ಗ್ಯಾರಂಟಿ ಯೋಜನೆಗಳ ಅಧ್ಯಯನವಾಗಲಿ
ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ಬರುತ್ತಿರುವ ಟೀಕೆಗಳನ್ನು ರಾಜ್ಯದ ಬೌದ್ಧಿಕ ವರ್ಗ, ಬಡ-ದುರ್ಬಲ-ಶೋಷಿತ ವರ್ಗದ ಪರ ತುಡಿತವಿರುವ ಮನಸ್ಸುಗಳು ವಿವಿಧ ವೇದಿಕೆಗಳಲ್ಲಿ ಉತ್ತಮವಾಗಿ ಎದುರಿಸುತ್ತಿವೆ. (ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗಿಂತಲೂ ಉತ್ತಮವಾಗಿ ಎನ್ನುವುದೇ ವಿಶೇಷ!). ರಾಜ್ಯದಲ್ಲಿನ ಸ್ವಘೋಷಿತ ಅರ್ಥಶಾಸ್ತ್ರಜ್ಞರಿಂದಾಗಿ ದುರ್ಬಲ ವರ್ಗಗಳ ಒಳಿತಿಗಾಗಿ ಯಾವುದೇ ಯೋಜನೆಗಳು ಜಾರಿಗೆ ತಂದರೂ ಅವುಗಳನ್ನು ವಿರೋಧಿಸುವ, ಟೀಕಿಸುವ, ವ್ಯಂಗವಾಡುವ, ಕುಹಕವಾಡುವ ಒಂದು ದೊಡ್ಡ ಜನಸಮೂಹವು ಭೂಸುಧಾರಣೆಯ ಕಾಲದಿಂದಲೂ ಸಮಾಜದಲ್ಲಿ ಬೇರೂರಿದೆ. ಉದ್ಯೋಗ ಖಾತ್ರಿಯಂತಹ ಯೋಜನೆಗೂ ಈ ಸ್ವಘೋಷಿತ ಅರ್ಥಶಾಸ್ತ್ರಜ್ಞರು 'ಉಚಿತ' ಎಂಬ ಹಣೆಪಟ್ಟಿ ನೀಡಿ ಕುಹಕವಾಡಿದ್ದು ನೋಡಿದ್ದೇವೆ. ಇಂದು ಅದೇ ಯೋಜನೆಯು ಕೋವಿಡ್ ಸಂದರ್ಭದಲ್ಲಿ ಗ್ರಾಮೀಣ ಭಾರತದ ಜೀವನಾಡಿಯಾಗಿ ಆ ಎಲ್ಲಾ ಲಾಭಬಡುಕರ ಬಾಯಿಗೆ ಬೀಗಜಡಿದಿದೆ.
ಜನಕಲ್ಯಾಣದ ಯೋಜನೆಗಳನ್ನು ಮುಖ್ಯವಾಹಿನಿ ಚರ್ಚೆಗಳಲ್ಲಿ ಟೀಕಿಸಲು ಎಂದಿಗೂ ತಯಾರಿರುವ ಬಲಿತ ವರ್ಗದ ವಾದಗಳಿಗೆ ಅದೇ ಯೋಜನೆಗಳ ಪ್ರಯೋಜನ ಪಡೆಯುವ ದೊಡ್ಡ ಸಂಖ್ಯೆಯ ಫಲಾನುಭವಿಗಳು ಶೋಷಿತರು, ದುರ್ಬಲರು, ಧ್ವನಿಯಿಲ್ಲದವರು ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಗಳಾಗಿರುವವರಿಂದ ತಕ್ಕ ಉತ್ತರ ನೀಡಲು ಮುಂದೆ ಬರುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯದ ಶಿಕ್ಷಿತ ವರ್ಗವು ಶೋಷಿತರ ಪರವಿರಬೇಕು, ದುರ್ಬಲರಿಗೆ ಬಲ ತುಂಬಬೇಕು, ಧ್ವನಿಯಿಲ್ಲದವರ ಧ್ವನಿಯಾಗಬೇಕು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವಲ್ಲಿ ಕೈಜೋಡಿಸಬೇಕು. ಇಲ್ಲದಿದ್ದಲ್ಲಿ ನಾವು ಪಡೆದ ಶಿಕ್ಷಣಕ್ಕೆ ಅರ್ಥವೇ ಇರುವುದಿಲ್ಲ. ಅರ್ಥಶಾಸ್ತ್ರವನ್ನು ಓದಿರುವ-ತಿಳಿದಿರುವ ರಾಜ್ಯದ ಬೌದ್ಧಿಕ ವರ್ಗವು ಗ್ಯಾರಂಟಿ ಯೋಜನೆಗಳ ಕುರಿತ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲೇಬೇಕಾದ ಅವಶ್ಯಕತೆಯಿದೆ. ವಿಶೇಷವಾಗಿ ರಾಜ್ಯದ ಪದವಿ ಕಾಲೇಜುಗಳಲ್ಲಿ, ವಿವಿಗಳಲ್ಲಿ ಇಂತಹ ವಿಚಾರಗಳ ಕುರಿತು ಶೈಕ್ಷಣಿಕ ಚೌಕಟ್ಟಿನಲ್ಲಿ ಪರ-ವಿರೋಧದ ಚರ್ಚೆಗಳಾಗಬೇಕು. ಇಲ್ಲದಿದ್ದಲ್ಲಿ ಜನರ ಬೆವರಿನ ತೆರಿಗೆ ಹಣದಲ್ಲಿ ಸಂಬಳ ಪಡೆದು ಅದೇ ಜನರ ಒಳಿತು ಕೆಡಕುಗಳ ಕುರಿತು ಚಿಂತನೆ-ಚರ್ಚೆಗಳು ನಡೆಯುತ್ತಿರುವಾಗ ಮೂಕಪ್ರೇಕ್ಷಕರಾಗಿ ಕುಳಿತರೆ ವೃತ್ತಿಗೆ ಮಾತ್ರವಲ್ಲ ನಾವು ಪಡೆದ ಪದವಿಗಳಿಗೂ ನ್ಯಾಯ ದೊರಕಿಸಿಕೊಟ್ಟಂತಾಗುವುದಿಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆಗಳ ಪರ-ವಿರೋಧದ ಕುರಿತು ಚರ್ಚೆಯಾಗುವುದು ತುಂಬಾ ಮುಖ್ಯ. ಹೀಗಿದ್ದಾಗಿಯೂ ನಾವು ಎಷ್ಟೇ ಚರ್ಚಿಸಿದರೂ ಗ್ಯಾರಂಟಿಗಳ ಜೀವಮಾನ ವಿರೋಧಿಗಳ ವಿತಂಡವಾದಗಳಿಗೆ ತಾರ್ಕಿಕ ಅಂತ್ಯ ಹಾಡುವುದು ಕಷ್ಟಕರ. ಇಂತಹ ಯಾವುದೇ ಚರ್ಚೆಗಳು ತಾರ್ಕಿಕ ಅಂತ್ಯ ಕಾಣಬೇಕಾದರೆ ಸರಿಯಾದ ಅಂಕಿಅಂಶಗಳ ಅವಶ್ಯಕತೆಯು ತುಂಬಾ ಮಹತ್ವವಾಗಿರುತ್ತದೆ. ಇಲ್ಲದಿದ್ದರೆ ಈ ಬಲಿತ ವರ್ಗದ ವಿತಂಡವಾದಿಗಳು ಚರ್ಚೆಯನ್ನು ವೆನೆಝುವೆಲಾಕ್ಕೋ ಅಥವಾ ಶ್ರೀಲಂಕಾಕ್ಕೋ ಎಳೆದೊಯ್ದು ನಿಲ್ಲಿಸುತ್ತಾರೆೆ.
ಗ್ಯಾರಂಟಿ ರೀತಿಯ ಯೋಜನೆಗಳನ್ನು ಸೈದ್ಧಾಂತಿಕವಾಗಿ ಹಾಗೂ ಪ್ರಾಯೋಗಿಕವಾಗಿ ಬೆಂಬಲಿಸಲು ಅಥವಾ ವಿರೋಧಿಸಲು ಬಹಳಷ್ಟು ಅಧ್ಯಯನಗಳು ಈಗಾಗಲೇ ಇವೆ. ಆದರೆ ಕರ್ನಾಟಕದ ಮಟ್ಟಕ್ಕೆ ಇಷ್ಟೊಂದು ದೊಡ್ಡ ಮಟ್ಟಕ್ಕೆ ಒಂದೇ ಬಾರಿ ಜಾರಿಯಾಗುತ್ತಿರುವ ಇಂತಹ ಯೋಜನೆಗಳು ಇದೇ ಮೊದಲು. ಹೀಗಾಗಿ ಈ ಯೋಜನೆಗಳ ಉಪಯೋಗದ ಪರಿಣಾಮಗಳ ಅಧ್ಯಯನ ಮುಂದಿನ ವಿಧಾನಸಭೆ ಚುನಾವಣೆಯ ಹೊತ್ತಿನಲ್ಲಿ ಅತೀ ಮಹತ್ವದ ಪಾತ್ರವಹಿಸಲಿದೆ. ಇಲ್ಲದಿದ್ದಲ್ಲಿ ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆಯಾಗಿ ರಾಜ್ಯವನ್ನು ದಿವಾಳಿ ಮಾಡಿವೆ ಎಂಬ ಪ್ರೊಪಗಾಂಡಗಳು ಬೃಹತ್ತಾಗಿ ಬೆಳೆಯುವುದರಲ್ಲಿ ಸಂಶಯವೇ ಇಲ್ಲ. ಈ ನಿಟ್ಟಿನಲ್ಲಿ ಸರಕಾರವು ಕೂಡಲೇ ಸಮೀಕ್ಷೆ ಅಥವಾ ಅಧ್ಯಯನಗಳನ್ನು ಕೈಗೊಂಡು ಗ್ಯಾರಂಟಿಗಳಿಗೆ ಅರ್ಹವಿರುವ ಸಮುದಾಯಗಳ ಇಂದಿನ ಸಾಮಾಜಿಕ-ಆರ್ಥಿಕ ಸ್ಥಿತಿಗತಿಯ (ವಿಶೇಷವಾಗಿ ಆದಾಯದ ಮಟ್ಟ, ಖರ್ಚುಗಳ ಸಂರಚನೆ ಹಾಗೂ ಉಳಿತಾಯದ) ಅಂಕಿಅಂಶಗಳನ್ನು ಸಂಗ್ರಹಿಸಿ ಪ್ರತೀ ವರ್ಷ ಅಥವಾ ಮುಂದಿನ ವಿಧಾನಸಭೆಯ ಚುನಾವಣೆಗಿಂತ ಮುಂಚೆ ಇದೇ ರೀತಿಯ ಮತ್ತೊಂದು ಸಮೀಕ್ಷೆ ಅಥವಾ ಅಧ್ಯಯನವನ್ನು ಕೈಗೊಳ್ಳಬೇಕು.
ಯೋಜನೆಗಳ ಜಾರಿಯ ಮುಂಚೆ ಹಾಗೂ ನಂತರದ ಆರ್ಥಿಕ ಸ್ಥಿತಿಗತಿಗಳ ತುಲನಾತ್ಮಕ ಅಧ್ಯಯನವನ್ನು ಕೈಗೊಂಡು ಈ ರೀತಿಯ ಯೋಜನೆಗಳು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪೂರಕವೇ ಅಥವಾ ಮಾರಕವೇ ಎಂಬುದಕ್ಕೆ ಸ್ಪಷ್ಟವಾದ ಉತ್ತರವನ್ನು ಪಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ದೇಶಕ್ಕೆ ಭೂಸುಧಾರಣೆ, ಉದ್ಯೋಗ ಖಾತ್ರಿ, ರೈಟ್ ಟು ಎಜುಕೇಷನ್, ರೈಟ್ ಟು ಫುಡ್ನಂತಹ ಶೋಷಿತ ವರ್ಗದ ಹಣೆಬರಹವನ್ನೇ ಬದಲಾಯಿಸುವ ಕಲ್ಯಾಣ ಕಾರ್ಯಕ್ರಮಗಳನ್ನು ನೀಡಿಯೂ ಇಮೇಜ್ ಮೇಕಿಂಗ್, ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಎಡವಿ ಮುಂದೆಯೂ ಹೀಗೆಯೇ ಮುಂದುವರಿದರೆ ಎಂತಹ ಉತ್ತಮ ಯೋಜನೆಗಳನ್ನು ತಂದರೂ ಅವುಗಳ ಪರವಾದ ನರೇಟಿವ್ ಸೃಷ್ಟಿಸುವುದರಲ್ಲಿ ಎಡವಿ 'ಕೈ'ಸುಟ್ಟುಕೊಳ್ಳುವುದು ಗ್ಯಾರಂಟಿ!