ವೃತ್ತಿಪರ ಕೋರ್ಸ್ಗಳ ಶುಲ್ಕ ಬದಲಾವಣೆಯಿಲ್ಲ: ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟನೆ
ಬೆಂಗಳೂರು, ಜೂ. 15: ಇಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಶಿಕ್ಷಣ ಶುಲ್ಕವನ್ನು ಹಿಂದಿನ ಸರಕಾರವೇ ಶೇ.10ರಷ್ಟು ಹೆಚ್ಚಿಸಿ ಪರಿಷ್ಕರಣೆ ಮಾಡಿದ್ದು, ಈಗ ಯಾವುದೇ ಬದಲಾವಣೆಗೆ ಮುಂದಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ನಗರದ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಹಿಂದಿನ ವರ್ಷಗಳಲ್ಲಿ ಇಂಜಿನಿಯರಿಂಗ್ ಕೋರ್ಸ್ಗೆ ಸರಕಾರಿ ಕಾಲೇಜುಗಳಲ್ಲಿ 38,200ರೂ., ಅನುದಾನ ರಹಿತ ಕಾಲೇಜು, ಖಾಸಗಿ ಹಾಗೂ ಸ್ವಾಯತ್ತ ಕಾಲೇಜುಗಳಲ್ಲಿ 91,796ರೂ., ಎರಡನೆ ಶ್ರೇಣಿಯ ಅನುದಾನ ರಹಿತ ಕಾಲೇಜುಗಳಲ್ಲಿ 98,984ರೂ.ಶುಲ್ಕವಿತ್ತು. ಈ ವರ್ಷ ಅದರ ಜತೆಗೆ ಶೇ.10ರಷ್ಟು ಹೆಚ್ಚುವರಿಯಾಗಲಿದೆ ಎಂದರು.
‘ಬಿ’ ಫಾರ್ಮಾ ಕೋರ್ಸ್ಗೆ ಸರಕಾರಿ ಕಾಲೇಜುಗಳಲ್ಲಿ 14,530ರೂ., ಅನುದಾನ ರಹಿತ ಕಾಲೇಜುಗಳಲ್ಲಿ 26,500ರೂ., ‘ಡಿ’ ಫಾರ್ಮಾ ಕೋರ್ಸ್ಗೆ ಅನುದಾನ ರಹಿತ ಕಾಲೇಜುಗಳಲ್ಲಿ 67,500 ರೂ., ಪಶು ವೈದ್ಯಕೀಯ ಕೋರ್ಸ್ಗೆ ಸರಕಾರಿ ಕಾಲೇಜಿನಲ್ಲಿ 53,170ರೂ., ಮೀನುಗಾರಿಗೆ ಮತ್ತು ಪಶುಸಂಗೋಪನೆ, ಬಿಎಫ್ ಕೋರ್ಸ್ಗೆ 29,170ರೂ. ಶುಲ್ಕವನ್ನು ಹಿಂದಿನ ವರ್ಷ ನಿಗದಿ ಮಾಡಲಾಗಿತ್ತು ಎಂದು ತಿಳಿಸಿದರು.
ಇನ್ನೂ, ಶುಲ್ಕ ಪರಿಷ್ಕರಣೆಗಾಗಿ ಹಿಂದಿನ ಸರಕಾರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಕಾಲೇಜು ಆಡಳಿತ ಮಂಡಳಿಗಳ ಜತೆ ಸುದೀರ್ಘ ಸಮಾಲೋಚನೆ ನಡೆಸಿ ನಿರ್ಧಾರ ತೆಗೆದುಕೊಂಡಿದೆ. ಬಳಿಕ ಶುಲ್ಕ ಹೆಚ್ಚಳಕ್ಕೆ ಈಗಾಗಲೇ ಆದೇಶವೂ ಜಾರಿಯಾಗಿದೆ. ಅದನ್ನು ಬದಲಾವಣೆ ಮಾಡುವುದಿಲ್ಲ. ಮಾತುಕತೆ ಹಾಗೂ ಸಂಧಾನ ಪ್ರಕ್ರಿಯೆಗಳ ಮೂಲಕವೇ ಶುಲ್ಕ ನಿಗದಿಯಾಗಿರುವುದರಿಂದ ಮತ್ತೊಮ್ಮೆ ಶುಲ್ಕವನ್ನು ಹೆಚ್ಚಿಸುವುದಾಗಲಿ ಅಥವಾ ಕಡಿಮೆ ಮಾಡುವ ಅಗತ್ಯ ಇಲ್ಲ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ಖಚಿತಪಡಿಸಿದರು.