ವಕ್ಫ್ ವಿಚಾರದಲ್ಲಿ ಭ್ರಷ್ಟಾಚಾರ, ರಾಜಕೀಯ ಸಹಿಸಲ್ಲ: ಸಚಿವ ಝಮೀರ್ ಅಹ್ಮದ್
ಬೆಂಗಳೂರು, ಜೂ.15: ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ಸಮುದಾಯದ ಕಲ್ಯಾಣ ವಿಚಾರದಲ್ಲಿ ಭ್ರಷ್ಟಾಚಾರ ಹಾಗೂ ರಾಜಕೀಯ ಸಹಿಸುವುದಿಲ್ಲ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಎಚ್ಚರಿಕೆ ನೀಡಿದರು.
ಗುರುವಾರ ನಗರದ ಕನ್ನಿಂಗ್‍ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ವಕ್ಫ್ ಬೋರ್ಡ್ ಸದಸ್ಯರು ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ವಕ್ಫ್ ಬೋರ್ಡ್ ನಲ್ಲಿ ಕೆಲಸ ಮಾಡುವುದು ಎಂದರೆ ದೇವರ ಕೆಲಸ. ಇಲ್ಲಿ ಸಮುದಾಯದ ಹಿತ ಮುಖ್ಯವಾಗಬೇಕೆ ಹೊರತು ರಾಜಕೀಯ ಅಲ್ಲ. ಇಲ್ಲಿಯೂ ಹಣ ಮಾಡಲು ಹೊರಟರೆ ನಿರ್ನಾಮ ಆಗುತ್ತಾರೆ. ನಾವೆಲ್ಲರೂ ದೇವರಿಗೆ ಉತ್ತರಿಸಬೇಕಾಗುತ್ತದೆ. ಹಣಗಳಿಸಬೇಕು ಎಂಬ ಮನಸ್ಥಿತಿ ಇರುವವರು ಇಲ್ಲಿ ಬರುವುದು ಬೇಡ. ಬೇರೆ ಯಾವುದಾದರೂ ಕಡೆ ಹೋಗಲಿ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ವಕ್ಫ್ ಆಸ್ತಿ ಸಂರಕ್ಷಣೆ ದೃಷ್ಟಿಯಿಂದ ಕಾರ್ಯಪಡೆ ರಚನೆ, ಕಾಂಪೌಂಡ್ ನಿರ್ಮಾಣ ಸೇರಿ ಹಲವು ಕ್ರಮಗಳಿಗೆ ಮುಂದಾಗಿದ್ದೇವೆ. ನಮ್ಮ ಆಸ್ತಿ ಸಂರಕ್ಷಣೆ ಮಾಡಿಕೊಂಡರೆ ಸರಕಾರದ ಮುಂದೆ ಅನುದಾನಕ್ಕೆ ಕೈ ಚಾಚುವ ಬದಲು ನಾವೆ ಸರಕಾರಕ್ಕೆ ದೇಣಿಗೆ ಕೊಡುವ ಶಕ್ತಿ ಬರುತ್ತದೆ ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ಕಡೆ ಹಲವಾರು ಮಹನೀಯರು ವಕ್ಫ್ ಬೋರ್ಡ್‍ಗೆ ಆಸ್ತಿ ದಾನ ಕೊಟ್ಟಿದ್ದಾರೆ. ಇವು ಸಮುದಾಯದ ಒಳಿತಿಗೆ ಸದುಪಯೋಗ ಆಗುವಂತೆ ಮಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ವಕ್ಫ್ ಬೋರ್ಡ್ ನಲ್ಲಿ ಕನ್ನಡದಲ್ಲೆ ಸಭೆ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ಇದು ನಿರಂತರವಾಗಿರಲಿ ಎಂದು ಸೂಚಿಸಿದರು.
ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಖಾನ್ ಫರ್ವೇಝ್ ಮಾತಾನಾಡಿ, ವಕ್ಫ್ ಬೋರ್ಡ್ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಉರ್ದು ಶಾಲೆ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಸೇರಿ ಹಲವು ಕಾರ್ಯಕ್ರಮ ನಿರಂತರ ವಾಗಿ ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಮನವಿ: ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ಸಭೆ ನಡೆಸದಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ನೀಡಿದ್ದ ಸೂಚನೆಯನ್ನು ಹಿಂಪಡೆಯಬೇಕು. ವಕ್ಫ್ ಜಿಲ್ಲಾ ಕಚೇರಿಗಳಿಗೆ ವಾಹನ ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷರು ಸಲ್ಲಿಸಿದ ಮನವಿಗೆ ಝಮೀರ್ ಅಹ್ಮದ್ ಪೂರಕವಾಗಿ ಸ್ಪಂದಿಸಿದರು.
ಬೆಲ್ಲಹಳ್ಳಿಯಲ್ಲಿರುವ 602 ಎಕರೆ ವಕ್ಫ್ ಜಾಗದ ಪೈಕಿ ಖಾಲಿ ಇರುವ 73 ಎಕರೆಯನ್ನು ತಕ್ಷಣ ಕಾಂಪೌಂಡ್ ಹಾಕಿಸಿಕೊಡಬೇಕು. ಮೇಡಿ ಅಗ್ರಹಾರದಲ್ಲಿ 358 ಎಕರೆ ಪೈಕಿ 42 ಎಕರೆ ವಕ್ಫ್ ಜಾಗ ಖಾಲಿ ಇದ್ದು, ಅದನ್ನು ವಕ್ಫ್ ಬೋರ್ಡ್‍ಗೆ ಹಸ್ತಾಂತರ ಮಾಡಬೇಕು ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅವರು, ಈ ಸಂಬಂಧ ಚರ್ಚೆ ನಡೆಸಲು ನಾಳೆ(ಜೂ.16) ಮಧ್ಯಾಹ್ನ 2 ಗಂಟೆಗೆ ಹಜ್ ಭವನದಲ್ಲಿ ಕಂದಾಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯುವುದಾಗಿ ತಿಳಿಸಿದರು.
ವಕ್ಫ್ ಬೋರ್ಡ್‍ನಲ್ಲಿ ವಿವಿಧ ಸೆಕ್ಷನ್‍ಗಳಿಂದ ಉಳಿಕೆಯಾಗಿರುವ ಸುಮಾರು 50 ಕೋಟಿ ರೂ.ಗಳಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ವಕ್ಫ್ ಆಸ್ತಿಗಳಲ್ಲಿ ಮಹಿಳಾ ಶಾಲಾ, ಕಾಲೇಜುಗಳ ನಿರ್ಮಾಣಕ್ಕೆ ಶೀಘ್ರವೆ ಶಿಲಾನ್ಯಾಸ ಮಾಡಲು ವ್ಯವಸ್ಥೆ ಮಾಡುವುದಾಗಿ ಝಮೀರ್ ಅಹ್ಮದ್ ತಿಳಿಸಿದರು.
ವಕ್ಫ್ ಬೋರ್ಡ್‍ನಲ್ಲಿರುವ ಸಿಬ್ಬಂದಿ ಕೊರತೆ ನೀಗಿಸಲು ನೇಮಕಾತಿ ಪ್ರಕ್ರಿಯೆ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ 82 ನೌಕರರನ್ನು ಖಾಯಂಗೊಳಿಸಬೇಕು. ಇಮಾಮ್ ಹಾಗೂ ಮುಅದ್ದೀನ್‍ಗಳಿಗೆ ನೀಡುತ್ತಿರುವ ಗೌರವ ಧನವನ್ನು ಕ್ರಮವಾಗಿ 8 ಸಾವಿರ ರೂ. ಹಾಗೂ 5 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಜೊತೆಗೆ, ಅರೇಬಿಕ್ ಮದ್ರಸಾಗಳಲ್ಲಿನ ಅಧ್ಯಾಪಕರಿಗೆ ಹಾಗೂ ಖಬರಸ್ಥಾನ್‍ಗಳಲ್ಲಿ ಕೆಲಸ ಮಾಡುವವರಿಗೆ ತಲಾ 5 ಸಾವಿರ ರೂ. ಗೌರವಧನ ನೀಡಬೇಕು ಎಂದು ಶಾಫಿ ಸಅದಿ ಮನವಿ ಮಾಡಿದರು.
ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ವಕ್ಫ್ ಬೋರ್ಡ್‍ಗೆ 750 ಕೋಟಿ ರೂ.ಅನುದಾನ ನೀಡಬೇಕು. ಇದರಲ್ಲಿ ವಕ್ಫ್ ಭವನ ನಿರ್ಮಾಣಕ್ಕೆ 75 ಕೋಟಿ ರೂ., 30 ಜಿಲ್ಲೆಗಳಲ್ಲಿ ತಲಾ 3 ಕೋಟಿ ರೂ.ಗಳಂತೆ ಜಿಲ್ಲಾ ವಕ್ಫ್ ಭವನ ನಿರ್ಮಾಣಕ್ಕೆ 93 ಕೋಟಿ ರೂ., ವಕ್ಫ್ ಪ್ರಕರಣಗಳನ್ನು ಮತ್ತಷ್ಟು ಸದೃಢಗೊಳಿಸಲು ಅಡ್ವೊಕೇಟ್ ಪ್ಯಾನಲ್‍ಗೆ ಹೆಚ್ಚುವರಿ ನ್ಯಾಯವಾದಿಗಳ ನೇಮಕ. ವಕ್ಫ್ ಕೇಂದ್ರ ಕಚೇರಿ ನವೀಕರಣ ಕಾರ್ಯಕ್ಕೆ ಹೆಚ್ಚುವರಿ ಒಂದು ಕೋಟಿ ರೂ.ಬಿಡುಗಡೆ ಮಾಡುವಂತೆ ಶಾಫಿ ಸಅದಿ ಮನವಿ ಮಾಡಿದರು.
ಅಲ್ಲದೆ, ಜೂನ್ ತಿಂಗಳಾಂತ್ಯಕ್ಕೆ ಅಥವಾ ಜುಲೈ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯ ನವೀಕೃತ ಕಟ್ಟಡ ಉದ್ಘಾಟಿಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಅವರು ಕೋರಿದರು.
ಈ ಸಂದರ್ಭದಲ್ಲಿ ರಾಜ್ಯಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ವಕ್ಫ್ ಬೋರ್ಡ್ ಸದಸ್ಯರಾದ ಆರ್.ಅಬ್ದುಲ್ ರಿಯಾಝ್ ಖಾನ್, ಆಸಿಫ್ ಅಲಿ ಶೇಕ್, ಅನ್ವರ್ ಬಾಷ, ಯಾಕೂಬ್ ಯೂಸುಫ್, ಮೌಲಾನ ಅಝರ್ ಆಬಿದಿ, ವಕ್ಫ್ ಬೋರ್ಡ್ ಸಿಇಒ ಖಾನ್ ಪರ್ವೇಝ್, ಹಜ್ ಸಮಿತಿಯ ಇಒ ಸರ್ಫರಾಝ್ ಖಾನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವಕ್ಫ್ ವಿಚಾರದಲ್ಲಿ ನೀವು ಆ ಪಕ್ಷ ಈ ಪಕ್ಷ ಎಂದು ರಾಜಕೀಯ ಮಾಡಬೇಡಿ. ನಾವೆಲ್ಲರೂ ಸಮುದಾಯದ ಸೇವೆಗೆ ನೇಮಕ ಆಗಿರುವ ರಾಯಭಾರಿಗಳು ಎಂಬುದು ನೆನಪಿರಲಿ. ಕೆಲವು ಜಿಲ್ಲೆಗಳ ಸಮಿತಿಗಳ ಕಾರ್ಯವೈಖರಿ ಬಗ್ಗೆ ನನಗೆ ಸಮಾಧಾನವಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ ಝಮೀರ್ ಅಹ್ಮದ್ ಖಾನ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಫಿಝುರ್ರಹ್ಮಾನ್ ಸಭೆಗೆ ಗೈರು ಅದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಕೂಡಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.