ಸಾಂವಿಧಾನಿಕ ಮೌಲ್ಯಗಳ ಅನುಸಾರ ಪಠ್ಯ ಪರಿಷ್ಕರಣೆಯಾಗಲಿ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಬಿ.ಕೆ. ಹರಿಪ್ರಸಾದ್
ಬೆಂಗಳೂರು, ಜೂ. 15: ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಹಿಂದಿನ ಸರಕಾರದ ಪಠ್ಯ ಪರಿಷ್ಕರಣೆಯನ್ನು ಬದಲಾಯಿಸಿ ಸಾಂವಿಧಾನಿಕ ಮೌಲ್ಯಗಳನ್ನು ಅಳವಡಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಗುರುವಾರ ಪತ್ರ ಬರೆದಿದ್ದಾರೆ.
ಪರಿಷ್ಕೃತ ಪಠ್ಯದಲ್ಲಿ ಆರೆಸೆಸ್ಸ್ ಸಂಸ್ಥಾಪಕರು ಮತ್ತು ಮೂಲಭೂತವಾದಿಗಳಿಗೆ ಕಡಿವಾಣ ಹಾಕಿ, ನಿಜವಾದ ಸ್ವಾತಂತ್ರ್ಯ ಹೋರಾಟಗಾರರ, ರಾಷ್ಟ್ರೀಯವಾದಿಗಳ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರ ಆಶಯ ಮತ್ತು ಜೀವನ ತತ್ವವನ್ನು ಅಳವಡಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಹಿಂದಿನ ಸರಕಾರ ಶಿಕ್ಷಣವನ್ನು ಕೇಸರೀಕರಣಗೊಳಿಸುವ ಉದ್ದೇಶದೊಂದಿಗೆ ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಸಹೋದರತ್ವ ಮತ್ತು ಬಹುತ್ವವನ್ನು ಧಿಕ್ಕಿರಿಸಿ ಶಿಕ್ಷಣವನ್ನು ರಾಜಕೀಯ ಕಾರಣಗಳಿಗೆ ಬಳಸಿಕೊಂಡಿದ್ದರು ಎಂದು ಬಿ.ಕೆ.ಹರಿಪ್ರಸಾದ್ ವಿಷಾದಿಸಿದ್ದಾರೆ.
ಶೈಕ್ಷಣಿಕ ಮೌಲ್ಯ ಹಾಗೂ ಆದರ್ಶಗಳನ್ನು ಪುಷ್ಠೀಕರಿಸುವ ದೃಷ್ಠಿಯಿಂದ ಶಿಕ್ಷಣವನ್ನು ಸಂವಿಧಾನ, ಮಾನವ ಹಕ್ಕುಗಳ ಆದರ್ಶಗಳನ್ನು ಪುನರ್‍ಸ್ಥಾಪಿಸುವ ನೂತನ ವ್ಯವಸ್ಥೆಯನ್ನು ಜಾರಿಗೊಳಿಸುವ ಪ್ರಕ್ರಿಯೆಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ರಾಜ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಹಿತದೃಷ್ಠಿಯನ್ನು ಕಾಪಾಡಲು ಉನ್ನತ ಮಟ್ಟದ ತಜ್ಞರ ಶಿಕ್ಷಣ ಆಯೋಗವನ್ನು ರಚಿಸುವ ಬಗ್ಗೆ ಸೂಕ್ತ ಕ್ರಮಗಳನ್ನು ಜರುಗಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಈ ಹಿಂದಿನ ಬಿಜೆಪಿ ಸರಕಾರ ಪಠ್ಯ ಪರಿಷ್ಕರಣೆ ನೆಪದಲ್ಲಿ ಅಂಬೇಡ್ಕರ್, ಕುವೆಂಪು, ನಾರಾಯಣಗುರು, ದೇವನೂರು ಮಹಾದೇವರಂತಹ ಅನೇಕರನ್ನು ಅವಮಾನಿಸಿದ್ದು ನೋವಿನ ಸಂಗತಿ. ಈ ನೆಲದಲ್ಲೇ ಹುಟ್ಟಿ ಶಾಂತಿ ಮತ್ತು ಪ್ರೀತಿಯನ್ನು ಜಗತ್ತಿಗೆ ಸಾರಿದ ಜೈನ, ಬೌದ್ಧ ಸಮುದಾಯಗಳನ್ನು ಅಪಮಾನಿಸಿದ್ದು ಇತಿಹಾಸಕ್ಕೆ ಮಾಡಿದ ದ್ರೋಹ ಎಂದು ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.