ಸರಕಾರಿ ಕಚೇರಿಗಳಿಗೆ ಏಕರೂಪದ ಬಣ್ಣವಿರಲಿ
ಮಾನ್ಯರೇ,
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಪಕ್ಷದವರು ಸರಕಾರಿ ಕಚೇರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಡಳಿತ ಕಚೇರಿಯ ಕಟ್ಟಡಗಳಿಗೆ ತಮ್ಮ ಇಷ್ಟದಂತೆ ಬಣ್ಣ ಬಳಿದು ಅವುಗಳನ್ನು ಪಕ್ಷದ ಕಚೇರಿಗಳ ರೀತಿಯಲ್ಲಿ ಕಾಣುವಂತೆ ರೂಪಿಸಿರುತ್ತಾರೆ. ಈಗ ರಾಜ್ಯದಲ್ಲಿ ಸರಕಾರ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ರಾಜ್ಯ ಸರಕಾರದ ಕಚೇರಿಗಳು ಮತ್ತು ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸುವ ಕಟ್ಟಡಗಳಿಗೆ ಏಕರೂಪದ ಬಣ್ಣದ ನೀತಿ ಸಂಹಿತೆಯನ್ನು ಜಾರಿಗೊಳಿಸಬೇಕು. ಸರಕಾರಗಳು ಬದಲಾದ ಮಾತ್ರಕ್ಕೆ ಕಟ್ಟಡಗಳ ಬಣ್ಣ ಬದಲಾಗಬೇಕಿಲ್ಲ. ಸರಕಾರಿ ಕಟ್ಟಡಗಳು ಯಾವುದೇ ಪಕ್ಷದ ಆಸ್ತಿಯೂ ಅಲ್ಲ. ಅವರ ಪ್ರಚಾರದ ಕೇಂದ್ರಗಳೂ ಅಲ್ಲ. ಸರಕಾರಿ ಕಟ್ಟಡಗಳಲ್ಲಿ ಜನತೆ ಬಯಸುವುದು ಕಟ್ಟಡದ ಬಣ್ಣದ ಬದಲಾವಣೆಯಲ್ಲ. ಆಡಳಿತ ವ್ಯವಸ್ಥೆಯ ಬದಲಾವಣೆ. ಹಾಗೆಯೇ, ದೇಶದ ಸಂವಿಧಾನದ ಬಗ್ಗೆ ಎಲ್ಲರೂ ಗೌರವದಿಂದ ಮಾತನಾಡುತ್ತೇವೆ. ಆದರೆ ಸರಕಾರಿ ಕಚೇರಿಗಳಲ್ಲಿ ಎಲ್ಲಿಯೂ ಸಂವಿಧಾನಕ್ಕೆ ಸಂಬಂಧಪಟ್ಟಂತಹ ಯಾವುದೇ ರೀತಿಯ ವಿಚಾರಗಳು ಕಾಣಸಿಗುವುದಿಲ್ಲ. ಅಂಬೇಡ್ಕರ್ರವರ ಭಾವಚಿತ್ರವನ್ನು ಕಡ್ಡಾಯವಾಗಿ ಸರಕಾರಿ ಕಚೇರಿ ಮತ್ತು ಎಲ್ಲ ಹಂತದ ಆಡಳಿತ ಕಚೇರಿಗಳಲ್ಲಿ ಅಳವಡಿಸಬೇಕೆಂಬ ನಿಯಮವಿದ್ದರೂ ಇಂದಿಗೂ ಸ್ಥಳೀಯ ಮಟ್ಟದ ಆಡಳಿತ ಕಚೇರಿಗಳಲ್ಲಿ ಇವರ ಭಾವಚಿತ್ರ ಕಾಣುವುದಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಪ್ರತಿಯೊಂದು ಸರಕಾರಿ ಕಚೇರಿಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆ ಆಡಳಿತ ಕಚೇರಿಗಳಲ್ಲಿ ಸಂವಿಧಾನದ ಪೀಠಿಕೆಯ ಪುಟದ ಚಿತ್ರವನ್ನು ಅಚ್ಚುಹಾಕಿಸಿ ಕಟ್ಟಡದ ಮುಂಭಾಗದಲ್ಲಿ ಅಳವಡಿಸಬೇಕೆಂಬ ಕಡ್ಡಾಯವಾಗಿ ನಿಯಮವನ್ನು ರೂಪಿಸಿ ಸ್ವಾತಂತ್ರದಿನಾಚರಣೆಯ ಒಳಗಾಗಿ ಇದು ಅನುಷ್ಠಾನಕ್ಕೆ ಬರುವಂತೆ ಸೂಕ್ತ ಆದೇಶವನ್ನು ಹೊರಡಿಸಬೇಕಾಗಿದೆ.