ಯುವಜನತೆ ದೇಶ ಬೆಳೆಸುವುದರ ಬಗ್ಗೆ ಚಿಂತಿಸುವುದು ಅಗತ್ಯ: ಸಚಿವ ಶೋಭಾ ಕರಂದ್ಲಾಜೆ
ಉಡುಪಿ ಜಿಲ್ಲಾ ಮಟ್ಟದ ಯುವ ಉತ್ಸವ ಉದ್ಘಾಟನೆ
ಉಡುಪಿ, ಜೂ.14: ಮುಂದಿನ 25 ವರ್ಷಗಳಲ್ಲಿ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಯುವಜನತೆ ತಮ್ಮ ವ್ಯವಹಾರ, ಉದ್ಯೋಗದಿಂದ ತಾವು ಬೆಳೆಯುವುದರ ಜೊತೆಗೆ ದೇಶವನ್ನು ಬೆಳೆ ಸುವ ಯೋಚನೆ ಮಾಡಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ನೆಹರು ಯುವ ಕೇಂದ್ರ ಉಡುಪಿ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಉಡುಪಿ ಪೂರ್ಣಪ್ರಜ್ಞ ಕಾಲೇಜು, ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಸಹಯೋಗದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಆಡಿಟೋರಿಯಂನಲ್ಲಿ ಬುಧವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಯುವ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮೊದಲು ಬಡವರ, ಭಿಕ್ಷಕರ, ಹಾವಾಡಿಗರ ದೇಶ ಎಂದು ಭಾರತವನ್ನು ವಿದೇಶಿಗರು ಕರೆಯುತ್ತಿದ್ದರು. ನಮ್ಮ ದೇಶದ ಪ್ರಧಾನಿಗೆ ಯಾವುದೇ ರೀತಿ ಗೌರವ ವಿದೇಶದಲ್ಲಿ ಸಿಗುತ್ತಿರಲಿಲ್ಲ. ಅಂತಹ ದೇಶವನ್ನು ಕಳೆದ 9 ವರ್ಷ ಗಳಲ್ಲಿ ಇಡೀ ಜಗತ್ತಿನಲ್ಲಿಯೇ ಭಾರತವನ್ನು ಗೌರವಯುತ ಸ್ಥಾನದಲ್ಲಿ ತಂದು ನಿಲ್ಲಿಸಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ. ಮುಂದಿನವ 3-4 ವರ್ಷಗಳಲ್ಲಿ ಆರ್ಥಿಕವಾಗಿ ಗಟ್ಟಿಯಾಗಿರುವ ದೇಶಗಳ ಪೈಕಿ ಭಾರತವನ್ನು ಮೂರನವೇ ಸ್ಥಾನಕ್ಕೆ ತರುವ ಸಂಕಲ್ಪ ನಮ್ಮದಾಗಿದೆ ಎಂದರು.
ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಉಡುಪಿ ಜಿಲ್ಲಾ ನೆಹರು ಯುವ ಕೇಂದ್ರದ ಅಧಿಕಾರಿಗಳಾದ ಯಶ್ವಂತ್ ಯಾದವ್ ಉಪಸ್ಥಿತರಿದ್ದರು.
ನೆಹರು ಯುವ ಕೇಂದ್ರ ದಕ್ಷಿಣ ವಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ. ಸ್ವಾಗತಿಸಿದರು. ಡಾ.ಜಿ ಶಂಕರ್ ಸರಕಾರಿ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ವಂದಿಸಿದರು. ಉಪನ್ಯಾಸಕ ಸಂದೀಪ್ ಕಾರ್ಯಕ್ರಮ ನಿರೂಪಿಸಿದರು.
‘2014ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಯುವ ನೀತಿ ಪ್ರಕಾರ 15-29 ವಯಸ್ಸಿನವರು ಯುವ ಸಮುದಾಯ ವಾಗಿದೆ. ಈ ಪ್ರಾಯದ ಯುವಜನತೆಯ ಜನಸಂಖ್ಯೆ ದೇಶದಲ್ಲಿ ಪ್ರಸ್ತುತ 45ಕೋಟಿ ದಾಟಿದೆ. ಸ್ವಾತಂತ್ರ್ಯ ದೊರೆತ 75ವರ್ಷಗಳ ಹಿಂದೆ ದೇಶದ ಒಟ್ಟಾರೆ ಜನಸಂಖ್ಯೆಗಿಂತ ಹೆಚ್ಚಿನ ಜನಸಂಖ್ಯೆ ಯುವಜನತೆಯದ್ದಾಗಿದೆ. ಈ ಯುವಶಕ್ತಿಯನ್ನು ದೇಶದ ಅಭಿವೃದ್ಧಿಗಾಗಿ ನಾವು ಬಳಸಿಕೊಳ್ಳಬೇಕಾಗಿದೆ’
-ಎಂ.ಎನ್.ನಟರಾಜ್, ಪ್ರಾದೇಶಿಕ ನಿರ್ದೇಶಕರು,
ದಕ್ಷಿಣ ವಲಯ, ನೆಹರು ಯುವ ಕೇಂದ್ರ