ವಂಚನೆ ಆರೋಪ; ಪ್ರಶಾಂತ್ ಸಂಬರಗಿ ವಿರುದ್ಧ ಎಫ್‍ಐಆರ್ ದಾಖಲು
ಬೆಂಗಳೂರು, ಜೂ.14: ಸುಳ್ಳು ದೂರನ್ನು ಸಲ್ಲಿಸಿ ವಂಚನೆ ಎಸಗಿರುವ ಆರೋಪದ ಮೇಲೆ ಪ್ರಶಾಂತ್ ಸಂಬರಗಿ ಎಂಬಾತನ ವಿರುದ್ಧ ಇಲ್ಲಿನ ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಅಡಿ ಎಫ್‍ಐಆರ್ ದಾಖಲಾಗಿದೆ.
ಉದ್ಯಮಿ ದೇವನಾಥ್ ವೈ.ಕೆ.ಎಂಬುವರು ನೀಡಿದ ದೂರಿನ್ವಯ ಪ್ರಶಾಂತ್ ಸಂಬರ್ಗಿ ವಿರುದ್ಧ ಐಪಿಸಿ ಸೆಕ್ಷನ್ 420 ಅಡಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
2017ರ ಜುಲೈನಲ್ಲಿ ದೇವನಾಥ್ ವೈ.ಕೆ. ಅವರಿಗೆ ಹಣದ ಅವಶ್ಯಕತೆ ಇದ್ದ ಕಾರಣ ಪ್ರಶಾಂತ್ ಸಂಬರಗಿಯಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದರು. ಈ ವೇಳೆ ಉತ್ತರಹಳ್ಳಿಯ ಸಿಂಹಾದ್ರಿಲೇಔಟ್‍ನಲ್ಲಿರುವ ಮನೆಯ ಅಸಲಿ ದಾಖಲೆಗಳನ್ನು, ಖಾಲಿ ಚೆಕ್‍ಗಳನ್ನು ಹಾಗೂ ಖಾಲಿ ಹಾಳೆಗಳಿಗೆ ಸಹಿಯನ್ನು ಹಾಕಿ ಶ್ಯೂರಿಟಿ ನೀಡಿದ್ದರು ಎನ್ನಲಾಗಿದೆ.
ಬಳಿಕ 2017 ಡಿಸೆಂಬರ್ ನಲ್ಲಿ ಅಷ್ಟೂ ಹಣವನ್ನು ವಾಪಸ್ ನೀಡಿದ್ದರೂ ಹೆಚ್ಚಿನ ಬಡ್ಡಿ ಹಣವನ್ನು ನೀಡಬೇಕೆಂದು ಮನೆಯ ಅಸಲಿ ದಾಖಲೆ ನೀಡದೆ ಪ್ರಶಾಂತ್ ಸಂಬರಗಿ ವಿವಿಧ ಠಾಣೆಗಳಲ್ಲಿ ತನ್ನ ವಿರುದ್ಧ ಸುಳ್ಳು ದೂರನ್ನು ಸಲ್ಲಿಸಿದ್ದಾರೆ ಎಂದು ದೇವನಾಥ್ ದೂರಿನಲ್ಲಿ ಆಪಾದಿಸಿದ್ದಾರೆ.
ಸದ್ಯ ಈ ದೂರಿನ ಅನ್ವಯ ಹಲಸೂರ್ ಗೇಟ್ ಪೊಲೀಸರು ಪ್ರಶಾಂತ್ ಸಂಬರಗಿ ವಿರುದ್ಧ ಐಪಿಸಿ 420ರ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.