ಜನಚಳವಳಿಗಳು ಗ್ಯಾರಂಟಿಯಾಗಬೇಕು, ವಿರೋಧಪಕ್ಷವಾಗಿಯೂ ಫ್ಯಾಶಿಸ್ಟ್ ಬಿಜೆಪಿ ಅಪ್ರಸ್ತುತವಾಗಬೇಕು!
ಈ ಗೆಲುವು ವಿಧಾನಸಭೆಯಲ್ಲಿನ ಶಾಸನಾತ್ಮಕ ಅಧಿಕಾರದಿಂದ ಬಿಜೆಪಿಯನ್ನು ದೂರವಿರಿಸಿದೆ. ಆದರೆ ವಿರೋಧ ಪಕ್ಷದಂಥ ಅಷ್ಟೇ ಮುಖ್ಯವಾದ ಸ್ಥಾನದಲ್ಲಿ ಬಿಜೆಪಿಯನ್ನು ಕೂರಿಸಿದೆ ಹಾಗೂ ಬಿಜೆಪಿ ತನ್ನ ಸಂಘ ಶಕ್ತಿಯ ಮೂಲಕ ವಿರೋಧ ಪಕ್ಷದ ಸ್ಥಾನವನ್ನು ಯಾವಾಗಲೂ ಅಧಿಕಾರಕ್ಕೆ ಚಿಮ್ಮುಹಲಗೆಯನ್ನಾಗಿಯೇ ಬಳಸುತ್ತಾ ಬಂದಿದೆ. ಎಲ್ಲಿಯತನಕ ಬಿಜೆಪಿ ವಿರೋಧ ಪಕ್ಷವಾಗಿಯೂ ಅಪ್ರಸ್ತುತವಾಗುವುದಿಲ್ಲವೂ ಅಲ್ಲಿಯವರೆಗೆ ಬಿಜೆಪಿಗೆ ಮತ್ತದರ ದ್ವೇಷ ರಾಜಕಾರಣಕ್ಕೆ ಸೋಲಿರುವುದಿಲ್ಲ. ಅದರಲ್ಲೂ ಬಿಜೆಪಿ ಏಕೈಕ ಪರಿಣಾಮಕಾರಿ ವಿರೋಧ ಪಕ್ಷವಾದಷ್ಟು ಸಂವಿಧಾನಕ್ಕೆ ಮತ್ತು ಜನರ ನೆಮ್ಮದಿಯ ಬದುಕಿಗೆ ಸಂಚಕಾರ ತಪ್ಪುವುದಿಲ್ಲ.
ಕರ್ನಾಟಕದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವುದು ಪ್ರಜಾಪ್ರಭುತ್ವದ ಬಗ್ಗೆ ಮತ್ತು ದೇಶದ ಜನರ ಬಗ್ಗೆ ಕಾಳಜಿ ಇರುವವರೆಲ್ಲರಲ್ಲೂ ಒಂದು ಹೊಸ ಉತ್ಸಾಹ ಹಾಗೂ ಭರವಸೆ ಹುಟ್ಟಿಸಿದೆ. ಕರ್ನಾಟಕದ ಚುನಾವಣಾ ಪರಿಣಾಮಗಳು ಬಿಜೆಪಿಯ ಹಾಗೂ ವಿರೋಧ ಪಕ್ಷಗಳ ಹಲವಾರು ರಾಜಕೀಯ ನಡೆಗಳನ್ನು ಬದಲಿಸಿವೆ ಅಥವಾ ಪುನರಾವಲೋಕನಕ್ಕೆ ಒಳಪಡಿಸಿವೆ. ರಾಜಸ್ಥಾನದಲ್ಲಿ ಕಾಂಗ್ರೆಸ್ನಲ್ಲಿದ್ದ ಒಡಕು ಇದೇ ಕಾರಣದಿಂದಾಗಿ ವಿಭಜನೆಯ ಮಟ್ಟಕ್ಕೆ ಹೋಗದೆ ತಾತ್ಕಾಲಿಕ ತೇಪೆಗೆ ಸಿದ್ಧವಾಗಿದೆ. ಪಕ್ಕದ ತೆಲಂಗಾಣದಲ್ಲಿ ಆಡಳಿತಾರೂಢ ಬಿ.ಆರ್.ಎಸ್. ಪಕ್ಷವನ್ನು ತೊರೆದು ಬಿಜೆಪಿ ಸೇರಲು ಸಿದ್ಧವಿದ್ದ ಹಲವು ಎಂಎಲ್ಎಗಳು ಮತ್ತು ನಾಯಕರು ತಾತ್ಕಾಲಿಕವಾಗಿ ತಮ್ಮ 'ಮತಾಂತರ'ವನ್ನು ಮುಂದೂಡಿದ್ದಾರೆ. ಮತ್ತೊಂದೆಡೆ 2024ರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯ ಎಂಬ ಹುಮ್ಮಸ್ಸು ವಿರೋಧಿ ಪಾಳಯದಲ್ಲಿ ಕಾಣುತ್ತಿದ್ದು ಇದೇ ಜೂನ್ 23ರಂದು ಪಾಟ್ನಾದಲ್ಲಿ ಬಹುಪಾಲು ವಿರೋಧ ಪಕ್ಷಗಳು ಒಟ್ಟು ಸೇರಿ ಬೃಹತ್ ಜನಸಭೆ ಮಾಡುತ್ತಿವೆ. ಕರ್ನಾಟಕದೊಳಗೆ ಸೋತ ಬಿಜೆಪಿ ಇನ್ನೂ ಸಂಘಟನಾತ್ಮಕವಾಗಿ ಚೇತರಿಸಿಕೊಂಡ ಸೂಚನೆಗಳು ಕಂಡುಬರುತ್ತಿಲ್ಲ. ಇನ್ನೂ ವಿರೋಧ ಪಕ್ಷದ ನಾಯಕನ ಅಯ್ಕೆಯಾಗದಿರುವುದು ಮಾತ್ರವಲ್ಲದೆ, ಗ್ಯಾರಂಟಿಗಳ ಹೊಡೆತವನ್ನು ಎದುರಿಸುವುದು ಹೇಗೆ ಎಂಬುದು ಬಿಜೆಪಿಗೆ ಅತ್ಯಂತ ತೊಡಕಿನ ಸಮಸ್ಯೆಯಾಗಿರುವಂತಿದೆ. ಹೋಲಿಕೆಯಲ್ಲಿ ನೋಡಿದರೆ ಜೆಡಿಎಸ್ ಬಿಜೆಪಿಗಿಂತ ಬೇಗ ಚೇತರಿಸಿಕೊಂಡು ಪ್ರಮುಖ ವಿರೋಧ ಪಕ್ಷದ ರೀತಿಯಲ್ಲಿ ವರ್ತಿಸುತ್ತಿದೆ ಮತ್ತು ತನ್ನ ಮುಂದಿನ ಪಯಣವನ್ನು ಬಿಜೆಪಿಯ ಜೊತೆಗೆ ಮುಂದುವರಿಸುವ ಸೂಚನೆಗಳನ್ನು ನೀಡುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಸಂವಿಧಾನದ ಉಳಿವಿನ ದೃಷ್ಟಿಯಿಂದ ಸಕಾರಾತ್ಮಕವೇ ಆದರೂ ಈ ಬೆಳವಣಿಗೆಗಳು ಹಾಗೂ ಕಾಂಗ್ರೆಸ್ನ ಚುನಾವಣಾ ಗೆಲುವುಗಳು ಬಿಜೆಪಿಯ ಹಿನ್ನಡೆಯನ್ನು ಶಾಶ್ವತಗೊಳಿಸಬಲ್ಲದೇ? ಅಥವಾ ಈ ಚುನಾವಣಾ ಸೋಲು ಸಂಘಪರಿವಾರದ ರಾಜಕೀಯ ಮತ್ತು ಸೈದ್ಧಾಂತಿಕ ಸೋಲನ್ನಾಗಿಸಬಲ್ಲದೇ? ವಿರೋಧ ಪಕ್ಷಗಳ ವಿಜಯಗಳಿಗೆ ಬಿಜೆಪಿ-ಆರೆಸ್ಸೆಸ್ನ ಸೈದ್ಧಾಂತಿಕ-ರಾಜಕೀಯವನ್ನು, ಸಂಘಟನಾತ್ಮಕ ಶಕ್ತಿಯನ್ನು ಸೋಲಿಸಿ ಸಂವಿಧಾನವನ್ನು ಮತ್ತು ಜನರನ್ನು ಗೆಲ್ಲಿಸುವ ಶಕ್ತಿಯಾಗಲೀ ಉದ್ದೇಶವಾಗಲೀ ಇದೆಯೇ?
ಬಿಜೆಪಿ ಚುನಾವಣೆ ಸೋತಿದೆ-ಸಾಂಸ್ಕೃತಿಕ ವಾಗಿ-ಸಾಮಾಜಿಕವಾಗಿ ಸೋತಿದೆಯೇ?
ಈ ಗೆಲುವು ವಿಧಾನಸಭೆಯಲ್ಲಿನ ಶಾಸನಾತ್ಮಕ ಅಧಿಕಾರದಿಂದ ಬಿಜೆಪಿಯನ್ನು ದೂರವಿರಿಸಿದೆ. ಆದರೆ ವಿರೋಧ ಪಕ್ಷದಂಥ ಅಷ್ಟೇ ಮುಖ್ಯವಾದ ಸ್ಥಾನದಲ್ಲಿ ಬಿಜೆಪಿಯನ್ನು ಕೂರಿಸಿದೆ ಹಾಗೂ ಬಿಜೆಪಿ ತನ್ನ ಸಂಘ ಶಕ್ತಿಯ ಮೂಲಕ ವಿರೋಧ ಪಕ್ಷದ ಸ್ಥಾನವನ್ನು ಯಾವಾಗಲೂ ಅಧಿಕಾರಕ್ಕೆ ಚಿಮ್ಮುಹಲಗೆಯನ್ನಾಗಿಯೇ ಬಳಸುತ್ತಾ ಬಂದಿದೆ. ಎಲ್ಲಿಯತನಕ ಬಿಜೆಪಿ ವಿರೋಧ ಪಕ್ಷವಾಗಿಯೂ ಅಪ್ರಸ್ತುತವಾಗುವುದಿಲ್ಲವೂ ಅಲ್ಲಿಯವರೆಗೆ ಬಿಜೆಪಿಗೆ ಮತ್ತದರ ದ್ವೇಷ ರಾಜಕಾರಣಕ್ಕೆ ಸೋಲಿರುವುದಿಲ್ಲ. ಅದರಲ್ಲೂ ಬಿಜೆಪಿ ಏಕೈಕ ಪರಿಣಾಮಕಾರಿ ವಿರೋಧ ಪಕ್ಷವಾದಷ್ಟು ಸಂವಿಧಾನಕ್ಕೆ ಮತ್ತು ಜನರ ನೆಮ್ಮದಿಯ ಬದುಕಿಗೆ ಸಂಚಕಾರ ತಪ್ಪುವುದಿಲ್ಲ. ಏಕೆಂದರೆ ಬಿಜೆಪಿ ಇತರ ಪಕ್ಷಗಳಂತಲ್ಲ. ಆರೆಸ್ಸೆಸ್-ಬಿಜೆಪಿ ಕೂಟಕ್ಕೆ ಅದರ ಅಂತಿಮ ಗುರಿಯಾದ ಬ್ರಾಹ್ಮಣಶಾಹಿ -ಬಂಡವಾಳಶಾಹಿ ಹಿಂದೂರಾಷ್ಟ್ರದ ಸಾಕಾರಕ್ಕೆ ಚುನಾವಣೆಯೂ ಕೂಡ ಒಂದು ಸಾಧನವೇ ಹೊರತು ಅದೇ ಎಲ್ಲವೂ ಅಲ್ಲ. ಕಳೆದ ನೂರು ವರ್ಷಗಳ ಆರೆಸ್ಸೆಸ್-ಬಿಜೆಪಿ ಇತಿಹಾಸವನ್ನು ಗಂಭೀರವಾಗಿ ಅಧ್ಯಯನ ಮಾಡಿದರೆ ಇದು ಸ್ಪಷ್ಟವಾಗುತ್ತದೆ. ಅದು ಮೊದಲಿಗೆ ಜನರಲ್ಲಿ ಹಿಂದುತ್ವದ ಹೆಸರಿನ ದ್ವೇಷದ ಅಮಲನ್ನು ಮತ್ತು ಬ್ರಾಹ್ಮಣ್ಯದ ಗುಲಾಮಗಿರಿಯ ಕೀಳರಿಮೆಯನ್ನು ಏಕಕಾಲದಲ್ಲಿ ಬೆಳೆಸುತ್ತಾ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆ ರೂಪಿಸಲು ಜನಸಂಘಟನೆ ಮತ್ತು ಪ್ರಭಾ ವಲಯಗಳನ್ನು ಬೆಳೆಸಿಕೊಂಡಿತು. ಮೊದಲು ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಕ್ತಿ ಕಟ್ಟಿಕೊಳ್ಳುವುದು ಅದರ ಆಧಾರದಲ್ಲಿ ರಾಜಕೀಯ ಶಕ್ತಿಯನ್ನು ಸಂಚಯಿಸಿಕೊಳ್ಳುವುದು ಅದರ ವ್ಯೆಹತಂತ್ರ ಮತ್ತು ಯೋಜನೆ.
ಆದರೆ ಪ್ರಧಾನಧಾರೆ ರಾಜಕಾರಣದಲ್ಲಿ ಬಿಜೆಪಿಯ ಚುನಾವಣಾ ಶಕ್ತಿಯನ್ನು ಎದುರಿಸುವ ದುರ್ಬಲ ಕಾರ್ಯಕ್ರಮಗಳಿವೆಯೇ ವಿನಾ ಅದರ ಮೂಲ ಶಕ್ತಿಯಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಸೋಲಿಸುವ ಯೋಜನೆಯಾಗಲಿ ಅಥವಾ ಉದ್ದೇಶವಾಗಲಿ ವಿರೋಧ ಪಕ್ಷಗಳಿಗಿಲ್ಲ. ಹಾಗೆ ನೋಡಿದರೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಅದರದ್ದು ಏಕಚಕ್ರಾಧಿಪತ್ಯ. ಈ ವಲಯದಲ್ಲಿ ಉಳಿದೆಲ್ಲಾ ವಿರೋಧ ಪಕ್ಷಗಳು ಅದರ ಸಾಮಂತರೇ. ಹೀಗಾಗಿ ಹಿಂದುತ್ವದ ಹೆಜಿಮೊನಿ-ಆಧಿಪತ್ಯ ರಾಜಕೀಯವನ್ನು ಒಳಗೊಂಡಂತೆ ಇಡೀ ಸಾರ್ವಜನಿಕ ವಲಯದ ಮೇಲೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಅದನ್ನು ಎದುರಿಸುವ ಸಾಮರ್ಥ್ಯವಿದ್ದ ಎಡ ಮತ್ತು ಪ್ರಗತಿಪರ ಶಕ್ತಿಗಳು ದುರ್ಬಲಗೊಳ್ಳುತ್ತಾ ಸಾಗುತ್ತಿವೆ. ಬಲವಾದ ಸಮಗ್ರ ಪ್ರತಿರೋಧ ಮತ್ತು ಪರ್ಯಾಯವನ್ನು ಕಟ್ಟುವ ಬದಲು ಕಾಂಗ್ರೆಸ್ನಂತಹ ಪಕ್ಷಗಳಲ್ಲಿ ಪರ್ಯಾಯವನ್ನು ಅರಸುತ್ತಿವೆ. ಈ ಎಲ್ಲಾ ಕಾರಣಗಳಿಂದ ವಿರೋಧದಿಂದ ಅಧಿಕಾರಕ್ಕೆ ಸುಲಭವಾಗಿ ನೆಗೆಯುವ ಬಿಜೆಪಿ ಚುನಾವಣೆಯ ಮೂಲಕ ರಾಜಕೀಯ ಅಧಿಕಾರ ಸಿಕ್ಕಾಗ ಅದನ್ನು ತನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಶಕ್ತಿಗಳನ್ನು ಸಾಂಸ್ಥಿಕವಾಗಿ ಹೆಚ್ಚಿಸಿಕೊಂಡು ಸಮಾಜದಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳುತ್ತಾ ಬಂದಿದೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ, ನ್ಯಾಯಾಂಗದಲ್ಲಿ ಮತ್ತು ಕಾರ್ಯಾಂಗದಲ್ಲಿ ತನ್ನ ಪ್ರಭಾವಲಯವನ್ನು ಬೆಂಬಲಿಗರನ್ನು ಬೆಳೆಸಿಕೊಂಡಿದೆ. ಹೀಗಾಗಿ ಆಗಾಗ ಬಿಜೆಪಿ ತಾತ್ಕಾಲಿಕವಾಗಿ ಅಧಿಕಾರಕ್ಕೆ ಬರದಿದ್ದರೂ ಅದರ ಅಜೆಂಡಾಗಳನ್ನೇ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಇತರ ಪಕ್ಷಗಳೂ ಜಾರಿಗೊಳಿಸುವಂಥ ಅನಿವಾರ್ಯತೆಯನ್ನು ನಿರ್ಮಾಣ ಮಾಡಿದೆ. ಹೆಜಿಮೊನಿ ಎಂದರೆ ಇದೇ ಅಲ್ಲವೇ?
ವಿರೋಧ ಪಕ್ಷವಾಗಿ ಬಿಜೆಪಿ ಇನ್ನಷ್ಟು ಆಕ್ರಮಣಕಾರಿ-ಅಪಾಯಕಾರಿ
ಅಧಿಕಾರ ಕಳೆದುಕೊಂಡು ವಿರೋಧ ಪಕ್ಷವಾಗಿದ್ದಾಗ ಬಿಜೆಪಿ-ಆರೆಸ್ಸೆಸ್ ತನ್ನ ಸಾಮಾಜಿಕ ಮತು ಸಾಂಸ್ಕೃತಿಕ ಶಕ್ತಿಯನ್ನು ಬಳಸಿಕೊಂಡು ಆಳುವ ಸರಕಾರದ ಬಗ್ಗೆ ಜನರಲ್ಲಿ ಸಹಜವಾಗಿ ಮೂಡುವ ಅಸಮಾಧಾನಗಳನ್ನು ಬಂಡವಾಳಶಾಹಿ-ಬ್ರಾಹ್ಮಣಶಾಹಿ ವಿರೋಧಿಯಾಗದಂತೆ ಹಿಂದುತ್ವವಾದಿ ಸಂವಿಧಾನ ವಿರೋಧಿಯಾಗಿ ಮರುರೂಪಿಸುತ್ತಾ ಬಂದಿದೆ. ಅದು ವಿರೋಧ ಪಕ್ಷವಾಗಿದ್ದಾಗಲೇ ಹೆಚ್ಚೆಚ್ಚು ಕೋಮು ಗಲಭೆಗಳನ್ನು ಹುಟ್ಟುಹಾಕಿದೆ. ವಿರೋಧ ಪಕ್ಷವಾಗಿದ್ದಾಗಲೇ ಆಡಳಿತಾರೂಢ ಅವಕಾಶವಾದಿ ಪಕ್ಷಗಳ ವಿರುದ್ಧ ಜನರಿಗಿರುವ ಅಸಮಾಧಾನಗಳನ್ನು ತನ್ನ ಫ್ಯಾಶಿಸ್ಟ್ ರಾಜಕಾರಣಕ್ಕೆ ಪೂರಕವಾಗಿ ದುಡಿಸಿಕೊಂಡಿದೆ. ಅದು ವಿರೋಧ ಪಕ್ಷವಾಗಿದ್ದಾಗಲೇ ದೇಶಾದ್ಯಂತ ತನ್ನ ಪ್ರಭಾವಲಯವನ್ನು ವಿಸ್ತರಿಸಿಕೊಳ್ಳುತ್ತಾ ಸಂವಿಧಾನ ವಿರೋಧಿ ಹಿಂದುತ್ವ ರಾಜಕಾರಣ ಮಾನ್ಯಗೊಳ್ಳುವಂತೆ ಮಾಡಿದೆ. ಆ ಮೂಲಕ ಕಳೆದುಹೋದ ರಾಜಕೀಯ ಶಕ್ತಿಯನ್ನು ಮತ್ತೆ ಪಡೆದುಕೊಳ್ಳುತ್ತದೆ. ಇದಕ್ಕೆ ಪ್ರಮುಖ ಕಾರಣ ವಿರೋಧ ಪಕ್ಷಗಳು ಕೂಡ ಸಾರದಲ್ಲಿ ಸಂವಿಧಾನ ವಿರೋಧಿಯಾದ ಮತ್ತು ಹಿಂದುತ್ವದ ಸಾರವಾದ ಉಗ್ರ ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ನೀತಿಗಳನ್ನೇ ಮಂದವಾಗಿ ಅನುಸರಿಸುತ್ತಾ ಬಂದಿರುವುದು.
ಹೀಗಾಗಿ ಒಟ್ಟಾರೆ ಪ್ರಧಾನಧಾರೆ ರಾಜಕಾರಣದಲ್ಲಿ ಮತ್ತು ರಾಜಕೀಯ ಪಕ್ಷಗಳು ಬ್ರಾಹ್ಮಣಶಾಹಿ-ಬಂಡವಾಳಶಾಹಿತ್ವದ ಉಗ್ರತೆಯನ್ನು ವಿರೋಧಿಸುತ್ತಿವೆಯೇ ವಿನಾ ಅದಕ್ಕೆ ಪರ್ಯಾಯವಾದ ಸಮಾಜವಾದಿ ಮತ್ತು ಸಮಾನತವಾದಿ ಸಾಂವಿಧಾನಿಕ ರಾಜಕಾರಣವನ್ನು ಮಾಡಲೇ ಇಲ್ಲ. ಈ ಧೋರಣೆಗಳೇ ರಾಜಕೀಯದಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಹಿಂದುತ್ವ ರಾಜಕಾರಣಕ್ಕೆ ಮಾನ್ಯತೆ ಕೊಟ್ಟಿದ್ದು ಮಾತ್ರವಲ್ಲದೆ ಪರೋಕ್ಷವಾಗಿ ಪೋಷಿಸುತ್ತಾ ಬಂದಿವೆ. 1991ರ ನಂತರದಲ್ಲಿ ಜಾರಿಯಾದ ಉದಾರೀಕರಣ-ಖಾಸಗೀಕರಣ- ಜಾಗತೀಕರಣ ಆರ್ಥಿಕ ನೀತಿಗಳ ಬಗ್ಗೆ, 1992ರಲ್ಲಿ ಹಿಂದುತ್ವವಾದಿಗಳು ಹಾಡಹಗಲಲ್ಲೇ ಬಾಬರಿ ಮಸೀದಿ ನಾಶ ಮಾಡಿದ ಜಾಗದಲ್ಲಿ 'ಭವ್ಯ ರಾಮಮಂದಿರ' ಕಟ್ಟುವ ಬಗ್ಗೆ, ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ನಾಶಮಾಡಿ ಮೇಲ್ಜಾತಿ ಬಲಾಢ್ಯರಿಗೆ ಕೊಟ್ಟಿರುವ ಇಡಬ್ಲುಎಸ್ ಮೀಸಲಾತಿಯ ಬಗ್ಗೆ ಮತ್ತು ಜನಹೋರಾಟಗಳನ್ನು ಭಯೋತ್ಪಾದನೆ ಎಂದು ಪರಿಗಣಿಸುವ ಯುಎಪಿಎ ಕಾಯ್ದೆಗಳ ಬಗ್ಗೆ ರಾಜಕೀಯ ಪಕ್ಷಗಳಲ್ಲಿ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ಕ್ರಮೇಣವಾಗಿ ಏರ್ಪಟ್ಟಿರುವ ಸರ್ವಸಮ್ಮತಿಗಳು ಹಿಂದುತ್ವದ ರಾಜಕಾರಣದ ಹೆಜಿಮೊನಿಯ ಕಣ್ಣಿಗೆ ರಾಚುವ ಕೆಲವು ಉದಾಹರಣೆಗಳು. ಬಿಜೆಪಿ ಅಧಿಕಾರಕ್ಕೆ ಬಂದರೂ, ಬರದಿದ್ದರೂ ಈ ರೀತಿಯಲ್ಲಿ ಸಂವಿಧಾನವನ್ನು ಕೆಡಹುವ ಕೆಲಸ ನಿರಾತಂಕವಾಗಿ ನಡೆಯುತ್ತಿದೆ. ಆದ್ದರಿಂದಲೇ ಬಿಜೆಪಿ ಚುನಾವಣೆಯಲ್ಲಿ ಸೋತು ತಾತ್ಕಾಲಿಕವಾಗಿ ವಿರೋಧ ಪಕ್ಷವಾಗಿ ಕೂತರೂ ಅದನ್ನು ಹಿಂದುತ್ವದ ಸೋಲೆಂದು ಮಾತ್ರವಲ್ಲ ಬಿಜೆಪಿಯ ಸೋಲೆಂದೂ ಕೂಡ ಭಾವಿಸಲು ಆಗುವುದಿಲ್ಲ. ಏಕೆಂದರೆ 1980ರ ನಂತರ ಬಿಜೆಪಿ ಕಾಂಗ್ರೆಸ್ನ ಮತ್ತು ಇತರ ಆಡಳಿತ ರೂಢ ಪಕ್ಷಗಳ ಮೃದು ಹಿಂದುತ್ವವಾದಿ ಹಾಗೂ ಆಡಳಿತವನ್ನು ಆಸರೆಯಾಗಿಸಿಕೊಂಡು, ಅವನ್ನು ಹಿಂದುತ್ವವಾದಿ ರಾಜಕಾರಣದ ಮೆಟ್ಟಿಲನ್ನಾಗಿ ಬಳಸಿಕೊಂಡು ಬೆಳೆಯುತ್ತಾ ಬಂದಿದೆ.
ನಗಣ್ಯವಾಗಿದ್ದ ಬಿಜೆಪಿಯನ್ನು ಮಾನ್ಯಗೊಳಿಸಿದ ಬಲ ಹಾಗೂ ನಡು ರಾಜಕಾರಣ
ಇತಿಹಾಸದ ಪಕ್ಷಿನೋಟ ಇದಕ್ಕೆ ಹಲವು ಪುರಾವೆಗಳನ್ನು ನೀಡುತ್ತದೆ. 1967-69ರಲ್ಲಿ ಸ್ವಾತಂತ್ರ್ಯಾ ನಂತರದಲ್ಲಿ ಸತತ ಇಪ್ಪತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರದ ಬಗೆಗಿನ ಭ್ರಮನಿರಸನವು ಎಡಶಕ್ತಿಗಳಿಗೆ ಮಾತ್ರವಲ್ಲದೆ ಎಲ್ಲಾ ಬಗೆಯ ಬಲಪಂಥೀಯ ಮತ್ತು ನಡುಪಂಥೀಯ ಶಕ್ತಿಗಳಿಗೂ ಕಸುವು ತುಂಬಿತು. ವಾಸ್ತವದಲ್ಲಿ 1969ರ ಚುನಾವಣೆಯಲ್ಲಿ 9 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು ಒಂದು ವಿದ್ಯಮಾನವಾದರೆ ಈಗಿನ ಬಿಜೆಪಿಯ ಮಾತೃ ಸಂಸ್ಥೆಯಾದ ಜನಸಂಘ ಉತ್ತರ ಪ್ರದೇಶದಂಥ ರಾಜ್ಯಗಳಲ್ಲಿ ಇತರ ಪಕ್ಷಗಳೊದನೆ ಅಧಿಕಾರಕ್ಕೂ ಬಂತು. ಇದೇ ಅಲೆಯಲ್ಲಿ ತೇಲುತ್ತಾ ಕರ್ನಾಟಕದಲ್ಲೂ ಜನಸಂಘ ಉಡುಪಿಯ ಪುರಸಭೆಯ ಅಧಿಕಾರವನ್ನು 1969ರಲ್ಲಿ ಪಡೆದುಕೊಂಡಿತು. 1969ರಲ್ಲಿ ಇಂದಿರಾಗಾಂಧಿ ಸರಕಾರ ಈಗಿನ ಕಾಂಗ್ರೆಸ್ಗಿಂತ ಹಲವಾರು ಪಟ್ಟು ಹೆಚ್ಚು ಪುರೋಗಾಮಿ ನೀತಿಗಳ ಭರವಸೆಯನ್ನು ನೀಡಿತ್ತು. 20 ಅಂಶಗಳ ಕಾರ್ಯಕ್ರಮ, ಭೂ ಸುಧಾರಣೆ, ಬ್ಯಾಂಕ್ ರಾಷ್ಟ್ರೀಕರಣ ಇತ್ಯಾದಿ. ಅದನ್ನು ನೋಡಿಯೇ ಆಗಿನ ಭಾರತ ಕಮ್ಯುನಿಸ್ಟ್ ಪಕ್ಷದ ಕುಮಾರ ಮಂಗಲಂ ಕಾಂಗ್ರೆಸ್ಗೆ ಬೇಷರತ್ ಬೆಂಬಲ ಕೊಡುವುದು ಮಾತ್ರವಲ್ಲ ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನವಾಗಿ ಕಾಂಗ್ರೆಸ್ನೊಳಗಿನ ಎಡಶಕ್ತಿಗಳನ್ನು ಗಟ್ಟಿಗೊಳಿಸಬೇಕು ಎಂಬ ಸಿದ್ಧಾಂತವನ್ನು ಮಂಡಿಸಿದ್ದರು. ಆದರೆ 1972ರ ಚುನಾವಣೆಯ ನಂತರ ಇಂದಿರಾ ಸರಕಾರ ಅನುಸರಿಸಿದ್ದು ಭಾರತದ ಬೃಹತ್ ಉದ್ದಿಮೆಪತಿ ಟಾಟಾ ನೀಡಿದ Memorandum ಅನ್ನೇ ಹೊರತು ಎಡ ಅಜೆಂಡಾಗಳನ್ನಲ್ಲ. ಮತ್ತೊಬ್ಬ ಉದ್ಯಮಪತಿ ಬಿರ್ಲಾ 1969ರ ಉದ್ಯಮಪತಿಗಳ ಸಮ್ಮೇಳನವೊಂದರಲ್ಲಿ ''ಇಂದಿರಾ ಗಾಂಧಿಯವರು ಎಷ್ಟೇ ಸಮಾಜವಾದಿ ಪದಪುಂಜಗಳನ್ನು ಬಳಸಿದರೂ, ಕಾಂಗ್ರೆಸ್ ಪಕ್ಷವೇ ಜನಸಂಘಕ್ಕಿಂತ, ಸ್ವತಂತ್ರ ಪಾರ್ಟಿಗಿಂತ ಎಡ ರಾಜಕೀಯದ ವಿರುದ್ಧವಾಗಿರುವವರು ಮತ್ತು ಉದ್ಯಮಪತಿಗಳ ಆಸಕ್ತಿಗಳ ಪರವಾಗಿರುವವರು ಎಂಬುದನ್ನು ಮರೆಯಬಾರದು'' ಎಂದು ಸ್ಪಷ್ಟಪಡಿಸಿದ್ದರು. ಆನಂತರದ ತುರ್ತುಸ್ಥಿತಿ ಎಲ್ಲರಿಗೂ ಗೊತ್ತಿರುವ ವಿಷಯ. 1980ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಇಂದಿರಾಗಾಂಧಿ ಹಿಂದಿನ ತನ್ನ ಎಲ್ಲಾ ಸಮಾಜವಾದಿ ಭಾಷೆಗಳನ್ನು ಸಂಪೂರ್ಣವಾಗಿ ತೊರೆದರು. ಹಾಗೆ ನೋಡಿದರೆ ''ಹಿಂದೂ ಮತ್ತು ದೇಶ ಆತಂಕದಲ್ಲಿದೆ, ಅದನ್ನು ಉಳಿಸಲು ಹಿಂದೂಪರ ಬಲಿಷ್ಠ ರಾಜಕೀಯ ನಾಯಕತ್ವ ಬೇಕಿದೆ'' ಎಂಬ ರಾಜಕೀಯವನ್ನು ಮೊದಲು ಕಾಶ್ಮೀರದಲ್ಲಿ ಹಾಗೂ ಪಂಜಾಬಿನಲ್ಲಿ ಸಾರ್ವಜನಿಕಗೊಳಿಸಿದ್ದೇ ಇಂದಿರಾ ಗಾಂಧಿಯವರು.
ಅದನ್ನು ಕಂಡು ಆರೆಸ್ಸೆಸ್ನ ಆಗಿನ ಸರಸಂಘಚಾಲಕ ಬಾಳಸಾಹೇಬ್ ದೇವರಸ್ ತಮ್ಮ ಹಿಂದೂ ಅಜೆಂಡಾವನ್ನು ಬಿಜೆಪಿಗಿಂತ ಕಾಂಗ್ರೆಸೇ ಚೆನ್ನಾಗಿ ಜಾರಿಗೆ ತರುತ್ತಿದೆಯೆಂದು 1984ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಪರೋಕ್ಷ ಬೆಂಬಲವನ್ನೂ ಘೋಷಿಸಿದ್ದರು. 1985ರಲ್ಲಿ ರಾಜೀವ್ ಗಾಂಧಿ ಬಾಬರಿ ಮಸೀದಿಯ ಬೀಗವನ್ನು ತೆಗೆದು ಅಧಿಕೃತವಾಗಿ ರಾಮಮಂದಿರ ರಾಜಕಾರಣವನ್ನು ಉದ್ಘಾಟಿಸಿಬಿಟ್ಟರು. 1985ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶೇ. 49ರಷ್ಟು ವೋಟುಗಳು ಬಿದ್ದಿದ್ದರೆ ಬಿಜೆಪಿಗೆ ಕೇವಲ ಶೇ. 7 ರಷ್ಟು ವೋಟುಗಳು ದಕ್ಕಿದ್ದವು. ಆದರೆ ಆನಂತರ ಬಿಜೆಪಿ ರಾಮಮಂದಿರ ರಾಜಕಾರಣವನ್ನು ಮೆಟ್ಟಿಲಾಗಿ ಮಾಡಿಕೊಂಡು ಸಮಾಜವನ್ನು ಮತೀಯವಾಗಿ ಧ್ರುವೀಕರಿಸಿಬಿಟ್ಟಿತು. ಇದಕ್ಕೆ ಕಾಂಗ್ರೆಸ್ನ ಮತ್ತು ಆನಂತರದ ಇತರ ಮಧ್ಯಮಮಾರ್ಗಿ ವಿರೋಧ ಪಕ್ಷಗಳ ರಾಜಿಕೋರ ಅವಕಾಶವಾದಿ ನೀತಿಗಳು ಅವಕಾಶ ಮಾಡಿಕೊಟ್ಟವು. 1991ರ ನಂತರ ಕಾಂಗ್ರೆಸ್ ನೇತೃತ್ವದಲ್ಲೇ, ಇತರ ಎಲ್ಲಾ ಪಕ್ಷಗಳ ಸಮ್ಮತಿಯೊಂದಿಗೆ ಜಾರಿಯಾದ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಹಾಗೂ ಕಾರ್ಪೊರೇಟ್ ಪರ ಆರ್ಥಿಕ ವ್ಯವಸ್ಥೆ ಜನರನ್ನು ಮತ್ತಷ್ಟು ಅಸಹಾಯಕರನ್ನಾಗಿಸಿತು ಮತ್ತು ಅನಾಥರನ್ನಾಗಿಸಿತು.
ಬಂಡವಾಳಶಾಹಿಗಳನ್ನು ಮತ್ತು ಬ್ರಾಹ್ಮಣಶಾಹಿಗಳನ್ನು ಬಲಿಷ್ಠಗೊಳಿಸಿತು. ಈ ಅತಂತ್ರದ ಪರಿಸ್ಥಿತಿಯಲ್ಲಿ ಬ್ರಾಹ್ಮಣಶಾಹಿ ಹಾಗೂ ಬಂಡವಾಳಶಾಹಿಯ ವಿರುದ್ಧ ಸಮರಶೀಲ ಹೋರಾಟ ಕಟ್ಟುತ್ತಾ ಜನರಲ್ಲಿ ವಿಶ್ವಾಸ ಮತ್ತು ಭರವಸೆ ಮೂಡಿಸಬೇಕಿದ್ದ ಸಮತಾವಾದಿ ಶಕ್ತಿಗಳು ಒಂದೋ ಸಮರಶೀಲ ಹೋರಾಟಕ್ಕೆ ಮುಂದಾಗದೆ ಅಪ್ರಸ್ತುತಗೊಳ್ಳುತ್ತಾ, ಅಮಾನ್ಯಗೊಳ್ಳುತ್ತಾ ಹೋದವು ಅಥವಾ ಚುನಾವಣಾ ರಾಜಕಾರಣದ ರಾಜಿ-ಕಬೂಲಿಗಳಿಗೆ ಪಕ್ಕಾಗುತ್ತಾ ಅವಕಾಶವಾದಿಗಳಾಗಿ ಯಥಾಸ್ಥಿತಿವಾದಿಗಳಾಗಿಬಿಟ್ಟವು. ಪ್ರತಿರೋಧ ಪಾಳಯದಲ್ಲಿದ್ದ ಈ ಶೂನ್ಯವನ್ನು ಸಂಘಪರಿವಾರ ತನ್ನ ದ್ವೇಷ ರಾಜಕಾರಣದ ಮೂಲ ತುಂಬಿತು. ದೇಶವನ್ನು ಸಂಪೂರ್ಣವಾಗಿ ದಾರಿ ತಪ್ಪಿಸಿತು. ಹಿಂದೂ ಮತ್ತು ದೇಶ ಆತಂಕದಲ್ಲಿದೆ ಎಂಬ ಇಂದಿರಾಗಾಂಧಿಯವರ ಮೃದು ಹಿಂದುತ್ವವಾದಿ ರಾಜಕಾರಣವನ್ನು ಮೊದಲು ವಾಜಪೇಯಿ ಮತ್ತು ಅಡ್ವಾಣಿ ಮತ್ತು ಆನಂತರ ನರೇಂದ್ರ ಮೋದಿ- ಆದಿತ್ಯನಾಥ್ ಉಗ್ರ ಹಿಂದೂ ರಾಷ್ಟ್ರ ರಾಜಕಾರಣವನ್ನಾಗಿ ಬೆಳೆಸಿಬಿಟ್ಟರು. ಹೀಗಾಗಿ ಮೂವತ್ತು ವರ್ಷಗಳ ನಂತರ ಶೇ. 49ರಷ್ಟು ವೋಟುಗಳನ್ನು ಪಡೆದಿದ್ದ ಕಾಂಗ್ರೆಸ್ 2019ರ ಚುನಾವಣೆಯಲ್ಲಿ ಶೇ. 19ರಷ್ಟು ಮತಬೆಂಬಲವನ್ನು ಮಾತ್ರ ಪಡೆದುಕೊಂಡರೆ, 1985ರಲ್ಲಿ ಕೇವಲ ಶೇ.7ರಷ್ಟು ಮತಗಳನ್ನು ಮಾತ್ರ ಪಡೆದುಕೊಂಡಿದ್ದ ಬಿಜೆಪಿ 2019ರಲ್ಲಿ ಶೇ. 37ರಷ್ಟು ಮತಗಳನ್ನು ಪಡೆದುಕೊಂಡಿತು. ಕರ್ನಾಟಕದಲ್ಲಿ 1989ರಲ್ಲಿ ಕಾಂಗ್ರೆಸ್ಗೆ ಶೇ. 43.78ರಷ್ಟು ಮತಗಳು ಮತ್ತು 178 ಸೀಟುಗಳು ದಕ್ಕಿದ್ದವು.
ಬಿಜೆಪಿ ಕೇವಲ ಶೇ. 4.4ರಷ್ಟು ಮತಗಳನ್ನು ಮತ್ತು 4 ಸೀಟುಗಳನ್ನು ಪಡೆದುಕೊಂಡಿತ್ತು. ಈ ಚುನಾವಣೆಯಲ್ಲೂ ಕೇವಲ 66 ಸೀಟುಗಳನ್ನು ಪಡೆದುಕೊಂಡಿದ್ದರೂ ಶೇ.36ರಷ್ಟು ವೋಟು ಶೇರುಗಳನ್ನು ಗಟ್ಟಿಮಾಡಿಕೊಂಡಿದೆ. ಹಾಗೂ 1989-94, 94-99, 99-2004, 2004-2006ರ ಅವಧಿಗಳಲ್ಲಿ ವಿರೋಧ ಪಕ್ಷವಾಗಿ ಇಡೀ ಕರ್ನಾಟಕದಲ್ಲಿ ಹಿಂದೆಂದೂ ಇಲ್ಲದಷ್ಟು ಮತೀಯ ಧ್ರುವೀಕರಣವನ್ನು ಮಾಡಿಬಿಟ್ಟಿತು. ಅದನ್ನು ಅಧಿಕಾರದಲ್ಲಿದ್ದ ಯಾವ ಪಕ್ಷಗಳೂ ಸಮರ್ಥವಾಗಿ ಹಿಮ್ಮೆಟಿಸಲಿಲ್ಲ. ಬಾಬಾಬುಡಾನ್ ದರ್ಗಾದಂಥ ವಿಷಯಗಳಲ್ಲಿ ಕಾಂಗ್ರೆಸ್ನ ಮಂತ್ರಿಗಳೇ ಹಿಂದುತ್ವವಾದಿ ದತ್ತಪೀಠ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಅದಕ್ಕೆ ಮಾನ್ಯತೆ ತಂದುಕೊಟ್ಟರು. ಕರಾವಳಿಯಂತೂ ಕಾಂಗ್ರೆಸ್ನ ಕಾಲದಲ್ಲೂ ಅನಧಿಕೃತವಾಗಿ ಕಲ್ಲಡ್ಕ ರಿಪಬ್ಲಿಕ್ ಆಗಿಯೇ ಮುಂದುವರಿದಿತ್ತು. 2008-13, 2019-23ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಆರೆಸ್ಸೆಸ್ನ ಶಾಖಾ ಕಚೇರಿಯಾಗಿ ಕೆಲಸ ಮಾಡಿತು. 2013-18ರ ನಡುವೆ ವಿರೋಧ ಪಕ್ಷವಾಗಿ ಅತಿ ಹೆಚ್ಚು ಕೋಮು ಗಲಭೆಗಳನ್ನು ಹುಟ್ಟುಹಾಕಿದ್ದು ಮಾತ್ರವಲ್ಲದೆ ಕಾಂಗ್ರೆಸ್ನ ಹಯಾಮಿನಲ್ಲೂ ಹಲವಾರು ಸರಕಾರಿ ಸಂಸ್ಥೆಗಳನ್ನು ಅಧಿಕೃತವಾಗಿ ಕೇಸರೀಕರಿಸಿಬಿಟ್ಟಿತು. ಹೀಗಾಗಿ ಅತ್ಯಂತ ಹೀನಾಯವಾಗಿ ಸೋತರೂ ಅದಕ್ಕೀಗ ಶೇ. 36ರಷ್ಟು ವೋಟು ಶೇರು ಅಥವಾ ಸಾಮಾಜಿಕ ಶಕ್ತಿ ಇದೆ. ಇದು ವಿರೋಧಪಕ್ಷವನ್ನಾಗಿಯೂ ಬಿಜೆಪಿಯನ್ನು ಅಪ್ರಸ್ತುತಗೊಳಿಸದಿದ್ದರೆ ಅಗುವ ಅಪಾಯ.
ಎಡಗೈಯಲ್ಲಿ ಗ್ಯಾರಂಟಿಯ ಮುಲಾಮು, ಬಲಗೈಯಲ್ಲಿ ಕಾರ್ಪೊರೇಟ್ ಕತ್ತಿ?
ಈ ಚುನಾವಣೆಯಲ್ಲಿ ಬಿಜೆಪಿಯ ಹಿಂದುತ್ವದ ನೀತಿ, ದ್ವೇಷ ರಾಜಕಾರಣ, ಕಾರ್ಪೊರೇಟ್ ಪರ ನೀತಿ, ಭ್ರಷ್ಟಾಚಾರ ಇತ್ಯಾದಿಗಳಿಂದ ಜನರಲ್ಲಿ ಉಂಟಾಗಿದ್ದ ಅಸಮಾಧಾನ ಹಾಗೂ ಕಾಂಗ್ರೆಸ್ ನೀಡಿದ ಭರವಸೆಗಳ ಗ್ಯಾರಂಟಿಗಳು, ದಮನಿತ ಸಮುದಾಯಗಳು ಅತ್ಯಂತ ವಿವೇಕಯುತವಾಗಿ ಮಾಡಿದ ಮತದಾನ ಈ ಎಲ್ಲಾ ಕಾರಣದಿಂದ ಬಿಜೆಪಿಯ ಸೀಟು ಶಕ್ತಿ ಕುಸಿದು ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ನ ಗ್ಯಾರಂಟಿಗಳು ಒಂದೊಂದಾಗಿ ಜಾರಿಯಾಗುತ್ತಿರುವುದರಿಂದ ಸದ್ಯಕ್ಕೆ ಬಿಜೆಪಿ ಸಮಯ ಕಾಯುತ್ತಿದೆ. ಗ್ಯಾರಂಟಿಗಳು ಅರ್ಥಾತ್ ಜನಕಲ್ಯಾಣ ಕಾರ್ಯಕ್ರಮಗಳು ಜನಕಲ್ಯಾಣ ಪ್ರಜಾತಂತ್ರದ ಭಾಗ. ಸಂವಿಧಾನದಲ್ಲಿ ನೀಡಿರುವ ಭರವಸೆಗಳ ಈಡೇರಿಕೆಯ ಹೆಜ್ಜೆ ಮತ್ತು ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ದುರ್ಬಲ ಸಮುದಾಯಗಳನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲೀಕರಿಸುವ ಹೆಜ್ಜೆಗಳೆಂಬುದರಲ್ಲಿ ಸಂಶಯವಿಲ್ಲ. ಹಾಗೆ ನೋಡಿದರೆ ಯಶಸ್ವಿ ಪ್ರಜಾಪ್ರಭುತ್ವಗಳಾದ ನಾರ್ವೆ, ಸ್ವೀಡನ್, ಪಶ್ಚಿಮ ಯುರೋಪಿನ ಬಹುಪಾಲು ದೇಶಗಳು, ಈ ಹಿಂದಿನ ಸಮಾಜವಾದಿ ದೇಶಗಳಲ್ಲೂ ಪ್ರಭುತ್ವವೇ ಜನರ ಶಿಕ್ಷಣ, ಆರೋಗ್ಯ, ವಸತಿ ಮತ್ತಿತರ ಎಲ್ಲಾ ವೆಚ್ಚಗಳನ್ನು ವಹಿಸಿಕೊಂಡಿದ್ದವು. ಅದನ್ನು ಜನಸಂಪನ್ಮೂಲದ ಮೇಲೆ ಮಾಡಿರುವ ಬಂಡವಾಳ ಹೂಡಿಕೆಯೆಂದೇ ಭಾವಿಸಿದ್ದವು. ಅದಕ್ಕೆ ಹೋಲಿಸಿದಲ್ಲಿ ಈ ಗ್ಯಾರಂಟಿಗಳು ಏನೂ ಇಲ್ಲ. ಹೀಗಾಗಿ ಗ್ಯಾರಂಟಿಗಳಿಂದ ಆರ್ಥಿಕ ವಿನಾಶ ಎಂದೆಲ್ಲಾ ಬೊಬ್ಬೆ ಹೊಡ�