ಅಲ್ಪಸಂಖ್ಯಾತರ ಇಲಾಖೆಯಲ್ಲಿನ ಅವ್ಯವಹಾರ ಪ್ರಕರಣ: ತನಿಖೆಗೆ ಆದೇಶಿಸಿದ ಸಚಿವ ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಜೂ. 12: ಅಲ್ಪಸಂಖ್ಯಾತರ ಇಲಾಖೆಯಲ್ಲಿನ ಹೆಲ್ಪ್ ಲೈನ್ ಹಗರಣ ಸೇರಿದಂತೆ ಇನ್ನಿತರೆ ಪ್ರಕರಣಗಳ ಕುರಿತು ತನಿಖೆ ನಡೆಸಿ, ವರದಿ ನೀಡಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ.
ಸೋಮವಾರ ಅಬುಲ್ ಕಲಾಂ ಅಝಾದ್ ಭವನದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಅಲ್ಪಸಂಖ್ಯಾತರ ಇಲಾಖೆಯಲ್ಲಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಹೆಲ್ಪ್‍ಲೈನ್ ಸ್ಥಾಪಿಸಿ ಅದರ ನಿರ್ವಹಣೆ ಮಾಡಿದ ಒಬ್ಬರಿಗೆ ತಿಂಗಳಿಗೆ 4 ಲಕ್ಷ ರೂ. ವೇತನ ನೀಡಿರುವ ಬಗ್ಗೆ, ಅದರಿಂದ ಪ್ರಯೋಜನ ಆಗದಿದ್ದರೂ ಮುಂದುವರಿಸಿದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಅದೇ ರೀತಿ, ರಾಜ್ಯದ ಮುಖ್ಯ ಕಾರ್ಯದರ್ಶಿಗಿಂತ ಮೂರು ಪಟ್ಟು ವೇತನ ಒಬ್ಬರಿಗೆ ಮಾಸಿಕ ನೀಡಿದ್ದು ಹೇಗೆ, ಸಹಾಯವಾಣಿ ಕೇಂದ್ರಕ್ಕೆ ವಾರ್ಷಿಕ 2.5 ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೂ ಪ್ರತ್ಯೇಕ ವಾಗಿ ಹೆಲ್ಫ್‍ಲೈನ್ ವ್ಯವಸ್ಥೆಯ ಅಗತ್ಯತೆ ಏನಿತ್ತು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ ಎಂದು ಸಚಿವರು ತಿಳಿಸಿದರು.
ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಐದು ವರ್ಷಗಳಲ್ಲಿ ಕೈಗೊಂಡಿರುವ ಕಾಮಗಾರಿ ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತದ ಸಮಗ್ರ ಮಾಹಿತಿ ಒದಗಿಸುವಂತೆ ಸೂಚಿಸಿದ ಅವರು, ಇನ್ಮುಂದೆ ಕಾಲೋನಿಗಳ ಅಭಿವೃದ್ಧಿ ಪ್ರಸ್ತಾವನೆ ಬಂದರೆ ಸ್ಥಳಕ್ಕೆ ಹೋಗಿ ಆ ಕಾಮಗಾರಿಯ ಅಗತ್ಯದ ಬಗ್ಗೆ ಪರಿಶೀಲಿಸಿ ವರದಿ ಕೊಡಲು ತಜ್ಞರ ತಂಡ ರಚನೆಗೆ ಅವರು ಹೇಳಿದರು.
ಮತ್ತೊಂದೆಡೆ, ರಾಜ್ಯದಲ್ಲಿ ಅಪೂರ್ಣಗೊಂಡಿರುವ 126 ಶಾದಿ ಮಹಲ್‍ಗಳ ಕಾಮಗಾರಿ ಪೂರ್ಣ ಗೊಳಿಸಲು 56 ಕೋಟಿ ರೂ. ಅಗತ್ಯವಾಗಿದ್ದು, ಅನುದಾನದ ಕೊರತೆ ಇರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು. ಜತೆಗೆ ಹೊಸದಾಗಿ ಶಾದಿ ಮಹಲ್ ನಿರ್ಮಾಣಕ್ಕೆ ಬೇಡಿಕೆ ಇರುವ ಬಗ್ಗೆಯೂ ಗಮನಕ್ಕೆ ತಂದರು.ಅಲ್ಪಸಂಖ್ಯಾತರ ಅಭಿವೃದ್ಧಿ ಮಂಡಳಿ, ವಕ್ಫ್ ಸೇರಿದಂತೆ ಒಟ್ಟಾರೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಹಾಲಿ ಇರುವ ಯೋಜನೆ ಮುಂದುವರಿಕೆ, ಹೊಸ ಯೋಜನೆಗಳ ಅನುಷ್ಠಾನ ಸೇರಿ ಒಟ್ಟಾರೆ ವಾರ್ಷಿಕ ಅನುದಾನದ ಅಗತ್ಯ ಬಗ್ಗೆ ಬಜೆಟ್ ಪೂರ್ವಬಾವಿ ಸಭೆಗೆ ಮುನ್ನ ಪ್ರಸ್ತಾವನೆ ಸಿದ್ದಪಡಿಸಲು ಅವರು ಸೂಚಿಸಿದರು.
ತರಬೇತಿ ಕೇಂದ್ರ: ಹಜ್ ಭವನವನ್ನು ವರ್ಷದ ಹತ್ತು ತಿಂಗಳು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿ ಗಳಿಗೆ ಐಎಎಸ್ ಹಾಗೂ ಐಪಿಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತರಬೇತಿ ನೀಡುವ ಕೇಂದ್ರ ವನ್ನಾಗಿ ಪರಿವರ್ತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಅದೇ ರೀತಿ ವಕ್ಫ್ ತರಬೇತಿ ಕೇಂದ್ರ ವಾಗಿಯೂ ಬಳಕೆ ಮಾಡಲು ನಿರ್ಧಾರಿಸಲಾಯಿತು. ಎರಡೂ ತರಬೇತಿ ಕೇಂದ್ರಗಳ ಕಾರ್ಯನಿರ್ವಹಣೆಗೆ ಸ್ಥಳ ಪಡೆಯುವುದರಿಂದ ಅದಕ್ಕಾಗಿ ಹಜ್ ಸಮಿತಿಗೆ ಬಾಡಿಗೆ ನಿಗದಿಗೊಳಿಸಲು ಸೂಚನೆ ನೀಡಲಾಯಿತು.
ರಾಜ್ಯದಲ್ಲಿರುವ 126 ಅಲ್ಪಸಂಖ್ಯಾತ ವಸತಿ ಶಾಲಾ ಕಾಲೇಜು ಪೈಕಿ 29 ಬಾಡಿಗೆ ಕಟ್ಟಡದಲ್ಲಿದ್ದು ಮುಂದಿನ ಒಂದು ವರ್ಷದಲ್ಲಿ ಎಲ್ಲವೂ ಸ್ವಂತ ಕಟ್ಟಡ ದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಅಲ್ಲಿ ವಿದ್ಯಾರ್ಥಿಗಳ ಪ್ರವೇಶ ಕಡಿಮೆ ಇದ್ದರೆ ಹೆಚ್ಚಿಸಬೇಕು. ನಿಗದಿತ ಪ್ರವೇಶಕಿಂತ ಬೇಡಿಕೆ ಹೆಚ್ಚಾಗಿದ್ದರೆ ಹೆಚ್ಚುವರಿ ಕಟ್ಟಡ ನಿರ್ಮಿಸಿ ಪ್ರವೇಶ ಕಲ್ಪಿಸಬೇಕು ಎಂದು ಸೂಚಿಸಿದರು.
ಅದೇ ರೀತಿ ವಿದ್ಯಾಸಿರಿ ಯೋಜನೆಯಡಿಯಲ್ಲಿ ಹಾಸ್ಟೆಲ್ ವ್ಯವಸ್ಥೆ ಸಿಗದ 18,800 ವಿದ್ಯಾರ್ಥಿಗಳಿಗೆ ವಾರ್ಷಿಕ 27 ಕೋಟಿ ರೂ. ಪಾವತಿ ಆಗುತ್ತಿದ್ದು, ಅದನ್ನು ತಪ್ಪಿಸಲು ಅಗತ್ಯ ಇರುವ ಕಡೆ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣ ಮಾಡಿ ಅದಕ್ಕೆ ಬೇಕಾದ ಜಮೀನು ಗುರುತಿಸಿ ಎಂದು ನಿರ್ದೇಶನ ನೀಡಿದರು.
ಮೌಲಾನ ಅಜಾದ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೆಲವೆಡೆ ಎರಡು ಅಂಕಿ ದಾಟ ದಿದ್ದರೂ ಶಿಕ್ಷಕರು ಹಾಗೂ ಸಿಬ್ಬಂದಿ ಹೆಚ್ಚುವರಿ ಆಗಿ ಇರುವ ಬಗ್ಗೆ ಪರಿಶೀಲಿಸಿ ಅಗತ್ಯ ಇರುವ ಕಡೆಗೆ ಶಿಫ್ಟ್ ಮಾಡುವ ಬಗ್ಗೆಯೂ ಚಿಂತನೆ ನಡೆಸಿ ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ರಾಘವೇಂದ್ರ ಸೇರಿದಂತೆ ಪ್ರಮುಖರಿದ್ದರು.