ಬೆಂಗಳೂರು | ಸಹೋದ್ಯೋಗಿಗಳಿಂದ ಜಾತಿ ದೌರ್ಜನ್ಯ ಆರೋಪ; ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಉದ್ಯೋಗಿ
ಬೆಂಗಳೂರು: ತಾನು ಕೆಲಸ ಮಾಡುತ್ತಿರುವ ಸಂಸ್ಥೆಯಲ್ಲಿ ಮೂವರು ಸಹೋದ್ಯೋಗಿಗಳು ಜಾತಿ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಪೊಲೀಸ್ ದೂರು ನೀಡಿದ ಕೆಲವೇ ಗಂಟೆಗಳ ಬಳಿಕ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿರುವ ಆತಂಕಕಾರಿ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶ ಮೂಲದ ದಲಿತ ಯುವಕ ವಿವೇಕ್ ರಾಜ್ ಮೃತ ಪಟ್ಟವರು. ಅವರು ಸಾಯುವ ಮುನ್ನ ತಮ್ಮ ನೋವು ಹೇಳಿಕೊಳ್ಳುವ ವಿಡಿಯೋ ಚಿತ್ರೀಕರಿಸಿದ್ದು, "ಇನ್ನು ಮುಂದೆ ಹೋರಾಡಲು ಸಾಧ್ಯವಿಲ್ಲ" ಎಂದು ಹೇಳಿ ವಿಡಿಯೋ ಹಂಚಿದ್ದಾರೆ.
ಉತ್ತರ ಪ್ರದೇಶದ ಕಪ್ತಂಗಂಜ್ ಬಸ್ತಿ ಮೂಲದ ವಿವೇಕ್ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ರಿಪಬ್ಲಿಕ್ ಆಫ್ ವೈಟ್‌ಫೀಲ್ಡ್‌ನಲ್ಲಿ ವಾಸಿಸುತ್ತಿದ್ದರು. ಲೈಫ್‌ಸ್ಟೈಲ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಅವರು ತನ್ನ ಸಹೋದ್ಯೋಗಿಗಳಿಂದ ಜಾತಿ ನಿಂದನೆ ಎದುರಿಸುತ್ತಿರುವುದಾಗಿ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿವೇಕ್ ಅವರ ಆತ್ಮಹತ್ಯೆ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಲೈಫ್‌ಸ್ಟೈಲ್ ಇಂಟರ್‌ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು “ನಮ್ಮ ಮಾಜಿ ಉದ್ಯೋಗಿಯ ನಿಧನವನ್ನು ಕೇಳಿ ನಮಗೆ ತುಂಬಾ ದುಃಖವಾಗಿದೆ. ವಿವೇಕ್ ಅವರು ನಮ್ಮ ಆಂತರಿಕ ಪ್ರಕ್ರಿಯೆಯ ಮೂಲಕ ದೂರನ್ನು ಎತ್ತಿದ್ದರು. ಕಂಪನಿಯ ನೀತಿಗಳಿಗೆ ಅನುಗುಣವಾಗಿ ಸಂಪೂರ್ಣ ಆಂತರಿಕ ತನಿಖೆಯನ್ನು ನಡೆಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ವಿಷಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ನಾವು ಅವರ ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ” ಎಂದು ಹೇಳಿದೆ.
ಪೊಲೀಸರಿಗೆ ವಿವೇಕ್ ದೂರು ನೀಡಿದ ಬಳಿಕ ಹಾಗೂ ಸಾಯುವ ನಡುವಿನ ಅವಧಿಯಲ್ಲಿ ಒಂದೆರಡು ಬಾರಿ ವಿವೇಕ್ ನನಗೆ ಕರೆ ಮಾಡಿದ್ದ. ಆದರೆ, ತನ್ನ ಪರಿಸ್ಥಿತಿಯ ಬಗ್ಗೆ ಏನನ್ನೂ ಹೇಳಿರಲಿಲ್ಲ. ನಾನು 20 ವರ್ಷಗಳ ಹಿಂದೆ ನನ್ನ ಹೆಂಡತಿಯನ್ನು ಕಳೆದುಕೊಂಡಿದ್ದೆ. ನನ್ನ ಮಗನೇ ನನಗೆ ಸರ್ವಸ್ವವಾಗಿದ್ದ. ಅವನ ಶಿಕ್ಷಣಕ್ಕಾಗಿ ನಾನು ಎಲ್ಲ ತ್ಯಾಗವನ್ನೂ ಮಾಡಿದ್ದೇನೆ. ಈಗ, ಅವನ ನಿಧನದಿಂದ, ನಾನು ನನ್ನ ಜೀವನದುದ್ದಕ್ಕೂ ಒಬ್ಬಂಟಿಯಾಗಿ ಬದುಕಬೇಕು” ಎಂದು ವಿವೇಕ್ ತಂದೆ ಹೇಳಿದ್ದಾರೆ..
ಜೂನ್ 3 ರ ವೀಡಿಯೊದಲ್ಲಿ, ವಿವೇಕ್ ಕೆಲವು ಸಹೋದ್ಯೋಗಿಗಳಿಂದ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದರು. ಸಾಯುವ ಕೆಲವೇ ಗಂಟೆಗಳ ಮೊದಲು, ಅವರು ತಮ್ಮ ಮೂವರು ಸಹೋದ್ಯೋಗಿಗಳ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಕಂಪನಿಯ ಇಬ್ಬರು ಹಿರಿಯ ಸದಸ್ಯರು ಜಾತಿ ಆಧಾರದ ಮೇಲೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ವಿವೇಕ್ ಅವರು ದೂರಿನಲ್ಲಿ ಹೇಳಿದ್ದರು.
ವಿವೇಕ್ ಅವರ ಬಳಿ, ಅವರ ಕಂಪೆನಿಯು ಜೂನ್ 18 ರ ಮೊದಲು ರಾಜಿನಾಮೆ ನೀಡುವಂತೆ ಹೇಳಿತ್ತು. ಅದು ತನ್ನ ಸಹೋದ್ಯೋಗಿಗಳ ವಿರುದ್ಧ ದೂರು ನೀಡಿದಕ್ಕಾಗಿ ಕಂಪೆನಿ ಕೆಲಸ ಬಿಡುವಂತೆ ಸೂಚಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಆರೋಪ ಎದುರಿಸುತ್ತಿರುವ ಅವರ ಇಬ್ಬರು ಸಹೋದ್ಯೋಗಿಗಳು ಜಾಮೀನು ಪಡೆದಿದ್ದು, ಎಫ್‌ಐಆರ್‌ನಿಂದ ತಮ್ಮ ಹೆಸರನ್ನು ರದ್ದುಗೊಳಿಸುವಂತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸಹೋದ್ಯೋಗಿಯನ್ನು ಬಂಧಿಸಲಾಗಿದೆ.