ಮಾದಕ ವಸ್ತು ಮುಕ್ತ ಬೆಂಗಳೂರು ಮಾಡಲು ಪಣ: ಗೃಹ ಸಚಿವ ಡಾ.ಜಿ.ಪರಮೇಶ್ವರ್
''ಸಂಚಾರ ಸಮಸ್ಯೆ ನಿರ್ವಹಣೆಗೆ ಡ್ರೋನ್ ಬಳಕೆ''
ಬೆಂಗಳೂರು, ಜೂ.16: ರಾಜಧಾನಿ ಬೆಂಗಳೂರನ್ನು ಮಾದಕ ವಸ್ತು ಮುಕ್ತ ನಗರವನ್ನಾಗಿಸುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿ ಮಾದಕ ವ್ಯಸ್ಯನ ದಂಧೆ ಹೆಚ್ಚಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ದಂಧೆಕೋರರ ವಿರುದ್ಧ ಕಠಿಣ ಕ್ರಮಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಶುಕ್ರವಾರ ನಗರದ ಇನ್‍ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀಸಾ ಅವಧಿ ಮೀರಿದರೂ ಅಕ್ರಮ ವಾಸ ಹಾಗೂ ವಿದೇಶಿ ವಿದ್ಯಾರ್ಥಿಗಳಿಂದ ಡ್ರಗ್ಸ್ ದಂಧೆ ನಡೆಸುತ್ತಿರುವ 106 ಮಂದಿ ಆರೋಪಿಗಳನ್ನು ಈಗಾಗಲೆ ಗಡಿಪಾರು ಮಾಡಲಾಗಿದೆ. ವಿದೇಶಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಯಾ ದೇಶಗಳ ರಾಯಭಾರಿ ಕಚೇರಿಗಳಿಗೆ ವಿದೇಶಾಂಗ ಇಲಾಖೆ ಮೂಲಕ ಮಾಹಿತಿ ನೀಡಲಾಗುವುದು ಎಂದರು.
2018 ರಿಂದ ಬೆಂಗಳೂರು ನಗರ ಸೇಫ್ ಸಿಟಿ ಯೋಜನೆ ಶೇ.70ರಷ್ಟು ಕೆಲಸ ಮುಗಿದಿದೆ. 7 ಸಾವಿರ ಸಿಸಿಟಿವಿ ಕ್ಯಾಮರಗಳ ಪೈಕಿ 5 ಸಾವಿರ ಕ್ಯಾಮರ ಅಳವಡಿಸಲಾಗಿದೆ. ನಗರದಲ್ಲಿರುವ 111 ಪೊಲೀಸ್ ಠಾಣೆಗಳ ಪೈಕಿ 80 ಪೊಲೀಸ್ ಠಾಣೆಗಳಲ್ಲಿ ವ್ಯೂವ್ ಸೆಂಟರ್ ತೆರೆಯಲಾಗಿದೆ. 50 ಸೇಫ್ಟಿ ಹೈಲಾಂಡ್ ಗಳ ಪೈಕಿ 30 ಹೈಲ್ಯಾಂಡ್ ತೆರೆಯಲಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಮಹಿಳೆಯರಿಗೆ ತೊಂದರೆಯಾದರೆ ಹೈಲ್ಯಾಂಡ್ ಬಟನ್ ಒತ್ತಿದರೆ ನೇರವಾಗಿ ಕಮಾಂಡ್ ಸೆಂಟರ್ ಗೆ ಮಾಹಿತಿ ರವಾನೆಯಾಗಲಿದೆ. ಪೊಲೀಸರಿಗೆ ಈಗಾಗಲೇ ಬಾಡಿವೋರ್ನ್ ಕ್ಯಾಮರ ನೀಡಲಾಗಿದೆ. ಬೆಂಗಳೂರು ಹಾಗೂ ಮೈಸೂರಿನಲ್ಲಿ ಮೊಬೈಲ್ ಕಮಾಂಡ್ ಸೆಂಟರ್ ತೆರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ದಂಧೆಯಾಗುತ್ತಿದೆ ಎಂಬ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಸರಕಾರದ ಅವಧಿಯಲ್ಲಿ ವರ್ಗಾವಣೆ ದಂಧೆಯಾಗಿತ್ತು. ಆದರೆ, ಈಗ ದಂಧೆ ಮಾಡಲು ಯಾವುದೆ ಕಾರಣಕ್ಕೂ ಬಿಡೋದಿಲ್ಲ. ಪಿಎಸ್ಸೈ ಅಕ್ರಮ ನೇಮಕಾತಿ ವಿಚಾರದ ಕುರಿತು ತನಿಖೆ ನಡೆಯುತ್ತಿದೆ. ನೇಮಕಾತಿ ಬಗ್ಗೆ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ಸಂಚಾರ ಸಮಸ್ಯೆ ನಿರ್ವಹಣೆಗೆ ಡ್ರೋನ್ ಬಳಕೆ: ಬೆಂಗಳೂರು ನಗರದ ಸಂಚಾರ ದಟ್ಟಣೆ ಸಮಸ್ಯೆಯನ್ನು ಮುಂದಿನ ಮೂರು ತಿಂಗಳ ಒಳಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ. ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ಅಪಖ್ಯಾತಿಗೆ ಒಳಗಾಗಿದೆ. ಸಂಚಾರ ದಟ್ಟಣೆ ಸಂಪೂರ್ಣವಾಗಿ ಕಡಿಮೆ ಮಾಡಲು ಆಯಾ ವಿಭಾಗದ ಡಿಸಿಪಿ. ಎಸಿಪಿಗಳು ಒತ್ತಡದ ಅವಧಿಯಲ್ಲಿ(ಪೀಕ್ ಅವರ್) ಕಡ್ಡಾಯವಾಗಿ ಫೀಲ್ಡ್ ನಲ್ಲಿರಬೇಕೆಂದು ಸೂಚಿಸಿರುವುದಾಗಿ ಪರಮೇಶ್ವರ್ ತಿಳಿಸಿದರು.
ಸಂಚಾರ ದಟ್ಟಣೆ ಹೆಚ್ಚಿರುವ ಪ್ರದೇಶಗಳಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಕ್ಯಾಮರ ಬಳಸಲಾಗುತ್ತಿದೆ. ಅಲ್ಲದೆ ಪೀಕ್ ಅವರ್ ನಲ್ಲಿ ಸಂಚಾರ ದಟ್ಟಣೆ ಸುಧಾರಿಸಲು ಟ್ರಾಫಿಕ್ ಪೊಲೀಸರ ಜೊತೆಗೆ ಹೆಚ್ಚುವರಿಯಾಗಿ 10 ಮಂದಿ ಕಾನೂನು ವಿಭಾಗದ ಪೊಲೀಸರು ಕಾರ್ಯನಿರ್ವಹಿಸಲು ಸೂಚಿಸಿದ್ದೇನೆ. ಒಟ್ಟಾರೆ ರಾಜಧಾನಿಯಲ್ಲಿ ಸಂಚಾರ ದಟ್ಟಣೆಯ ದೂರುಗಳು ಬರದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.