ಹಿಂದುತ್ವದ ಪರಿಕಲ್ಪನೆಯ ಹುಟ್ಟಿನ ಹಿನ್ನೆಲೆ ಮತ್ತು ಅದರ ವಯಸ್ಸು
ಇತಿಹಾಸದುದ್ದಕ್ಕೂ ಈ ದೇಶಕ್ಕೆ ಎಂದಿಗೂ ನಿಷ್ಠರಾಗದೆ ಸದಾ ದೇಶದ್ರೋಹದ ಕೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಿಂದುತ್ವವಾದಿಗಳು ಇಂದಿಗೂ ತಮ್ಮ ಹಿಂದುತ್ವದ ಅಜೆಂಡಾ ಮೂಲಕ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ರಾಷ್ಟ್ರದ ಸಮಗ್ರತೆ, ಸಾರ್ವಭೌಮತ್ವ, ಬಹುತ್ವ, ಸಂವಿಧಾನ ಹಾಗೂ ಜನತಂತ್ರ ವ್ಯವಸ್ಥೆಗಳಿಗೆ ಬಹುದೊಡ್ಡ ಗಂಡಾಂತರವನ್ನು ತಂದಿಟ್ಟಿದ್ದಾರೆ.
ಬುದ್ಧೋತ್ತರ ಕಾಲದ ನಂತರದ ಅಂದಾಜು ಎರಡು ಸಾವಿರ ವರ್ಷಗಳ ಈಚೆಗೆ ಸಂಸ್ಕೃತದಲ್ಲಿ ರಚಿಸಲ್ಪಟ್ಟ ಆರ್ಯ ವೈದಿಕ ಮತದ ಸಾಹಿತ್ಯಗಳಾದ ಕಾಲ್ಪನಿಕ ಮಹಾಕಾವ್ಯಗಳು ವೇದ ಶಾಸ್ತ್ರ ಉಪನಿಷತ್ತು ಆಗಮಗಳು ಮತ್ತು ಪುರಾಣಗಳಲ್ಲಿ ‘ಹಿಂದೂ’ ಎನ್ನುವ ಶಬ್ದದ ಪ್ರಯೋಗವಿಲ್ಲ. ಹಿಂದೂ ಎನ್ನುವ ಶಬ್ದದ ವಯಸ್ಸು ತೀರ ಇತ್ತೀಚಿನದು ಎಂದು ಸಾಬೀತುಪಡಿಸಲು ಬಹಳ ಮಹತ್ವದ ದಾಖಲೆಗಳ ಅಥವಾ ಗಹನವಾದ ಸಂಶೋಧನೆಯ ಅಗತ್ಯವಿಲ್ಲ. ಹಾಗಾದರೆ ಈ ಹಿಂದೂ ಎನ್ನುವ ಶಬ್ದ ಮತ್ತು ಹಿಂದುತ್ವದ ಪರಿಕಲ್ಪನೆ ಹುಟ್ಟಿದ್ದಾದರೂ ಹೇಗೆ ಮತ್ತು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟದ ಕೆಲಸವೇನಲ್ಲ. ನಮಗೆಲ್ಲರಿಗೂ ತಿಳಿದ ಹಾಗೆ ಹದಿಮೂರನೇ ಶತಮಾನದ ನಂತರ ಭಾರತವನ್ನು ಆಳಿದ ಪರ್ಷಿಯನ್ನರು ಸಿಂಧೂ ನದಿಯ ಈಚೆಗಿರುವ ಜನಸಮುದಾಯವನ್ನು ಮೊದಲಬಾರಿಗೆ ಹಿಂದೂಗಳೆಂದು ಕರೆದರು. ಇದು ಪ್ರದೇಶವಾಚಕವೇ ಹೊರತು ಧರ್ಮವಾಚಕ ಶಬ್ದವಲ್ಲ.
ದಯಾನಂದ ಸರಸ್ವತಿ ಎಂಬ ಹೆಸರಿನ ಸನ್ಯಾಸಿಯೊಬ್ಬರು ಎಪ್ರಿಲ್ 10, 1875ರಂದು ಮುಂಬೈನ ಗಿರ್ಗಾಂವ್ನಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು. ಆರ್ಯ ಸಮಾಜದ ಬದಲಿಗೆ ಅವರು ಹಿಂದೂ ಸಮಾಜವನ್ನು ಏಕೆ ಸ್ಥಾಪಿಸಲಿಲ್ಲವೆಂದರೆ ಹಿಂದೂ ಎನ್ನುವ ಶಬ್ದವು ಪ್ರದೇಶವಾಚಕವಾಗಿದ್ದು ಅದು ಧರ್ಮವನ್ನು ಪ್ರತಿನಿಧಿಸುವುದಿಲ್ಲ ಎನ್ನುವ ಸಂಗತಿ ಅವರಿಗೆ ತಿಳಿದಿತ್ತು. ಅಷ್ಟೇ ಅಲ್ಲದೆ ಆ ಶಬ್ದವು ಪರ್ಷಿಯನ್ ಭಾಷೆಗೆ ಸೇರಿದ್ದು. ಅದಕ್ಕೆ ಪರ್ಷಿಯನ್ ಭಾಷೆಯಲ್ಲಿ ಮೌಲಿಕವಾದ ಅರ್ಥವಿಲ್ಲ ಎನ್ನುವುದೂ ಅವರಿಗೆ ಗೊತ್ತಿತ್ತು. ಆ ಕಾರಣದಿಂದ ಅವರು ಆರ್ಯ ಸಮಾಜವನ್ನು ಶುದ್ಧ ವೇದಗಳ ಆಧಾರದಲ್ಲಿ ಧರ್ಮವಾಚಕ ನೆಲೆಗಟ್ಟಿನಲ್ಲಿ ಪ್ರಯೋಗಿಸುವ ಮೂಲಕ ಹಿಂದೂ ಶಬ್ದವನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಅದಾಗಿ 50 ವರ್ಷಗಳ ನಂತರ ಆಗ ಗಾಂಧೀಜಿಯವರ ನೇತೃತ್ವದಲ್ಲಿ ಸ್ವಾತಂತ್ರ್ಯ ಚಳವಳಿ ಸಾಮೂಹಿಕ ಸ್ವರೂಪ ಪಡೆಯುತ್ತಿದ್ದಂತೆ ರಾಜಕೀಯ ಕಾರಣಗಳಿಂದ ಹಿಂದೂ ಶಬ್ದವನ್ನು ಮುನ್ನೆಲೆಗೆ ತರಲಾಯಿತು.
ದಕ್ಷಿಣ ಆಫ್ರಿಕಾದಿಂದ ಸ್ವದೇಶಕ್ಕೆ ಹಿಂದಿರುಗಿದ ನಂತರ ಸ್ವಾತಂತ್ರ್ಯ ಚಳವಳಿಗೆ ಧುಮುಕುವುದಕ್ಕಿಂತ ಮೊದಲು ಗಾಂಧೀಜಿಯವರು ಇಡೀ ದೇಶವನ್ನು ಸುತ್ತಿದರು. ಈ ನೆಲದ ನೈಜ ಸಮಸ್ಯೆಗಳು, ಜನರ ಸ್ಥಿತಿಗತಿಗಳನ್ನು ಚೆನ್ನಾಗಿ ತಿಳಿದುಕೊಂಡರು. ಗಾಂಧೀಜಿ ಬರುವ ವರೆಗೆ ದೇಶದಲ್ಲಿ ಸ್ವಾತಂತ್ರ್ಯ ಚಳವಳಿಗೆ ಸಾಮೂಹಿಕ ಸ್ವರೂಪ ಸಿಕ್ಕಿರಲಿಲ್ಲ. ರಾಜಸತ್ತೆಗಳು ತಮ್ಮ ಶಕ್ತ್ಯಾನುಸಾರ ಅಲ್ಲಲ್ಲಿ ಬ್ರಿಟಿಷರ ವಿರುದ್ಧ ಪ್ರತಿರೋಧ ತೋರಿದ ಘಟನೆಗಳು ನಡೆದಿದ್ದವು. 1767, 1780, 1790 ಮತ್ತು 1798ರಲ್ಲಿ ನಾಲ್ಕು ಬಾರಿ ಮೈಸೂರಿನ ಸುಲ್ತಾನರು ಮತ್ತು ಬ್ರಿಟಿಷರ ನಡುವೆ ಆಂಗ್ಲೋ-ಮೈಸೂರು ಯುದ್ಧಗಳು ನಡೆದಿದ್ದವು. 1824ರಲ್ಲಿ ಕಿತ್ತೂರಿನ ರಾಣಿ ಚೆನ್ನಮ್ಮ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸುವಂತೆ ಸೆಣೆಸಿದ್ದಳು. ಆದರೆ ಇತಿಹಾಸಕಾರರು ಬ್ರಿಟಿಷರ ವಿರುದ್ಧದ ಇಂತಹ ಮಹತ್ವದ ಪ್ರತಿರೋಧಗಳನ್ನು ಕಡೆಗಣಿಸಿದರು. ಇತಿಹಾಸದಲ್ಲಿ ಈ ಮಹತ್ವದ ಯುದ್ಧಗಳನ್ನು ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಗಳೆಂದು ಪರಿಗಣಿಸಲಿಲ್ಲ. ಹಾಗೆ ಪರಿಗಣಿಸದಿದ್ದರೆ ಹೋಗಲಿ? ಇತ್ತೀಚೆಗೆ ಟಿಪ್ಪುನಂತಹ ಅಪ್ಪಟ ದೇಶಭಕ್ತನ ಸಾಹಸವನ್ನು ಇತಿಹಾಸದಿಂದ ಅಳಿಸುವ ದುಸ್ಸಾಹಸಗಳು ನಡೆಯುತ್ತಿವೆ.
ಬ್ರಿಟಿಷರ ಸೈನ್ಯದೊಳಗಿನ ಒಬ್ಬ ಸಾಮಾನ್ಯ ಸಿಪಾಯಿ ತನ್ನ ಜಾತಿ ಶ್ರೇಷ್ಠತೆಯ ಭ್ರಮೆಯಲ್ಲಿ ಶಸ್ತ್ರಕ್ಕೆ ಸವರಲಾಗಿದ್ದ ದನದ ಕೊಬ್ಬನ್ನು ಬಾಯಿಯಿಂದ ಕಚ್ಚಲು ನಿರಾಕರಿಸಿದಾಗ 1858ರಲ್ಲಿ ನಡೆದ ಒಂದು ಚಿಕ್ಕ ಘಟನೆಯನ್ನು ಸಿಪಾಯಿ ದಂಗೆ ಎಂತಲೂ ಹಾಗೂ ಅದುವೇ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂತಲೂ ವ್ಯವಸ್ಥಿತವಾಗಿ ಬಿಂಬಿಸಲಾಯಿತು. ಆದರೆ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಚಳವಳಿಗೆ ಸಾಮೂಹಿಕ ಸ್ವರೂಪ ಸಿಗಲು ಅನೇಕ ವರ್ಷಗಳೇ ಬೇಕಾದವು. ಸ್ವಾತಂತ್ರ್ಯ ಚಳವಳಿ 1910ರ ನಂತರ ತೀವ್ರರೂಪದಲ್ಲಿ ಬೆಳೆದದ್ದು ಗಾಂಧೀಜಿಯವರ ನೇತೃತ್ವದಲ್ಲಿ. ತಮ್ಮನ್ನು ತಾವು ದೇಶಭಕ್ತರೆಂದು ಕರೆದುಕೊಂಡವರು ಹಾಗೂ ಬ್ರಿಟಿಷರೊಂದಿಗೆ ಸೇರಿ ಗಾಂಧೀಜಿ ರೂಪಿಸಿದ ಸ್ವಾತಂತ್ರ್ಯ ಚಳವಳಿಯನ್ನು ದಿಕ್ಕುತಪ್ಪಿಸಲು ಯತ್ನಿಸಿದವರು ಗಾಂಧೀಜಿ ಬರುವುದಕ್ಕೆ ಮುಂಚೆ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಅಷ್ಟೇ ಅಲ್ಲದೆ ಸ್ವಾತಂತ್ರ್ಯ ಚಳವಳಿ ತೀವ್ರತೆ ಪಡೆದಂತೆ ಇವರು ಇನ್ನಷ್ಟು ಆತಂಕ ಹಾಗೂ ಅಭದ್ರತೆಗೊಳಗಾದರು.
ಗಾಂಧೀಜಿ ನೇತೃತ್ವದ ಸ್ವಾತಂತ್ರ್ಯ ಚಳವಳಿ ಸ್ಪಷ್ಟವಾಗಿ ಜನಮನವನ್ನು ತಲುಪುತ್ತ ತೀವ್ರತೆ ಪಡೆಯುತ್ತಿದ್ದಂತೆ ಒಂದು ಕಡೆ ಭಾರತ ಬಿಟ್ಟು ಹೋಗಬೇಕಲ್ಲ ಎಂದು ಬ್ರಿಟಿಷರು ಆತಂಕಕ್ಕೊಳಗಾದರೆ ಮತ್ತೊಂದು ಕಡೆ ದೇಶ ಸ್ವಾತಂತ್ರ್ಯ ಪಡೆದು ರಾಜಸತ್ತೆಗೆ ಮರಳದೆ ಪ್ರಜಾಸತ್ತೆಗೆ ಮರಳುತ್ತದಲ್ಲ ಎನ್ನುವ ಆತಂಕ ಹಿಂದುತ್ವವಾದಿಗಳಿಗೆ ಕಾಡಲಾರಂಭಿಸಿತು. ಈ ಆತಂಕವು ಇವರಿಬ್ಬರನ್ನು ಪರಸ್ಪ ರ ಇನ್ನಷ್ಟು ಹತ್ತಿರಕ್ಕೆ ತಂದಿತು. ಹಿಂದುತ್ವವಾದಿಗಳನ್ನು ಬಳಸಿಕೊಂಡು ಸ್ವಾತಂತ್ರ್ಯ ಚಳವಳಿಯನ್ನು ಹಣಿದು ದೇಶವನ್ನು ಇನ್ನಷ್ಟು ದಿನ ಆಳಬೇಕೆನ್ನುವ ಬ್ರಿಟಿಷರು ಹಾಗೂ ಬ್ರಿಟಿಷರೊಂದಿಗೆ ಸೇರಿ ಸ್ವಾತಂತ್ರ್ಯ ಚಳವಳಿಯನ್ನು ದಿಕ್ಕು ತಪ್ಪಿಸುತ್ತ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕೆನ್ನುವ ಹಿಂದುತ್ವವಾದಿಗಳು, ಇವರಿಬ್ಬರು ಸಾಂಘಿಕವಾಗಿ ಗಾಂಧಿ-ನೆಹರೂ-ಪಟೇಲ್-ನೇತಾಜಿ ನೇತೃತ್ವದ ಸ್ವಾತಂತ್ರ್ಯ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾರಂಭಿಸಿದರು.
ಒಂದು ವೇಳೆ ದೇಶ ಸ್ವಾತಂತ್ರ್ಯ ಪಡೆದು ಪ್ರಜಾತಂತ್ರ ವ್ಯವಸ್ಥೆ ಸ್ಥಾಪನೆಯಾಗಿ ಜಾತ್ಯತೀತ, ಸಮಾಜವಾದಿ ಸಿದ್ಧಾಂತವುಳ್ಳ ಸಂವಿಧಾನ ಅಂಗೀಕರಿಸಿದರೆ ಅದನ್ನು ಮುಂದಿನ ದಿನಗಳಲ್ಲಿ ವಿಫಲಗೊಳಿಸುವ ದೂರಾಲೋಚನೆಯ ಹಾಗೂ ಅಷ್ಟೇ ದುರಾಲೋಚನೆಯ ಉದ್ದೇಶದಿಂದ ಹುಟ್ಟಿಕೊಂಡಿದ್ದೇ ಹಿಂದುತ್ವದ ಪರಿಕಲ್ಪನೆ. ಇದನ್ನು ಮೊತ್ತ ಮೊದಲು ತೇಲಿ ಬಿಟ್ಟವರು ವಿ.ಡಿ. ಸಾವರ್ಕರ್. ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪನೆಯ ಮೂಲಕ 1925ರಲ್ಲಿ ಅಧಿಕೃತವಾಗಿ ಹುಟ್ಟಿಕೊಂಡಿತು. ಅಂದರೆ ಹಿಂದುತ್ವವು ಮೂಲತಃ ಒಂದು ರಾಜಕೀಯ ಪರಿಕಲ್ಪನೆ. ಹಾಗಾಗಿ ಈ ದೇಶದ ಹಿಂದೂ ಜೀವನ ಪದ್ಧತಿಗೂ ಹಾಗೂ ಮತಾಂಧರು ಹುಟ್ಟುಹಾಕಿರುವ ಹಿಂದುತ್ವಕ್ಕೂ ಯಾವುದೇ ಸಂಬಂಧವಿಲ್ಲ. ಸಂಘ ಹುಟ್ಟುವ ಮೊದಲೇ ಹಿಂದೂ ಮಹಾಸಭಾ ಎನ್ನುವ ರಾಜಕೀಯ ಪಕ್ಷವೊಂದು ಮುಸ್ಲಿಮ್ ಲೀಗ್ ಜೊತೆಗೆ ರಾಜಕೀಯ ಸಂಬಂಧವನ್ನು ಹೊಂದಿತ್ತು. ತನ್ನ ಸಹಭಾಗಿ ರಾಜಕೀಯ ಪಕ್ಷವಾಗಿದ್ದ ಮುಸ್ಲಿಮ್ ಲೀಗ್ ಜೊತೆಗೂಡಿ ಹಿಂದೂ ಮಹಾಸಭಾ ದೇಶವಿಭಜನೆಯ ಹಾಗೂ ದ್ವಿರಾಷ್ಟ್ರ ಸಿದ್ಧಾಂತದ ಮಾತನಾಡಿತ್ತು.
ಮೊತ್ತ ಮೊದಲು ಸಾವರ್ಕರ್ ಹಾಗೂ ಶ್ಯಾಮಪ್ರಸಾದ್ ಮುಖರ್ಜಿ ಇಬ್ಬರು ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದರು. ಮುಖರ್ಜಿಯಂತೂ ಬಂಗಾಳ ವಿಭಜನೆಗೆ ಬಿಗಿ ಪಟ್ಟು ಹಿಡಿದಿದ್ದರು. ಇದನ್ನು ಗಮನಿಸಿದ ಬ್ರಿಟಿಷ್ ಆಡಳಿತ ಕೇವಲ 30 ಪ್ಲಸ್ ವಯಸ್ಸಿನ ಮುಖರ್ಜಿಯನ್ನು ಕಲ್ಕತ್ತಾ ವಿ.ವಿ.ಗೆ ಕುಲಪತಿಯನ್ನಾಗಿಸಿತು ಹಾಗೂ ಸಾವರ್ಕರ್ ಮೇಲೆ ಹೇರಿದ್ದ ರಾಜಕೀಯ ನಿಷೇಧವನ್ನು ತೆರವುಗೊಳಿಸಿ ಅವರನ್ನು ವ್ಯವಸ್ಥಿತವಾಗಿ ಬಳಸಿಕೊಂಡಿತು. ಹಿಂದೂ ಮಹಾಸಭಾ ಬಂಗಾಳ ಹಾಗೂ ಸಿಂಧ್ ಪ್ರಾಂತದಲ್ಲಿ ಮುಸ್ಲಿಮ್ ಲೀಗ್ ನೊಂದಿಗೆ ಸೇರಿ ಪ್ರಾದೇಶಿಕ ಸರಕಾರ ರಚನೆ ಮಾಡಿತ್ತು. ಅದೇ ಸಮಯದಲ್ಲಿ ಮುಸ್ಲಿಮ್ ಲೀಗ್ ತನ್ನ ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಪಾಕಿಸ್ತಾನ ರಚನೆಯ ನಿರ್ಣಯವನ್ನು ಅಧಿಕೃತವಾಗಿ ಅಂಗೀಕರಿಸಿತು. ಆದರೂ ಹಿಂದೂ ಮಹಾಸಭಾದ ಈ ಸ್ವಯಂಘೋಷಿತ ದೇಶಭಕ್ತ ನಾಯಕರು ಮುಸ್ಲಿಮ್ ಲೀಗ್ ನೊಂದಿಗಿನ ತಮ್ಮ ನಂಟಿಗೆ ಕೊನೆ ಹಾಡಲಿಲ್ಲ. 1942ರಲ್ಲಿ ತೀವ್ರತೆ ಪಡೆದ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಹಿಂದುತ್ವವಾದಿಗಳು ಭಾಗವಹಿಸಲಿಲ್ಲ.
ಎರಡನೇ ಜಾಗತಿಕ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯೊಂದಿಗೆ ಸೇರಿ ಬ್ರಿಟಿಷರ ವಿರುದ್ಧ ನೇತಾಜಿಯವರು ಯುದ್ಧ ಘೋಷಿಸಿದರು. ಆದರೆ ಸಾವರ್ಕರ್ ‘‘ಹಿಂದೂಗಳು ಯಾರೂ ನೇತಾಜಿ ಸೈನ್ಯಕ್ಕೆ ಸೇರಬಾರದು, ಬ್ರಿಟಿಷರ ಸೈನ್ಯ ಸೇರಬೇಕು’’ ಎಂದು ಬಹಿರಂಗವಾಗಿ ಕರೆ ಕೊಟ್ಟು ಆರು ತಿಂಗಳಲ್ಲಿ ಈಶಾನ್ಯ ಭಾರತದಲ್ಲಿ ಗರಿಷ್ಠ ಒಂದು ಲಕ್ಷ ಮಂದಿಯನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಿದರು. ದೇಶ ವಿಭಜನೆಯ ಕಾರಣಕ್ಕಾಗಿ ಗಾಂಧಿ ಹತ್ಯೆ ಮಾಡಲಾಯಿತು ಎಂದು ಸುಳ್ಳು ಹೇಳುವ ಹಿಂದುತ್ವವಾದಿ ಭಯೋತ್ಪಾದಕ ಗುಂಪು ಗಾಂಧೀಜಿ ಕೊಲೆಗೆ 1930ರಿಂದಲೇ ಪ್ರಯತ್ನ ಆರಂಭಿಸಿತ್ತು. ಒಟ್ಟು ಐದು ಬಾರಿ ಗಾಂಧಿ ಹತ್ಯೆಯ ಪ್ರಯತ್ನಗಳಾಗಿ ಈ ಗುಂಪು 1948ರಲ್ಲಿ ಆರನೇ ಬಾರಿ ಯಶಸ್ವಿಯಾಯಿತು. ಒಂದು ಕಡೆ ತಾವೇ ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸುತ್ತ, ದೇಶ ವಿಭಜನೆಯ ಮುಖ್ಯ ರೂವಾರಿ ಮುಸ್ಲಿಮ್ ಲೀಗ್ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದ ಹಿಂದುತ್ವವಾದಿಗಳು ದೇಶ ವಿಭಜನೆಯನ್ನು ಬಲವಾಗಿ ವಿರೋಧಿಸಿದ್ದ ಗಾಂಧೀಜಿಯವರನ್ನು ದೇಶ ವಿಭಜನೆಯ ಕಾರಣಕ್ಕಾಗಿ ಹತ್ಯೆ ಮಾಡಲಾಯಿತು ಎನ್ನುವ ಸುಳ್ಳು ಸುದ್ದಿ ಹರಡಿದ್ದಾದರೂ ಏತಕ್ಕೆ ಎನ್ನುವ ಕುರಿತು ದೇಶದ ಜನರು ಯೋಚಿಸಬೇಕಿದೆ.
ಗಾಂಧೀಜಿಯ ನಾಯಕತ್ವ ಇಡೀ ಭಾರತದಾದ್ಯಂತ ಸ್ವಾತಂತ್ರ್ಯ ಚಳವಳಿಯ ಕಾವನ್ನು ಹೆಚ್ಚಿಸಿತ್ತು. ಇದು ಬ್ರಿಟಿಷರ ಹಿತಚಿಂತಕರಾಗಿದ್ದ ಹಿಂದುತ್ವವಾದಿಗಳ ನಿದ್ದೆ ಕೆಡಿಸಿತ್ತು. ಗಾಂಧೀಜಿಯವರು ಸ್ವಾತಂತ್ರ್ಯದ ನಂತರ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಬಿಡದೆ ದೇಶವನ್ನು ಒಂದು ಸಂವಿಧಾನವುಳ್ಳ ಜಾತ್ಯತೀತ ರಾಷ್ಟ್ರ ಮಾಡಿದ್ದು ಹಿಂದುತ್ವವಾದಿಗಳ ಬೇಗುದಿಗೆ ಕಾರಣವಾಗಿತ್ತು. ಜಾತ್ಯತೀತ ರಾಷ್ಟ್ರವಾಗುವುದರಿಂದ ತಮಗೆ ಬಹಳ ದೊಡ್ಡ ನಷ್ಟ ಎಂದು ಹಿಂದುತ್ವವಾದಿಗಳು ಭಾವಿಸಿದ್ದರು. ಜನತಂತ್ರ ವ್ಯವಸ್ಥೆ ಮತ್ತು ಸಂವಿಧಾನದ ಸಹಾಯದಿಂದ ಈ ದೇಶದ ನೆಲಮೂಲ ನಿವಾಸಿಗಳೆಲ್ಲರೂ ಅಕ್ಷರಸ್ಥರಾಗಿ ಮೇಲೆ ಬರುತ್ತಾರಲ್ಲ ಎನ್ನುವ ಮತ್ಸರ ಹಾಗೂ ಭಯ ಹಿಂದುತ್ವವಾದಿಗಳಿಗೆ ಕಾಡುತ್ತಿತ್ತು. ರಾಜಸತ್ತೆಯಲ್ಲಿ ಅನಾಯಾಸವಾಗಿ ಬದುಕಿದ ಪರಾವಲಂಬಿಗಳು ಜನತಂತ್ರಕ್ಕೆ ಹೆದರಿ ಕಂಗಾಲಾದರು.
ಜನತಂತ್ರ ವ್ಯವಸ್ಥೆಯು ಎಲ್ಲಿ ಭಾರತೀಯ ಸಮಾಜದ ಮೇಲಿನ ತಮ್ಮ ಬಿಗಿ ಹಿಡಿತವನ್ನು ಸಡಿಲಗೊಳಿಸೀತು ಎನ್ನುವ ಆತಂಕ ಹಿಂದುತ್ವವಾದಿಗಳಿಗೆ ಗಾಂಧಿ ಹತ್ಯೆಗೆ ಪ್ರೇರೇಪಿಸಿತ್ತು. ಜನರ ದೃಷ್ಟಿಯಲ್ಲಿ ದೇಶಭಕ್ತರೆನ್ನಿಸಿಕೊಳ್ಳಲು ಗಾಂಧೀಜಿ ದೇಶವನ್ನು ವಿಭಜಿಸಿದರು ಎಂದು ಬೊಬ್ಬಿಟ್ಟ ಹಿಂದುತ್ವವಾದಿಗಳು ಈ ದೇಶಕ್ಕೆ ಗಾಂಧಿ ದಯಪಾಲಿಸಿದ ಜನತಂತ್ರ ಹಾಗೂ ಸಂವಿಧಾನದ ಕಡು ವಿರೋಧಿಗಳೆನ್ನುವ ಸಂಗತಿ ನಾವು ಅರಿತುಕೊಳ್ಳಬೇಕಿದೆ. ಹೀಗೆ ಇತಿಹಾಸದುದ್ದಕ್ಕೂ ಈ ದೇಶಕ್ಕೆ ಎಂದಿಗೂ ನಿಷ್ಠರಾಗದೆ ಸದಾ ದೇಶದ್ರೋಹದ ಕೃತ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಿಂದುತ್ವವಾದಿಗಳು ಇಂದಿಗೂ ತಮ್ಮ ಹಿಂದುತ್ವದ ಅಜೆಂಡಾ ಮೂಲಕ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ರಾಷ್ಟ್ರದ ಸಮಗ್ರತೆ, ಸಾರ್ವಭೌಮತ್ವ, ಬಹುತ್ವ, ಸಂವಿಧಾನ ಹಾಗೂ ಜನತಂತ್ರ ವ್ಯವಸ್ಥೆಗಳಿಗೆ ಬಹುದೊಡ್ಡ ಗಂಡಾಂತರವನ್ನು ತಂದಿಟ್ಟಿದ್ದಾರೆ.