ಉಗ್ರವಾದ: ದ್ವಂದ್ವ ನಿಲುವು ಬೇಡ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕೆನಡಾದ ಬ್ರಾಂಪ್ಟನ್‌ನಲ್ಲಿ ಜೂನ್ 4ರಂದು ಸಿಖ್ಖರ ಒಂದು ಗುಂಪು ಭಾರತದ ಪ್ರಧಾನಿ ಇಂದಿರಾಗಾಂಧಿಯ ಹತ್ಯೆಯ 39ನೇ ವರ್ಷಾಚರಣೆಯನ್ನು ಸಂಭ್ರಮಿಸಿರುವುದು ತೀವ್ರ ಟೀಕೆ, ಖಂಡನೆಗಳಿಗೆ ಕಾರಣವಾಗಿದೆ. ಅಂದು ಬ್ರಾಂಪ್ಟನ್ ನಗರದಲ್ಲಿ ನಡೆದ ಮೆರವಣಿಗೆಯೊಂದರಲ್ಲಿ ಇಂದಿರಾಗಾಂಧಿಯ ಹತ್ಯೆಯ ಸ್ತಬ್ಧ ಚಿತ್ರವನ್ನು ಒಯ್ಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಖ್ ಅನಿವಾಸಿ ಭಾರತೀಯರು ಅತಿ ಹೆಚ್ಚು ವಾಸಿಸುತ್ತಿರುವ ಪ್ರದೇಶ ಕೆನಡಾದ ಬ್ರಾಂಪ್ಟನ್. ಪ್ರತ್ಯೇಕ ಖಾಲಿಸ್ತಾನಿವಾದಿ ಬೆಂಬಲಿಗರಿಗೆ ಕೆನಡಾ ಆಶ್ರಯ ನೀಡುತ್ತಿದೆ, ಅವರನ್ನು ಪರೋಕ್ಷವಾಗಿ ಬೆಂಬಲಿಸುತ್ತಿದೆ ಎನ್ನುವ ಭಾರತದ ಅಸಮಾಧಾನ ಇಂದು ನಿನ್ನೆಯದಲ್ಲ. ಇದೀಗ ಬ್ರಾಂಪ್ಟನ್‌ನಲ್ಲಿ ನಡೆದ ಘಟನೆ, ಆ ಅಸಮಾಧಾನದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದೆ. ಭಾರತದ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅಂತರ್‌ರಾಷ್ಟ್ರೀಯ ವರ್ಚಸ್ಸುಳ್ಳ ನಾಯಕಿಯಾಗಿದ್ದರು. ಅವರ ಹತ್ಯೆ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿತ್ತು. ಅವರ ಹತ್ಯೆಯನ್ನು ಬೆಂಬಲಿಸುವವರು ಭಾರತಕ್ಕೆ ಮಾತ್ರವಲ್ಲ, ಕೆನಡಾಕ್ಕೂ ಒಂದಲ್ಲ ಒಂದು ದಿನ ಕಂಟಕವಾಗಿ ಪರಿಣಿಸಬಲ್ಲರು. ಅವರ ಕೃತ್ಯ, ಕೆನಡಾದಲ್ಲಿರುವ ಇತರ ಸಿಖ್ ವಿದ್ಯಾರ್ಥಿಗಳ ಮೇಲೂ ಬಾಧಿಸುವ ಸಾಧ್ಯತೆಗಳಿವೆ. ಆದುದರಿಂದ, ಬ್ರಾಂಪ್ಟನ್‌ನಲ್ಲಿ ನಡೆದಿರುವ ಘಟನೆಯನ್ನು ಕೆನಡಾ ಲಘುವಾಗಿ ಪರಿಗಣಿಸದೆ ಘಟನೆಯ ಹಿಂದಿರುವ ಸಂಘಟನೆಗಳನ್ನು ಗುರುತಿಸಿ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗಿದೆ.
ಸಹಜವಾಗಿಯೇ ಭಾರತ ಪ್ರಕರಣದ ವಿರುದ್ಧ ಕಟು ಹೇಳಿಕೆಗಳನ್ನು ನೀಡಿದೆ. ವಿದೇಶಾಂಗ ವ್ಯವಹಾರಗಳ ಸಚಿವ ಜೈ ಶಂಕರ್ ಅವರು ಸಂದೇಶವೊಂದನ್ನು ಕೆನಡಾ ಸರಕಾರಕ್ಕೆ ರವಾನಿಸಿದ್ದು, ‘‘ಇಂತಹ ಅವಿವೇಕದ ಘಟನೆಗಳು ಉಭಯ ದೇಶಗಳ ಸೌಹಾರ್ದ ಸಂಬಂಧಗಳ ಮೇಲೆ ದುಷ್ಪರಿಣಾಮಗಳನ್ನು ಬೀರಲಿವೆ’’ ಎಂದು ಎಚ್ಚರಿಸಿದ್ದಾರೆ. ‘‘ಕೆನಡಾದಂತಹ ದೇಶದಲ್ಲಿ ಪ್ರತ್ಯೇಕತಾವಾದಿ ಬೆಂಬಲಿಗರಿಗೆ ಆಶ್ರಯ ಹೇಗೆ ದೊರಕಿದೆ ಎನ್ನುವುದು ಅರ್ಥವಾಗುತ್ತಿಲ್ಲ. ಇದು ಕೇವಲ ಒಂದು ಸಮುದಾಯದ ಪ್ರತಿಭಟನೆಯಂತೆ ಕಾಣುತ್ತಿಲ್ಲ. ಇದರ ಹಿಂದೆ ವೋಟ್ ಬ್ಯಾಂಕ್ ರಾಜಕೀಯ ಎದ್ದು ಕಾಣುತ್ತಿದೆ’’ ಎಂದೂ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಕೃತ್ಯದ ಹಿಂದೆ ಕೆನಡಾ ಸರಕಾರದ ಪಾಲುದಾರಿಕೆಯ ಬಗ್ಗೆ ಅವರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಕೆನಡಾದಲ್ಲಿ ಪ್ರತ್ಯೇಕತಾವಾದಿ ಗುಂಪುಗಳು ಪದೇ ಪದೇ ಇಂತಹ ಕೃತ್ಯಗಳಲ್ಲಿ ತೊಡಗುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದರಿಂದ ವಿದೇಶಾಂಗ ಸಚಿವರ ಕಳವಳ, ಖಂಡನೆ ಸಮರ್ಥನೀಯವಾಗಿದೆ. ಖಾಲಿಸ್ತಾನ ಪ್ರತ್ಯೇಕತಾವಾದಿಗಳ ಬೆಂಬಲಿಗರು ದೊಡ್ಡ ಪ್ರಮಾಣದಲ್ಲಿ ಕೆನಡಾದಲ್ಲಿ ವಾಸವಾಗಿರುವ ಬಗ್ಗೆ ಈಗಾಗಲೇ ಆರೋಪಗಳು ಕೇಳಿ ಬಂದಿರುವುದರಿಂದ, ಅಲ್ಲಿನ ಸರಕಾರ ಈ ಬಗ್ಗೆ ಸ್ಪಷ್ಟೀಕರಣವೊಂದನ್ನು ನೀಡುವ ಅಗತ್ಯವಿದೆ.
ವಿಪರ್ಯಾಸದ ಸಂಗತಿಯೆಂದರೆ, ಭಾರತವು ಕೆನಡಾಕ್ಕೆ ಉಗ್ರವಾದಿಗಳ ಕುರಿತಂತೆ ಬುದ್ಧಿವಾದ ಹೇಳುತ್ತಿರುವ ಹೊತ್ತಿಗೆ ಇತ್ತ ಭಾರತ ಸರಕಾರದ ಸಚಿವರಾಗಿರುವ ಗಿರಿರಾಜ್ ಸಿಂಗ್ ಅವರು, ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥೂರಾಂ ಗೋಡ್ಸೆಯನ್ನು ‘ಭಾರತದ ಸುಪುತ್ರ’ ಎಂದು ಕರೆದಿದ್ದಾರೆ. ಗೋಡ್ಸೆಯನ್ನು ವೈಭವೀಕರಿಸುವ ಪ್ರಯತ್ನ ಭಾರತದಲ್ಲಿ ಪದೇ ಪದೇ ನಡೆಯುತ್ತಿವೆ. ಈ ಹಿಂದೆ ಮಹಾತ್ಮಾ ಗಾಂಧೀಜಿಯ ಪ್ರತಿಕೃತಿಗೆ ಗುಂಡಿಕ್ಕುವ ಮೂಲಕ, ಗೋಡ್ಸೆಯನ್ನು ವೈಭವೀಕರಿಸುವ ಕೃತ್ಯ ಹಿಂದೂ ಮಹಾಸಭಾದ ಮುಖಂಡರು ಎಂದು ಕರೆಸಿಕೊಂಡವರಿಂದ ನಡೆದಿತ್ತು. ಇವೆಲ್ಲ ದಾರಿ ತಪ್ಪಿದ ಸಂಘಟನೆಗಳಿಂದ ಅಥವಾ ಯುವಕರಿಂದ ನಡೆಯುತ್ತಿರುವ ಕೃತ್ಯ ಎಂದು ಭಾರತ ಸರಕಾರ ಹೊಣೆಗಾರಿಕೆಯಿಂದ ನುಣುಚಿಕೊಂಡು ಬಂದಿದೆ. ಆದರೆ ಇದೀಗ ಸರಕಾರದ ಪ್ರಮುಖ ಖಾತೆಯನ್ನು ನಿರ್ವಹಿಸುತ್ತಿರುವ ಬಿಜೆಪಿ ಮುಖಂಡನೊಬ್ಬ ಗಾಂಧೀಜಿಯ ಕೊಲೆಗಾರನನ್ನು ‘ಭಾರತದ ಸುಪುತ್ರ’ ಎಂದು ಕರೆದಿರುವುದು ಭಾರತಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ತಕ್ಷಣವೇ ಆತನನ್ನು ಸರಕಾರದಿಂದ ವಜಾಗೊಳಿಸಿ ಸರಕಾರ ತನ್ನ ಮಾನವನ್ನು ಉಳಿಸಿಕೊಳ್ಳಬೇಕಾಗಿತ್ತು. ಆದರೆ ಅಂತಹದೇನೂ ನಡೆದಿಲ್ಲ. ಗಾಂಧಿ ಹತ್ಯೆಯ ಬೆಂಬಲಿಗನೊಬ್ಬನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಭಾರತ ಸರಕಾರ ದೂರದ ಕೆನಡಾಕ್ಕೆ ‘‘ ಇಂದಿರಾಗಾಂಧಿ ಹತ್ಯೆಯ ಬೆಂಬಲಿಗರಿಗೆ ಆಶ್ರಯ ನೀಡಬೇಡಿ’’ ಎಂದು ಬುದ್ಧಿವಾದ ಹೇಳಿದರೆ, ಅದನ್ನು ಯಾವ ದೇಶವಾದರೂ ಗಂಭೀರವಾಗಿ ತೆಗೆದುಕೊಳ್ಳು ವ ಸಾಧ್ಯತೆಗಳಿವೆಯೆ? ಆದುದರಿಂದ, ವಿದೇಶಾಂಗ ಸಚಿವರು ಮೊತ್ತ ಮೊದಲು, ತನ್ನದೇ ಸರಕಾರದೊಳಗಿರುವ ಭಯೋತ್ಪಾದಕ ಬೆಂಬಲಿಗನ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಧಾನಿಯನ್ನು ಒತ್ತಾಯಿಸಬೇಕಾಗಿದೆ. ಅದಾದ ಬಳಿಕ ಅವರು ಕೆನಡಾ ಸರಕಾರಕ್ಕೆ ತನ್ನ ಆಕ್ಷೇಪವನ್ನು ಸಲ್ಲಿಸಬೇಕು.
ಸರಕಾರದ ಭಾಗವಾಗಿರುವ ನಾಯಕರೇ ಗೋಡ್ಸೆಯನ್ನು ಬೆಂಬಲಿಸಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ವಾರಗಳ ಹಿಂದೆ ಉತ್ತರಾ ಖಂಡದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿ ನಾಯಕರೊಬ್ಬರು ಗೋಡ್ಸೆಯನ್ನು ಬೆಂಬಲಿಸಿ ಹೇಳಿಕೆಯನ್ನು ನೀಡಿದ್ದರು. ಮಹಾತ್ಮಾಗಾಂಧೀಜಿಯ ಹತ್ಯೆಯನ್ನು ಹಿಂದೂ ಮಹಾ ಸಭಾದ ಕಾರ್ಯಕರ್ತರೆಂದು ಕರೆಸಿಕೊಂಡವರು ಪ್ರತೀ ವರ್ಷ ಸಂಭ್ರಮಿಸುತ್ತಾರಾದರೂ, ಸರಕಾರ ಅವರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ವಿಪರ್ಯಾಸವೆಂದರೆ, ಗೋಡ್ಸೆಯನ್ನು ಬಹಿರಂಗವಾಗಿಯೇ ಹೊಗಳುವ, ದೇಶದ ವಿರುದ್ಧ ಬಾಂಬು ಸ್ಫೋಟಿಸಿದ ಆರೋಪವನ್ನು ಹೊತ್ತ ಪ್ರಜ್ಞಾಸಿಂಗ್ ಠಾಕೂರ್ ಎಂಬ ಮಹಿಳೆಗೆ ಟಿಕೆಟ್ ಕೊಟ್ಟು ಚುನಾವಣೆಯಲ್ಲಿ ಗೆಲ್ಲಿಸಿ ಆಕೆಯನ್ನು ಸಂಸತ್ತಿಗೆ ಆಹ್ವಾನಿಸಿಕೊಂಡಿರುವುದು ಇದೇ ಬಿಜೆಪಿ. ಇಂದು ಆಕೆ ಸರಕಾರದ ಭಾಗವಾಗಿದ್ದಾರೆ. ಇಂತಹ ಸರಕಾರ ವಿಶ್ವಸಂಸ್ಥೆಯಲ್ಲಿ ಭಯೋತ್ಪಾದನೆಯ ವಿರುದ್ಧ, ಉಗ್ರವಾದದ ವಿರುದ್ಧ ಅದೆಷ್ಟು ಉಗ್ರ ಹೇಳಿಕೆ ನೀಡಿದರೂ ಅದು ಪರಿಣಾಮಕಾರಿಯಾಗುವುದಿಲ್ಲ. ಭಯೋತ್ಪಾದನೆ ಮತ್ತು ಉಗ್ರವಾದದ ಕುರಿತಂತೆ ಭಾರತದ ಈ ದ್ವಂದ್ವ ನಿಲುವನ್ನು ವಿಶ್ವ ಕಳೆದ ಒಂದು ದಶಕದಿಂದ ಗಮನಿಸುತ್ತಾ ಬಂದಿದೆ. ಆದುದರಿಂದಲೇ, ಪಾಕಿಸ್ತಾನದ ವಿರುದ್ಧ ಭಾರತ ಮಾಡುವ ಆರೋಪಗಳು ವಿಶ್ವಸಂಸ್ಥೆಯಲ್ಲಿ ನೆಲೆ ಕಳೆದುಕೊಳ್ಳುತ್ತಿವೆ.
ಉಗ್ರವಾದ ಮತ್ತು ಭಯೋತ್ಪಾದನೆಯ ಕುರಿತಂತೆ ಸರಕಾರ ತಳೆಯುತ್ತಾ ಬಂದಿರುವ ಈ ದ್ವಂದ್ವ ನಿಲುವಿನಿಂದಾಗಿ ಸ್ವತಃ ಭಾರತವೇ ಅಪಾಯಕ್ಕೆ ಸಿಲುಕುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಗೋಡ್ಸೆ ಬೆಂಬಲಿಗರನ್ನು , ಕೇಸರಿ ಭಯೋತ್ಪಾದಕರನ್ನು ಪೋಷಿಸುವ ಮೂಲಕ ಪಂಜಾಬ್, ಕಾಶ್ಮೀರದಂತಹ ಪ್ರದೇಶಗಳಲ್ಲಿ ಪ್ರತ್ಯೇಕತಾವಾದ, ಉಗ್ರವಾದಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದೆ. ಹಿಂದೂ ರಾಷ್ಟ್ರವನ್ನು ಪ್ರತಿಪಾದಿಸುವ ಗೋಡ್ಸೆ ಸರಿ ಎಂದಾದರೆ, ಪಂಜಾಬ್‌ನಲ್ಲಿ ಖಾಲಿಸ್ತಾನವನ್ನು ಪ್ರತಿಪಾದಿಸುವ ಬಿಂಧ್ರನ್‌ವಾಲೆ, ಪ್ರತ್ಯೇಕ ಕಾಶ್ಮೀರವನ್ನು ಸಮರ್ಥಿಸುವ ಅಫ್ಝಲ್‌ಗುರುವಿನಂತಹ ಉಗ್ರವಾದಿಗಳು ಯಾಕೆ ಸರಿಯಲ್ಲ ಎನ್ನುವ ಪ್ರಶ್ನೆಗಳು ಹುಟ್ಟುವುದಕ್ಕೆ ಸರಕಾರವೇ ಕಾರಣವಾಗುತ್ತಿದೆ. ಕೆನಡಾದಲ್ಲಿ ಪ್ರತ್ಯೇಕತಾವಾದಿಗಳ ಬೆಂಬಲದ ಹಿಂದೆ ವೋಟ್ ಬ್ಯಾಂಕ್ ರಾಜಕೀಯವಿದೆ ಎನ್ನುವುದು ಎಷ್ಟು ನಿಜವೋ, ಗೋಡ್ಸೆ ವಾದಿಗಳಿಗೆ ನೀಡುವ ಬೆಂಬಲದ ಹಿಂದೆ ಇರುವುದು ಕೂಡ ಅದೇ ವೋಟ್ ಬ್ಯಾಂಕ್ ರಾಜಕೀಯ. ಯಾವ ಧರ್ಮ, ಸಿದ್ಧಾಂತಗಳ ಹೆಸರಲ್ಲೇ ಭಯೋತ್ಪಾದನೆ, ಉಗ್ರವಾದ ನಡೆಯಲಿ, ಅವುಗಳನ್ನು ಭಾರತ ಸ್ಪಷ್ಟವಾಗಿ ವಿರೋಧಿಸುತ್ತದೆ ಮತ್ತು ಮಟ್ಟ ಹಾಕುತ್ತದೆ ಎನ್ನುವುದನ್ನು ಕಾರ್ಯ ರೂಪಕ್ಕೆ ತಂದಾಗ ಮಾತ್ರ ಕೆನಡಾದಂತಹ ದೇಶಗಳಿಗೆ ಬುದ್ಧಿವಾದ ಹೇಳುವ ನೈತಿಕತೆಯನ್ನು ಭಾರತ ತನ್ನದಾಗಿಸಿಕೊಳ್ಳುತ್ತದೆ.