ಬೆಂಗಳೂರು | 'ಇಸ್ಲಾಮೋಫೋಬಿಕ್' ನಿಂದನೆ ಆರೋಪ: ಸಂಸ್ಥೆಗೆ ರಾಜೀನಾಮೆ ನೀಡಿದ ಆ್ಯಪಲ್ ಉದ್ಯೋಗಿ.!
ಬೆಂಗಳೂರು: ಕಚೇರಿಯಲ್ಲಿ ತನ್ನ ವಿರುದ್ಧ ಇಸ್ಲಾಮೋಫೋಬಿಕ್ ಟೀಕೆಗಳು ಬರುತ್ತಿವೆ, ನಿಂದನಾತ್ಮಕ ಭಾಷೆಗಳನ್ನು ತನ್ನ ವಿರುದ್ಧ ಬಳಸಲಾಗುತ್ತಿದೆ ಎಂದು ಆರೋಪಿಸಿ ಆ್ಯಪಲ್ ಕಂಪೆನಿಯ ಉದ್ಯೋಗಿಯೊಬ್ಬರು ಕೆಲಸ ತ್ಯಜಿಸುತ್ತಿರುವುದಾಗಿ ಹೇಳಿದ್ದಾರೆ.
ಒಂದು ದಶಕಕ್ಕೂ ಹೆಚ್ಚು ಕಾಲ ಆಪಲ್‌ನಲ್ಲಿ ಕೆಲಸ ಮಾಡುತ್ತಿರುವ ಖಾಲಿದ್ ಪರ್ವೇಝ್, ತಾವು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಹೆಚ್ ಆರ್ ಗಮನಕ್ಕೆ ತಂದಿದ್ದರು. ವಿಷಯದ ಕುರಿತಂತೆ ತನಿಖೆ ಮಾಡುವುದಾಗಿ ಹಾಗೂ ವ್ಯವಸ್ಥೆಯನ್ನು ನಂಬುವಂತೆ ಅವರಿಗೆ ಹೇಳಲಾಗಿತ್ತು. ಅದಾಗಿ ಎರಡು ತಿಂಗಳಾದರೂ ಸರಿಯಾದ ಕ್ರಮ ಕೈಗೊಳ್ಳದ ಕಾರಣ ಪರ್ವೇಝ್ ಅಸಮಾಧಾನಗೊಂಡಿದ್ದು, ಈ ಬಗ್ಗೆ ಲಿಂಕ್‌ಡ್ ಇನ್ ತಾಣದಲ್ಲಿ ತಮ್ಮ ನೋವು ಹಂಚಿಕೊಂಡಿದ್ದಾರೆ.
ನನ್ನ ಬಳಿ ಎರಡು ಆಯ್ಕೆಗಳಿದ್ದವು, ಒಂದು ದೈತ್ಯ ಸಂಸ್ಥೆಯನ್ನು ಎದುರು ಹಾಕಿಕೊಂಡು ಹೋರಾಡುವುದು, ಎರಡನೆಯದು ನನ್ನ ಕುಟುಂಬವನ್ನು ನಿಭಾಯಿಸುವುದು. ಕಾರ್ಪೊರೇಟ್ ದೈತ್ಯ ವಿರುದ್ಧ ಹೋರಾಡಲು ನನ್ನ ಇಚ್ಛೆಗಿಂತಲೂ ನನ್ನ ಕುಟುಂಬಕ್ಕೆ ನನ್ನ ಅಗತ್ಯವಿದ್ದುದರಿಂದ ಮರುದಿನವೇ ರಾಜೀನಾಮೆ ನೀಡಿದೆ ಎಂದು ಪರ್ವೇಝ್ ಹೇಳಿದ್ದಾರೆ.
ಆದರೆ, ಇದುವರೆಗೆ ಈ ಬಗ್ಗೆ ಆ್ಯಪಲ್ ಸಂಸ್ಥೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.