ವಿದ್ಯುತ್ ದರ ಏರಿಕೆ: ಪ್ರತಿಭಟನೆಗೆ ಮುಂದಾದ ಕಾಸಿಯಾ
ಬೆಂಗಳೂರು, ಜೂ.15: ವಿದ್ಯುತ್ ದರ ಏರಿಕೆಯನ್ನು ಖಂಡಿಸಿರುವ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘವು ಸಂಯೋಜಿತ ಕೈಗಾರಿಕಾ ಸಂಘಗಳ ಸಹಯೋಗದಲ್ಲಿ ರಾಜ್ಯಾದ್ಯಂತ ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.
ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಸಿಯಾ ಅಧ್ಯಕ್ಷ ನರಸಿಂಹಮೂರ್ತಿ.ಕೆ, ಮುಂದಿನ ತಿಂಗಳು ವಿದ್ಯುತ್ ದರ ಮತ್ತಷ್ಟು ಹೆಚ್ಚಳವಾಗಲಿದೆ. ಜೂನ್‍ನಲ್ಲಿ ಪ್ರತಿ ಯೂನಿಟ್‍ಗೆ 2.89 ರೂ.ನಷ್ಟು ಹೆಚ್ಚಳವಾಗಿದೆ. ಇದರಿಂದ ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ನೆಲಸಮವಾಗಲಿದ್ದು, ಸರಕಾರ ದರ ಏರಿಕೆಯಾಗದಂತೆ ತಡೆಹಿಡಿಯಬೇಕು. ಇಲ್ಲದಿದ್ದರೆ ಜೂನ್‍ನಲ್ಲಿ ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.
ಕೈಗಾರಿಕಾ ಕ್ಷೇತ್ರದಲ್ಲಿನ ತೀವ್ರ ಪೈಪೋಟಿ ಹಿನ್ನೆಲೆ ಸೂಕ್ಷ್ಮ, ಮತ್ತು ಸಣ್ಣ ಕೈಗಾರಿಕೆ ಆದಾಯ ಕುಸಿತಗೊಂಡಿದೆ. ವಿದ್ಯುತ್ ದರ ಹೆಚ್ಚಳಕ್ಕೆ ಅನುಗುಣವಾಗಿ ಬೆಲೆ ಏರಿಕೆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವ ಮೂಲಕ ಮಾರುಕಟ್ಟೆ ಪಾಲನ್ನು ದೊಡ್ಡ ಉದ್ದಿಮೆದಾರರು ಕಳೆದುಕೊಳ್ಳಲಿದ್ದಾರೆ. ಸಣ್ಣ ಉದ್ಯಮಗಳು ತಮ್ಮ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಹೊರೆಯನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಧಿಸುವ ಸಮ್ಮತಿ ಶುಲ್ಕವನ್ನೂ ಕಡಿಮೆ ಮಾಡಬೇಕೆಂದು ಸರಕಾರಕ್ಕೆ ಮನವಿ ಮಾಡಲಾಗಿದೆ. ತರ್ಕಬದ್ಧತೆ ಇಲ್ಲದೆ ಸ್ಥಳೀಯ ಪಂಚಾಯ್ತಿಗಳು ವಿಧಿಸುವ ಅನಿಯಂತ್ರಿತ ತೆರಿಗೆಗಳು ದೀರ್ಘಕಾಲದಿಂದ ಬಾಕಿ ಉಳಿದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಈ ರೂಪದಲ್ಲಿ ಏಕರೂಪ ತೆರಿಗೆಯನ್ನು ಕೈಗಾರಿಕೆಗಳಿಗೆ ಸರಕಾರ ಖಚಿತಪಡಿಸಬೇಕು ಎಂದು ನರಸಿಂಹಮೂರ್ತಿ.ಕೆ ಒತ್ತಾಯಿಸಿದರು.
ವಿದ್ಯುತ್ ದರದ ವಿಚಾರವಾಗಿ ಸರಕಾರ ಸಂಘ-ಸಂಸ್ಥೆಗಳು, ಕೈಗಾರಿಕೋದ್ಯಮಗಳೊಂದಿಗೆ ಸಭೆ ಕರೆದು ಚರ್ಚಿಸಿದರೆ ಒಂದು ತರ್ಕಬದ್ಧ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಸರಕಾರ ನಮ್ಮೊಂದಿಗೆ ಸಮೂಹ ಸಭೆಗೆ ಮುಂದಾಗಬೇಕು. ಅಲ್ಲದೆ, ಇದೇ ರೀತಿ ವಿದ್ಯುತ್ ದರ ಏರಿಕೆ ಮುಂದವರಿದರೆ ಕೈಗಾರಿಕೋದ್ಯಮಗಳು ನ್ಯಾಯಾಲಯದ ಬಾಗಿಲು ತಟ್ಟಬೇಕಾಗುತ್ತದೆ ಎಂದು ನರಸಿಂಹಮೂರ್ತಿ.ಕೆ ತಿಳಿಸಿದರು.