ಮುಂಬೈ: ಎಚ್ಚರಿಕೆಯ ಹೊರತಾಗಿಯೂ ಸಮುದ್ರಕ್ಕೆ ಇಳಿದು ಸಾವನ್ನಪ್ಪಿದ ಬಾಲಕ, ಇನ್ನಿಬ್ಬರು ನಾಪತ್ತೆ
ಮುಂಬೈ: ಮುಂಬೈನ ಜುಹು ಬೀಚ್‌ನಲ್ಲಿ 16 ವರ್ಷದ ಬಾಲಕ ಸಾವನ್ನಪ್ಪಿದ್ದು, ಇನ್ನಿಬ್ಬರು ಸಮುದ್ರಕ್ಕೆ ಇಳಿದು ನಾಪತ್ತೆಯಾಗಿದ್ದಾರೆ.
12 ರಿಂದ 16 ವರ್ಷ ವಯಸ್ಸಿನ ಐದು ಹುಡುಗರ ಗುಂಪು, ಜೀವರಕ್ಷಕ ದಳ ಎಚ್ಚರಿಕೆ ನೀಡಿದ ಹೊರತಾಗಿಯೂ ಕೂಡ ಸಮುದ್ರಕ್ಕೆ ಇಳಿದ ನಂತರ ದಡದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ನಾಪತ್ತೆಯಾಗಿದೆ. ಇಬ್ಬರು ಬಾಲಕರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದು, ಒಬ್ಬರು ಆಸ್ಪತ್ರೆಗೆ ಕರೆತಂದ ಕೂಡಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ನೌಕಾಪಡೆ ಹಾಗೂ ಕೋಸ್ಟ್ ಗಾರ್ಡ್‌ನ ಡೈವರ್‌ಗಳನ್ನು ಕರೆಸಲಾಗಿದೆ.
ಶೋಧ ಕಾರ್ಯಾಚರಣೆಗಾಗಿ ನೌಕಾಪಡೆಯ ಹೆಲಿಕಾಪ್ಟರ್ ಅನ್ನು ರಾತ್ರಿ 8.20 ಕ್ಕೆ ಬಳಸಲಾಯಿತು ಎಂದು ಮಹಾನ ನಗರಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಡೈವಿಂಗ್ ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ. ಆದರೆ ಸಮುದ್ರದ ಪ್ರತಿಕೂಲ ಪರಿಸ್ಥಿತಿಯಿಂದಾಗಿ ಅವುಗಳನ್ನು ಈಗ ನಿಯೋಜಿಸಲಾಗುತ್ತಿಲ್ಲ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ರಾತ್ರಿ ಸರ್ಚ್ ಲೈಟ್ , ಮನಿಲಾ ಹಗ್ಗ ಮತ್ತಿತರ ಸಲಕರಣೆಗಳೊಂದಿಗೆ ಶೋಧ ನಡೆಸಲಾಗಿತ್ತಾದರೂ ಕಾಣೆಯಾದ ಬಾಲಕರು ಪತ್ತೆಯಾಗಿಲ್ಲ.
ಬೈಪರ್‌ಜೋಯ್ ಚಂಡಮಾರುತವು ಅರಬ್ಬಿ ಸಮುದ್ರದ ಮೇಲೆ ಬೀಸುತ್ತಿರುವಾಗ ಈ ಘಟನೆ ಸಂಭವಿಸಿದೆ. ಜೂನ್ 15 ರಂದು ಗುಜರಾತ್ ಕರಾವಳಿಯಲ್ಲಿ 'ಬೈಪರ್ಜೋಯ್' ಚಂಡಮಾರುತದ ಅಪ್ಪಳಿಸುವ ಮೊದಲು ಜನರು ಮತ್ತು ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.