ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
ಬೆಂಗಳೂರು, ಜೂ.15: ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆಗಳ ಪೈಕಿ ಪ್ರಮುಖವಾದ ಗೃಹ ಲಕ್ಷ್ಮೀ ಯೋಜನೆಯ ಅರ್ಜಿ ಸ್ವೀಕಾರ ಪ್ರಕ್ರಿಯೆ ವಿಳಂಬವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಟ್ಯಾಂತರ ಸಂಖ್ಯೆಯಲ್ಲಿ ಫಲಾನುಭವಿಗಳು ಅರ್ಜಿ ಸಲ್ಲಿಸುವ ಹಿನ್ನೆಲೆ ಬಹಳ ಒತ್ತಡ ಬೀಳಬಹುದು ಎಂದು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ.ಹೀಗಾಗಿ, ಗೃಹಲಕ್ಷ್ಮೀ ಅರ್ಜಿ ಬಿಡುಗಡೆ ಕಾರ್ಯಕ್ರಮ ನಾಲ್ಕೈದು ದಿನ ಮುಂದಕ್ಕೆ ಹಾಕಲಾಗಿದೆ ಎಂದರು.
ಜೂ.16ರಿಂದ ಅರ್ಹ ಫಲಾನುಭವಿಗಳಿಂದ ಆನ್‍ಲೈನ್ ಮತ್ತು ಭೌತಿಕವಾಗಿ ಅರ್ಜಿ ಸ್ವೀಕರಿಸಲು ತೀರ್ಮಾನಿಸಲಾಗಿತ್ತು. ಆದರೆ, 1.28 ಕೋಟಿ ಫಲಾನುಭವಿಗಳು ಏಕಕಾಲಕ್ಕೆ ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆ ಉಂಟಾಗಲಿದೆ ಎಂಬ ಹಿನ್ನೆಲೆಯಲ್ಲಿ ಸ್ವಲ್ಪ ದಿನದ ಮಟ್ಟಿಗೆ ಅರ್ಜಿ ಸ್ವೀಕಾರ ಮುಂದೂಡಿದ್ದೇವೆ. ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ ಕೂಡಲೇ ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಇನ್ನೂ, ಪ್ರತಿ ಗ್ರಾಮಕ್ಕೂ ಈ ಯೋಜನೆ ತಲುಪಬೇಕು. ಯಾರೂ ಸಹ ಯೋಜನೆಯಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಬಾಪೂಜಿ ಕೇಂದ್ರ, ನಾಡ ಕಚೇರಿಯಲ್ಲಿ ಕೂಡ ಅರ್ಜಿ ಸ್ವೀಕಾರಕ್ಕೆ ಅವಕಾಶವಿದೆ. ಒಂದು ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗುತ್ತಿದೆ. ಒಂದು ಅರ್ಜಿ ತುಂಬಲು 4ರಿಂದ ಆರು ನಿಮಿಷ ಆಗಲಿದೆ. ಹೀಗಾಗಿ ಮಹಿಳೆಯರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಯಾರಿಗಾಗಿ ಮುಂದಕ್ಕೆ ಹಾಕಲಾಗಿದೆ ಎಂದು ವಿವರಿಸಿದರು.
ಹಾಗೇ, ಇ-ಆಡಳಿತದವರು ಮೊಬೈಲ್ ಅಪ್ಲಿಕೇಶನ್‍ಗೆ ಎರಡು ದಿನ ಕೇಳಿದ್ದರು, ಬಳಿಕ, ನಾಲ್ಕು ದಿನ ಕಾಲಾವಕಾಶ ಕೇಳಿದ್ದಾರೆ. ಈ ಕುರಿತಂತೆ, ಬಾಪೂಜಿ ಕೇಂದ್ರ, ನಾಡ ಕಚೇರಿ ಸಿಬ್ಬಂದಿಗೆ ತರಬೇತಿ ಕೊಡಬೇಕಾಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದರು.