ಮತಾಂತರ ನಿಷೇಧ, ಎಪಿಎಂಸಿ ಕಾಯ್ದೆಗಳ ರದ್ದು: ಸ್ವಾಗತಾರ್ಹ ನಿರ್ಧಾರ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನೂತನ ಸರಕಾರದ ‘ಮತಾಂತರ ನಿಷೇಧ ಮತ್ತು ಎಪಿಎಂಸಿ ಕಾಯ್ದೆ’ಗಳನ್ನು ಹಿಂದೆಗೆಯುವ ಮಹತ್ವದ ನಿರ್ಧಾರದಿಂದಾಗಿ ಈ ನಾಡಿನ ರೈತರು ಮತ್ತು ಶೋಷಿತ ಸಮುದಾಯ ನಿರಾಳ ನಿಟ್ಟುಸಿರೊಂದನ್ನು ಬಿಟ್ಟಿದೆ. ಎಪಿಎಂಸಿ ಕಾಯ್ದೆಯಿಂದ ರೈತರಿಗೆ ಯಾವುದೇ ಲಾಭವಾಗಲಿಲ್ಲ. ಬದಲಿಗೆ ಎಪಿಎಂಸಿ ಮಾರುಕಟ್ಟೆಗಳು ದುರ್ಬಲಗೊಂಡವು. ರೈತರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯವನ್ನು ನೀಡಿದಂತೆ ಮಾಡಿ ಅವರನ್ನು ಇನ್ನಷ್ಟು ಆತಂಕ, ಅಭದ್ರತೆಗೆ ಸಿಲುಕಿಸಲು, ಕಾರ್ಪೊರೇಟ್ ಶಕ್ತಿಗಳು ರೈತರ ಮೇಲೆ ನಿಯಂತ್ರಣ ಸಾಧಿಸಲು ಪೂರಕವಾಗುವಂತೆ ಇದ್ದ ಎಪಿಎಂಸಿ ಕಾಯ್ದೆಯ ರದ್ದು ರಾಜ್ಯದ ರೈತರ ಪರ ಸಂಘಟನೆಗಳ ಬೇಡಿಕೆಯಾಗಿತ್ತು. ಎಪಿಎಂಸಿ ಕಾಯ್ದೆಗಳು ಜನರ ಬೇಡಿಕೆಯಾಗಿರದೆ, ಕೇಂದ್ರ ಸರಕಾರ ಜಾರಿಗೆ ತರಲು ಯತ್ನಿಸಿದ್ದ ಹೊಸ ಕೃಷಿ ನೀತಿಗೆ ಪೂರಕವಾದ ಅಗತ್ಯವಾಗಿತ್ತು. ಈ ನಿಟ್ಟಿನಲ್ಲಿ ಭರವಸೆ ನೀಡಿದಂತೆ, ನೂತನ ಸರಕಾರ ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿದೆ.
ಬಿಜೆಪಿ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯಂತೂ ಜನರ ಧಾರ್ಮಿಕ ನಂಬಿಕೆಯ ಮೇಲೆ ಕಾನೂನಿನ ನೇರ ಹಸ್ತಕ್ಷೇಪವಾಗಿತ್ತು. ಈ ಕಾಯ್ದೆಯ ಮೂಲಕ ಅಂದಿನ ಬಿಜೆಪಿ ಸರಕಾರ ಅಲ್ಪಸಂಖ್ಯಾತ ಮತ್ತು ಶೋಷಿತ ಸಮುದಾಯದ ಮೇಲೆ ದೌರ್ಜನ್ಯಗಳಿಗೆ ಕಾನೂನಿನ ಮಾನ್ಯತೆಯನ್ನು ನೀಡಿತ್ತು. ಯಾರು ಯಾವ ರೀತಿಯ ಧಾರ್ಮಿಕ ನಂಬಿಕೆಗಳನ್ನು ಹೊಂದಿರಬೇಕು, ಯಾರು ಮತಾಂತರವಾಗಬಹುದು, ಆಗಬಾರದು ಎನ್ನುವ ಸರ್ವಾಧಿಕಾರಿ ಆದೇಶವೊಂದನ್ನು ಈ ಕಾಯ್ದೆಯ ಮೂಲಕ ಸರಕಾರ ಜಾರಿಗೊಳಿಸಿತ್ತು. ಈ ಕಾಯ್ದೆ ಜನರ ಅಗತ್ಯ ಆಗಿರಲೇ ಇಲ್ಲ. ‘ನಮ್ಮನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ’ ಎಂದು ಈ ನಾಡಿನ ಯಾವೊಬ್ಬ ದಲಿತ, ಶೋಷಿತನೂ ಸಾರ್ವಜನಿಕವಾಗಿ ಪ್ರತಿಭಟನೆ ನಡೆಸಿದ ಉದಾಹರಣೆಗಳು ಇಲ್ಲ. ರಾಜ್ಯದಲ್ಲಿ ದಾಖಲಾಗಿರುವ ಬಲವಂತದ ಮತಾಂತರ ಪ್ರಕರಣಗಳು ಎಷ್ಟು? ಎನ್ನುವುದರ ಬಗ್ಗೆಯೂ ಸರಕಾರದ ಬಳಿ ಯಾವುದೇ ಮಾಹಿತಿ ಇದ್ದಿರಲಿಲ್ಲ. ಇಷ್ಟಾದರೂ ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಜಾರಿಗೊಳಿಸಿತ್ತು. ಸಂಘಪರಿವಾರದ ದ್ವೇಷದ ಅಭಿಯಾನಕ್ಕೆ ಪೂರಕವಾಗಿ ಮತಾಂತರ ನಿಷೇಧ ಕಾಯ್ದೆಯನ್ನು ತರಲಾಗಿತ್ತು. ಈ ಮೂಲಕ ಅಲ್ಪಸಂಖ್ಯಾತರಿಗೆ ಕಿರುಕುಳಗಳನ್ನು ನೀಡುವುದು, ಅವರನ್ನು ಜೈಲಿಗೆ ತಳ್ಳಿ ಮಾನಸಿಕವಾಗಿ ಹಿಂಸಿಸುವ ವಿಕೃತ ಉದ್ದೇಶವನ್ನಷ್ಟೇ ಸರಕಾರ ಹೊಂದಿತ್ತು. ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಈ ಕಾಯ್ದೆಯನ್ನು ವ್ಯಾಪಕವಾಗಿ ದುರ್ಬಳಕೆ ಮಾಡಲಾಗಿದೆ. ಹಲವರ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿಚಾರಣೆಯ ಹೆಸರಿನಲ್ಲಿ ಈಗಾಗಲೇ ಹಲವರು ಶಿಕ್ಷೆಯನ್ನೂ ಅನುಭವಿಸಿದ್ದಾರೆ.
ಮೇಲ್ನೋಟಕ್ಕೆ ಇದು ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯದ ವಿರುದ್ಧ ಜಾರಿಗೊಳಿಸಿರುವ ಕಾಯ್ದೆಯೆಂದು ಬಿಂಬಿಸಲಾಯಿತಾದರೂ, ಆಳದಲ್ಲಿ ಇದು ಗುರಿಯಾಗಿಸಿಕೊಂಡಿರುವುದು ಈ ದೇಶದ ದಲಿತ, ಶೋಷಿತ ಸಮುದಾಯವನ್ನು. ಇಲ್ಲಿ ಭಾರತದ ಬಹುಸಂಖ್ಯಾತ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಒಂದು ಕಾಲದಲ್ಲಿ ಈ ನಾಡಿನ ಅಸ್ಪಶ್ಯತೆ, ಜಾತೀಯತೆಯಿಂದ ನೊಂದು ಮತಾಂತರಗೊಂಡವರು. ಈ ದೇಶದಲ್ಲಿ ಚುನಾವಣೆ ಬಂದಾಗ ಮಾತ್ರ ‘ಹಿಂದೂ’ ಪದ ಬಳಕೆಯಾಗುತ್ತದೆ. ದೇವಸ್ಥಾನದಲ್ಲಿ ಜೊತೆಯಾಗಿ ಉಣ್ಣುವಾಗ, ಮದುವೆ ಸಂಬಂಧ ಬೆಳೆಸುವಾಗ, ಶುಭ ಕಾರ್ಯಗಳು ನಡೆಯುವಾಗ ಹಿಂದೂ ಪದದ ಬದಲಿಗೆ ಜಾತಿಗಳು ಮುನ್ನೆಲೆಗೆ ಬರುತ್ತವೆ. ಇಂದಿಗೂ ದೇವಸ್ಥಾನಗಳಲ್ಲಿ ದೇವರ ವಿಗ್ರಹಗಳನ್ನು ಮುಟ್ಟಿದ ಕಾರಣಕ್ಕಾಗಿ ದಲಿತರನ್ನು ಥಳಿಸಲಾಗುತ್ತದೆ, ಅವರಿಗೆ ದಂಡ ವಿಧಿಸಲಾಗುತ್ತದೆ. ತನ್ನ ಸಮಾಜದೊಳಗಿರುವ ಅಸಮಾನತೆ, ಅಸ್ಪಶ್ಯತೆಯಿಂದ ಬಿಡುಗಡೆ ಪಡೆಯುವ ಉದ್ದೇಶದಿಂದ ಈ ದೇಶದಲ್ಲಿ ವ್ಯಾಪಕ ಮತಾಂತರಗಳಾಗುತ್ತಿವೆ. ದೇವಸ್ಥಾನಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪಶ್ಯತೆ, ಜಾತೀಯತೆಯನ್ನು ತಡೆಯಲು ಬಲವಾದ ಕಾನೂನನ್ನು ಜಾರಿಗೊಳಿಸಿದರೆ ಸಹಜವಾಗಿಯೇ ಮತಾಂತರಗಳನ್ನು ತಡೆಯಬಹುದು. ಆದರೆ ಜಾತೀಯತೆಯನ್ನು, ಅಸ್ಪಶ್ಯತೆಯನ್ನು ಪೋಷಿಸುತ್ತಾ, ಮತಾಂತರ ತಡೆಯಲು ಕಾನೂನನ್ನು ರೂಪಿಸುವುದು ಕ್ರೌರ್ಯದ ಪರಮಾವಧಿಯಾಗಿದೆ. ತಳಸ್ತರದ ಸಮುದಾಯ ಶೋಷಣೆಯ ವಿರುದ್ಧ ಯಾವ ಪ್ರತಿಭಟನೆಯನ್ನೂ ನಡೆಸದೇ ಅದನ್ನು ಅನುಭವಿಸುತ್ತಾ ಹೋಗಬೇಕು ಎನ್ನುವುದೇ ಈ ಕಾಯ್ದೆಯ ಅಂತಿಮ ಉದ್ದೇಶವಾಗಿದೆ. ಜಾತೀಯತೆಯನ್ನು ಪೋಷಿಸುತ್ತಿರುವ ಮೇಲ್‌ಜಾತಿಯವರ ಬೇಡಿಕೆಯ ಮೇರೆಗೆ ಈ ಕಾನೂನನ್ನು ಜಾರಿಗೊಳಿಸಲಾಗಿದೆಯೇ ಹೊರತು, ತಳಸ್ತರದ ಜನರ ಅಗತ್ಯವಾಗಿ ಅಲ್ಲ.
ಒಂದೆಡೆ ಅಲ್ಪಸಂಖ್ಯಾತ ಸಮುದಾಯಕ್ಕೆ ಮತಾಂತರ ನಡೆಸುತ್ತಿದ್ದಾರೆ ಎಂದು ಹಲ್ಲೆಗಳನ್ನು ನಡೆಸಿ, ಅವರನ್ನು ಪೊಲೀಸರಿಗೆ ಒಪ್ಪಿಸುವುದು. ಜೊತೆಗೆ ಮತಾಂತರದ ಹೆಸರಲ್ಲಿ ಗದ್ದಲಗಳನ್ನು ಎಬ್ಬಿಸುವುದು. ಇನ್ನೊಂದೆಡೆ ಅಸಮಾನತೆ, ಅಸ್ಪಶ್ಯತೆ ಇವುಗಳನ್ನೆಲ್ಲ ಈ ಕಾಯ್ದೆಯ ಮೂಲಕ ಬಲವಂತವಾಗಿ ಶೋಷಿತರ ತಲೆಯ ಮೇಲೆ ಹೇರುವುದು. ಮತಾಂತರ ತಪ್ಪು ಎಂದಾದರೆ, ಬಲವಂತವಾಗಿ ಅಸ್ಪಶ್ಯತೆ, ಜಾತೀಯತೆಯನ್ನು ಹೇರುವುದು ಕೂಡ ಅಪರಾಧವಾಗಬೇಕು. ಒಂದನ್ನು ನಿಷೇಧಿಸಿ ಇನ್ನೊಂದನ್ನು ಪೋಷಿಸುವ ಈ ಕಾಯ್ದೆ ಸಂವಿಧಾನ ವಿರೋಧಿಯಾದುದು. ಧರ್ಮ ನಂಬಿಕೆಯ ತಳಹದಿಯ ಮೇಲೆ ನಿಂತಿದೆ. ಒಬ್ಬನ ಹೆಸರನ್ನು ಬಲವಂತವಾಗಿ ಬದಲಿಸುವ ಮೂಲಕ ಧರ್ಮವನ್ನು ಬದಲಿಸುವುದಕ್ಕೆ ಸಾಧ್ಯವಿಲ್ಲ. ಖಡ್ಗ, ಕೋವಿ ತೋರಿಸಿ ಮತಾಂತರಗೊಳಿಸುವುದಕ್ಕೆ ಭಾರತದಲ್ಲಿ ಮೊಗಲರ, ಬ್ರಿಟಿಷರ ಆಳ್ವಿಕೆ ನಡೆಯುತ್ತಿಲ್ಲ. ಆದುದರಿಂದ ‘ಬಲವಂತದ ಮತಾಂತರ’ ಎನ್ನುವುದೇ ಸರಕಾರದ ಸೃಷ್ಟಿಯಾಗಿದೆ. ಒಬ್ಬ ಮತಾಂತರಗೊಳ್ಳಲು ಎರಡು ಕಾರಣಗಳಿವೆ. ಮೊದಲನೆಯದು, ತಾನು ಬದುಕುತ್ತಿರುವ ಸಮಾಜದಲ್ಲಿ ತನಗೆ ಅನ್ಯಾಯವಾಗಿರಬೇಕು ಮತ್ತು ಆ ಸಮಾಜದ ಬಗ್ಗೆ ಬಗ್ಗೆ ಆತ ನಂಬಿಕೆಯನ್ನು ಕಳೆದುಕೊಂಡಿರಬೇಕು. ಇನ್ನೊಂದು ಕಾರಣ, ಇತರ ಧರ್ಮದ ನಂಬಿಕೆ ಆತನಿಗೆಒಪ್ಪಿತವಾಗಿರಬೇಕು. ತಾನು ಯಾವ ದೇವರ ಮೇಲೆ ನಂಬಿಕೆಯಿಡಬೇಕೋ, ಬೇಡವೋ ಎನ್ನುವುದನ್ನು ತೀರ್ಮಾನಿಸುವುದು ತೀರಾ ಖಾಸಗಿಯಾದುದು. ಒಬ್ಬ ಎಲ್ಲ ಧರ್ಮಗಳ ಮೇಲೆ ನಂಬಿಕೆ ಕಳೆದುಕೊಂಡು, ನಾಸ್ತಿಕನೂ ಆಗಬಹುದು. ಆತನನ್ನು ಬಲವಂತವಾಗಿ ನಾಸ್ತಿಕನನ್ನಾಗಿಸಲಾಗಿದೆ ಎಂದು ಆರೋಪಿಸಲು ಸಾಧ್ಯವೆ? ಒಬ್ಬನಿಗೆ ತಾನು ನಂಬಿದ ಧರ್ಮಕ್ಕಿಂತ ಹಣ, ಅನ್ನವೇ ಮುಖ್ಯ ಅನ್ನಿಸಿದರೆ ಅದನ್ನು ತಡೆಯುವ ಹಕ್ಕು ನಮಗಿದೆಯೆ? ಅದು ಆತನ ವೈಯಕ್ತಿಕ ನಂಬಿಕೆಯಲ್ಲವೆ? ಹಸಿವು ಇಂಗಿಸದ, ವೈಯಕ್ತಿಕವಾಗಿ ಘನತೆಯನ್ನು ನೀಡದ ಧರ್ಮವನ್ನು, ಸಮಾಜವನ್ನು ತಿರಸ್ಕರಿಸುವ ಹಕ್ಕನ್ನು ಈ ದೇಶದ ಶೋಷಿತ ಸಮುದಾಯದಿಂದ ಕಿತ್ತುಕೊಳ್ಳುವುದೇ ಮತಾಂತರ ನಿಷೇಧ ಕಾಯ್ದೆಯ ಅಂತಿಮ ಗುರಿಯಾಗಿದೆ.
ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯ ನಡುವೆ ದೊಡ್ಡ ವ್ಯತ್ಯಾಸವೇನೂ ಇಲ್ಲ. ಬಲವಂತದ ಮತಾಂತರವಾಗುತ್ತಿದೆ ಎಂದು ಈ ನೆಲದ ಶೋಷಿತ ಸಮುದಾಯ ಯಾವತ್ತೂ ಸರಕಾರಕ್ಕೆ ದೂರು ಸಲ್ಲಿಸಿರಲಿಲ್ಲ. ಇದೇ ಸಂದರ್ಭದಲ್ಲಿ ತನ್ನದೇ ಸಮುದಾಯದೊಳಗೆ ತಮ್ಮ ಮೇಲೆ ಹೇರಲಾಗುತ್ತಿರುವ ಜಾತೀಯತೆ, ಅಸ್ಪಶ್ಯತೆಯ ಬಗ್ಗೆ ಇವರು ಸಾಕಷ್ಟು ದೂರುಗಳನ್ನು ಸಲ್ಲಿಸಿದ್ದಾರಾದರೂ ಇದನ್ನು ನಿಯಂತ್ರಿಸಲು ಯಾವುದೇ ಕ್ರಮವನ್ನು ಸರಕಾರ ತೆಗೆದುಕೊಂಡಿಲ್ಲ. ಗೋವುಗಳನ್ನು ಸಾಕುವ ರೈತರು ಯಾವತ್ತೂ ಕೂಡ ‘ಗೋಹತ್ಯೆ ನಿಷೇಧ ಕಾಯ್ದೆ’ ಜಾರಿಗೆ ತರಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದಿಲ್ಲ. ಇಷ್ಟಾದರೂ ಈ ನಾಡಿನ ರೈತರ ಮೇಲೆ ಈ ಕಾಯ್ದೆಯನ್ನು ಹೇರಿ ಗೋಸಾಕಣೆಯನ್ನು ನಷ್ಟದಾಯಕಗೊಳಿಸಲಾಯಿತು. ಮತಾಂತರ ಕಾಯ್ದೆಯ ಮೂಲಕ, ಈ ನಾಡಿನಲ್ಲಿ ಜಾತೀಯತೆ, ಅಸ್ಪಶ್ಯತೆಯನ್ನು ಪಾಲಿಸುವವರಿಗೆ ಇನ್ನಷ್ಟು ಶಕ್ತಿಯನ್ನು ಸರಕಾರ ಒದಗಿಸಿಕೊಟ್ಟಿತು. ಯಾವ ಧರ್ಮವನ್ನಾದರೂ ಸ್ವೀಕರಿಸುವ ಹಕ್ಕನ್ನು ತಳಸಮುದಾಯದಿಂದ ಕಿತ್ತುಕೊಂಡು ಅವರ ಮೇಲೆ ವೈದಿಕ ಶಕ್ತಿಗಳ ನಿಯಂತ್ರಣವನ್ನು ಇನ್ನಷ್ಟು ಬಿಗಿಗೊಳಿಸಿತು. ಈ ಕಾರಣದಿಂದಲೇ, ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವುದು ಆ ಕಾನೂನಿಂದ ದೌರ್ಜನ್ಯಕ್ಕೀಡಾಗುತ್ತಿರುವ ಅಲ್ಪಸಂಖ್ಯಾತ ಸಮುದಾಯದ ಜನರ ಅಗತ್ಯ ಮಾತ್ರವಲ್ಲ, ತಮ್ಮ ಧಾರ್ಮಿಕ ನಂಬಿಕೆಯ ಹಕ್ಕನ್ನು ಕಳೆದುಕೊಂಡ ಶೋಷಿತ ಸಮುದಾಯದ ಅಗತ್ಯವೂ ಆಗಿತ್ತು. ಆದುದರಿಂದಲೇ ಈ ನಾಡಿನ ಬಹುಸಂಖ್ಯಾತ ಸಮುದಾಯ ಒಕ್ಕೊರಲಿನಿಂದ ಮತಾಂತರ ಕಾಯ್ದೆ ನಿಷೇಧ ರದ್ದನ್ನು ಸ್ವಾಗತಿಸುತ್ತಿದೆ.