ಭಾರತದಲ್ಲಿ ಹಿಂದೆಯೇ ‘ಗ್ಯಾರಂಟಿಗಳು’ ಜಾರಿಯಲ್ಲಿದ್ದವು!
ಎಲ್ಲಿ ನೋಡಿದರಲ್ಲಿ ಗ್ಯಾರಂಟಿಗಳೇ ಸುದ್ದಿಯಾಗುತ್ತಿರುವುದರಿಂದ ರೋಮಾಂಚನಗೊಂಡ ಪತ್ರಕರ್ತ ಎಂಜಲು ಕಾಸಿ, ಒಮ್ಮೆ ಕೆ. ಶವ ವಿಲ್ಲಾ ಕ್ಕೆ ಭೇಟಿಕೊಟ್ಟು ಅಸಂತೋಷರ ಮುಖವನ್ನು ಪರಿಶೀಲಿಸಿ ಬರೋಣ ಎಂದು ಹೊರಟ. ಕೆ. ಶವ ವಿಲ್ಲಾದ ಬಾಗಿಲು ತಟ್ಟಿದಾಗ, ಸುಟ್ಟ ಬದನೆಕಾಯಿ ಮುಖ ಮಾಡಿಕೊಂಡು ಅಸಂತೋಷರು ಬಾಗಿಲು ತೆರೆದರು.
‘‘ಸಾರ್...ನಾನು ಪತ್ರಕರ್ತ ಎಂಜಲು ಕಾಸಿ....’’ ಎಂದು ಹಲ್ಲು ಕಿರಿದ.
ಅಸಂತೋಷರು ಪತ್ರಕರ್ತನನ್ನು ಒಳಗೆ ಕರೆಯುವುದೋ ಬೇಡವೋ ಎಂಬ ಅನುಮಾನದಲ್ಲಿ ಮೇಲಿನಿಂದ ಕೆಳಗಿನವರೆಗೆ ಕಾಸಿಯನ್ನು ನೋಡಿದರು. ಆದರೂ ಜಾತಿ ಯಾವುದು ಎಂದು ಗೊತ್ತಾಗಲಿಲ್ಲ. ‘‘ನಿಮ್ಮ ಪೂರ್ತಿ ಹೆಸರು...’’ ಅಸಂತೋಷರು ಮತ್ತೆ ಕೇಳಿದರು.
‘‘ಕಾಸಿ ಸಾರ್...’’ ಎಂದ.
‘‘ನಿಮ್ಮ ತಂದೆಯ ಹೆಸರು....’’ ಮತ್ತೆ ಕೇಳಿದರು. ಕಾಸಿಗೆ ಅರ್ಥವಾಯಿತು. ಯಾಕೆಂದರೆ ಈ ಹಿಂದೆಯೂ ಅವನಿಗೆ ಹಲವು ಬಾರಿ ಈ ಅನುಭವವಾಗಿತ್ತು.
‘‘ಸಾರ್...ಇಲ್ಲೇ ಅಂಗಳದಲ್ಲೇ ಕುಳಿತು ಮಾತನಾಡುವ’’ ಎಂದ ಕಾಸಿ. ಅಸಂತೋಷರ ಸುಟ್ಟ ಬದನೆ ಒಮ್ಮೆಲೆ ಕುಂಬಳಕಾಯಿಯಂತೆ ಅರಳಿ ‘‘ಅದೇ...ಹೊರಗಡೆ ಚೆನ್ನಾಗಿ ಗಾಳಿಯಿದೆ....ಅಲ್ಲೇ ಅಂಗಳದಲ್ಲಿ ಕುರ್ಚಿ ಹಾಕಿ ಕುಳಿತು ಮಾತನಾಡುವ’’ ಎಂದರು.
‘‘ಸಾರ್...ಈ ಗ್ಯಾರಂಟಿ....’’ ಎಂದು ಕಾಸಿ ಮಾತು ಆರಂಭಿಸುತ್ತಿದ್ದಂತೆಯೇ ಅಸಂತೋಷರು ಒಮ್ಮೆಲೆ ದುಃಖಿತರಾದರು ‘‘ನೋಡಿ...ಈ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳನ್ನು ಭಾರತದ ಸನಾತನ ಧರ್ಮ ಎಂದೋ ನೀಡಿದೆ. ಈಗ ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿಗಳು ವಿದೇಶಗಳಿಂದ ಆಮದಾಗಿರುವುದು. ಈ ಭಾರತದ ಜನರನ್ನು ಸೋಮಾರಿಗಳನ್ನಾಗಿಸಿ, ಭಾರತವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಉದ್ದೇಶ ಹೊಂದಿದೆ. ಆದರೆ ಸನಾತನ ಧರ್ಮ ನೀಡುತ್ತಾ ಬಂದಿರುವ ಗ್ಯಾರಂಟಿಗಳು ಈ ದೇಶದ ಜನರನ್ನು ಅಭಿವೃದ್ಧಿಗೊಳಿಸುವ ಉದ್ಧೇಶವನ್ನು ಹೊಂದಿತ್ತು....’’ ಅಸಂತೋಷರು ವಿವರಿಸತೊಡಗಿದರು.
‘‘ಸಾರ್...ಆ ಗ್ಯಾರಂಟಿಗಳು ಈಗಲೂ ಜಾರಿಯಲ್ಲಿದೆಯೆ?’’ ಕಾಸಿ ಕುತೂಹಲದಿಂದ ಕೇಳಿದ.
‘‘ಜಾರಿಯಲ್ಲಿತ್ತು. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಸನಾತನ ಗ್ಯಾರಂಟಿಗಳನ್ನು ಕಿತ್ತು ಹಾಕಿ, ಭಾರತದ ಜನರಿಗೆ ಅನ್ಯಾಯ ಮಾಡಿತು....ಆದರೆ ಈ ಗ್ಯಾರಂಟಿಗಳನ್ನು ಮರು ಜಾರಿಗೊಳಿಸುವುದೇ ನಮ್ಮ ಧ್ಯೇಯ....’’
‘‘ಸಾರ್...ಆ ಗ್ಯಾರಂಟಿಗಳ ಬಗ್ಗೆ ಒಂದಿಷ್ಟು ಮಾಹಿತಿ ನೀಡಿ...’’ ಕಾಸಿ ಅತ್ಯುತ್ಸಾಹದಿಂದ ಕೇಳಿದ.
‘‘ನೋಡಿ....ಸನಾತನ ಧರ್ಮ ಮಲ ಹೊರುವ ಪದ್ಧತಿಯನ್ನು ಕೇವಲ ದಲಿತರಿಗೆ ಗ್ಯಾರಂಟಿಯಾಗಿ ನೀಡಿತ್ತು. ಇಂದು ಆ ಗ್ಯಾರಂಟಿಯನ್ನು ಅವರಿಂದ ಕಿತ್ತುಕೊಳ್ಳಲಾಗಿದೆ...ಅಜಲು ಪದ್ಧತಿಯ ಗ್ಯಾರಂಟಿಯನ್ನೂ ನೀಡುತ್ತ್ತಾ ಬಂದಿದ್ದೆವು. ಎಲ್ಲವೂ ಉಚಿತ. ಈಗ ಎಲ್ಲ ಉಚಿತಗಳಿಂದ ಅವರನ್ನು ವಂಚಿಸಲಾಗಿದೆ. ಕೆರೆಯ ನೀರು ಮುಟ್ಟಿದರೆ ಥಳಿತ ಗ್ಯಾರಂಟಿ, ದೇವಸ್ಥಾನ ಪ್ರವೇಶಿಸಿದರೆ ದಂಡ ಗ್ಯಾರಂಟಿ, ಪತಿ ತೀರಿ ಹೋದ ಮಹಿಳೆಯರಿಗೂ ನಾವು ಕೆಲವು ಉಚಿತಗಳನ್ನು ನೀಡುತ್ತಾ ಬಂದಿದ್ದೆವು. ಅವುಗಳನ್ನು ಕೂಡ ಈಗ ತಡೆ ಹಿಡಿಯಲಾಗಿದೆ. ಈ ಎಲ್ಲ ಗ್ಯಾರಂಟಿಗಳನ್ನು ನಿಷೇಧ ಮಾಡಿರುವುದೇ ಭಾರತ ಹಿಂದುಳಿಯಲು ಕಾರಣ. ಮುಂದಿನ ದಿನಗಳಲ್ಲಿ ಈ ಎಲ್ಲ ಗ್ಯಾರಂಟಿಗಳನ್ನು ಮತ್ತೆ ಅನುಷ್ಠಾನಕ್ಕೆ ತರಲಿದ್ದೇವೆ....’’ ಅಸಂತೋಷರು ತಮ್ಮ ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟು ವಿವರಿಸತೊಡಗಿದರು.
‘‘ನೋಡಿ...ಹಿಂದೆಲ್ಲ ಎಷ್ಟು ಚೆನ್ನಾಗಿತ್ತು. ಪತಿ ತೀರಿ ಹೋದರೆ ಮಹಿಳೆಯರಿಗೆ ಚಿತೆ ಗ್ಯಾರಂಟಿ. ಒಂದು ವೇಳೆ ಅದು ಬೇಡವಾದರೆ ವಿಧವೆ ಪಟ್ಟ ಗ್ಯಾರಂಟಿ. ಆ ಬಳಿಕ ಅಮಂಗಳೆ ಎಂಬ ಪದವಿ ಗ್ಯಾರಂಟಿ. ಕೂದಲು ಬೋಳಿಸುವುದು ಗ್ಯಾರಂಟಿ...ಈಗ ನೋಡಿದರೆ ಮಹಿಳೆಯರಿಗೆ ಉಚಿತ ಬಸ್ ಪಾಸ್ ಅಂತೆ. ಅಂದು ನಮ್ಮ ಕಾಲದಲ್ಲಿ ಮಹಿಳೆಯರಿಗೆ ಬಸ್‌ನಲ್ಲಿ ಸವಾರಿ ಮಾಡುವ ಕಷ್ಟವೇ ಇರಲಿಲ್ಲ....ದಲಿತರಿಗೆ ಅವರದೇ ಹುದ್ದೆಗಳು ಗ್ಯಾರಂಟಿ. ಶೂದ್ರರಿಗೂ ಅವರವರಿಗೆ ಬೇಕಾದ ಹುದ್ದೆಗಳು ಮೊದಲೇ ಗ್ಯಾರಂಟಿ. ಶಿಕ್ಷಣ ಕಲಿಯುವ ಕಷ್ಟವೇ ಇರಲಿಲ್ಲ. ಶಿಕ್ಷಣ ಕಲಿತರೆ ಅವರ ಕಿವಿಗೆ ಕಾದ ಸೀಸ ಗ್ಯಾರಂಟಿ....ಇಷ್ಟೆಲ್ಲ ಗ್ಯಾರಂಟಿಗಳನ್ನು ಸನಾತನ ಕಾಲದಲ್ಲೇ ನಾವು ನೀಡುತ್ತಾ ಬಂದಿದ್ದೇವೆ. ಈ ಕಾಂಗ್ರೆಸ್ ಅದೇನೋ ವಿದೇಶಗಳಲ್ಲಿ ನೀಡುತ್ತಿರುವ ಉಚಿತ ಬಸ್‌ಪಾಸ್...ಉಚಿತ ವಿದ್ಯುತ್ ಎಂದೆಲ್ಲ ನೀಡುತ್ತಾ ದೇಶದ ಆರ್ಥಿಕತೆಯನ್ನು ನಾಶ ಮಾಡುತ್ತಾ ಬರುತ್ತಿದೆ....’’
‘‘ಆದರೆ ಸನಾತನವಾಗಿ ಕೆಲವರಿಗಷ್ಟೇ ತಟ್ಟೆಕಾಸು ಗ್ಯಾರಂಟಿ ಇತ್ತಲ್ಲ ಸಾರ್. ಕೆಲವರಿಗಷ್ಟೇ ರಾಜಮಹಾರಾಜರು ದಾನದ ರೂಪದಲ್ಲಿ ಉಚಿತಗಳನ್ನು ವಿತರಿಸುತ್ತಿದ್ದರಲ್ಲ. ಇದರಿಂದ ಅವರು ಸೋಮಾರಿಗಳಾಗುತ್ತಿರಲಿಲ್ಲವೆ?’’ ಕಾಸಿ ಕೇಳಿದ.
‘‘ಹ್ಹಿಹ್ಹಿಹ್ಹಿ....ಯಾಕೆಂದರೆ ಆಗ ಮೀಸಲಾತಿ ಜಾರಿಯಲ್ಲಿತ್ತು. ಬಹುತೇಕ ಎಲ್ಲ ಹುದ್ದೆಗಳನ್ನು ದಲಿತರು, ಶೂದ್ರರಿಗೆ ಮೀಸಲಿರಿಸಲಾಗಿತ್ತು. ಮೀಸಲಾತಿಯ ಅನ್ಯಾಯದಿಂದಾಗಿ ನಮಗೆ ಮಾಡಲು ಕೆಲಸವೇ ಇರಲಿಲ್ಲ. ಆದುದರಿಂದ ಕೆಲವು ಉಚಿತಗಳನ್ನು ಅಂದಿನ ರಾಜ ಮಹಾರಾಜರು ನೀಡುತ್ತಾ ಬಂದಿದ್ದಾರೆ. ಈಗಲೂ ಎಲ್ಲ ಕೆಲಸಗಳನ್ನು ನಾವು ಬೇರೆ ಬೇರೆ ಜಾತಿಗಳಿಗೆ, ಧರ್ಮೀಯರಿಗೆ ವರ್ಗಾಯಿಸಿ ನಿರುದ್ಯೋಗಗಳ ಭಾರವನ್ನು ಹೆಗಲಲ್ಲಿ ಹೊರಬೇಕು ಎನ್ನುವ ಆಸೆಯಿದೆ. ಆದರೆ ಕಾಂಗ್ರೆಸ್ ಬಿಡುತ್ತಿಲ್ಲ...’’ ಎಂದು ನಿಟ್ಟುಸಿರಿಟ್ಟರು.
ಕಾಸಿಗೆ ಅರ್ಥವಾಯಿತು ‘‘ಸಾರ್....ಸನಾತನ ಕಾಲದಲ್ಲಿ ನಮಗೆ ನೀಡುತ್ತಿದ್ದ ಗ್ಯಾರಂಟಿಗಳನ್ನೆಲ್ಲ ನೀವು ಇಟ್ಟುಕೊಳ್ಳಿ. ಕಾಂಗ್ರೆಸ್ ಗ್ಯಾರಂಟಿಗಳನ್ನು ನಾವು ಇಟ್ಟುಕೊಳ್ಳುತ್ತೇವೆ. ಹೀಗೆ ಮಾಡಿದರೆ ಹೇಗೆ?’’
‘‘ಆದರೆ ದೇಶ...ಆರ್ಥಿಕತೆ...ದಿವಾಳಿ...’’ ಅಸಂತೋಷರು ಕಣ್ಣೀರು ಸುರಿಸತೊಡಗಿದರು.
‘‘ದೇಶವನ್ನು ಕಟ್ಟಿದವರೇ ದೇಶದ ಚಿಂತೆ ಮಾಡುವುದು ಒಳ್ಳೆಯದಲ್ಲವೆ ಸಾರ್....ದೇಶಕ್ಕೆ ನಾವೇ ಗ್ಯಾರಂಟಿ. ನಮಗೆ ದೇಶವೇ ಗ್ಯಾರಂಟಿ...’’ ಎನ್ನುತ್ತಾ ಕಾಸಿ ಅಲ್ಲಿಂದ ಎದ್ದು ಹೊರಟ.
‘‘ದೇಶದ್ರೋಹಿ....’’ ಎಂದ ಅಸಂತೋಷ ಗೋಮೂತ್ರ ತಂದು ಅಂಗಳ ಶುಚಿಗೊಳಿಸತೊಡಗಿದರು.