ಬೆಂ.ವಿವಿಯ ಹಾಸ್ಟೆಲ್‍ಗಳಿಗೆ ಕಳಪೆ ಹಾಸಿಗೆ-ದಿಂಬು ಪೂರೈಕೆ ಆರೋಪ: ತನಿಖೆಗೆ ಒತ್ತಾಯ
ಬೆಂಗಳೂರು: ಬೆಂಗಳೂರು ವಿವಿಯ ವಿದ್ಯಾರ್ಥಿ ನಿಲಯಗಳ ಹಾಸಿಗೆ-ದಿಂಬುಗಳ ಖರೀದಿಯಲ್ಲಿ ಅಕ್ರಮ ನಡೆದಿದ್ದು, ಸೂಕ್ತ ತನಿಖೆಯನ್ನು ನಡೆಸಬೇಕು ಎಂದು ಎಐಡಿಎಸ್‍ಒ ಒತ್ತಾಯಿಸಿದೆ.
ಬೆಂಗಳೂರು ವಿಶ್ವ ವಿದ್ಯಾನಿಲಯದ ಒಂಬತ್ತು ವಿದ್ಯಾರ್ಥಿನಿಲಯಗಳಿಗೆ ಅಗತ್ಯವಿದ್ದ ಹಾಸಿಗೆ-ದಿಂಬುಗಳ ಖರೀದಿಯಲ್ಲಿ ಅಕ್ರಮ ನಡೆದಿರುವುದಾಗಿ ವರದಿಯಾಗಿದೆ. ಪೂರೈಕೆಗೆಂದು ಕರೆಯಲಾಗಿದ್ದ ಟೆಂಡರ್‍ನಲ್ಲಿ ಉಲ್ಲೇಖಿಸಲಾಗಿದ್ದ ಗುಣಮಟ್ಟವೂ ಇಲ್ಲವಾಗಿದ್ದು, ಪೂರೈಸುವುದಾಗಿ ತೋರಿಸಲಾಗಿದ್ದ ಹಾಸಿಗೆ- ದಿಂಬುಗಳ ಬದಲು ಕಳಪೆ ಹಾಗೂ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಲಭ್ಯವಿರುವ ಹಾಸಿಗೆ- ದಿಂಬುಗಳನ್ನು ಪೂರೈಸಲಾಗಿದೆ ಎಂದು ಟೀಕಿಸಿದೆ.
2021-22ನೆ ಸಾಲಿನಲ್ಲಿ ಟೆಂಡರ್ ಕರೆಯಲಾಗಿದ್ದು, ಪ್ರತಿ ಹಾಸಿಗೆಗೆ 5,900ರೂ. ಮತ್ತು ಪ್ರತಿ ದಿಂಬಿಗೆ 650 ರೂ.ಗಳನ್ನು ನಿಗದಿಪಡಿಸಲಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ 3 ಸಾವಿರಕ್ಕೆ ಸಿಗುವ ಹಾಸಿಗೆ ಮತ್ತು 150 ರೂ.ಗೆ ಸಿಗುವ ದಿಂಬುಗಳನ್ನು ಹೆಚ್ಚಿನ ದರದಲ್ಲಿ ಖರೀದಿಸಲಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ ಎಂದು ತಿಳಿಸಿದೆ.
ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳು ಹಣಗಳಿಸುವುದರ ಹಿಂದೆ ಬಿದ್ದಿರುವುದು ವಿಷಾದನೀಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ ತನಿಖೆಯಾಗಬೇಕೆಂದು ಸಂಘಟನೆ ಆಗ್ರಹಿಸಿದೆ.
ಪ್ರಕರಣ: ಬಿಜೆಪಿ ಸರಕಾರದ ಆಡಳಿತದಲ್ಲಿ ಬೆಂಗಳೂರು ವಿವಿಯ 9 ವಿದ್ಯಾರ್ಥಿನಿಲಯಗಳಿಗೆ ಹಾಸಿಗೆ ಹಾಗೂ ದಿಂಬುಗಳನ್ನು ಸರಬರಾಜು ಮಾಡುವ ಬಗ್ಗೆ ಟೆಂಡರ್ ಅನ್ನು ಪ್ರಕಟ ಮಾಡಿ, 2022ರ ಫೆ.3ರಂದು ಎಸ್.ಎಲ್.ವಿ ಟ್ರೇಡಿಂಗ್ ಕಾರ್ಪೋರೇಶನ್‍ಗೆ ವಸ್ತುಗಳನ್ನು ಪೂರೈಕೆ ಮಾಡಲು ಆದೇಶ ನೀಡಲಾಗಿತ್ತು.
1,23,80,630 ಕೋಟಿ ರೂ.ಗಳ ಟೆಂಡರ್ ಇದಾಗಿದ್ದು, 9 ಹಾಸ್ಟೇಲ್‍ಗಳಿಗೆ 1,848 ಹಾಸಿಗೆಗಳನ್ನು ಹಾಗೂ 2,273 ದಿಂಬುಗಳನ್ನು ಪೂರೈಕೆ ಮಾಡುವಂತೆ ಆದೇಶ ನೀಡಲಾಗಿತ್ತು. 3 ಸಾವಿರ ರೂ.ಗಳಿಗಿಂತಲು ಕಡಿಮೆ ಬೆಲೆಯ ಪ್ರತಿ ಹಾಸಿಗೆಗೆ 5,900 ರೂ.ಗಳ ಬಿಲ್ ಹಾಗೂ 150 ರೂ.ಗಳ ಪ್ರತಿ ದಿಂಬಿಗೆ 650 ರೂ.ಗಳ ಬಿಲ್ ಅನ್ನು ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಹಗರಣವು ಒಂದು ವರ್ಷದ ಹಿಂದೆ ನಡೆದಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಹಿರಂಗವಾಗಿದೆ. ಟೆಂಡರ್ ನೀಡಿದ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಹಾಗೂ ವಸ್ತುಗಳ ಗುಣಮಟ್ಟವನ್ನು ಪರೀಕ್ಷಿಸುವಲ್ಲಿ ಲೋಪವನ್ನು ಎಸಗಿದ ಟೆಕ್ಸ್ ಟೈಲ್ ವಿಭಾಗದ ಪ್ರಾಧ್ಯಾಪಕ ಡಾ. ಹನುಮಂತ ನಾಯ್ಕ್ ಅವರನ್ನು ತನಿಖೆಗೆ ಒಳಪಡಿಸಬೇಕು ಹಾಸ್ಟೆಲ್‍ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.