VIDEO- ದಲಿತರು ಮುಖ್ಯಮಂತ್ರಿ ಆಗುವ ಅವಕಾಶವನ್ನು ತಪ್ಪಿಸಿದ್ದಾರೆ: ಗೃಹ ಸಚಿವ ಪರಮೇಶ್ವರ್ ಬೇಸರ
''2013ರಲ್ಲಿ ನನ್ನ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು ಎಂದು ಯಾರೂ ಹೇಳಲಿಲ್ಲ''
ಬೆಂಗಳೂರು, ಜೂ.13 ‘ನಾನು ಯಾಕೆ ಮುಖ್ಯಮಂತ್ರಿ ಆಗಬಾರದು. ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ ಯಾಕಾಗಬಾರದು? ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಆಗುವ ಅವಕಾಶಗಳನ್ನು ತಪ್ಪಿಸಿದ್ದಾರೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ದಲಿತ ಸಂಘಟನೆಗಳ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಪರಿಶಿಷ್ಟ ಸಮುದಾಯಗಳ ಸಹೋದರತ್ವ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ನಾವೆಲ್ಲರೂ ವಿದ್ಯಾವಂತರಾಗಿದ್ದೇವೆ. ಬೇರೆ-ಬೇರೆ ಕ್ಷೇತ್ರದಲ್ಲಿ ಕೆಲಸವನ್ನು ಮಾಡುವಂತಹ ಶಕ್ತಿ ನಮಗೆ ಬಂದಿದೆ. ನಮ್ಮಲ್ಲಿನ ಕಿಳರಿಮೆ ಹೋಗಬೇಕು. ನಾನು, ಕೆ.ಎಚ್.ಮುನಿಯಪ್ಪ ಹಾಗೂ ಡಾ.ಮಹದೇವಪ್ಪ ಅವರು ಮುಖ್ಯಮಂತ್ರಿಯಾಗಲು ಯಾವುದರಲ್ಲಿ ಕಡಿಮೆ ಇದ್ದೇವೆ. ನಮಗೆ ಅವಕಾಶಗಳನ್ನು ತಪ್ಪಿಸಿದ್ದಾರೆ ಎಂದು ದೂರಿದರು.
ನನ್ನ ನೇತೃತ್ವದಲ್ಲಿ 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ ಡಾ.ಪರಮೇಶ್ವರ್ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು ಎಂದು ಯಾರೂ ಹೇಳಲಿಲ್ಲ. ನನ್ನ ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು ಎಂದು ನಾನು ಹೇಳಿಕೊಳ್ಳಲಿಲ್ಲ. ಆದರೆ 2018ರಲ್ಲಿ ದಲಿತರನ್ನು ಕಡೆಗಣಿಸಿದ್ದಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಸೋಲಾಯಿತು. ಯಾವ ಸಮುದಾಯ ಕಡೆಗಣಿಸಿದರೋ ಅವರಿಂದ ಪಾಠ ಕಲಿಬೇಕಾಯಿತು ಎಂದು ಅವರು ತಿಳಿಸಿದರು.
‘ನಮ್ಮಲ್ಲಿ ಒಗ್ಗಟ್ಟು ಇದ್ದರೆ ಮಾತ್ರ ಉಳಿದುಕೊಳ್ಳುತ್ತೇವೆ. ಅದನ್ನು ಬಿಟ್ಟು ಎಡಗೈ, ಬಲಗೈ ಸಮುದಾಯ ಅಂತಿದ್ದರೆ ಸಾಧಿಸಲಾಗಲ್ಲ. ನಮ್ಮಲ್ಲಿ ಒಗ್ಗಟ್ಟು ಮೂಡಿದರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯ. ಮುನಿಯಪ್ಪ ನೇತೃತ್ವದಲ್ಲಿ ಜಗಜೀವನ್ ರಾಮ್ ಜಯಂತಿ ಮಾಡಲು ಹೇಳಿದರು. ನನ್ನ ನೇತೃತ್ವದಲ್ಲಿ ಡಾ. ಅಂಬೇಡ್ಕರ್ ಜಯಂತಿ ಮಾಡಲು ಹೇಳಿದರು.
ಜಗಜೀವನರಾಮ್ ಎಡಗೈ, ಅಂಬೇಡ್ಕರ್ ಬಲಗೈ ಎಂದು ನಮಗೆ ಜಯಂತಿ ಮಾಡುವುದಕ್ಕೆ ಹೇಳುತ್ತಾರೆ. ಇದರೊಂದಿಗೆ ಅಲ್ಲೂ ನಮ್ಮನ್ನು ಒಡೆದು ಆಳುವುದಕ್ಕೆ ನೋಡಿದರು ಎಂದು ಅವರು ಅಳಲು ತೋಡಿಕೊಂಡರು.
ನಮ್ಮ ಪಕ್ಷದ ಆಂತರಿಕ ವಲಯದಲ್ಲಿ ಗೆಲುವಿನ ಪರಾಮರ್ಶೆ ಮಾಡುವಾಗ ಈ ಬಾರಿ ದಲಿತರು ನಮ್ಮನ್ನು ಕೈ ಹಿಡಿದಿದ್ದಾರೆ ಎಂದು ಮಾತನಾಡುತ್ತಾರೆ. ಮುಸ್ಲಿಮರು ಶೇ.100ರಷ್ಟು ನಮ್ಮ ಕೈ ಹಿಡಿದಿದ್ದಾರೆ ಎಂದು ಹೇಳುತ್ತಾರೆ. ನಮ್ಮ ಬಗ್ಗೆ ಈಗ ಎಲ್ಲರಿಗೆ ಗೊತ್ತಾಗಿದೆ. 51 ಮೀಸಲು ಕ್ಷೇತ್ರಗಳ ಪೈಕಿ 32ರಲ್ಲಿ ಗೆದ್ದಿದ್ದೇವೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿಗೆ ನಾನೇ ಅಧ್ಯಕ್ಷನಾಗಿದ್ದೆ. ಮೊದಲ ಅಧಿವೇಶನದಲ್ಲಿ ನ್ಯಾ.ಸದಾಶಿವ ಆಯೋಗದ ವರದಿ ಮಂಡಿಸುತ್ತೇವೆ ಎಂದು ಅವರು ಹೇಳಿದರು.
ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯು ಮುನುವಾದ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನೀಡಿದ ಸಂವಿಧಾನದ ಸಂಘರ್ಷವಾಗಿದೆ. ಇಲ್ಲಿ ನಾವು ಮನುವಾದವನ್ನು ಸೋಲಿಸಬೇಕಾಗಿದೆ. ಯಾವುದೇ ಕಾರಣಕ್ಕೂ ಮನುವಾದಿಗಳನ್ನು ಈ ದೇಶದಲ್ಲಿ ಬೆಳೆಯಲು ಬಿಡಬಾರದು. ನಾವೆಲ್ಲರೂ ಸಂವಿಧಾನವನ್ನು ಉಳಿಸಬೇಕಾಗಿದೆ ಎಂದು ಕರೆ ನೀಡಿದರು.
ಜಾತಿ, ಧರ್ಮ, ವರ್ಣವನ್ನು ಬಿಟ್ಟು ನಾವೆಲ್ಲ ಒಗ್ಗೂಡಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ. ಇದು ನಮ್ಮ ಮೊದಲ ಕರ್ತವ್ಯವಾಗಿದೆ. ಮುಂದಿನ ಪೀಳಿಗೆಯು ಅಂಬೇಡ್ಕರ್ ಅವರ ನಡೆ, ನುಡಿ ಮತ್ತು ಚಿಂತನೆಗಳನ್ನು ಮೈಗೂಡಿಸಿಕೊಳ್ಳುವಂತೆ ಮಾಡುವುದು ನಮ್ಮ ಜವಾಬ್ದಾರಿಯೂ ಆಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಪ್ರಚಾರ ಸಮಿತಿಯ ಸಹ ಅಧ್ಯಕ್ಷ ಎಚ್.ಪಿ. ಸುಧಾಮ್ ದಾಸ್, ಉಪಾಧ್ಯಕ್ಷ ಬಿ.ಗೋಪಾಲ್, ಕಾಂಗ್ರೆಸ್ ಮುಖಂಡ ಅಂಬಣ್ಣ ಅರೋಲಿಕರ್, ದಲಿತ ಮುಖಂಡ ಹೆಣ್ಣೂರು ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.