'ಅಂಬೇಡ್ಕರ್ ವಾದದ ಆಚರಣೆ' - ಒಂದು ಅವಲೋಕನ
ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಅರಿತವರಿಗಿಂತ ಅವರ ಸಿದ್ಧಾಂತಗಳನ್ನು ಬಂಡವಾಳ ಮಾಡಿಕೊಂಡು ಸುಖವುಂಡವರೇ ಹೆಚ್ಚು. ಅವರ ಹೆಸರು ಹೇಳುತ್ತಿದ್ದಂತೆ ಎಲ್ಲಿಲ್ಲದ ಅಭಿಮಾನ ಕೆಲವರಲ್ಲಿ ಉಕ್ಕಿ ಹರಿದು ಬಿಡುತ್ತದೆ. ಆದರೆ ಬಾಬಾಸಾಹೇಬರ ಮೂಲ ಆಶಯಗಳು ಮತ್ತು ಸಿದ್ಧಾಂತಗಳು ಏನು ಎಂದು ಒಮ್ಮೆ ಕೇಳಿದರೆ ಇಂತಹವರು ಸುಮ್ಮನಾಗಿಬಿಡುತ್ತಾರೆ. ತಕ್ಷಣ ಕೆಲಸಕ್ಕೆ ಬಾರದ ಚರ್ಚೆಗಳಿಗೆ ಇಳಿದು ಬಾಬಾಸಾಹೇಬರ ಮೂಲ ಆಶಯಗಳಿಗೆ ತಿಲಾಂಜಲಿಯಿಡುವ ಚಿಂತಕರೇ ನಮ್ಮ ಮಧ್ಯೆ ಇರುತ್ತಾರೆ. ಅಂತಹ ನೆಪ ಮಾತ್ರದ ಚಿಂತಕರಿಗೆ ಬಾಬಾಸಾಹೇಬರ ನಿಜಸ್ವರೂಪ, ಅವರ ವಿಚಾರಧಾರೆಯನ್ನು ತಿಳಿಸುವ ಒಂದು ಪ್ರಯತ್ನವೇ ಡಾ. ಸಿ.ಜಿ. ಲಕ್ಷ್ಮೀಪತಿಯವರ 'ಅಂಬೇಡ್ಕರ್ ವಾದದ ಆಚರಣೆ' ಎಂದರೆ ತಪ್ಪಾಗಲಾರದು. ಈ ಪುಸ್ತಕದಲ್ಲಿನ ಅಧ್ಯಾಯಗಳು ಅಂಬೇಡ್ಕರ್ ವಿಚಾರಗಳನ್ನು ಕುರಿತು ಬರೆದ ಬರಹಗಳು ಎನ್ನುವುದಕ್ಕಿಂತ, ಅವರ ಅನುಯಾಯಿಗಳು ಬಾಬಾಸಾಹೇಬರನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವು ದಾಗಿದೆ. ಅಲ್ಲದೆ ಅವರ ಸಿದ್ಧಾಂತಗಳು ಮತ್ತು ಚಿಂತನೆಗಳು ಇಂದು ಯಾವ ದಿಕ್ಕಿಗೆ ಸಾಗಿದೆ ಎಂದು ಮನವರಿಕೆ ಮಾಡುವುದಾಗಿದೆ. ಬಾಬಾಸಾಹೇಬರ ವಿಚಾರಗಳು ಒಂದು ಕಾಲಕ್ಕೆ ಮಾತ್ರ ಸೀಮಿತವಾಗಿರದೆ ಬೇರೆ ಬೇರೆ ರೂಪ ಪಡೆದುಕೊಳ್ಳುತ್ತಾ ಸರ್ವಕಾಲಕ್ಕೂ ಅಳವಡಿಕೆ ಯೋಗ್ಯ ಎಂದು ತಿಳಿಸಿಕೊಡುವುದಾಗಿದೆ. ಇದು ಕೇವಲ ಒಂದು ಪುಸ್ತಕ ಎನ್ನುವುದಕ್ಕಿಂತ ಮಹಾನಾಯಕನ ಸಿದ್ಧಾಂತಗಳನ್ನು ಅರಿತುಕೊಳ್ಳುವ ಒಂದು ಪೀಠಿಕೆ, ಮುನ್ನುಡಿಯಾಗಿದೆ. ಬಾಬಾಸಾಹೇಬರನ್ನು ಅರಿಯದವರಿಗೊಂದು ಸಣ್ಣ ಕೈಪಿಡಿ ಎಂದರೂ ತಪ್ಪಾಗಲಾರದು.
ಅಂಬೇಡ್ಕರ್ ವಾದ ಎನ್ನುವುದೇ ಜಾಗತಿಕ ಮಟ್ಟಕ್ಕೆ ಒಂದು ಬೌದ್ಧಿಕ ಶಕ್ತಿ. ಶೋಷಣೆಯಿಂದ ಬಿಡುಗಡೆ, ವಿಭಿನ್ನ ಆಯಾಮಗಳ ಚಿಂತನಾ ಕ್ರಮ, ಹೊಸ ಆಲೋಚನೆಗಳ ವಿಭಿನ್ನ ಕ್ರಮಗಳು ಎನ್ನುವುದನ್ನು ಬಹಳ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ. ಬಾಬಾಸಾಹೇಬರೇ ಹೇಳುವಂತೆ ಅಧಿಕಾರವೆಂಬುದು ಶೋಷಿತರ ವಿಮೋಚನೆಯ ಮೂಲ ಮಂತ್ರ ಆಗಬೇಕು ಎನ್ನುವ ಮಾತು ಬಹಳ ಸತ್ಯವಾದದ್ದು. ಇದು ಸನಾತನಿಗಳಿಗೆ ಅರ್ಥವಾದಂತೆ ಅಂಬೇಡ್ಕರ್ ವಾದಿಗಳಿಗೆ ಅರ್ಥವಾಗದಾಯಿತು. ಸನಾತನಿಗಳು ಅಂಬೇಡ್ಕರ್ ವಾದವನ್ನು ಉಂಡು ಅಧಿಕಾರದ ಗದ್ದುಗೆ ಏರಿದರು. ನಿಮ್ನವರ್ಗಗಳನ್ನು ಅಧಿಕಾರದಿಂದ ದೂರವಿಡುವ ಹುನ್ನಾರವಾಗಿ ''ರಾಜಕೀಯ ಅಧಿಕಾರವೆಂಬುದು ಪಾಪಿಗಳ ಪರಮೋಚ್ಚ ಹೀನಾಯ ಸ್ಥಿತಿಯ ಕಟ್ಟಕಡೆಯ ಹಂತವಾಗಿದೆ'' ಎಂದರು. ಇದರ ಮೂಲಕ ಶೇ. 85ರಷ್ಟು ಜನರನ್ನು ರಾಜಕೀಯ ಅಧಿಕಾರದಿಂದ ದೂರವಿಡಲಾಯಿತು. ಮನುವಾದಿಗಳು ಮಾಡಿದ ಕುತಂತ್ರವು ಜನ ಸಾಮಾನ್ಯರನ್ನು ಮಾನಸಿಕ ಗುಲಾಮಗಿರಿಗೆ ದೂಡುತ್ತಾ ಇಂದಿಗೂ ಅಸಮಾನತೆಯಲ್ಲೇ ಬದುಕುವ ವ್ಯವಸ್ಥೆ ನಿರ್ಮಾಣವಿದೆ ಎಂದು ಲಕ್ಷ್ಮೀಪತಿ ಎಚ್ಚರಿಸಿದ್ದಾರೆ. ಸಾಮಾಜಿಕ ಅಸಮಾನತೆಯ ಬೇರು ಜಾತಿ ವ್ಯವಸ್ಥೆಯಲ್ಲಿದೆ, ಜಾತಿವ್ಯವಸ್ಥೆಯ ಬೇರು ವರ್ಣಾಶ್ರಮ ಧರ್ಮದಲ್ಲಿದೆ, ವರ್ಣಾಶ್ರಮದ ಬೇರು ಮನುಧರ್ಮಶಾಸ್ತ್ರದಲ್ಲಿದೆ, ಮನುಧರ್ಮ ಶಾಸ್ತ್ರದ ಬೇರು ಬ್ರಾಹ್ಮಣ ವಾದದಲ್ಲಿದೆ, ಬ್ರಾಹ್ಮಣ ವಾದದ ಬೇರು ರಾಜಕೀಯ ಅಧಿಕಾರದಲ್ಲಿದೆ.
ಇಂತಹ ರಾಜಕೀಯ ಅಧಿಕಾರವೆಂಬುದು ಶೋಷಿತ ಜನಾಂಗಕ್ಕೆ ಸಿಕ್ಕಿದ್ದೇ ಆದರೆ ಸಮಾಜದಲ್ಲಿನ ಅಸಮಾನತೆ, ಶೋಷಣೆ ಎಲ್ಲವೂ ತನ್ನಷ್ಟಕ್ಕೆ ತಾನೇ ದೂರವಾಗುತ್ತವೆ. ಆದರೆ ಇವರ ಸಿದ್ಧಾಂತವನ್ನು ಅಂಬೇಡ್ಕರ್ ವಾದಿಗಳು ಗಾಳಿಗೆ ತೂರುತ್ತಾ ಬಾಬಾಸಾಹೇಬರನ್ನೇ ಮಾರಾಟ ಮಾಡಲು ಹೊರಟಿದ್ದಾರೆ. ಇಂತಹ ಹಲವಾರು ವಿಚಾರ ಗಳನ್ನು ''ಅಂಬೇಡ್ಕರ್ ವಾದದ ಆಚರಣೆ'' ಪುಸ್ತಕ ಓದಿದ ಪ್ರತಿಯೊಬ್ಬ ಓದುಗರಿಗೂ ಸೂಕ್ಷ್ಮವಾಗಿ ಅರ್ಥವಾಗುತ್ತದೆ. ಆದ್ದರಿಂದ ಇದು ಅಂಬೇಡ್ಕರ್ ವಾದಿಗಳಿಗೊಂದು ಪುಟ್ಟ ಕೈಪಿಡಿ ಎಂದೂ ಹೇಳಬಹುದು.
ಕೃತಿ: ಅಂಬೇಡ್ಕರ್ ವಾದದ ಆಚರಣೆ
ಲೇಖಕರು : ಡಾ. ಸಿ.ಜಿ. ಲಕ್ಷ್ಮೀಪತಿ
ಬೆಲೆ : 75 ರೂ.
ಪ್ರಕಾಶಕರು: ಚಾರು ಪ್ರಕಾಶನ, ಬೆಂಗಳೂರು
ಮೊಬೈಲ್ : 9448545959