಾರ ಅಥವಾ ಪೊಲೀಸ್ ಇಲಾಖೆಯು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದೇ ಆದಲ್ಲಿ, ಹೊಸ ಕಾಯ್ದೆಗಳನ್ನು ಜಾರಿಗೊಳಿಸುವ ಅಗತ್ಯವೇ ಉದ್ಭವಿಸುವುದಿಲ್ಲ.