‘ಮತಾಂತರ ನಿಷೇಧ ಕಾಯ್ದೆ’ ರದ್ದತಿಗೆ ಆರ್ಚ್ ಬಿಷಪ್ ಪೀಟರ್ ಮಚಾದೊ ಸ್ವಾಗತ
ಬೆಂಗಳೂರು, ಜೂ. 15: ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2022(ಮತಾಂತರ ನಿಷೇಧ ಕಾಯ್ದೆ) ರದ್ಧತಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿರುವುದನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ’ ಎಂದು ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೊ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟನೆ ನೀಡಿರುವ ಅವರು, ‘ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಲು ಒಪ್ಪಿಗೆ ನೀಡಿರುವುದನ್ನು ಸಮಸ್ತ ಕ್ರೈಸ್ತ ಸಮುದಾಯದ ಪರವಾಗಿ ನಾನು ಸ್ವಾಗತಿಸಿ, ಸರಕಾರದ ಈ ನಿರ್ಧಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವುದರ ಪ್ರಾಮುಖ್ಯತೆಯ ಕುರಿತು ಹಿಂದೆ ಅನೇಕ ವ್ಯಕ್ತಿಗಳು ಹಾಗೂ ಪ್ರಗತಿಪರ ಸಂಘಟನೆಗಳು ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ಸರಕಾರ ಪರಿಗಣಿಸಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ’ ಎಂದು ತಿಳಿಸಿದ್ದಾರೆ.
‘ಸರಕಾರವು ಈ ವಿವಾದಾತ್ಮಕ ಕಾಯ್ದೆಯನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿರುವುದು ಈ ಕಾಯ್ದೆ ಕುರಿತು ಕ್ರೈಸ್ತ ಸಮುದಾಯವು ಹೊಂದಿದ್ದ ಅನಿಸಿಕೆಯನ್ನು ಧೃಡಪಡಿಸಿದೆ. ಈ ಕಾಯ್ದೆ ವ್ಯಕ್ತಿಗಳ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿತ್ತು. ಮಾತ್ರವಲ್ಲದೆ ಸಂವಿಧಾನದ 25ನೆ ಅನುಚ್ಛೇಧದಲ್ಲಿ ನೀಡಿರುವ ಇಷ್ಟದ ಧರ್ಮವನ್ನು ಅನುಸರಿಸುವ ಹಾಗೂ ಅದನ್ನು ಪ್ರಚಾರ ಮಾಡುವ ಹಕ್ಕುಗಳ ವಿರುದ್ಧವೂ ಆಗಿತ್ತು. ಸಂವಿಧಾನದ ಈ ಅನುಚ್ಛೇಧವುತನ್ನ ಪ್ರತಿಯೊಬ್ಬ ನಾಗರೀಕನಿಗೂ ತನಗೆ ಇಷ್ಟವಾದ ಧರ್ಮವನ್ನು ಪಾಲಿಸುವ, ನಂಬಿಕೆಯನ್ನು ಅನುಸರಿಸುವ ಹಕ್ಕನ್ನು ನೀಡಿರುವುದನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
‘ಕ್ರೈಸ್ತರೂ ಎಂದಿಗೂ ಸಂವಿಧಾನದ ನೆರಳಲ್ಲಿಯೇ ನಡೆಯುತ್ತಾರೆ. ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಕಾರ್ಯನಿರ್ವಹಿಸಿ, ಜಾತಿ-ಧರ್ಮಗಳ ತಾರತಮ್ಯ ಮಾಡದೆ, ದೇಶದ ಬಡವರಿಗೆ ಹಾಗೂ ನಿರ್ಗತಿಕರಿಗೆ ತಮ್ಮ ಸೇವೆಯನ್ನು ಅವಿರತ ಮಾಡುತ್ತಾರೆ. ಕರ್ನಾಟಕ ಹಾಗೂ ಇನ್ನಿತರ ರಾಜ್ಯಗಳಲ್ಲಿ ಜಾರಿಗೆ ತಂದ ಮತಾಂತರ ನಿಷೇಧ ಕಾಯ್ದೆಯು ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತರ ಮೇಲೆ ದಾಳಿ ಮಾಡುವಂತೆ ಪ್ರೇರೇಪಿಸಿತು. ಸಮುದಾಯಗಳ ನಡುವೆ ಅಪನಂಬಿಕೆ ಹಾಗೂ ವೈರತ್ವ ಬೆಳೆಯಲು ಈ ಕಾಯ್ದೆ ಕಾರಣವಾಯಿತು. ಕರ್ನಾಟಕವನ್ನು ಅನುಸರಿಸಿ, ಇನ್ನಿತರ ರಾಜ್ಯಗಳೂ ಈ ಕರಾಳ ಕಾಯಿದೆಯನ್ನು ರದ್ದುಪಡಿಸುತ್ತಾರೆ’ ಎಂದು ಆರ್ಚ್ ಬಿಷಪ್ ಆಶಿಸಿದ್ದಾರೆ.
‘ಯಾವುದೇ ಕಾಯಿದೆಯನ್ನು ರದ್ದುಪಡಿಸುವಾಗ ಒಳಗೊಳ್ಳುವ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳುತ್ತಾ, ಈ ಕಾಯಿದೆಯ ರದ್ಧತಿಗೆ ವಿವಿಧ ಹಂತಗಳಲ್ಲಿ ಸಂಬಂಧಪಟ್ಟವರೆಲ್ಲರೂ ಸಹಕಾರವನ್ನು ನೀಡುತ್ತಾರೆ ಎಂದು ಕ್ರೈಸ್ತ ಸಮುದಾಯವು ಭರವಸೆಯನ್ನಿಟ್ಟುಕೊಂಡಿದೆ. ಮತಾಂತರ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಈ ಸಹಯೋಗಕಾರಿ ಪರಿಶ್ರಮವು ಅತ್ಯಂತ ಮಹತ್ವದ್ದಾಗಿದೆ’ ಎಂದು ಅವರು ತಿಳಿಸಿದ್ದಾರೆ.
‘ಮತಾಂತರ ನಿಷೇಧ ಕಾಯಿದೆಯನ್ನು ರದ್ದುಪಡಿಸುವ ನಿಟ್ಟಿನಲ್ಲಿ ಸರಕಾರ ಕೈಗೊಂಡ ಧೃಡ ನಿರ್ಧಾರಕ್ಕೆ ಕ್ರೈಸ್ತ ಸಮುದಾಯದ ಪ್ರತಿನಿಧಿಯಾದ ನಾನು ರಾಜ್ಯ ಸರಕಾರಕ್ಕೆ ಸಮುದಾಯದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತೇನೆ. ಕ್ರೈಸ್ತ ಸಮುದಾಯವು ಈ ಹಿನ್ನೆಲೆಯಲ್ಲಿ ವ್ಯಕ್ತಪಡಿಸಿದ್ದ ಕಳವಳಗಳನ್ನು ಗೌರವಿಸಿ, ಈ ನಿರ್ಧಾರವನ್ನು ಪ್ರಕಟಿಸಿದ್ದಕ್ಕೆ ಸಮುದಾಯವು ಋಣಿಯಾಗಿರುತ್ತದೆ. ಇದು ರಾಜ್ಯದಲ್ಲಿ ಧಾರ್ಮಿಕ ಸಾಮರಸ್ಯ, ಪರಸ್ಪರ ಗೌರವ ಹಾಗೂ ಸೌಹಾರ್ಧತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ’
-ಡಾ.ಪೀಟರ್ ಮಚಾದೊ ಬೆಂಗಳೂರಿನ ಆರ್ಚ್ ಬಿಷಪ್