ಮರಳಿ ಶಾಲೆಗೆ ಕರೆತರುವ ಮಹತ್ತರ ಹೊಣೆಗಾರಿಕೆ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನೂತನ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ, ತನ್ನ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವ ಮೂಲಕ ಸುದ್ದಿಯಲ್ಲಿದೆ. ಸರಕಾರ ಚಾಲನೆ ನೀಡಿದ ಶಕ್ತಿ ಯೋಜನೆಗೆ ಜನಸಾಮಾನ್ಯರು ಅಭೂತಪೂರ್ವವಾಗಿ ಸ್ಪಂದಿಸಿದ್ದಾರೆ. ಮಹಿಳೆಯರನ್ನು ಸ್ವಾವಲಂಬಿಗಳಾಗಿಸುವ ನಿಟ್ಟಿನಲ್ಲಿ ಈ ಯೋಜನೆಯ ಪಾತ್ರ ದೊಡ್ಡದು. ಈ ಯೋಜನೆಯ ಜೊತೆಗೆ ಎಲ್ಲ ಪಕ್ಷಗಳು ಕೈಜೋಡಿಸಿ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಇದೇ ಸಂದರ್ಭದಲ್ಲಿ ನೂತನ ಸರಕಾರ ಕುತ್ತಿಗೆಗೆ ಬಿಗಿದುಕೊಂಡಿರುವ ಗ್ಯಾರಂಟಿಯ ಕಾರಣದಿಂದಾಗಿ ಇತರ ಅಭಿವೃದ್ಧಿ ಕಾರ್ಯಗಳು ಹಿಂದೆ ಬೀಳುವಂತಾಗಬಾರದು. ನೂತನ ಸರಕಾರದ ಮುಂದೆ ಹತ್ತು ಹಲವು ಸವಾಲುಗಳಿವೆ. ಅವುಗಳಲ್ಲಿ ಬಹುಮುಖ್ಯವಾದುದು ಶಿಕ್ಷಣ ಕ್ಷೇತ್ರ. ಕೊರೋನ, ಲಾಕ್‌ಡೌನ್ ದಿನಗಳಲ್ಲಿ ಕುಸಿದು ಬಿದ್ದ ಶಿಕ್ಷಣ ವ್ಯವಸ್ಥೆಯನ್ನು ಎತ್ತಿ ನಿಲ್ಲಿಸುವ ಕೆಲಸ ಈವರೆಗೆ ನಡೆದಿಲ್ಲ. ಲಾಕ್‌ಡೌನ್, ಕೊರೋನೋತ್ತರ ದಿನಗಳಲ್ಲಿ ಶಿಕ್ಷಣಕ್ಕಾಗಿರುವ ಹಾನಿಯನ್ನು ಸರಿಪಡಿಸುವ ಬದಲು, ಕಳೆದ ಬಿಜೆಪಿ ಸರಕಾರ ಶಿಕ್ಷಣ ಕ್ಷೇತ್ರವನ್ನು ಇನ್ನಷ್ಟು ಅಧ್ವಾನಗೊಳಿಸಿತು. ಕೊರೋನ, ಲಾಕ್‌ಡೌನ್‌ನಿಂದಾಗಿ ಶಾಲೆಗಳನ್ನು ತೊರೆದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಮಹತ್ವದ ಹೊಣೆಗಾರಿಕೆ ಹಿಂದಿನ ಬಿಜೆಪಿ ಸರಕಾರಕ್ಕಿತ್ತು. ಆದರೆ ಅದಕ್ಕೆ ಬದಲು, ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿನಿಯರನ್ನೇ 'ಸಮವಸ್ತ್ರ'ದ ಹೆಸರಿನಲ್ಲಿ ಶಾಲೆಯಿಂದ ಹೊರ ಹಾಕಿತು. ವಿದ್ಯಾರ್ಥಿಗಳ ಹೆಗಲಿಗೆ ಕೇಸರಿ ಶಾಲುಗಳನ್ನು ಕೊಟ್ಟು ಶಾಲೆಯ ಅಂಗಳವನ್ನು ರಣರಂಗವಾಗಿಸಿತು. ಅಷ್ಟೇ ಅಲ್ಲ, ಅನಗತ್ಯವಾಗಿ ಪಠ್ಯ ಪರಿಷ್ಕರಣೆಯ ಗೊಂದಲಗಳನ್ನು ಮೈಮೇಲೆ ಎಳೆದುಕೊಂಡಿತು. ಶಿಕ್ಷಣ ತಜ್ಞರೇ ಅಲ್ಲದ, ಸಾರ್ವಜನಿಕವಾಗಿ ಸಂಘಪರಿವಾರ ಕಾರ್ಯಕರ್ತರಾಗಿ ಗುರುತಿಸಿಕೊಂಡ ಲೇಖಕರ ಕೈಗೆ ಪರಿಷ್ಕರಣೆಯ ಹೊಣೆಯನ್ನು ಕೊಟ್ಟು, ಶಾಲಾ ಮಕ್ಕಳ ಮನಸ್ಸಿಗೆ ವಿಷ ಹಿಂಡುವ ಪ್ರಯತ್ನ ನಡೆಸಿತು. ಇದೇ ಹೊತ್ತಿಗೆ ದಾಳಿಯಿಟ್ಟ ಅವೈಜ್ಞಾನಿಕ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಕ್ಷೇತ್ರದ ನೆತ್ತಿಯ ಮೇಲಿನ ತೂಗುಗತ್ತಿಯಾಗಿದೆ.
ಪಠ್ಯ ಪುಸ್ತಕಗಳ ಪರಿಷ್ಕರಣೆ, ರಾಷ್ಟ್ರೀಯ ಶಿಕ್ಷಣ ನೀತಿಯ ರದ್ದು ಇವೆರಡೂ ಭರವಸೆಗಳನ್ನು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದೆ. ಅಧಿಕಾರಕ್ಕೆ ಬಂದ ಬಳಿಕ ಪಠ್ಯ ಪರಿಷ್ಕರಣೆಯ ಬಗ್ಗೆ ಭರವಸೆಯನ್ನು ಕೊಟ್ಟಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ರದ್ದಿನ ಕುರಿತಂತೆ ಇನ್ನೂ ಸ್ಪಷ್ಟ ನಿಲುವಿಗೆ ಬಂದಿಲ್ಲ. ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿದ ಬಳಿಕ ತೀರ್ಮಾನಿಸುವುದಾಗಿ ಸರಕಾರ ಹೇಳಿದೆ. ಆದರೆ ಇವಿಷ್ಟರಿಂದ ಸರಕಾರದ ಹೊಣೆಗಾರಿಕೆ ಮುಗಿಯುವುದಿಲ್ಲ. ನಮ್ಮ ದೇಶದಲ್ಲಿ ಶಾಲೆಗಳಿಗೆ ಮಕ್ಕಳನ್ನು ಕರೆತರುವುದಕ್ಕಾಗಿ ಬೇರೆ ಬೇರೆ ಆಂದೋಲನಗಳೇ ನಡೆದಿವೆ. ಕೋಟ್ಯಂತರ ರೂ.ಯನ್ನು ಈ ಆಂದೋಲನಗಳಿಗಾಗಿ ವ್ಯಯಿಸಲಾಗಿದೆ. ಬಿಸಿಯೂಟ, ಉಚಿತ ಸಮವಸ್ತ್ರ, ಉಚಿತ ಪುಸ್ತಕ ವಿತರಣೆ, ಸೈಕಲ್ ವಿತರಣೆ ಮೊದಲಾದ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಮಕ್ಕಳು ಶಾಲೆಗೆ ತೆರಳುವಂತೆ ಮಾಡಿದ್ದವು. 'ಶಾಲೆಯಲ್ಲಾದರೂ ನನ್ನ ಮಗ ಹೊಟ್ಟೆ ತುಂಬ ಊಟ ಮಾಡುತ್ತಾನಲ್ಲ' ಎಂಬ ಆಸೆಯಿಂದ ಮಧ್ಯಾಹ್ನದ ಬಿಸಿಯೂಟಕ್ಕಾಗಿಯೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದ ಪೋಷಕರಿದ್ದರು. ಆದರೆ ಸರಕಾರದ ಎಲ್ಲ ಪ್ರಯತ್ನಗಳು ಕೊರೋನ ಕಾಲದಲ್ಲಿ ಕೊಚ್ಚಿ ಹೋಯಿತು. ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಮಕ್ಕಳು ಆರ್ಥಿಕ ಬಿಕ್ಕಟ್ಟಿನಿಂದಾಗಿ ಶಾಲೆ ತೊರೆಯುವಂತಾಯಿತು.
ಸಾಲ ಸೋಲಗಳಿಂದಾಗಿ ಹಲವು ಮಕ್ಕಳು ಉಳ್ಳವರ ಹಟ್ಟಿಯಲ್ಲಿ ಜೀತ ಮಾಡುವಂತಾಯಿತು. ಕೊರೋನ ಕಾಲದಲ್ಲಿ ಶಾಲೆ ತೊರೆದವರು ಮತ್ತೆ ಶಾಲೆಗೆ ಮರಳಲಿಲ್ಲ. ಇವರನ್ನು ಗುರುತಿಸಿ ಶಾಲೆಗೆ ಕರೆತರುವ ಕೆಲಸವನ್ನು ಸರಕಾರವೂ ಮಾಡಲಿಲ್ಲ. ಸರಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಮಾಧ್ಯಮಿಕ ಶಾಲೆ ತ್ಯಜಿಸುವ ಮಕ್ಕಳ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಅಧಿಕ. 2021-22ನೇ ಸಾಲಿನಲ್ಲಿ ಮಾಧ್ಯಮಿಕ ಶಿಕ್ಷಣ ಮಟ್ಟದಲ್ಲಿ ಶಾಲೆಯನ್ನು ತ್ಯಜಿಸುವ ವಿದ್ಯಾರ್ಥಿಗಳ ಪ್ರಮಾಣವು ಕರ್ನಾಟಕ, ಗುಜರಾತ್, ಬಿಹಾರ, ಅಸ್ಸಾಂ ಹಾಗೂ ಪಂಜಾಬ್ ಸೇರಿದಂತೆ ಏಳು ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿ ಶೇ.12.6ಕ್ಕಿಂತ ಅಧಿಕವಾಗಿದೆ ಎನ್ನುವುದು ಕೇಂದ್ರ ಶಿಕ್ಷಣ ಸಚಿವಾಲಯದ ಆಶ್ರಯದಲ್ಲಿ ನಡೆದ ಯೋಜನಾ ಅನುಮೋದನಾ ಮಂಡಳಿ ಸಭೆಯ ನಡಾವಳಿಗಳಲ್ಲಿ ಬಹಿರಂಗವಾಗಿದೆ. ಶೇ. 33ರಷ್ಟು ಹೆಣ್ಣು ಮಕ್ಕಳು ಮನೆಗೆಲಸದ ಕಾರಣದಿಂದಲೇ ಶಾಲೆ ತೊರೆಯುತ್ತಾರೆ ಎಂದು ಸಮೀಕ್ಷೆ ತಿಳಿಸುತ್ತದೆ. ಕೊರೋನ ಕಾಲದಲ್ಲಿ ದೊಡ್ಡ ಸಂಖ್ಯೆಯಲ್ಲಿ ಶಾಲೆ ತ್ಯಜಿಸಿದವರು ವಿದ್ಯಾರ್ಥಿನಿಯರು. ಮನೆಯಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದಾಗ ಮೊದಲು ಹೆಣ್ಣು ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಲಾಗುತ್ತದೆ. ಕರ್ನಾಟಕದ ಇಂದಿನ ಸ್ಥಿತಿಗೆ ಕೊರೋನ ಕಾಲದ ಆರ್ಥಿಕ ಬಿಕ್ಕಟ್ಟು ಬಹು ಮುಖ್ಯ ಕಾರಣ. ಅವರನ್ನೆಲ್ಲ ಮರಳಿ ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ನೂತ ನ ಸರಕಾರ ಕಾರ್ಯತಂತ್ರವನ್ನು ಹಮ್ಮಿಕೊಳ್ಳಬೇಕು. ಗ್ಯಾರಂಟಿಗಳನ್ನು ಈಡೇರಿಸುವ ಭರದಲ್ಲಿ ಇಂತಹ ಮೂಲಭೂತ ಸಮಸ್ಯೆಗಳನ್ನು ಸರಕಾರ ನಿರ್ಲಕ್ಷ್ಯ ಮಾಡಬಾರದು.
ಗ್ಯಾರಂಟಿಗಳಲ್ಲಿ ಪದವೀಧರರಿಗೆ 3,000 ರೂ. ನೀಡುವ ಭರವಸೆಯನ್ನು ಸರಕಾರ ನೀಡಿದೆ. ಉಚಿತ ಬಸ್ ಪ್ರಯಾಣ, ಮಹಿಳೆಯರಿಗೆ 2,000 ರೂ., ಉಚಿತ ವಿದ್ಯುತ್, ಅಕ್ಕಿ ವಿತರಣೆ ಇವೆಲ್ಲವೂ ಕ್ರಾಂತಿಕಾರಿ ಯೋಜನೆಗಳಾಗಿವೆ. ಆದರೆ ಪದವೀಧರರಿಗೆ ಮಾಸಿಕ 3,000 ರೂ. ವಿತರಣೆ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುವ ಸಾಧ್ಯತೆಗಳಿವೆ, ಮಾತ್ರವಲ್ಲ ಇಲ್ಲಿ ಭಾರೀ ಅಕ್ರಮಗಳಿಗೆ ಅವಕಾಶಗಳಿವೆ. ಪದವೀಧರರಿಗೆ ಮಾಸಿಕ 3,000 ರೂ. ನೀಡುವ ಬದಲು ಸ್ವ ಉದ್ಯೋಗಗಳನ್ನು ಮಾಡಲು ಬಂಡವಾಳ ರೂಪದಲ್ಲಿ ಒಟ್ಟು ಮೊತ್ತವನ್ನು ನೀಡುವುದು ಹೆಚ್ಚು ಪರಿಣಾಮಕಾರಿ ಅಥವಾ ಇವರಿಗೆ ನೀಡಬಹುದಾದ ಧನವನ್ನು ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ವರ್ಗಾಯಿಸಬಹುದಾಗಿದೆ. ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲೂ ಇದನ್ನು ಬಳಸಿಕೊಳ್ಳಬಹುದು. ಈ ಹಿಂದೆ ಸರಕಾರಿ ಶಾಲೆಗಳ ಮಕ್ಕಳಿಗೆ ಸಿಗುತ್ತಿದ್ದ ಉಚಿತ ಸೈಕಲ್‌ನಂತಹ ಹಲವು ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಅವುಗಳನ್ನು ಪುನರಾರಂಭಿಸಲು ಈ ಹಣವನ್ನು ವಿನಿಯೋಗಿಸಬಹುದು. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಗಳನ್ನು ಆರಂಭಿಸುವ ಕಾರ್ಯಕ್ಕೆ ಈ ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಚಾಲನೆ ನೀಡಿತ್ತು. ಆದರೆ ಇದು ಉತ್ತಮ ಶಿಕ್ಷಕರು, ಮೂಲಭೂತ ಸೌಕರ್ಯಗಳ ಕೊರತೆಗಳಿಂದ ಹಿನ್ನಡೆ ಅನುಭವಿಸಿದೆ. ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲ್ಪಟ್ಟ ಸರಕಾರಿ ಶಾಲೆಗಳನ್ನು 'ಇಂಗ್ಲಿಷ್ ಮಾಧ್ಯಮ' ಶಾಲೆಗಳಾಗಿ ಪರಿವರ್ತಿಸಿ, ವಿದ್ಯಾರ್ಥಿಗಳನ್ನು ಆಕರ್ಷಿಸಬೇಕು.
ಅಲ್ಲಿ ಇಂಗ್ಲಿಷ್-ಕನ್ನಡವನ್ನು ಜೊತೆ ಜೊತೆಯಾಗಿ ಕಲಿಸಿ ಸರಕಾರಿ ಶಾಲೆಯ ಜೊತೆಗೆ ಕನ್ನಡವನ್ನೂ ಉಳಿಸಿ ಬೆಳೆಸಬೇಕು. ಹಾಗೆಯೇ ವೃತ್ತಿ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಯುವಕರಿಗೆ ನಿರುದ್ಯೋಗವು ಸಮಸ್ಯೆಯಾಗಿ ಕಾಡದಂತೆ ನೋಡಿಕೊಳ್ಳಬಹುದು. ಮೊತ್ತ ಮೊದಲಾಗಿ ಕೊರೋನ ಕಾಲದಲ್ಲಿ ಶಾಲೆ ತೊರೆದ ವಿದ್ಯಾರ್ಥಿಗಳನ್ನು ಗುರುತಿಸುವುದು ನಡೆಯಬೇಕು. ಅವರು ಶಾಲೆ ತೊರೆದುದರ ಹಿಂದಿರುವ ಕಾರಣಗಳನ್ನು ಅರಿತು ಅವುಗಳಿಗೆ ಪರಿಹಾರ ನೀಡುವ ಪ್ರಯತ್ನವನ್ನು ನೂತನ ಸರಕಾರ ಮಾಡಬೇಕು. ಪ್ರಾಥಮಿಕ ಶಾಲೆಗಳು, ಆ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳೇ ಈ ನಾಡಿನ ನಿಜವಾದ ಗ್ಯಾರಂಟಿಗಳು. ಆ ಗ್ಯಾರಂಟಿಗಳನ್ನು ಉಳಿಸಿ, ಬೆಳೆಸುವುದು ಕೂಡ ನೂತನ ಸರಕಾರದ ಪ್ರಣಾಳಿಕೆಯಲ್ಲಿ ಸೇರಬೇಕು.