ಹಿಂದಿನ ಸರಕಾರದ ಕಾಮಗಾರಿಗಳಿಗೆ ಎಲ್‍ಒಸಿ ಕೊಡಲು ಪರ್ಸಂಟೇಜ್ ನಿಗದಿ: ಎಚ್‍ಡಿಕೆ ಆರೋಪ
ಬೆಂಗಳೂರು, ಜೂ. 10: ಹಿಂದಿನ ಬಿಜೆಪಿ ಸರಕಾರದಲ್ಲಿ ನಡೆದಿದ್ದ ಕಾಮಗಾರಿಗಳಿಗೆ ಎಲ್‍ಒಸಿ ಕೊಡಲು ರಾಜ್ಯ ಕಾಂಗ್ರೆಸ್ ಸರಕಾರ ಪಸರ್ಂಟೇಜ್ ನಿಗದಿ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿರುವ ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಬೆಂಗಳೂರು ನಗರದ ಮುಖಂಡರ ಆತ್ಮಾವಲೋಕನ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಹಿಂದಿನ ಬಿಜೆಪಿ ಸರಕಾರವನ್ನು 40 ಪರ್ಸಂಟೇಜ್ ಸರಕಾರ ಎಂದು ಟೀಕಿಸುತ್ತಿದ್ದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬಂದ ಮೇಲೆ ಪ್ರತಿಯೊಂದಕ್ಕೂ ದರ ನಿಗದಿ ಮಾಡುತ್ತಿದೆ. ಹಿಂದಿನ ಸರಕಾರದಲ್ಲಿ ಕೈಗೊಳ್ಳಲಾಗಿದ್ದ ಕಾಮಗಾರಿಗಳಿಗೆ ಎಲ್‍ಒಸಿ ಕೊಡುವುದಕ್ಕೆ ಈ ಸರಕಾರದಲ್ಲಿ ಶೇ.5ರಷ್ಟು ದರ ನಿಗದಿ ಮಾಡಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರಕಾರದಲ್ಲಿ ಪ್ರಾರಂಭಿಕ ಹಂತದಲ್ಲಿಯೆ ಅಧಿಕಾರಿಗಳ ಸಭೆ ನಡೆದಿದೆ. ಆ ಸಭೆಯಲ್ಲಿ ಅಧಿಕಾರಿಗಳಿಗೆ ಯಾವ ರೀತಿ ಪಾಠ ಮಾಡಿದ್ದಾರೆ ಇವರು ಎನ್ನುವ ಮಾಹಿತಿ ನನಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರು ಕೆಲವು ಸೂಚನೆಗಳನ್ನು ಕೊಟ್ಟಿದ್ದಾರೆ. ನಾವು ಹೇಳಿದಂತೆ ಮಾತ್ರ ಕೇಳಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ ಎಂದು ಕುಮಾರಸ್ವಾಮಿ ದೂರಿದರು.
ಹಿಂದಿನ ಟೆಂಡರ್‍ಗಳು ಸೇರಿದಂತೆ ಅನೇಕ ಕಡೆ ಅನುದಾನ ತಡೆ ಹಿಡಿಯಲಾಗಿದೆ. ಬಿಜೆಪಿ ಸರಕಾರ 600 ಕೋಟಿ ರೂ.ಗೂ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿತ್ತು. ಕಳೆದ ಮೇ 6ರಂದು 675 ಕೋಟಿ ರೂ.ಮೊತ್ತದ ಕಾಮಗಾರಿಗಳ ಗುತ್ತಿಗೆದಾರರಿಗೆ ಎಲ್‍ಒಸಿ ಬಿಡುಗಡೆ ಆಯಿತು ಎಂದು ಅವರು ಹೇಳಿದರು.
ಆ ಸಂದರ್ಭದಲ್ಲಿ ಒಬ್ಬ ಕಾಂಗ್ರೆಸ್ ಸಂಸದರು ಯಾವುದೆ ಕಾರಣಕ್ಕೂ ಹಣ ಬಿಡುಗಡೆ ಮಾಡಬೇಡಿ, ನಮ್ಮ ಸರಕಾರ ಬರುತ್ತದೆ ಅಂತ ಹೇಳಿದ್ದರಂತೆ. ಅವರು ಯಾಕೆ ಹೇಳಿದ್ದರು? ಯಾರು ಆ ಸಂಸದ? 675 ಕೋಟಿ ರೂ.ಮೊತ್ತದ ಎಲ್‍ಒಸಿ ಹಣ ಯಾಕೆ ಬಿಡುಗಡೆ ಆಗಲಿಲ್ಲ ಎನ್ನುವುದು ಅನುಮಾನಕ್ಕೆ ಕಾರಣ ಎಂದು ಕುಮಾರಸ್ವಾಮಿ ಹೇಳಿದರು.
ಈಗ ಎಲ್‍ಒಸಿ ಬಿಡುಗಡೆ ಆಗಬೇಕು ಅಂದರೆ 5 ಪಸೆರ್ಂಟ್ ಕೊಡಲೇಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. 40 ಪಸೆರ್ಂಟ್ ಜತೆಗೆ ಹೆಚ್ಚುವರಿಯಾಗಿ 5 ಪಸೆರ್ಂಟ್ ಕೊಟ್ಟರೆ ಹಣ ಬಿಡುಗಡೆ ಮಾಡುತ್ತೇವೆ ಅಂತ ಹೇಳಿದ್ದಾರಂತೆ. ಅಲ್ಲಿಗೆ ಇದು 45 ಪಸೆರ್ಂಟ್ ಸರಕಾರ ಎಂದಾಯಿತಲ್ವೆ? ಆಗಿರುವ ಕಾಮಗಾರಿಗಳಿಗೆ ಪಸರ್ಂಟೇಜ್ ಕೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.