‘ಸಾಲದ ಶೂಲ’ಕ್ಕೆ ಕಾರಣ ಏನು?
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸಾಲ ತೀರಿಸುವುದಕ್ಕಾಗಿ ಸಾಲದಿಂದಲೇ ನಡೆಯುವ ದೈನೇಸಿ ದೇಶವಾಗುವತ್ತ ಭಾರತ ದಾಪುಗಾಲು ಇಟ್ಟಂತಿದೆ. ಕಳೆದ ಕೇವಲ ಎಂಟು ವರ್ಷಗಳಲ್ಲಿ ಮೋದಿ ನೇತೃತ್ವದ ಸರಕಾರ 98 ಲಕ್ಷ ಕೋಟಿ ರೂ. ಸಾಲ ಮಾಡಿದೆ ಎಂದು ರಿಸರ್ವ್ ಬ್ಯಾಂಕ್ ಅಂಕಿ ಅಂಶಗಳೇ ಖಚಿತ ಪಡಿಸಿವೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನೂ 1.40 ಲಕ್ಷ ರೂ. ಸಾಲದ ಋಣಕ್ಕೆ ಬಿದ್ದಿದ್ದಾನೆ. ಹಿಂದೆ 67 ವರ್ಷಗಳಲ್ಲಿ ಹದಿನಾಲ್ಕು ಪ್ರಧಾನಿಗಳು ಬಂದು ಹೋದರು. ಅಷ್ಟೂ ವರ್ಷಗಳ ಸಾಲ ಕೇವಲ ರೂ. 55 ಲಕ್ಷ ಕೋಟಿ. ಸ್ವಾತಂತ್ರ್ಯಾನಂತರ ಎಲ್ಲವನ್ನೂ ಸೊನ್ನೆಯಿಂದ ಶುರು ಮಾಡಿದ ನೆಹರೂ ಸರಕಾರ ನೂರಾರು ಅಣೆಕಟ್ಟು, ಸಾವಿರಾರು ರಸ್ತೆ, ಹೆದ್ದಾರಿ, ಸಹಸ್ರಾರು ಸರಕಾರಿ ಶಿಕ್ಷಣ ಸಂಸ್ಥೆ, ಸಾವಿರಾರು ಆಸ್ಪತ್ರೆ, ಕಾರ್ಖಾನೆ, ನೂರಾರು ರೈಲು ನಿಲ್ದಾಣ, ಸಂಶೋಧನಾ ಸಂಸ್ಥೆ ಕಟ್ಟಿದ್ದರೂ ‘ಸಾಲದ ಶೂಲ’ಕ್ಕೆ ಈ ನಾಡು ಸಿಲುಕದಂತೆ ನೋಡಿಕೊಂಡರು. ಆದರೆ ಕಳೆದ ಎಂಟೇ ವರ್ಷಗಳಲ್ಲಿ ಸಾಲ ಮಿತಿ ಮೀರಿದೆ. ಈಚೆಗೆ ಸಂಸತ್ತಿನಲ್ಲಿ ಮಂಡನೆಯಾದ ಕೇಂದ್ರ ಸಾರ್ವಜನಿಕ ಸಾಲ ನಿರ್ವಹಣಾ ವರದಿಯ ಪ್ರಕಾರ ‘ಇದೇ ವೇಗದಲ್ಲಿ ಸಾಲದ ಏರಿಕೆ ಮುಂದುವರಿದರೆ 2027ರ ವೇಳೆಗೆ ಒಟ್ಟು ಸಾಲ ರೂ. 465 ಲಕ್ಷ ಕೋಟಿಯನ್ನೂ ಮೀರಲಿದೆ’. ಇದು ಕಳವಳಕಾರಿ. ಮುಂದೊಂದು ದಿನ ಸಾಲದ ಮೇಲಿನ ಬಡ್ಡಿ, ಅಸಲು ಕಂತು ಕಟ್ಟಲಿಕ್ಕಾಗಿಯೇ ಸಾಲ ಮಾಡುವಂತಹ ದುರವಸ್ಥೆ ಈ ದೇಶಕ್ಕೆ ಬರದಿರಲಿ. ಆದರೆ ಜಾಲತಾಣ ಅಥವಾ ವಾಟ್ಸ್‌ಆ್ಯಪ್‌ನಲ್ಲಿ ಎಲ್ಲಿಂದಲೋ ಹುಟ್ಟಿಕೊಳ್ಳುವ ಕಪೋಲ ಕಲ್ಪಿತ ಅನಧಿಕೃತ ಬರಹಗಳ ಕೊಚ್ಚೆಯಲ್ಲಿ ಮೊಗ ಹುದುಗಿಸಿಕೊಂಡಿರುವವರು ಇನ್ನಾದರೂ ಸರಕಾರವೇ ನೀಡಿರುವ ಅಧಿಕೃತ ಅಂಕಿ ಅಂಶಗಳನ್ನು ನೋಡಬೇಕು.
ಕೇಂದ್ರ ಸರಕಾರ ಮಾಡಿರುವ ಸಾಲದ ವಿವರ ಜನರಿಗೂ ಗೊತ್ತಾಗಬೇಕಿದೆ. ದೇಶದ ಆರ್ಥಿಕತೆ ಅಧಃಪತನದ ಹಾದಿ ಹಿಡಿದಿರುವುದರ ಸೂಕ್ಷ್ಮ್ಮಗಳನ್ನು ಪ್ರಜ್ಞಾವಂತರು ಜನರಿಗೆ ಮನನ ಮಾಡಬೇಕಿದೆ. ಜನಜಾಗೃತಿ ಆಗದಿದ್ದರೆ ಆಡಳಿತಗಾರರ ‘ಸಾಲದ ಶೋಕಿ’ ಎಗ್ಗಿಲ್ಲದೆ ಮುಂದುವರಿಯುತ್ತದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಜನಸಾಮಾನ್ಯರಲ್ಲಿ ‘ಸಾರ್ವಜನಿಕ ಆರ್ಥಿಕತೆ ಕುರಿತ ಸಾಕ್ಷರತೆ’ ಮೂಡಬೇಕಾದ ಅನಿವಾರ್ಯತೆ ಇದೆ.
ಆರ್ಥಿಕ ಆಡಳಿತಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯಾನಂತರದ ಭಾರತದಲ್ಲಿ ಅನನ್ಯ ಪರಂಪರೆ ಇದೆ. ದೇಶದ ಖಜಾನೆ, ಖರ್ಚುವೆಚ್ಚ, ಸಾಲಗಳ ಮಾಹಿತಿಗಳೆಲ್ಲವೂ ಪಾರದರ್ಶಕವಾಗಿದ್ದವು. ತಿಜೋರಿಯ ಕೀಲಿಕೈ ನಂಬಿಕಸ್ತರ, ಅರ್ಥಶಾಸ್ತ್ರ ನಿಪುಣರ ಕೈಯಲ್ಲಿತ್ತು. ಜನರ ಸರ್ವತೋಮುಖ ಅಭಿವೃದ್ಧಿಯೇ ದೇಶ ಕಟ್ಟುವ ಕೈಂಕರ್ಯ ಎಂಬ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದ ಚಿಂತಕರು ಹಣಕಾಸು ಖಾತೆಯನ್ನು ನಿಭಾಯಿಸಿದ್ದರು. ಸಿ.ಡಿ. ದೇಶಮುಖ್, ನೆಹರೂ, ಮೊರಾರ್ಜಿ, ಸಿ. ಸುಬ್ರಹ್ಮಣ್ಯಂ, ಚರಣ್ ಸಿಂಗ್, ವಿ.ಪಿ. ಸಿಂಗ್, ಮನಮೋಹನ್ ಸಿಂಗ್ ಮುಂತಾದವರು ಒಬ್ಬರಿಗಿಂತಲೂ ಒಬ್ಬರು ಘಟಾನುಘಟಿಗಳು. ಸ್ವಾತಂತ್ರ ಬಂದ ಕೆಲವು ವರ್ಷ ನೆಹರೂ ಚಿಂತನೆಗೆ ಹೆಗಲು ನೀಡಿದ್ದ ದೇಶಮುಖ್ ಆ ಸಂದಿಗ್ಧ ಕಾಲದಲ್ಲಿ ನಾಡಿನ ಅರ್ಥ ವ್ಯವಸ್ಥೆಯನ್ನು ಭದ್ರವಾಗಿ ಕಟ್ಟಲು ಮಹತ್ತರ ಕೊಡುಗೆ ನೀಡಿದವರು. ಸ್ವಾತಂತ್ರ್ಯ ಪೂರ್ವದಲ್ಲೇ ಇವರ ಪಾಂಡಿತ್ಯಕ್ಕೆ ತಲೆದೂಗಿದ್ದ ಬ್ರಿಟಿಷರು ರಿಸರ್ವ್ ಬ್ಯಾಂಕ್‌ನ ಮೊದಲ ಅಧ್ಯಕ್ಷರನ್ನಾಗಿ ಇವರನ್ನೇ ನೇಮಿಸಿದ್ದರು.
ಚರಣ್ ಸಿಂಗ್ ಭಾರತದ ಅರ್ಥವ್ಯವಸ್ಥೆ ಕುರಿತು ಬರೆದ ಕೃತಿ ಇವತ್ತಿಗೂ ಮೌಲಿಕವೇ. ಸಿ. ಸುಬ್ರಹ್ಮಣ್ಯಂ ದೇಶದ ಕೃಷಿ ಕ್ಷೇತ್ರದ ಕುರಿತು ಅಪಾರ ಒಳನೋಟ ಹೊಂದಿದ್ದವರು. ಆ ಕ್ಷೇತ್ರದ ಬಗ್ಗೆ ಅವರು ಬರೆದ ಗ್ರಂಥ ಇವತ್ತಿಗೂ ಅಧ್ಯಯನ ಯೋಗ್ಯ. ರಾಜೀವ್ ಗಾಂಧಿಯವರಂತೂ ಕಂಪ್ಯೂಟರ್ ಕ್ರಾಂತಿ ಆರಂಭಿಸಿ ಅದು ದೇಶದ ಆರ್ಥಿಕತೆಗೆ ವೇಗೋತ್ಕರ್ಷದಂತೆ ನೋಡಿಕೊಂಡರು. ಮನಮೋಹನ್ ಸಿಂಗ್ ಅವರು ಜಾಗತೀಕರಣ ಪ್ರಕ್ರಿಯೆಯಲ್ಲಿ ಭಾರತಕ್ಕೆ ಸರಿದಿಕ್ಕಿನಲ್ಲಿ ಬಾಗಿಲು ತೆರೆದು ಕೈ ಹಿಡಿದು ನಡೆಸಿದವರು. ಇವತ್ತು ಅಮೆರಿಕ, ಚೀನಾ ಆರ್ಥಿಕತೆಯ ಎದುರು ಭಾರತ ತಲೆ ಎತ್ತಿ ನಿಲ್ಲುವಲ್ಲಿ ‘ಮನಮೋಹನ್ ಅರ್ಥಶಾಸ್ತ್ರ’ದ ಕೊಡುಗೆ ಅಪಾರ. ಇಂತಹ ವಿದ್ವಾಂಸ ಪರಂಪರೆಯ ಹಣಕಾಸು ಸಚಿವರ ಬಗ್ಗೆ ಇವತ್ತಿನ ಪೀಳಿಗೆ ಅರಿತು ಕೊಂಡಾಗಲಾದರೂ, ಈ ದೇಶ ಎಡವುತ್ತಿರುವುದೆಲ್ಲಿ ಎಂಬ ಸತ್ಯದ ಅರಿವಾಗಬಹುದು.
ಆ ಕಾಲದಲ್ಲಿ ಸಾಲ ಮಾಡಿದ್ದಾಗ ಅದರ ಅನಿವಾರ್ಯತೆಯ ಪೂರ್ಣ ವಿವರಗಳನ್ನು ಆಗಿನ ಹಣಕಾಸು ಸಚಿವರು ಜನರ ಮುಂದಿಟ್ಟಿದ್ದರು. ಮುಂದಿನ ಪೀಳಿಗೆಗೆ ಸಾಲದ ಹೊರೆ ಬೀಳದಂತೆ ಜಾಗರೂಕತೆಯಿಂದ ಹಣಕಾಸು ಖಾತೆಯನ್ನು ನಿಭಾಯಿಸಿದ್ದರು. ರಿಸರ್ವ್ ಬ್ಯಾಂಕ್‌ನಲ್ಲಿ ಭದ್ರತಾ ನಿಧಿಯನ್ನು ಏರಿಸುತ್ತಾ ಬಂದರಲ್ಲದೆ, ಎಂತಹ ಸಂಕಷ್ಟದಲ್ಲಿಯೂ ಅದಕ್ಕೆ ಕೈ ಹಾಕಿರಲಿಲ್ಲ. ಆದರೆ ದಶಕಗಳಿಂದ ಕೂಡಿಟ್ಟಿದ್ದ ಆ ಭದ್ರತಾ ನಿಧಿಯಿಂದಲೂ ಈ ಸರಕಾರ ಈಚೆಗೆ ಭಾರೀ ಹಣವನ್ನು ಎತ್ತಿ ಕೊಂಡಿರುವುದೊಂದು ವಿಪರ್ಯಾಸ. ಈ ಮಟ್ಟಿಗಿನ ಸಾಲದ ಏರಿಕೆಗೆ ಕೋವಿಡ್ ಲಸಿಕೆ, ಮೂಲಭೂತ ಸೌಲಭ್ಯ ಅಭಿವೃದ್ಧಿ ಇತ್ಯಾದಿ ಕಾರಣಗಳನ್ನು ಸಂಬಂಧಪಟ್ಟವರು ಮುಂದಿಡುತ್ತಿದ್ದಾರೆ. ಆದರೆ ಕೋವಿಡ್ ಪರಿಸ್ಥಿತಿ ಎದುರಿಸಲು ‘ಪಿಎಂ ಕೇರ್ಸ್’ ನಿಧಿಯ ಮೂಲಕ ದಾನಿಗಳಿಂದ ಎಷ್ಟು ಲಕ್ಷ ಕೋಟಿ ರೂ. ಸಂಗ್ರಹಿಸಲಾಯಿತು, ಖರ್ಚಾಗಿದ್ದೆಷ್ಟು ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ. ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಖಾಸಗಿ ಸಂಸ್ಥೆಗಳೇ ಹಣ ಹೂಡುತ್ತಿದ್ದು, ಮುಗಿದ ನಂತರ ಆ ಹಣ ಹಿಂಪಡೆಯಲು ವರ್ಷಾನುಗಟ್ಟಲೆ ಯದ್ವಾತದ್ವಾ ಟೋಲ್ ಸಂಗ್ರಹಿಸುತ್ತಿವೆ. ಬಜೆಟ್‌ಗಳಲ್ಲಿ ರಕ್ಷಣೆ, ಶಿಕ್ಷಣ, ಆರೋಗ್ಯ ಇತ್ಯಾದಿ ಖಾತೆಗಳಿಗೆ ಹಿಂದಿನ ಸರಕಾರಗಳು ಹಂಚಿಕೆ ಮಾಡಿದ್ದ ಮೊತ್ತಕ್ಕಿಂತಲೂ ಭಾರೀ ಪ್ರಮಾಣದ ಏರಿಕೆಯನ್ನಂತೂ ಮಾಡಿಲ್ಲ. ಹಾಗಿದ್ದರೆ ಜನರಿಂದ ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸುತ್ತಿರುವ ಪರೋಕ್ಷ ತೆರಿಗೆ ಹಣ ಎಲ್ಲಿ ಹೋಯಿತು. ರಾಜ್ಯಗಳಿಗೆ ಪಾವತಿಸಲೇ ಬೇಕಾದ ತೆರಿಗೆಯ ಪಾಲನ್ನೂ ಕೇಂದ್ರ ಸರಕಾರ ಸಮರ್ಪಕವಾಗಿ ವಿತರಿಸುತ್ತಿಲ್ಲ. ಹೀಗಾಗಿ, ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಕೇಂದ್ರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತ ಪಡಿಸುತ್ತಿವೆ. ಕೇಂದ್ರದಲ್ಲಿ ಹಣಕ್ಕೆ ಈ ಪರಿ ಪಡಿಪಾಟಲು ಇದೆ ಎಂದಾದರೆ, ಆ ಮಟ್ಟಿಗಿನ ಭಾರೀ ಸಾಲದ ಹಣ ಎಲ್ಲಿ ಹೋಯಿತು?
ಭಾರತದ ರಿಸರ್ವ್ ಬ್ಯಾಂಕ್‌ನ ಮೂಲ ಪರಿಕಲ್ಪನೆಗೆ ಭಾರತೀಯತೆಯ ಜೀವದ್ರವ್ಯ ತುಂಬಿದವರು ಅರ್ಥಶಾಸ್ತ್ರಜ್ಞ ಬಿ.ಆರ್. ಅಂಬೇಡ್ಕರ್. ಅವರ ಮತ್ತು ಗಾಂಧೀಜಿ, ನೆಹರೂ ಚಿಂತನೆಯ ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಿಷ್ಠವಾದ ಸಮಸಮಾಜ ಕಟ್ಟುವ ನಿಟ್ಟಿನ ಭೂಮಿಕೆಯ ಅಡಿ ಬಹುತೇಕ ಹಣಕಾಸು ಸಚಿವರು ದುಡಿದಿದ್ದಾರೆ. ಆದರೆ ಇವತ್ತು ಏನಾಗಿದೆ. ಭಾರತದ ಜನಸಂಖ್ಯೆಯ ಅರ್ಧದಷ್ಟು ಮಂದಿ ದೇಶದ ಸಂಪತ್ತಿನ ಮೂರರಷ್ಟನ್ನು ಮಾತ್ರ ಹೊಂದಿದ್ದಾರೆ. ಅದರೆ ಸರಕು ಮತ್ತು ಸೇವೆಯ ಹೆಸರಲ್ಲಿ ಶೇಕಡ 64 ರಷ್ಟು ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಶೇಕಡ ಹತ್ತರಷ್ಟಿರುವ ಶ್ರೀಮಂತರು ದೇಶದ ಎಂಬತ್ತರಷ್ಟು ಸಂಪತ್ತು ಪಡೆದಿದ್ದಾರೆ. ಆದರೆ ಕೇವಲ ಮೂರರಷ್ಟು ತೆರಿಗೆ ಕಟ್ಟುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಸಂಸತ್ತಿನಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರು ನೀಡಿದ ಹೇಳಿಕೆ ಪರಿಸ್ಥಿತಿಯ ಕ್ರೂರ ವ್ಯಂಗ್ಯದಂತಿದೆ. ಕಳೆದ ಐದು ವರ್ಷಗಳಲ್ಲಿ ಸುಮಾರು ಹತ್ತು ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಲಾಗಿದೆ ಎಂದಿದ್ದಾರೆ. ಇವರೆಲ್ಲರೂ ಅತಿ ಶ್ರೀಮಂತರು, ಉದ್ಯಮ ಪ್ರಭುಗಳು. ತಾನೇ ಭಾರೀ ಸಾಲದ ಉರುಳಲ್ಲಿರುವ ಸರಕಾರವು ಈ ಶ್ರೀಮಂತರ ಸಾಲ ಮನ್ನಾ ಮಾಡಿದ್ದೇಕೆ?. ಬಡವನೊಬ್ಬ ಎತ್ತು ಕೊಳ್ಳಲು ಮಾಡಿದ ಎಂಟತ್ತು ಸಾವಿರ ರೂ. ಸಾಲ ಅತಿವೃಷ್ಟಿಯ ಕಾರಣ ತೀರಿಸಲಾಗದಿದ್ದರೆ, ಮನೆ ಜಪ್ತಿ ಮಾಡುವ ಬ್ಯಾಂಕಿನವರು ಅತಿ ಶ್ರೀಮಂತರ ಹತ್ತು ಲಕ್ಷ ಕೋಟಿ ರೂ.ಯನ್ನು ವಸೂಲಿ ಮಾಡದೆ ಮೌನವಾಗುವುದೇಕೆ ? ಇದಕ್ಕೆ ಯಾರೂ ಉತ್ತರ ಕೊಡುತ್ತಿಲ್ಲ. ಆದರೆ ಬಡವರ ಅನೇಕ ಸೌಲಭ್ಯಗಳನ್ನು ಕಡಿತಗೊಳಿಸಿದೆ. ಹಿರಿಯ ನಾಗರಿಕರಿಗೆ ಇದ್ದ ಕೆಲವು ರಿಯಾಯಿತಿಗಳನ್ನು ಕಿತ್ತು ಹಾಕಿ ಅದರಿಂದಲೇ ಎರಡು ಸಾವಿರ ಕೋಟಿ ರೂ. ಸಂಗ್ರಹಿಸಿದ್ದೇವೆಂದು ಬೀಗುವ ಸರಕಾರದ ಕ್ರೌರ್ಯಕ್ಕೆ ಏನನ್ನುವುದು?
ಆರ್ಥಿಕ ಆಡಳಿತಕ್ಕೊಂದು ಶಿಸ್ತು ಮತ್ತು ವೈಜ್ಞಾನಿಕ ಪರಿಕಲ್ಪನೆ ಇರಬೇಕು. ಹಾಗಿದ್ದರೆ ಮಾತ್ರ ಖರ್ಚುವೆಚ್ಚದ ಬಗ್ಗೆ, ಸಾಲಸೋಲದ ಬಗ್ಗೆ ಅರ್ಥ ಸಚಿವರು ಅಥವಾ ಖುದ್ದು ಪ್ರಧಾನಿಯವರು ಪತ್ರಕರ್ತರ ಅಥವಾ ತಜ್ಞರ ಪ್ರಶ್ನೆಗಳಿಗೆ ಅಧಿಕಾರ ಬದ್ಧವಾಗಿ ದಿಟ್ಟತನದ ಉತ್ತರ ನೀಡಲು ಸಾಧ್ಯ. ಹಿಂದೆ ದಶಕಗಳ ಕಾಲ ಅಂತಹ ಆಡಳಿತಗಾರರನ್ನು ಭಾರತ ಕಂಡಿದೆ. ಆರ್ಥಿಕ ಆಡಳಿತದಲ್ಲಿ ಅಪ್ರಬುದ್ಧರ ಕೈಚಳಕ ಹೆಚ್ಚಾದಾಗ, ಅಂಕಿ ಅಂಶಗಳಲ್ಲೂ ಮುಚ್ಚುಮರೆ ನಡೆದಾಗ ಅಧಿಕಾರಸ್ಥರು ತಜ್ಞರ ಎದುರು ಮುಖಾಮುಖಿ ನಡೆಸಲು ಸಾಧ್ಯವೇ?. ಈ ತೆರನಾದ ಪರಿಸ್ಥಿತಿ ಗಮನಿಸಿದ್ದ ಸಿಎಜಿಯು ಎರಡು ವರ್ಷಗಳ ಹಿಂದೆಯೇ ತನ್ನ ವರದಿಯಲ್ಲಿ ಸಾಲ ಮಿತಿ ಮೀರಿದೆ. ಕಟ್ಟುವುದಾದರೂ ಹೇಗೆ ಮತ್ತು ಯಾವಾಗ ಎಂದು ಆತಂಕ ವ್ಯಕ್ತ ಪಡಿಸಿತ್ತು. ಆದರೆ ಉತ್ತರದಾಯಿತ್ವವೇ ಇಲ್ಲದವರು ಕಲ್ಲಾಗಿ ಕುಳಿತಿದ್ದಾರೆ. ಹಾಗಿದ್ದರೂ ಆಡಳಿತಗಾರರನ್ನು ವೈಭವೀಕರಿಸುವ ಸುಳ್ಳು ಅಂಕಿಅಂಶಗಳ ಅನಾಮಧೇಯರ ಬರಹಗಳು ವಾಟ್ಸ್‌ಆ್ಯಪ್ ಮೂಲಕ ಜನಸಾಮಾನ್ಯರ ನಡುವೆ ವ್ಯವಸ್ಥಿತವಾಗಿ ಹರಡುತ್ತಿದೆ. ಇನ್ನೆಷ್ಟು ದಿನ ಈ ವಂಚನೆಯ ಕಸರತ್ತು. ಸಾಲದ ಲೆಕ್ಕಾಚಾರಗಳ ಬಗ್ಗೆ ಜನರಲ್ಲಿ ಅಪನಂಬಿಕೆ ಮೂಡಿದೆ. ಸರಕಾರ ಇನ್ನಾದರೂ ತಾನು ಮಾಡಿದ ಭಾರೀ ಸಾಲದ ಪೂರ್ಣ ವಿವರಗಳಿರುವ ಶ್ವೇತ ಪತ್ರವನ್ನು ಹೊರಡಿಸುವುದು ಸೂಕ್ತ.