ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ, ಮೂತ್ರ ಕುಡಿಸಿ ಉತ್ತರ ಪ್ರದೇಶ ಪೊಲೀಸರಿಂದ ಹಲ್ಲೆ: ದಲಿತ ವಿದ್ಯಾರ್ಥಿಯ ಆರೋಪ
ನೊಯ್ಡಾದ: ಗ್ರೇಟರ್ ನೊಯ್ಡಾದ ಪೊಲೀಸರು ತನಗೆ ಹಲ್ಲೆ ನಡೆಸಿ ಸುಲಿಗೆ ಪ್ರಕರಣವೊಂದರಲ್ಲಿ ಸಿಲುಕಿಸಿದ್ದರು ಎಂದು ಉತ್ತರ ಪ್ರದೇಶದ 22 ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ಆರೋಪಿಸಿದ್ದಾನೆ, ಈ ಪ್ರಕರಣದಲ್ಲಿ ಕಳೆದ ವರ್ಷ ಆತನನ್ನು ಬಂಧಿಸಲಾಗಿತ್ತು.
ದ್ವಿತೀಯ ವರ್ಷದ ಬಿಎ-ಎಲ್ಎಲ್ಬಿ ವಿದ್ಯಾರ್ಥಿಯಾಗಿರುವ ಈತ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದಾನೆ. ಪೊಲೀಸರು ತನಗೆ ಬಲವಂತವಾಗಿ ಮೂತ್ರ ಕುಡಿಸಿ ಗ್ರೇಟರ್ ನೊಯ್ಡಾದ ಗೌತಮ್ ಬುದ್ಧ್ ನಗರ್ ಸೆಕ್ಟರ್ ಬೀಟಾ 2 ಠಾಣೆಯಲ್ಲಿ ಥಳಿಸಿದ್ದರು ಎಂದು ಆತ ಆರೋಪಿಸಿದ್ದಾನೆ.
ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣ ನ್ಯಾಯಾಲಯದ ಮುಂದಿರುವುದರಿಂದ ಪ್ರತಿಕ್ರಿಯಿಸುವುದಿಲ್ಲ ಎಂದು ಗ್ರೇಟರ್ ನೊಯ್ಡಾ ಡಿಸಿಪಿ ಅಶೋಕ್ ಕುಮಾರ್ ಹೇಳಿದ್ದಾರೆ.
ಸ್ಪಾ ಮತ್ತು ಮಸಾಜು ಕೇಂದ್ರವೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲದ ಕುರಿತು ತಾನು ಗೌತಮ್ ಬುದ್ಧ ನಗರ ಠಾಣೆ ಪೊಲೀರಿಗೆ ಮಾಹಿತಿ ನೀಡಿದ್ದಾಗಿ ವಿದ್ಯಾರ್ಥಿ ಹೇಳಿಕೊಂಡಿದ್ದಾನೆ. ಜೂನ್ 2021 ರಲ್ಲಿ ಈ ಮಸಾಜ್ ಕೇಂದ್ರದ ಮಾಲಕಿಯನ್ನು ಬಂಧಿಸಿದ್ದರು ಎಂದು ಆತ ಹೇಳಿದ್ದಾನೆ.
ಆದರೆ ಮಹಿಳೆ ಮತ್ತು ತನ್ನ ಸ್ನೇಹಿತನಾಗಿರುವ ಆಕೆಯ ಪತಿ ನನ್ನನ್ನು ಸುಲಿಗೆ ಪ್ರಕರಣದಲ್ಲಿ ಸಿಲುಕಿಸಿದ್ದರು. ಕಳೆದ ವರ್ಷದ ನವೆಂಬರ್ 18ರಂದು ಪೊಲೀಸರು ನನ್ನನ್ನು ತಮ್ಮ ವಶಕ್ಕೆ ಪಡೆದು ನಂತರ ಠಾಣೆಯಲ್ಲಿ ಥಳಿಸಿದ್ದರು ಎಂದು ಆಲಿಘರ್ ಮೂಲದ ವಿದ್ಯಾರ್ಥಿ ಹೇಳಿದ್ದಾನೆ.
“ಕಟ್ಟಡದ ಮೇಲ್ಭಾಗದ ಕೊಠಡಿಯಲ್ಲಿ ನನ್ನನ್ನು ಇರಿಸಿ ಥಳಿಸಿದ ಕಾರಣ ರಕ್ತಸ್ರಾವವಾಗಿತ್ತು. ಕುಡಿಯಲು ನೀರು ಕೇಳಿದಾಗ ಶೌಚಾಲಯದಿಂದ ಮಡಕೆಯೊಂದರಲ್ಲಿ ಮೂತ್ರ ತಂದು ಕುಡಿಯಲು ಬಲವಂತಪಡಿಸಲಾಯಿತು. ಆಗ ವಿರೋಧಿಸಿ ಆಚೆ ದೂಡಿದಾಗ ಮಡಕೆಯಲ್ಲಿದ್ದ ಮೂತ್ರ ನನ್ನ ಮೇಲೆ ಚೆಲ್ಲಿತ್ತು,” ಎಂದು ಆತ ಆರೋಪಿಸಿದ್ದಾನೆ.
ಹದಿನೈದು ದಿನಗಳೊಳಗೆ ಜಾಮೀನು ದೊರಕಿತ್ತು ಹಾಗೂ ಅಂದಿನಿಂದ ಈ ಸುಳ್ಳು ಎಫ್ಐಆರ್ ರದ್ದುಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ಆತ ಹೇಳಿದ್ದಾನೆ.
ಹಲವಾರು ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಪ್ರಯೋಜನವಾಗಲಿಲ್ಲ ಎಂದು ಆತ ಹೇಳಿದ್ದಾನೆ.
ಪೊಲೀಸರು ಆತನಿಗೆ ಥಳಿಸುತ್ತಿರುವ ಕೆಲ ಕಿರು ವೀಡಿಯೋ ತುಣುಕುಗಳು ಈ ವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಒಂದು ವರ್ಷ ಹಳೆಯ ಈ ಘಟನೆಯ ವೀಡಿಯೋಗಳ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.