ಭಟ್ಕಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಭಟ್ಕಳ: ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡ ಕಳ್ಳರು, ಮನೆಯ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಚಿತ್ರಾಪುರದಲ್ಲಿ ಶನಿವಾರ ಸಂಜೆ ಬೆಳಕಿಗೆ ಬಂದಿದೆ.
ತಾಲೂಕಿನ ಚಿತ್ರಾಪುರ ಸಾರಸ್ವತ ಕಾಲನಿಯ ನಿವಾಸಿ ಮಹೇಶ ಪಂಡಿತ ಎಂಬವರ ಮನೆ ಇದಾಗಿದ್ದು, ಜೂ. 8 ರಂದು ತಮ್ಮ ಸಹೋದರ ಮೃತರಾದ ಸುದ್ದಿ ತಿಳಿದು ಕುಟುಂಬ ಸಮೇತರಾಗಿ ಮುಂಬೈಗೆ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ.
ಶನಿವಾರ ಸಂಜೆ ಪಕ್ಕದ ಮನೆಯವರು ಮನೆಯ ಬಾಗಿಲ ತೆರೆದಿರುವುದನ್ನು ನೋಡಿ ಅಲ್ಲಿಗೆ ತೆರಳಿದ್ದು ಈ ವೇಳೆ ಕಳ್ಳತನ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ 290 ಗ್ರಾಂ ಚಿನ್ನ 12 ಕೆ.ಜಿ. ಬೆಳ್ಳಿ ಆಭರಣಗಳು ಕಣ್ಮರೆಯಾಗಿದ್ದು ಕಳವಾದ ಸೊತ್ತಿನ ಮೌಲ್ಯ 25 ಲಕ್ಷಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story